ಪುಣ್ಯ ಸ್ನಾನಕ್ಕೆ ಬಂದವರಿಂದಲೇ ನದಿ ಮಲಿನ!
ಸಂಗಮ ಸ್ಥಳದಲ್ಲಿ ನದಿಯಲ್ಲೇ ಎಸೆಯುತ್ತಾರೆ ಹಳೆಯ ವಸ್ತ್ರ, ಪ್ಲಾಸ್ಟಿಕ್ ತ್ಯಾಜ್ಯ
Team Udayavani, Apr 12, 2019, 6:00 AM IST
ನೇತ್ರಾವತಿ ನದಿಯ ಒಡಲಲ್ಲಿರುವ ಕಸದ ರಾಶಿ.
ಉಪ್ಪಿನಂಗಡಿ: ಜಿಲ್ಲೆಯ ಜೀವ ನದಿಯಾದ ನೇತ್ರಾವತಿ ಬಿಸಿಲ ಬೇಗೆಯಲ್ಲಿ ಬತ್ತಿ ಹೋಗುತ್ತಿದೆ. ತ್ಯಾಜ್ಯ ವಸ್ತುಗಳಿಂದ ತುಂಬಿ ಹೋಗುತ್ತಿರುವ ನದಿಯಲ್ಲಿ ತೀರ್ಥ ಸ್ನಾನ ಮಾಡುವವರೂ ತಮ್ಮ ವಸ್ತ್ರ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಎಸೆದು ಹೋಗುವುದರಿಂದ ಇನ್ನಷ್ಟು ಕಲುಷಿತವಾಗುತ್ತಿದೆ. ದಕ್ಷಿಣ ಕಾಶಿ ಎಂದೇ ಹೆಗ್ಗಳಿಕೆ ಪಡೆದಿರುವ ನೇತ್ರಾವತಿ-ಕುಮಾರಧಾರಾ ನದಿಗಳ ಸಂಗಮ ಸ್ಥಳ. ಇದೀಗ ನೇತ್ರಾವತಿಯ ಹರಿವು ನಿಂತಿರುವುದರಿಂದ ಅದರ ಒಡಲೆಲ್ಲ ಹೊರಜಗತ್ತಿಗೆ ಕಾಣಿಸುವಂತಿದೆ.
ನದಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಬಟ್ಟೆ ಬರೆಗಳು, ದೇವತೆಗಳ ಫೋಟೋಗಳು, ದೇವರ ಕೋಣೆಯಲ್ಲಿ ಬಳಕೆಯಾಗುವ ವಸ್ತುಗಳೆಲ್ಲವನ್ನೂ ಭಕ್ತರು ನದಿಗೆಸೆದಿದ್ದಾರೆ. ಹೀಗಾಗಿ, ಪುಣ್ಯ ನದಿಯೀಗ ತ್ಯಾಜ್ಯಗಳ ತೊಟ್ಟಿಯಂತಾಗಿದೆ.
ಬಟ್ಟೆ, ಪ್ಲಾಸ್ಟಿಕ್ ತ್ಯಾಜ್ಯ
ಗತಿಸಿದ ಹಿರಿಯರ ಅಸ್ಥಿ ವಿಸರ್ಜನೆ ಮಾಡಿ ಪಿಂಡ ಪ್ರದಾನ ಮಾಡುವ ಸಲುವಾಗಿ ಸಂಗಮ ಸ್ಥಳಕ್ಕಾಗಮಿಸುವ ಮಂದಿ ಅಸ್ಥಿಯನ್ನು ಮಣ್ಣಿನ ಸಣ್ಣ ಮಡಕೆಯ ಬದಲು ಪ್ಲಾಸ್ಟಿಕ್ ಡಬ್ಬಗಳಲ್ಲಿ ತರುತ್ತಾರೆ. ನದಿಯಲ್ಲಿ ಅಸ್ಥಿಯೊಂದಿಗೆ ಪ್ಲಾಸ್ಟಿಕ್ ಡಬ್ಬವನ್ನೂ ಎಸೆಯುತ್ತಾರೆ. ಈ ಪರಿಸರವೆಲ್ಲ ಪ್ಲಾಸ್ಟಿಕ್ ಡಬ್ಬಗಳಿಂದಲೇ ತುಂಬಿಹೋಗಿದೆ. ತೀರ್ಥ ಸ್ನಾನ ಮಾಡುವ ಮಂದಿ ತಾವು ತೊಟ್ಟಿದ್ದ ಹಳೆಯ ವಸ್ತ್ರಗಳನ್ನು ನದಿಯಲ್ಲೇ ಎಸೆದು ಹೋಗುತ್ತಾರೆ. ಇವು ಮಣ್ಣಿನಲ್ಲಿ ಬೇಗನೆ ಕರಗಲಾರವು. ಹೀಗಾಗಿ, ಇಡೀ ಪರಿಸರ ಬಟ್ಟೆ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳಿಂದ ತುಂಬಿದೆ. ಸುತ್ತೆಲ್ಲ ದುರ್ನಾತ ಬೀರುತ್ತಿವೆ. ನದಿಯ ನೀರನ್ನು ತೀರ್ಥವೆಂದು ಪರಿಗಣಿಸಿ ಪುಣ್ಯ ಸ್ನಾನ ಮಾಡುವ ಮಂದಿ, ನಾಳೆ ದಿನ ನಮ್ಮಂತೆಯೇ ಇತರರೂ ತೀರ್ಥ ಸ್ನಾನ ಮಾಡಲು ಇದೇ ಸ್ಥಳಕ್ಕೆ ಬರುವರೆಂದೂ, ಅವರಿಗಾಗಿ ನದಿಯನ್ನು ಸ್ವತ್ಛವಾಗಿರಿಸುವ ಕರ್ತವ್ಯ ತಮ್ಮದೆಂಬ ಅರಿವನ್ನು ಹೊಂದಿರದಿರುವುದು ನದಿಯ ಈ ದುಃಸ್ಥಿತಿಗೆ ಕಾರಣವಾಗಿದೆ.
ಮಾರ್ಗದರ್ಶನ ಲಭಿಸಲಿ
ನದಿ ಕಲುಷಿತಗೊಂಡಿರುವ ಕುರಿತು ನೊಂದು ಪ್ರತಿಕ್ರಿಯಿಸಿರುವ ಪರಿಸರ ಹೋರಾಟಗಾರ ಹರಿರಾಮಚಂದ್ರ ಅವರು, ಗತಿಸಿದ ಬಂಧುಗಳ ಅಸ್ಥಿಯನ್ನು ಪ್ಲಾಸ್ಟಿಕ್ ಕರಡಿಗೆಗಳಲ್ಲಿ ತರಬಾರದೆಂದು ಹಾಗೂ ದೇವಸ್ಥಾನದ ಸಮೀಪ ನದಿಯಲ್ಲಿ ತೀರ್ಥ ಸ್ನಾನ ಮಾಡಿದ ಬಳಿಕ ಯಾವುದೇ ವಸ್ತ್ರಗಳನ್ನು ನದಿಯಲ್ಲಿ ಬಿಟ್ಟು ಬರಬಾರದೆಂಬ ಅರಿವನ್ನು ಮೂಡಿಸುವ ಕಾರ್ಯ ದೇವಸ್ಥಾನದಿಂದಲೇ ಆಗಬೇಕು. ನದಿಯ ಶುದ್ಧೀಕರಣಕ್ಕೆ ಸಂಘಟನೆಗಳ ನೆರವಿನೊಂದಿಗೆ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಿಸಿದ್ದಾರೆ.
ಎಂ.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.