ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರಿಂದ ರಸ್ತೆ ತಡೆ, ಪ್ರತಿಭಟನೆ
Team Udayavani, Aug 22, 2017, 5:35 AM IST
ಸವಣೂರು : ಕಳೆದ ಹದಿನೈದು ವರ್ಷಗಳಿಂದ ಡಾಮರು ಕಾಣದ ಸವಣೂರು- ಕುಮಾರಮಂಗಲ- ಮಾಡಾವು ರಸ್ತೆಯನ್ನು ಕೂಡಲೇ ದುರಸ್ತಿ ಪಡಿಸಬೇಕು. ತಪ್ಪಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಗ್ರಾಮ ಪಂಚಾಯತ್ ಸದಸ್ಯ ಗಿರಿಶಂಕರ್ ಸುಲಾಯ ಹೇಳಿದರು.
ಆರಿಗಮಜಲಿನಲ್ಲಿ ಸೋಮವಾರ ರಸ್ತೆ ತಡೆ ನಡೆಸಿದ ಗ್ರಾಮಸ್ಥರು, ರಸ್ತೆ ದುರಸ್ತಿಗೆ ಪಟ್ಟು ಹಿಡಿದರು.
ಹದಗೆಟ್ಟಿರುವ ರಸ್ತೆ ಬಗ್ಗೆ ಈ ಹಿಂದೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿದೆ. ಸಮೀಪದ ಎಲ್ಲ ರಸ್ತೆಗಳು ಅಭಿವೃದ್ಧಿಗೊಳ್ಳುತ್ತಿದ್ದರೂ, ಈ ರಸ್ತೆ ಮಾತ್ರ ಅಭಿವೃದ್ಧಿ ವಂಚಿತವಾಗಿದೆ. ಸುಮಾರು 7 ಕಿ.ಮೀ. ದೂರದ ಈ ರಸ್ತೆ, ವಾಹನ ಸಂಚಾರಕ್ಕೂ ಅಯೋಗ್ಯವಾಗಿದೆ. ಜಿಲ್ಲಾ ಪಂಚಾಯತ್ ರಸ್ತೆಯಾಗಿರುವ ಇದರ ಅರ್ಧ ಭಾಗ ಪುತ್ತೂರು ವಿಧಾನಸಭಾ ಕ್ಷೇತ್ರದ ನೆಟ್ಟಣಿಗೆ ಮುಟ್ನೂರು ಕ್ಷೇತ್ರಕ್ಕೆ ಒಳಪಟ್ಟರೆ ಉಳಿದರ್ಧಭಾಗ ಸುಳ್ಯ ವಿಧಾನಸಭಾ ಕ್ಷೇತ್ರದ ಬೆಳಂದೂರು ಕ್ಷೇತ್ರಕ್ಕೆ ಒಳಪಟ್ಟಿದೆ. ಆದ್ದರಿಂದ ಗ್ರಾ.ಪಂ. ಅನುದಾನವನ್ನು ಬಳಸುವ ಹಾಗಿಲ್ಲ. ಇದೆಲ್ಲದರ ನೇರ ಪರಿಣಾಮ ಆಗಿರುವುದು ಜನಸಾಮಾನ್ಯರ ಮೇಲೆ. 1800 ಜನಸಂಖ್ಯೆಯಿರುವ ಈ ಗ್ರಾಮದಲ್ಲಿ ಎರಡು ಸರಕಾರಿ ಪ್ರಾಥಮಿಕ ಶಾಲೆ, ಅಂಚೆ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಹಕಾರಿ ಸಂಘ, ಯುವಕ- ಯುವತಿ ಮಂಡಲ, ಭಜನ ಮಂಡಳಿ, ಸೇವಾ ಸಮಿತಿ, ಒಕ್ಕೂಟ ಎಲ್ಲವೂ ಇದೆ. ಹಾಗಿದ್ದು ಮೂಲ ಸೌಕರ್ಯದ ಬಗ್ಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಆರೋಪಿಸಿದರು.
ವಾರ್ಡ್ ಸಭೆ, ಗ್ರಾಮಸಭೆಗಳಲ್ಲಿ ರಸ್ತೆ ದುರಸ್ತಿ ಪಡಿಸುವ ಬಗ್ಗೆ ಅರ್ಜಿ ಸಲ್ಲಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಗ್ರಾಮಸ್ಥರೇ ಸಾವಿರಾರು ರೂಪಾಯಿ ಖರ್ಚು ಮಾಡಿ, ರಸ್ತೆ ಹೊಂಡವನ್ನು ತಾತ್ಕಾಲಿಕವಾಗಿ ಮುಚ್ಚುವ ಕಾರ್ಯ ನಡೆಸುತ್ತಿದ್ದಾರೆ. ರಸ್ತೆ ಬದಿಯ ಪೊದರುಗಳನ್ನು ಸವರಿದ್ದಾರೆ. ಚರಂಡಿ ಸರಿ ಪಡಿಸಿದ್ದಾರೆ. ರಸ್ತೆಗೆ ಮುರಿದು ಬೀಳುವ ಮರಗಳನ್ನು ತೆರವುಗೊಳಿಸಿದ್ದಾರೆ. ಇಷ್ಟಾದರೂ ಜನಪ್ರತಿನಿಧಿಗಳು ರಸ್ತೆ ಡಾಮರು ಹಾಕುವ ಕಾರ್ಯಕ್ಕೆ ಮುಂದಾಗದಿರುವುದು ವಿಪರ್ಯಾಸ ಎಂದರು.
ವೇದಾವತಿ ಅಂಜಯ, ಸುಧಾ ನಿಡ್ವಣ್ಣಾಯ, ನಾಗೇಶ್ ಓಡಂತರ್ಯ, ಸವಣೂರು ಸಿ.ಎ. ಬ್ಯಾಂಕ್ ನಿರ್ದೇಶಕ ಗಣೇಶ್ ನಿಡ್ವಣ್ಣಾಯ, ಮಹಾಬಲ ಶೆಟ್ಟಿ ಕೊಮ್ಮಂಡ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಪಿ.ಡಿ.ಗಂಗಾಧರ ರೈ, ಪಿ.ಡಿ. ಕೃಷ್ಣ ಕುಮಾರ್ ರೈ ದೇವಸ್ಯ, ನಾಗರಾಜ ನಿಡ್ವಣ್ಣಾಯ, ಬಾಬು ದೇವಸ್ಯ, ಗಿರಿಜಾ ಕುಮಾರಮಂಗಲ, ಮೋಹನ್ ದೇವಾಡಿಗ, ಪ್ರವೀಣ್ ಶೆಟ್ಟಿ , ಮಹೇಶ್ ಕೆ. ಸವಣೂರು, ಶೀನಪ್ಪ ಶೆಟ್ಟಿ ನೆಕ್ರಾಜೆ, ಗಣೇಶ್ ಭಟ್, ಹರೀಶ್ ಕಾರೆತ್ತೋಡಿ, ಕುಶಾಲಪ್ಪ ಗೌಡ, ಮಾಧವ ನಡುಮನೆ, ಚಿನ್ನಪ್ಪ ಗೌಡ ಅಂಜಯ, ತಾರಾನಾಥ ಬೆದರಂಪಾಡಿ, ಶಿವಪ್ಪ ನಾಯ್ಕ ನೂಜಾಜೆ, ಈಶ್ವರ ಮಲೆಕುಡಿಯ ಸಾರಕರೆ, ಕೃಷ್ಣಪ್ಪ ದೇವಸ್ಯ, ಲೋಕೆಶ್ ಕನ್ಯಾಮಂಗಲ, ಕಿಶೋರ್ ನೂಜಾಜೆ, ಸುರೇಶ್ ಶೆಟ್ಟಿ , ಸಚಿನ್ ಕಾರೆತ್ತೋಡಿ, ರಂಜಿತ್ ನೂಜಾಜೆ, ಶಿವರಾಮ ನೆಕ್ರಾಜೆ, ಉದಯ್ ನೆಕ್ರಾಜೆ, ರಮೇಶ್ ನೆಕ್ರಾಜೆ, ಕಿಟ್ಟು ಕುಮಾರಮಂಗಲ, ಪುಣcಪ್ಪಾಡಿ ಶಾಲಾ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ಮಾತನಾಡಿ, ಜಿ.ಪಂ. ರಸ್ತೆಗೆ ಗ್ರಾ.ಪಂ. ಅನುದಾನ ನೀಡುವ ಹಾಗಿಲ್ಲ. ಆದೇಶದಲ್ಲಿ ಬದಲಾವಣೆಯಾದರೆ ಕ್ರಮಕ್ಕೆ ಮುಂದಾಗಲಾಗುವುದು ಎಂದರು.
ಪಿಡಿಒ ದೇವಪ್ಪ ಪಿ.ಆರ್. ಮಾತನಾಡಿ, ಜಿ.ಪಂ.ರಸ್ತೆ ದುರಸ್ತಿಗೆ ಕ್ರಿಯಾ ಯೋಜನೆಯಲ್ಲಿ ಅನುದಾನ ಇಟ್ಟು ತಾಲೂಕು ಪಂಚಾಯತ್ ಇಒ ಅನುಮತಿಸಿದರೆ ಕಾಮಗಾರಿ ನಡೆಸಬಹುದು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಪ್ರಮೀಳಾ ಜನಾರ್ದನ್ ಮಾತನಾಡಿ, ಲಭ್ಯ ಅನುದಾನವನ್ನು ಕ್ಷೇತ್ರದ ಎಲ್ಲ ರಸ್ತೆಗಳಿಗೆ ಹಂಚಿಕೆ ಮಾಡಲಾಗಿದೆ. ಈ ರಸ್ತೆಗೂ ರೂ.5 ಲಕ್ಷ ಇಡಲಾಗಿದೆ. ಇಲ್ಲಿನ ವಸ್ತುಸ್ಥಿತಿಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಮನವರಿಕೆ ಮಾಡಿ, ಹೆಚ್ಚುವರಿ ಅನುದಾನ ತರಿಸಲು ಪ್ರಯತ್ನಿಸಲಾಗುವುದು ಎಂದರು.
ಪ್ರತಿಭಟನೆ ಹಿಂದಕ್ಕೆ
ರಸ್ತೆ ದುರಸ್ತಿ ಬಗ್ಗೆ ಜನಪ್ರತಿನಿಧಿಗಳಿಂದ ಸೂಕ್ತ ಭರವಸೆ ದೊರಕಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು. ಬೆಳಗ್ಗೆ 7 ಗಂಟೆಯಿಂದಲೇ ಪ್ರತಿಭಟನೆ ಆರಂಭವಾಗಿತ್ತು. ಪ್ರತಿಭಟನೆ ಹಿಂದೆಗೆದುಕೊಂಡ ಬಳಿಕ ರಸ್ತೆ ಬದಿಯ ಪೊದೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಶ್ರಮದಾನದ ಮೂಲಕ ನಡೆಸಲಾಯಿತು.
ಜನಪ್ರತಿನಿಧಿಗಳ ಭೇಟಿ
ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಕೆ. ಮಾತನಾಡಿ, ಈ ಭಾಗದವಳೇ ಆದ ನನಗೆ ಸಮಸ್ಯೆಯ ಅರಿವಿದೆ. ರಸ್ತೆ ದುರಸ್ತಿಗೆ ಅನುದಾನ ಇರಿಸುತ್ತೇನೆ. ತಾ.ಪಂ. ಅಧ್ಯಕ್ಷರ ವಿಶೇಷ ನಿಧಿಯಿಂದಲೂ ಅನುದಾನ ನೀಡಲು ಅಧ್ಯಕ್ಷರಲ್ಲಿ ಮನವಿ ಮಾಡಲಾಗುವುದು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.