ಪಾಲ್ಯಾರ: ಸಂಪೂರ್ಣ ಹದಗೆಟ್ಟು ಚರಂಡಿಯಾದ ರಸ್ತೆ
Team Udayavani, Jun 13, 2018, 2:05 AM IST
ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮ ಮತ್ತು ಪಣಕಜೆ ಸಂಪರ್ಕ ರಸ್ತೆ ಬೇಡಿಕೆ ಈಡೇರಿಕೆಯಾಗಿದ್ದರೂ ಡಾಮರು ಭಾಗ್ಯ ಮಾತ್ರ ದೊರೆತಿಲ್ಲ. ಮಳೆಗಾಲದಲ್ಲಿ ಈ ಮಣ್ಣಿ ನ ರಸ್ತೆ ಕೆಸರುಮಯವಾಗಿದೆ.
ಮಳೆಯಿಂದ ಕೆಸರುಮಯ
ಮಚ್ಚಿನದಿಂದ ಮಡಂತ್ಯಾರು ಮೂಲಕ ಹೋಗುತ್ತಿದ್ದ ಜನರು ಸಂಪರ್ಕ ರಸ್ತೆಯಾದ ಬಳಿಕ ತಾಲೂಕು ಕೇಂದ್ರಕ್ಕೆ ಸಮೀಪವಿರುವ ಪಣಕಜೆ ರಸ್ತೆಯನ್ನೇ ಹೆಚ್ಚು ಉಪಯೋಗಿಸುತ್ತಿದ್ದಾರೆ. ಪಣಕಜೆ ಜನತೆ ಕೂಡ ಮಚ್ಚಿನ ಪಂ., ದೇವಸ್ಥಾನ, ಬ್ಯಾಂಕ್ ಗಳಿಗೆ, ಹಾಲಿನ ಡೈರಿಗೆ, ಸೊಸೈಟಿಗೆ ಬರಬೇಕಾದರೂ ಸಂಪರ್ಕ ರಸ್ತೆಯನ್ನೇ ಬಳಸುತ್ತಿದ್ದಾರೆ. ಮಳೆ ಬಂದ ಕಾರಣ ಮಣ್ಣಿನ ರಸ್ತೆ ಕೆಸರುಮಯವಾಗಿದ್ದು, ಸಂಚಾರಕ್ಕೆ ತೊಡಕಾಗಿದೆ.
ಇಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯೇ ಇಲ್ಲ. ಕೆಲವು ಕಡೆ ಚರಂಡಿ ವರೆಗೂ ಬೇಲಿ ಹಾಕಲಾಗಿದೆ. ಪಂ. ರಸ್ತೆಯಾದರೂ ಮನೆ ಕಟ್ಟುವಾಗ ಚರಂಡಿ ಮುಚ್ಚಿ ಮೋರಿ ಹಾಕದೆ ಮನೆಗೆ ದಾರಿ ಮಾಡಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿಯೇ ನೀರು ನಿಲ್ಲುತ್ತಿದೆ. ಜೋರು ಮಳೆಗೆ ರಸ್ತೆಯೇ ಚರಂಡಿಗಳಾಗಿ ಮಾರ್ಪಾಡಾಗುತ್ತಿದೆ.
ಪಾಲ್ಯಾರದಲ್ಲಿ ಸಂಪೂರ್ಣ ಹದಗೆಟ್ಟ ರಸ್ತೆ
ಮಚ್ಚಿನ – ಪಣಕಜೆ ರಸ್ತೆಯ ಮಧ್ಯ ಭಾಗದಲ್ಲಿರುವ ಪಾಲ್ಯಾರ ಎಂಬಲ್ಲಿ ರಸ್ತೆಯ ಎರಡೂ ಕಡೆಗಳಲ್ಲಿಯೂ ಚರಂಡಿ ವ್ಯವಸ್ಥೆಗಳು ಇಲ್ಲದೆ ರಸ್ತೆಯಲ್ಲೇ ನೀರು ಹೋಗಿ ಸಂಪೂರ್ಣ ಹಾಳಾಗಿದೆ. ನಿತ್ಯ ನೂರಾರು ಜನ ಓಡಾಡುವ ರಸ್ತೆಯಾಗಿದ್ದು, ಶಾಲಾ ಮಕ್ಕಳು ಹೆಚ್ಚು ಇರುವ ಪ್ರದೇಶವಾಗಿದೆ. ವಾಹನ ಸವಾರರು ಸರ್ಕಸ್ ಮಾಡಿಕೊಂಡು ಹೋದರೆ ಇನ್ನು ಮಹಿಳೆಯರು ವಾಹನ ಅರ್ಧದಾರಿಯಲ್ಲಿ ಬಿಟ್ಟು ನಡೆದುಕೊಂಡು ಹೋಗುತ್ತಿದ್ದಾರೆ.
ಚರಂಡಿ ನಿರ್ಮಾಣಕ್ಕೆ ಸೂಚನೆ
ಪಾಲ್ಯಾರದಲ್ಲಿ ರಸ್ತೆ ಹದಗೆಡಲು ಮುಖ್ಯ ಕಾರಣ ಚರಂಡಿ ವ್ಯವಸ್ಥೆ. ಮೊದಲು ಚರಂಡಿ ಇದ್ದು, ಸರಾಗವಾಗಿ ನೀರು ಹೋಗುತ್ತಿತ್ತು. ಕೆಲವರು ಮನೆ ನಿರ್ಮಾಣ ಮಾಡುವಾಗ ಪಂ. ಚರಂಡಿ ಮುಚ್ಚಿದ್ದು, ಪಂ. ರಸ್ತೆ ಹದಗೆಡಲು ನೇರ ಹೊಣೆಯಾಗಿದ್ದಾರೆ. ಶೀಘ್ರ ಚರಂಡಿ ಮಾಡಲು ಮನೆಯವರಿಗೆ ಸೂಚನೆ ನೀಡಲಾಗುವುದು. ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಚಂದ್ರಶೇಖರ ಬಿ.ಎಸ್., ಮಚ್ಚಿನ ಗ್ರಾ.ಪಂ. ಉಪಾಧ್ಯಕ್ಷರು
ಭೇಟಿ ನೀಡಿ ಪರಿಶೀಲನೆ
ಪಾಲ್ಯಾರದಲ್ಲಿ ರಸ್ತೆ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ಕಳೆದ ವಾರ ತಾತ್ಕಾಲಿಕ ಕಾಮಗಾರಿ ನಡೆಸಲಾಗಿದೆ. ಚರಂಡಿ ವ್ಯವಸ್ಥೆ ಬಗ್ಗೆ ತೀರ್ಮಾನಿಸುತ್ತೇವೆ. ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ.
– ರಾಘವೇಂದ್ರ ಪಾಟೀಲ್, ಪ್ರಭಾರ ಪಿಡಿಒ, ಮಚ್ಚಿನ ಗ್ರಾ.ಪಂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.