ಕಡಬದ ಹೊಸಮಠ ಸೇತುವೆ ಪಾರ್ಶ್ವದಲ್ಲಿ ರಸ್ತೆ ಕುಸಿತ
Team Udayavani, May 29, 2018, 3:50 AM IST
ಕಡಬ: ಹೊಸಮಠ ಮುಳುಗು ಸೇತುವೆಯ ಪಕ್ಕ ನಿರ್ಮಾಣವಾಗುತ್ತಿರುವ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡು ಮೂರು ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ಇತ್ತ ಪ್ರಸ್ತುತ ಜನರು ಉಪಯೋಗಿಸುತ್ತಿರುವ ಹಳೆಯ ಸೇತುವೆ ಬಳಿ ಸೋಮವಾರ ನಸುಕಿನ ವೇಳೆ ರಸ್ತೆ ಕುಸಿದು ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ಒಟ್ಟಿನಲ್ಲಿ ಈ ಬಾರಿಯ ಮಳೆಗಾಲಕ್ಕೂ ಹೊಸ ಸೇತುವೆ ಜನರ ಉಪಯೋಗಕ್ಕೆ ಲಭಿಸದಿದ್ದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಭೀತಿ ಎದುರಾಗಿದೆ.
ಹಳೆ ಸೇತುವೆಗೆ ತಾಗಿಕೊಂಡು ಕಡಬ ಭಾಗದಲ್ಲಿ ನಸುಕಿನ ವೇಳೆ ಭೂಮಿ ಕುಸಿದು ರಸ್ತೆ ತುಂಡರಿಸಿ ಹೋಗಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಹೊಸ ಸೇತುವೆ ಮತ್ತು ಹಳೆಯ ಸೇತುವೆ ಸಂಪರ್ಕ ರಸ್ತೆ ನಡುವೆ ಇರುವ ತೋಡಿನಲ್ಲಿ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿ ರಸ್ತೆಯ ಪಕ್ಕದ ಮಣ್ಣು ಕೊರೆದು ಹೋಗಿ ಭೂಮಿ ಕುಸಿತವಾಗಿದೆ. ಬೆಳಗ್ಗೆ ಸುಮಾರು 9 ಗಂಟೆಯ ಸುಮಾರಿಗೆ ನೂತನ ಸೇತುವೆಯ ಕಾಮಗಾರಿಗೆ ತರಿಸಲಾಗಿದ್ದ ಹಿಟಾಚಿ ಯಂತ್ರದ ಮೂಲಕ ಕುಸಿದ ರಸ್ತೆಯ ಭಾಗಕ್ಕೆ ಕಪ್ಪುಕಲ್ಲು ತುಂಬಿಸಿ ಮಣ್ಣು ಹಾಕಿ ದುರಸ್ತಿಗೊಳಿಸಿದ ಬಳಿಕ ರಸ್ತೆ ಸಂಚಾರ ಸುಗಮಗೊಂಡಿತು.
ಎರಡು ವರ್ಷಗಳ ಹಿಂದೆಯೇ ಮುಗಿಯಬೇಕಿತ್ತು
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (KRDCL) ಅಡಿಯಲ್ಲಿ 7.50 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಸೇತುವೆಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸೇತುವೆಯ ಕೆಲಸ ಬಹುತೇಕ ಮುಗಿದಿದ್ದರೂ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ. ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ಸೇತುವೆಯ ಇಕ್ಕೆಲಗಳ ರಸ್ತೆ ಕಾಮಗಾರಿಯೂ ಪೂರ್ತಿಯಾಗಿ 2 ವರ್ಷಗಳ ಹಿಂದೆಯೇ ಮಳೆಗಾಲದಲ್ಲಿ ಮುಳುಗಡೆಯ ಭೀತಿ ಇಲ್ಲದೆ ಹೊಸ ಸೇತುವೆಯ ಮೇಲೆ ವಾಹನಗಳು ಸಂಚರಿಸಬಹುದಾಗಿತ್ತು. ಸೇತುವೆಯ ಎರಡೂ ಬದಿಯಲ್ಲಿ ಸಂಪರ್ಕ ರಸ್ತೆ ನಿರ್ಮಿ ಸುವುದಕ್ಕಾಗಿ ಖಾಸಗಿಯವರಿಂದ ಜಮೀನು ಸ್ವಾಧೀನಪಡಿಸುವುಕೊಳ್ಳುವ ಪ್ರಕ್ರಿಯೆ ವಿಳಂಬವಾದ ಕಾರಣದಿಂದಾಗಿ ಸಂಪರ್ಕ ರಸ್ತೆ ನಿರ್ಮಾಣವೂ ನೆನೆಗುದಿಗೆ ಬಿದ್ದಿತ್ತು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ, ಜನರ ಅಸಹಕಾರ ಪ್ರವೃತ್ತಿಯ ಕಾರಣದಿಂದಾಗಿ ನೂತನ ಸೇತುವೆ ಬಳಕೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ.
ಗಾಬರಿಗೊಂಡ ಜನತೆ
ನಸುಕಿನ 4 ಗಂಟೆಯ ವೇಳೆಗೆ ಕಡಬದ ಹೊಟೇಲ್ ಉದ್ಯಮಿ ಮನೋಹರ ರೈ ಬೆದ್ರಾಜೆ ಅವರು ಇದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಕುಸಿದಿರುವುದು ಬೆಳಕಿಗೆ ಬಂದಿತ್ತು. ಮುಂಜಾಗರೂಕತಾ ಕ್ರಮವಾಗಿ ಕುಸಿದ ರಸ್ತೆ ಸುತ್ತ ಮರಳು ತುಂಬಿದ ಗೋಣಿಚೀಲಗಳನ್ನು ಇರಿಸಿದ್ದ ಅವರು, ಬಳಿಕ ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ಹೊಸಮಠ ಸೇತುವೆ ಕುಸಿದಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲೆಡೆ ಹರಡಿದ ಪರಿಣಾಮವಾಗಿ ಪರಿಸರದ ಜನರು ಆತಂಕದಿಂದ ಸ್ಥಳಕ್ಕೆ ಧಾವಿಸಿ ಬಂದಿದ್ದರು.
ಮಳೆಗಾಲದಲ್ಲಿ ಸಂಚಾರಕ್ಕೆ ಅನುವು
ಸಂಪರ್ಕ ರಸ್ತೆಗೆ ಬೇಕಾದ ಭೂಮಿಯ ಸ್ವಾಧೀನ ಪ್ರಕ್ರಿಯೆ ತಡವಾದುದರಿಂದ ಕಾಮಗಾರಿಗೆ ತಡೆಯುಂಟಾಗಿತ್ತು. ಇದೀಗ ಸಮಸ್ಯೆ ಬಗೆಹರಿದಿದೆ. ಈಗಾಗಲೇ ಮಳೆ ಆರಂಭಗೊಂಡಿರುವುದರಿಂದ ಸಂಪರ್ಕ ರಸ್ತೆೆ ನಿರ್ಮಿಸಿದರೂ ಡಾಮರು ಹಾಕುವುದು ಕಷ್ಟಸಾಧ್ಯ. ಆದರೆ ಮಳೆ ಜೋರಾಗುವ ಮೊದಲು ಸಂಪರ್ಕ ರಸ್ತೆಯನ್ನು ಗಟ್ಟಿ ಮರಳು ಹಾಕಿ ಹದಗೊಳಿಸಿ ಹೊಸ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅನುವುಮಾಡಿಕೊಡಲಾಗುವುದು.
– ಪುಟ್ಟಸ್ವಾಮಿ, AEE, KRDCL ಹಾಸನ
— ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.