ರಸ್ತೆ ಅಗೆದು ಗುತ್ತಿಗೆದಾರ ನಾಪತ್ತೆ: ಸಂಚಾರಕ್ಕೆ ತೊಡಕು
Team Udayavani, Jan 18, 2018, 2:53 PM IST
ಉಪ್ಪಿನಂಗಡಿ: ರಸ್ತೆ ದುರಸ್ತಿಗೆ ಟೆಂಡರ್ ಪಡೆದ ಗುತ್ತಿಗೆದಾರರೊಬ್ಬರು ರಸ್ತೆಯನ್ನು ಅಗೆದು ಕೆಲಸ ಸ್ಥಗಿತಗೊಳಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯ 3ನೇ ವಾರ್ಡಿನ ನಟ್ಟಿಬೈಲು ರಸ್ತೆಯಲ್ಲಿ ಮೂರು ವರ್ಷಗಳಿಂದ ವಾಹನ ಸಂಚಾರ ಹಾಗೂ ಪಾದಚಾರಿಗಳಿಗೆ ನಡೆದಾಡಲೂ ಅಸಾಧ್ಯವಾಗದ ಸ್ಥಿತಿಯಿತ್ತು. ಸ್ಥಳೀಯರ ಬೇಡಿಕೆ ಈಡೇರಿಸಲು ಮುಂದಾದ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 100 ಮೀ. ರಸ್ತೆಗೆ ಕಾಂಕ್ರೀಟ್ ಹಾಕಲು 6.25 ಲ.ರೂ. ಅನುದಾನ ಬಿಡುಗಡೆ ಮಾಡಿದ್ದರು. ಸುಳ್ಯ ಮೂಲದ ಗುತ್ತಿಗೆದಾರರು ಆನ್‌ಲೈನ್‌ನಲ್ಲಿ ಬಿಡ್ ಮಾಡಿ ಗುತ್ತಿಗೆ ಪಡೆದಿದ್ದು, ಒಂದು ತಿಂಗಳ ಹಿಂದೆ ರಸ್ತೆ ಅಗೆದು ಹಾಕಿ, ಮರಳಿದ್ದಾರೆ.
ಈಗ ಈ ರಸ್ತೆಯಲ್ಲಿ ನಡೆದಾಡಲೂ ಅಸಾಧ್ಯವಾದ ಸ್ಥಿತಿಯಿದೆ. ಇಲ್ಲಿ ಒಂದು ಅಂಗನವಾಡಿ ಹಾಗೂ ಎರಡು ಶಾಲೆಗಳಿಗೆ ತೆರಳುವ ಪುಟ್ಟ ಮಕ್ಕಳೂ ಇದೇ ಹಾದಿಯಲ್ಲಿ ಕ್ರಮಿಸಬೇಕಾದ ಅನಿವಾರ್ಯತೆ ಎದುರಾಗಿದೆ. ತತ್‌ಕ್ಷಣವೇ ಈ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ತತ್‌ಕ್ಷಣ ಕಾಮಗಾರಿ ಆರಂಭಿಸಲು ಸೂಚನೆ
ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಗುತ್ತಿಗೆದಾರರು ರಸ್ತೆ ಅಗೆದಿದ್ದಾರೆ. ರಸ್ತೆ ಅಕ್ಕಪಕ್ಕದ ಶಾಲೆಗಳ
ವಾರ್ಷಿಕೋತ್ಸವಗಳು ನಡೆಯುತ್ತಿರುವ ಕಾರಣ ಕಾಮಗಾರಿ ನಿಲ್ಲಿಸಿರಬಹುದು ಎಂದು ಭಾವಿಸಿದ್ದೇನೆ. ಕಾಮಗಾರಿಯನ್ನು ತತ್‌ಕ್ಷಣವೇ ಆರಂಭಿಸಲು ಸೂಚಿಸುತ್ತೇನೆ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.