ರಸ್ತೆ ಸಮರ್ಪಕವಿಲ್ಲ; ಕುಸಿದ ಆವರಣ ಗೋಡೆ ನಿರ್ಮಾಣವಾಗಿಲ್ಲ
Team Udayavani, Nov 14, 2018, 12:02 PM IST
ಬೆಳ್ತಂಗಡಿ : ಬೆಳ್ತಂಗಡಿ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವ್ಯವಸ್ಥೆಗಳು ಉತ್ತಮವಾಗಿದ್ದರೂ ಅಲ್ಲಿನ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತುರ್ತು ವಾಹನಗಳೇ ರಸ್ತೆಯಲ್ಲಿ ಚಲಿಸುವುದರಿಂದ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂಬ ಬೇಡಿಕೆ ಜೋರಾಗಿಯೇ ಕೇಳಿಬರುತ್ತಿದೆ. ಜತೆಗೆ ಆಸ್ಪತ್ರೆಯ ಆವರಣ ಗೋಡೆ ಕುಸಿದು 4 ತಿಂಗಳೇ ಕಳೆದರೂ ಇನ್ನೂ ದುರಸ್ತಿಯಾಗಿಲ್ಲ ಎಂಬ ಆರೋಪವಿದೆ.
ಬೆಳ್ತಂಗಡಿ ಮುಖ್ಯ ರಸ್ತೆಯಿಂದ ಸುಮಾರು 100 ಮೀ. ದೂರದಲ್ಲಿ ಸರಕಾರಿ ಆಸ್ಪತ್ರೆ ಇದೆ. ಅಲ್ಲಿಗೆ ಪ.ಪಂ.ನ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಈ 100 ಮೀ. ರಸ್ತೆಯೇ ಸಂಪೂರ್ಣ ಹದಗೆಟ್ಟಿದೆ. ರಸ್ತೆಯಲ್ಲಿ ಡಾಮಾರಿಗಿಂತಲೂ ಹೊಂಡಗಳ ಜತೆಗೆ ಜಲ್ಲಿ ಕಲ್ಲುಗಳೇ ತುಂಬಿ ಹೋಗಿವೆ. ಹೀಗಾಗಿ ಆಸ್ಪತ್ರೆಗೆ ತೆರಳುವವರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳಿವೆ ರಸ್ತೆಯು ಮೊದಲೇ ಹದಗೆಟ್ಟಿದ್ದು, ಕಳೆದ ಮಳೆಗಾಲದಲ್ಲಿ ಇನ್ನೂ ಹೆಚ್ಚಿನ ಹಾನಿಯಾಗಿದೆ. ಆದರೆ ಮಳೆ ಹೋಗಿ ತಿಂಗಳುಗಳೇ ಕಳೆದರೂ ಇನ್ನೂ ದುರಸ್ತಿ ಕಾರ್ಯವಾಗಿಲ್ಲ. ಆಸ್ಪತ್ರೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಾಮಾನ್ಯವಾಗಿ ಹೆಚ್ಚು ಗುಣಮಟ್ಟದಿಂದ ಕೂಡಿರಬೇಕಾಗುತ್ತದೆ. ಅಲ್ಲಿಗೆ ದಿನದ 24 ಗಂಟೆಗಳೂ ತುರ್ತು ವಾಹನಗಳು ರೋಗಿಗಳನ್ನು ಕರೆದುಕೊಂಡು ಆಗಮಿಸುತ್ತಿರುತ್ತವೆ. ಹೀಗಾಗಿ ರಸ್ತೆ ದುರಸ್ತಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
23 ಲಕ್ಷ ರೂ. ಪ್ರಸ್ತಾವನೆ
ಮಳೆಗೆ ಆಸ್ಪತ್ರೆಯ ಆವರಣ ಗೋಡೆ ಕುಸಿದಿರುವುದರಿಂದ ಗೋಡೆ ನಿರ್ಮಾಣ ಸಹಿತ ಇತರ ಕಾಮಗಾರಿಗಳಿಗೆ ಒಟ್ಟು23 ಕೋ.ರೂ. ಕ್ರೀಯಾಯೋಜನೆ ಸಿದ್ಧಪಡಿಸಿ, ಜಿಲ್ಲಾ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಕಳುಹಿಸಿಕೊಡಲಾಗಿದೆ. ಕಳೆದ ಜುಲೈನಲ್ಲೇ ಪ್ರಸ್ತಾವನೆ ಹೋಗಿದ್ದು, ಪ್ರಾಕೃತಿಕ ವಿಕೋಪ ಪರಿಹಾರದಡಿ ಅನುದಾನ ಸಿಗುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಇಲಾಖೆ ಆವರಣ ಗೋಡೆ ನಿರ್ಮಿಸದೆ ಅನುದಾನಕ್ಕಾಗಿ ಕಾಯುತ್ತಿದೆ.
ಮೇಲ್ದರ್ಜೆಯ ಅನುದಾನವಿಲ್ಲ
ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿ 4 ವರ್ಷಗಳೇ ಕಳೆದರೂ ಇನ್ನೂ ಅದರ ಅನುದಾನ ಬರುವುದಕ್ಕೆ ಆರಂಭಗೊಂಡಿಲ್ಲ. ಪ್ರಸ್ತುತ ಅನುದಾನಗಳೆಲ್ಲವೂ ಜಿ.ಪಂ.ನಿಂದಲೇ ಬರುತ್ತವೆ. 100 ಹಾಸಿಗೆಗಳ ಆಸ್ಪತ್ರೆಯ ಅನುದಾನಗಳು ನೇರವಾಗಿ ರಾಜ್ಯ ಸರಕಾರದಿಂದಲೇ ಬರುವುದರಿಂದ ಆಸ್ಪತ್ರೆಯ ಅಭಿವೃದ್ಧಿ ವೇಗವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಖಾಸಗಿ ವಾಹನ ಪಾರ್ಕಿಂಗ್
ಆಸ್ಪತ್ರೆಯ ರಸ್ತೆಯು ಹದಗೆಟ್ಟಿರುವುದು ಒಂದೆಡೆಯಾದರೆ, ಸ್ಥಳೀಯ ಅಂಗಡಿ-ಮುಂಗಟ್ಟುಗಳಿಗೆ ಬಂದ ಗ್ರಾಹಕರು ರಸ್ತೆಗೆ ತಾಗಿಕೊಂಡೇ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ಆಸ್ಪತ್ರೆಗೆ ತೆರಳುವ ವಾಹನಗಳಿಗೆ ತೊಂದರೆಯಾಗುತ್ತಿದೆ ಎಂಬ ಆರೋಪಗಳಿವೆ. ಸಾಮಾನ್ಯವಾಗಿ ಆ್ಯಂಬುಲೆನ್ಸ್ ಸಹಿತ ಇತರ ವಾಹನಗಳಲ್ಲಿ ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಆಸ್ಪತ್ರೆಗೆ ಕರೆತರುತ್ತಾರೆ. ಆದರೆ ಇಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿದ್ದರೆ, ರೋಗಿಗಳ ವಾಹನಕ್ಕೆ ತೆರಳುವುದಕ್ಕೆ ತೊಂದರೆಯಾಗುತ್ತದೆ. ಜತೆಗೆ ಮುಂದಿನ ಇನ್ನೊಂದು ವಾಹನ ಬಂದರೆ ಎರಡೂ ವಾಹನಗಳೂ ಅಲ್ಲೇ ನಿಲ್ಲಬೇಕಾದ ಸ್ಥಿತಿ ಇದೆ.
ಪ್ರಸ್ತಾವನೆ ಹೋಗಿದೆ
ಆವರಣ ಗೋಡೆ ಕಳೆದ ಮಳೆಗಾಲದಲ್ಲಿ ಕುಸಿದಿದ್ದು, ಅದರ ದುರಸ್ತಿಗಾಗಿ ಜುಲೈ ತಿಂಗಳಿನಲ್ಲೇ ಪ್ರಸ್ತಾವನೆ ಹೋಗಿದೆ. ಕ್ರೀಯಾ ಯೋಜನೆ ಸಿದ್ಧಪಡಿಸಿ ಜಿಲಾ, ತಾ| ಆರೋಗ್ಯಾಧಿಕಾರಿಗಳಿಗೆ ನೀಡಲಾಗಿದ್ದು, ಅದನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಹದಗೆಟ್ಟಿರುವ ರಸ್ತೆ ಪ. ಪಂ. ವ್ಯಾಪ್ತಿಗೆ ಬರುತ್ತದೆ.
– ಡಾ| ಶಶಿಕಾಂತ್ ಡೋಂಗ್ರೆ
ಪ್ರಭಾರ ಆಡಳಿತಾಧಿಕಾರಿ, ಸ. ಆಸ್ಪತ್ರೆ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.