ನಂದಾವರ ವಿನಾಯಕ -ದುರ್ಗಾಂಬಾ ದೇಗುಲ ಸಂಪರ್ಕ ರಸ್ತೆಗೆ ಬೇಕಿದೆ ಕಾಯಕಲ್ಪ
Team Udayavani, Jun 19, 2018, 12:04 PM IST
ಬಂಟ್ವಾಳ : ನೇತ್ರಾವತಿ ನದಿ ದಂಡೆಯ ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲಿ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರವೂ ಒಂದು. ಆದರೆ, ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಮಾತ್ರ ವಾಹನ ಸಂಚಾರ ಬಿಡಿ, ಜನ ಸಂಚಾರವೂ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದು, ತುರ್ತು ಕಾಯಕಲ್ಪ ಆಗಬೇಕಿದೆ.
ಫೆಬ್ರವರಿ ತಿಂಗಳಲ್ಲಿ ಶಿವರಾತ್ರಿ ವೇಳೆ ಪಾಣೆಮಂಗಳೂರು -ನಂದಾವರ- ಮಾರ್ನಬೈಲು ಸಂಪರ್ಕ ರಸ್ತೆಗೆ ಕಾಂಕ್ರೀಟ್
ಹಾಕುವ ಸಂದರ್ಭದಲ್ಲಿ ಮುಖ್ಯರಸ್ತೆಯಿಂದ ದೇವಸ್ಥಾನವನ್ನು ಸಂಪರ್ಕಿಸುವ ಡಾಮರು ರಸ್ತೆಯನ್ನು ದುರಸ್ತಿ ಉದ್ದೇಶದಿಂದ ಅಗೆದು ಹಾಕಲಾಗಿತ್ತು. ಕೇವಲ 100ರಿಂದ 120 ಮೀ. ರಸ್ತೆ ಕಾಂಕ್ರೀಟ್ ಕಾಮಗಾರಿ ಆಗಬೇಕಿತ್ತು.
ರಸ್ತೆ ಅಗೆದ ಮೇಲೆ ಮಾರ್ನಬೈಲ್ ಜಂಕ್ಷನ್‌ನಿಂದ ಒಳದಾರಿಯಾಗಿ ದೇವಸ್ಥಾನಕ್ಕೆ ಹೋಗುವುದಕ್ಕೆ ಮಣ್ಣಿನ ಸಂಪರ್ಕ ರಸ್ತೆ ನಿರ್ಮಿಸಲಾಗಿತ್ತು. ಆದರೆ, ಅರ್ಧ ಅಡಿಗೂ ಹೆಚ್ಚು ಮಣ್ಣು ಹಾಕಿದ್ದರಿಂದ ಧೂಳು ರಾಚುವ ಈ ರಸ್ತೆಯಲ್ಲಿ ಸಂಚಾರವೇ ಅಸಾಧ್ಯವಾಗಿತ್ತು.
ನೀತಿ ಸಂಹಿತೆ ಅಡ್ಡಿ
ಮುಂದೆ ಚುನಾವಣೆಯ ಕಾವು ಎದುರಾಗಿ ನೀತಿ ಸಂಹಿತೆಯಿಂದ ಕಾಮಗಾರಿ ಸ್ಥಗಿತಗೊಂಡಿತು. ಆರಂಭಿಸಿದ ಕೆಲಸ ಮುಂದುವರಿಸಲು ಏನು ಅಡ್ಡಿ ಎಂದು ಸಾರ್ವಜನಿಕರೂ ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಚುನಾವಣೆ ಮುಗಿದ ಮೇಲೆ ಮಳೆ ಶುರುವಾಯಿತು. ಒಳರಸ್ತೆ ಸಂಪೂರ್ಣ ಕೆಸರುಮಯವಾಯಿತು. ಅಪರಕ್ರಿಯೆ ಸಹಿತ ಇತರ ಧಾರ್ಮಿಕ ಕಾರ್ಯಗಳಿಗೆ ಬರುವವರಿಗೆ ಈಗ ಬಹಳ ತೊಂದರೆಯಾಗುತ್ತಿದೆ. ಕೆಸರುಮಯ ಒಳ ರಸ್ತೆಯಲ್ಲಿ ಸದ್ಯಕ್ಕೆ ಸಂಚಾರ ಸಾಧ್ಯವಿಲ್ಲ. ಇರುವ ರಸ್ತೆಯನ್ನು ಅಗೆದು ಹಾಕಿ ಜಲ್ಲಿ ತುಂಬಿಸಿದ್ದರಿಂದ ಅದರಲ್ಲೂ ದೇವಸ್ಥಾನಕ್ಕೆ ಸಂಚರಿಸುವುದು ಕನಸೇ ಆಗಿದೆ. ಐದು ತಿಂಗಳಿಂದ ಕಾಮಗಾರಿಗೆ ಚಾಲನೆ ಸಿಗದೆ ಸಂಚಾರಕ್ಕೆ ಅಡಚಣೆಯಾಗಿದೆ.
ರಸ್ತೆಯ ನಡುವೆ ಅಲ್ಲಲ್ಲಿ ಮರಳು ರಾಶಿ, ಅಗೆದು ಹಾಕಿದ ಮಣ್ಣಿನ ರಾಶಿಯಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ರಸ್ತೆಗೆ ಜಲ್ಲಿ ಹಾಕಿದ್ದು, ವಾಹನ ಸಂಚರಿಸುವಾಗ ಆಚೀಚೆ ಸರಿದು ಹೊಂಡವಾಗುತ್ತಿದೆ. ಇಲ್ಲಿನ ಅಶ್ವತ್ಥ ಕಟ್ಟೆಯ ಸನಿಹ ಡ್ರೈನೇಜ್ ಕಾಂಕ್ರಿಟ್ ಒಳಚರಂಡಿ ನಿರ್ಮಿಸಿ ಹಾಗೆಯೇ ಬಿಡಲಾಗಿದೆ. ವಾಹನಗಳು ಅದರ ಮೇಲಿಂದ ಸರ್ಕಸ್ ಮಾಡಿಕೊಂಡು ಹೋಗಬೇಕಾಗಿದೆ. ಡಾಮರು ರಸ್ತೆ ಇದ್ದಾಗಿನ ದಿನಗಳನ್ನು ಹೋಲಿಸಿದರೆ ಈಗ ಭಕ್ತರ ಸಂಖ್ಯೆ ಮುಕ್ಕಾಲು ಪಾಲು ಕಡಿಮೆಯಾಗಿದೆ. ವಾಹನ ನಿಲ್ಲಿಸಿ ನಡೆದುಕೊಂಡಾದರೂ ದೇವಸ್ಥಾನಕ್ಕೆ ಹೋಗಿಬರೋಣ ಎಂದರೆ ಸೂಕ್ತ ಜಾಗವಿಲ್ಲ ಎಂಬುದು ಭಕ್ತರ ಅಳಲು. ರಸ್ತೆ ದುರಸ್ತಿಗೆ ಅನುದಾನ ಎಲ್ಲಿಂದ, ಎಷ್ಟು ಬಿಡುಗಡೆಯಾಗಿದೆ ಎಂಬ ಬಗ್ಗೆ ಯಾರೂ ಸ್ಪಷ್ಟ ಉತ್ತರ ನೀಡುತ್ತಿಲ್ಲ. ಮಂಗಳೂರಿನ ಗುತ್ತಿಗೆದಾರರೊಬ್ಬರ ಮೇಸ್ತ್ರಿ ಆಗೊಮ್ಮೆ ಈಗೊಮ್ಮೆ ಬಂದು ನೋಡಿ ಹೋಗುತ್ತಾರಷ್ಟೇ ಎಂದು ಸ್ಥಳೀಯರು ವಿಷಾದದಿಂದ ಹೇಳುತ್ತಿದ್ದಾರೆ.
ಭಕರಿಗೆ ದಾರಿ ಇಲ್ಲ
ಸಹಸ್ರಾರು ಸಂಖ್ಯೆಯ ಭಕ್ತರು ಸಂದರ್ಶನ ನೀಡುವ ಕಾರಣಿಕ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಯನ್ನು ಅಗೆದು ಹಾಕಲಾಗಿದೆ. ರಸ್ತೆ ಬದಿ ಚರಂಡಿಯ ಕೆಲಸ ಅರ್ಧಕ್ಕೆ ನಿಂತಿದೆ. ದುರ್ನಾತ ಮೂಗಿಗೆ ರಾಚುತ್ತಿದೆ. ಬರುವ ಭಕ್ತರಿಗೆ ಬೇರೆ ದಾರಿಯೇ ಇಲ್ಲವಾಗಿದೆ.
ಚಾಲನೆ ನೀಡಲಾಗಿದೆ
ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಪಾಣೆಮಂಗಳೂರು -ಮಾರ್ನಬೈಲ್ ಸಂಪರ್ಕ ರಸ್ತೆ ಕಾಂಕ್ರಿಟ್ ಕಾಮಗಾರಿ ಸಂದರ್ಭ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಗೂ ಕಾಂಕ್ರೀಟ್ ಮಾಡುವಂತೆ ಹೆಚ್ಚುವರಿಯಾಗಿ ವಿನಂತಿಸಿಕೊಳ್ಳಲಾಗಿತ್ತು. ಕಾಮಗಾರಿ ಪ್ರಗತಿಯಲ್ಲಿದ್ದ ಸಂದರ್ಭ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ನಿಲುಗಡೆ ಆಗಿತ್ತು. ಜೂ. 11ರ ತನಕವೂ ಅದರ ಉದ್ದೇಶದಿಂದ ಕೆಲಸಗಳು ಆಗಿರಲಿಲ್ಲ. ಪ್ರಸ್ತುತ ಕಾಮಗಾರಿ ಮುಂದುವರಿಸಲು ಕ್ರಮ ಕೈಗೊಂಡಿದೆ. ಅದಕ್ಕೆ ಮರಳು, ಜಲ್ಲಿ ತಂದು ಸಂಗ್ರಹಿಸಿದೆ. ಚರಂಡಿ ನಿರ್ಮಾಣದ ಕೆಲಸಕ್ಕೆ ಚಾಲನೆ ನೀಡಿದೆ.
– ಚಂದ್ರಪ್ರಕಾಶ್ ಶೆಟ್ಟಿ ಜಿ.ಪಂ. ಸದಸ್ಯರು
ಕೆಲಸ ಬೇಗನೆ ಆಗಲಿ
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನನುಕೂಲ ಆಗುತ್ತಿದೆ. ಶೀಘ್ರ ಕಾಮಗಾರಿ ಪೂರೈಸಲು ಗುತ್ತಿಗೆದಾರರಲ್ಲಿ ಚರ್ಚಿಸಲಾಗಿದೆ. ಇನ್ನು ಮದುವೆ ಇತ್ಯಾದಿ ಶುಭ ಕಾರ್ಯಗಳು ಇರುವುದರಿಂದ ರಸ್ತೆಯ ಕೆಲಸ ಆಗಬೇಕು. ಮರಳು, ಜಲ್ಲಿ ಸಂಗ್ರಹ ಆಗುತ್ತಿದೆ. ಚರಂಡಿ ಕೆಲಸವನ್ನು ಕೆಲವು ದಿನಗಳಿಂದ ಆರಂಭಿಸಲಾಗಿದೆ. ಕಾಂಕ್ರಿಟೀಕರಣ ಕೆಲಸ ರಾಜ್ಯ ರಸ್ತೆ ನಿರ್ಮಿಸಿದ ಗುತ್ತಿಗೆಯವರು ನಿರ್ವಹಿಸುತ್ತಾರೆ. ನಂದಾವರ ಕಟ್ಟೆಯಿಂದ ದೇವಸ್ಥಾನದ ತನಕ ಕಾಮಗಾರಿಗಾಗಿ ಸ್ಥಳೀಯ ಜಿ.ಪಂ. ಸದಸ್ಯರಲ್ಲಿ ಮಾತುಕತೆ ಈ ಹಿಂದೆಯೇ ನಡೆದಿತ್ತು.
-ಎ.ಸಿ. ಭಂಡಾರಿ
ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ
ರಾಜಾ ಬಂಟ್ವಾಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.