ಸ್ಥಿತಿ ಶೋಚನೀಯ; ವಿಸ್ತರಣೆಯೂ ಆಗಿಲ್ಲ, ಮರುಡಾಮರು ಪ್ರಸ್ತಾವನೆಯೇ ಇಲ್ಲ !
ರೋಡ್ ಟ್ರಿಪ್: ಕಬಕ-ಸುರತ್ಕಲ್ ರಾಜ್ಯ ಹೆದ್ದಾರಿ
Team Udayavani, Nov 13, 2019, 4:43 AM IST
ಈ ಸರಣಿ ಆರಂಭಿಸಿರುವುದು ನಮ್ಮ ಪ್ರಮುಖ ರಸ್ತೆಗಳ ಸಚಿತ್ರ ದರ್ಶನ ನೀಡಲೆಂದೇ. ರಾಜ್ಯ ಹೆದ್ದಾರಿ ಸೇರಿದಂತೆ ಜಿಲ್ಲಾ ಪಂಚಾಯತ್‌ನ ಹಲವು ರಸ್ತೆಗಳು ಇಂದು ಸಂಚಾರಕ್ಕೆ ಅಯೋಗ್ಯವಾಗಿವೆ. ಈ ಮಾತು ದಕ್ಷಿಣ ಕನ್ನಡ ಮತ್ತು ಉಡುಪಿ ಎರಡೂ ಜಿಲ್ಲೆಗಳಿಗೆ ಅನ್ವಯ. ಉದಯವಾಣಿಯ ವರದಿಗಾರರು ಈ ಹದಗೆಟ್ಟ ರಸ್ತೆಗಳಲ್ಲಿ ತಿರುಗಾಡಿ, ಸ್ಥಳೀಯರನ್ನು ಮಾತನಾಡಿಸಿ ರಸ್ತೆಗಳ ವಾಸ್ತವ ಸ್ಥಿತಿಯನ್ನು ಓದುಗರ ಎದುರು ತೆರೆದಿಡುವ ಪ್ರಯತ್ನವಿದು. ಲೋಕೋಪಯೋಗಿ ಇಲಾಖೆ ಕೂಡಲೇ ಜನರ ಗೋಳನ್ನು ಆಲಿಸಿ ಪರಿಹಾರ ಕಲ್ಪಿಸಬೇಕೆಂಬುದು ಜನಾಗ್ರಹ.
ವಿಟ್ಲ: ಕಬಕ-ಸುರತ್ಕಲ್ ರಾಜ್ಯ ಹೆದ್ದಾರಿಯು ಗ್ರಾಮೀಣ ಭಾಗವಾದ ಕಬಕದಿಂದ ವಿಟ್ಲ ವರೆಗೆ ಶೋಚನೀಯ ಸ್ಥಿತಿಗೆ ತಲುಪಿ ಸಂಚಾರಕ್ಕೆ ಅಯೋಗ್ಯವಾಗಿದೆ. ಹೊಂಡಗುಂಡಿಗಳ ನಡುವೆ ರಸ್ತೆಯನ್ನು ಹುಡುಕುತ್ತ 7 ಕಿ.ಮೀ. ದೂರವನ್ನು ಕ್ರಮಿಸಲು ಅರ್ಧ ಗಂಟೆ ಪರದಾಡಬೇಕಿದೆ. ಈ ಹಿಂದೆ ಈ ಹೆದ್ದಾರಿಯ ಪೊಳಲಿ ಕೈಕಂಬದಿಂದ ಕಬಕ ವರೆಗೆ ರಸ್ತೆಯ ಅಗಲ 5.50 ಮೀಟರ್ ಇತ್ತು. ಅದನ್ನು 7 ಮೀ.ಗೆ ವಿಸ್ತರಿಸಲು ಇಲಾಖೆ ಕ್ರಮ ಕೈಗೊಂಡಿತ್ತು. 18 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಗುತ್ತಿಗೆದಾರರು ಅಲ್ಲಲ್ಲಿ ಕಾಮಗಾರಿ ಆರಂಭಿಸಿ, ಮಳೆಗಾಲದಲ್ಲಿ ವಿಟ್ಲ – ಕಬಕ ರಸ್ತೆ ವಿಸ್ತರಣೆ ಕೈಗೆತ್ತಿಕೊಂಡರು. 1.50 ಮೀಟರ್ ಅಗಲಗೊಳಿಸಿದ್ದಲ್ಲದೆ ಬದಿಯಲ್ಲಿ ಒಂದು ಅಡಿ ಹೊಂಡ ತೋಡಲಾಯಿತು. ಅದರಲ್ಲಿ ನೀರು ತುಂಬಿ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಯಿತು. ಅಷ್ಟರಲ್ಲಿ ಗುತ್ತಿಗೆದಾರರು ನಾಪತ್ತೆಯಾದರು; ಕಾಮಗಾರಿ ಸ್ಥಗಿತಗೊಂಡಿತು. ವಿಸ್ತರಣೆಗೊಂಡ 1.50 ಮೀಟರ್ ರಸ್ತೆಗೆ ಡಾಮರು ಹಾಕದ ಕಾರಣ ರಸ್ತೆಯ ಸ್ಥಿತಿ ಹದಗೆಡುತ್ತಲೇ ಹೋಯಿತು.
ಗುತ್ತಿಗೆ ರದ್ದು
ಸಾರ್ವಜನಿಕರಿಂದ ಆಕ್ರೋಶ, ಹೋರಾಟ ವ್ಯಕ್ತವಾಗುತ್ತಿದ್ದಂತೆ ಇಲಾಖೆಯು ಗುತ್ತಿಗೆಯನ್ನು ರದ್ದುಪಡಿಸಿ ಹೊಸ ಟೆಂಡರ್ ಪ್ರಕ್ರಿಯೆ ನಡೆಸಿತು. ಯಾರೂ ಮುಂದೆ ಬರಲೇ ಇಲ್ಲ.ಸಾವು-ನೋವು ದ್ವಿಚಕ್ರ ವಾಹನಗಳು ಹೊಂಡಕ್ಕಿಳಿದಾಗ ಹಿಂಬದಿ ಪ್ರಯಾಣಿಕರಿಬ್ಬರು ಮೃತಪಟ್ಟ ಎರಡು ಘಟನೆಗಳಾಗಿವೆ. ಹೊಂಡ ತಪ್ಪಿಸುವ ಭರದಲ್ಲಿ ಬಸ್ ಮತ್ತು ಲಾರಿ ಮುಖಾಮುಖೀ ಢಿಕ್ಕಿಯಾಗಿ ಬಸ್ಸಿನಲ್ಲಿದ್ದ 16 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು.
ಎಸ್‌ಎಚ್‌ಡಿಪಿ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖಾಧಿಕಾರಿಗಳು ರಸ್ತೆಯನ್ನು ಪರಿಶೀಲಿಸಿ ಪ್ರಾಕೃತಿಕ ವಿಕೋಪ ಅನುದಾನದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ರಸ್ತೆಗೆ ತೇಪೆ ಹಚ್ಚುವ ಕಾಮಗಾರಿ ಆರಂಭವಾಗಿದೆ. ಆದರೆ ರಸ್ತೆಗೆ ಸಂಪೂರ್ಣ ಮರುಡಾಮರೀಕರಣವೇ ಆಗಬೇಕು ಎಂಬುದು ಸರ್ವರ ಆಗ್ರಹ.
ಅತಿ ಹೆಚ್ಚು ಹಾಳಾಗಿರುವುದು
ವಿಟ್ಲ, ಕಲ್ಲಕಟ್ಟ, ಚಂದಳಿಕೆ, ಬದನಾಜೆ, ಕಂಬಳಬೆಟ್ಟು, ಉರಿಮಜಲು, ಅಳಕೆಮಜಲು, ಕಬಕ ವರೆಗೆ ರಸ್ತೆಯುದ್ದಕ್ಕೂ ಹೊಂಡಗಳೇ ಇವೆ. ಕಬಕದ ಇಳಿಜಾರಿನಲ್ಲಿ ಪ್ರತಿವರ್ಷ ಹಾಕಿದ ಡಾಮರು ನಿಲ್ಲುತ್ತಿಲ್ಲ.
ಎಚ್ಚರಿಕೆ ವಹಿಸಬೇಕಾದ ಅಂಶಗಳು
-ಚಂದಳಿಕೆ, ಬದನಾಜೆ ಉರಿಮಜಲುಗಳಲ್ಲಿ ಅಪಾಯಕಾರಿ ತಿರುವುಗಳು
-ಕಂಬಳಬೆಟ್ಟಿನಲ್ಲಿ ಅಸಮರ್ಪಕ ಚರಂಡಿಯಿಂದಾಗಿ ರಸ್ತೆಯ ಅಗಲ ಕಡಿಮೆಯಾಗಿ ಅಪಾಯ
-ಕಬಕದ ಇಳಿಜಾರಿನಲ್ಲಿ ಪ್ರತಿಷರ್ವ ಡಾಮರು ಹಾಸಿದರೂ ನಿಲ್ಲದೆ ಸಮಸ್ಯೆ
-ಸಣ್ಣ ವಾಹನಗಳಿಗೆ ಮಾರಕವಾಗುವ ಮಳೆ ನೀರು ತುಂಬಿರುವ ಹೊಂಡಗಳು
ಮಳೆಹಾನಿಯ ಅನುದಾನ 25 ಲಕ್ಷ ರೂ. ಬಿಡುಗಡೆಯಾಗಿದೆ. ಕಬಕ-ವಿಟ್ಲ ತೇಪೆ ಕಾಮಗಾರಿ ಕೂಡಲೇ ಆರಂಭಿಸುತ್ತೇವೆ. 5.50 ಮೀಟರ್ ರಸ್ತೆಯನ್ನು 7 ಮೀ.ಗೆ ವಿಸ್ತರಿಸುವ ಕಾಮಗಾರಿಯ ಗುತ್ತಿಗೆದಾರ ಕೈಕೊಟ್ಟದ್ದರಿಂದ ತೊಂದರೆಯಾಗಿದೆ. ಆದರೆ ಪ್ರಸ್ತುತ ಬಿಡುಗಡೆಯಾಗಿರುವ ಅನುದಾನದಲ್ಲಿ ಕಾಮಗಾರಿ ನಡೆಸಿ ಸಂಚಾರ ಯೋಗ್ಯ ರಸ್ತೆಯನ್ನಾಗಿಸುತ್ತೇವೆ.
-ಯಶವಂತ ಕುಮಾರ್ ಎಸ್., ಇಇ, ಲೋಕೋಪಯೋಗಿ , ಇಲಾಖೆ, ಮಂಗಳೂರು
ರಸ್ತೆ ವಿಸ್ತರಣೆ ಮತ್ತು ಮರುಡಾಮರು ಕಾಮಗಾರಿ ಗುತ್ತಿಗೆದಾರರ ಸಮಸ್ಯೆಯಿಂದ ಪೂರ್ತಿಯಾಗಲಿಲ್ಲ. ಇನ್ನೊಂದು ವಾರ ಕಾಯುತ್ತೇವೆ. ಆಗಲೂ ಕಾಮಗಾರಿ ಆರಂಭಿಸದಿದ್ದಲ್ಲಿ ಮರು ಟೆಂಡರ್ ಆಹ್ವಾನಿಸಲಾಗುತ್ತದೆ. ರಸ್ತೆಯುದ್ದಕ್ಕೂ ಮರುಡಾಮರು ಹಾಕುವ ಪ್ರಸ್ತಾವನೆಯಿಲ್ಲ. ಶಾಸಕರೂ ಈ ರಸ್ತೆ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ.
-ಸಂಜೀವ ಮರಡ್ಡಿ, ಚೀಫ್ ಎಂಜಿನಿಯರ್, ಎಸ್‌ಎಚ್‌ಡಿಪಿ
ವಯಸ್ಸಾದವರಿಗೆ ಸಂಚಾರವೇ ಕಷ್ಟ
ಕಂಬಳಬೆಟ್ಟು-ಕಬಕ ನಡುವೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಯಸ್ಸಾದವರು ದ್ವಿಚಕ್ರ ವಾಹನಗಳಲ್ಲಿ ಓಡಾಡಲು ಕಷ್ಟ. ಈ ರಸ್ತೆಗೆ ಶಾಶ್ವತ ಪರಿಹಾರ ತಡವಾಗುವುದಾದರೆ ತಾತ್ಕಾಲಿಕ ವ್ಯವಸ್ಥೆಯನ್ನು ತತ್‌ಕ್ಷಣ ಮಾಡಿಕೊಡಬೇಕು.
– ಈಶ್ವರ ಭಟ್, ಪೂರ್ಲುಪ್ಪಾಡಿ
ಸಮರ್ಪಕ ನಿರ್ವಹಣೆ ಇಲ್ಲ
ಕೇರಳ, ವಿಟ್ಲ, ಸಾಲೆತ್ತೂರು, ಕಲ್ಲಡ್ಕ, ಮಂಗಳೂರು ಇತ್ಯಾದಿ ಊರುಗಳನ್ನು ಸಂಪರ್ಕಿಸಲು ಈ ರಸ್ತೆಯೇ ಪ್ರಧಾನವಾಗಿದ್ದರೂ ಸರಿಯಾಗಿ ನಿರ್ವಹಣೆ ಇಲ್ಲ. ಸಂಚಾರಕ್ಕೆ ಅಯೋಗ್ಯವಾಗಿರುವ ರಸ್ತೆಯನ್ನು ತತ್‌ಕ್ಷಣ ದುರಸ್ತಿಗೊಳಿಸಬೇಕು.
– ಶರೀಫ್, ಉರಿಮಜಲು
ಕಾಲಕಾಲಕ್ಕೆ ದುರಸ್ತಿ ಮಾಡಿ
ವಿಸ್ತರಣೆ ಪೂರ್ತಿಯಾಗದೇ, ಅತ್ತ ದುರಸ್ತಿಯನ್ನೂ ಮಾಡದೇ ಈ ಸ್ಥಿತಿ ಬಂದಿದೆ. ಆಗಾಗ ತೇಪೆ ಹಾಕಿ ರಸ್ತೆಯನ್ನು ಉಳಿಸಿಕೊಳ್ಳಬಹುದಿತ್ತು. ಇಲಾಖೆ ಕ್ರಮ ಕೈಗೊಂಡಿಲ್ಲ. ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
– ರಮೇಶ, ಧರ್ಮನಗರ
ಸರ್ವಋತು ರಸ್ತೆಯಾಗಲಿ
ತೇಪೆ ಕಾರ್ಯದ ಬದಲು ಸಂಪೂರ್ಣ ರಸ್ತೆಗೆ ಮರುಡಾಮರು ಹಾಕುವ ಮೂಲಕ ಸರ್ವಋತು ರಸ್ತೆಯನ್ನಾಗಿಸಬೇಕು. ಆಗ ಈ ಪ್ರಮುಖ ರಸ್ತೆಗೆ ಗೌರವ ಹಾಗೂ ರಾಜ್ಯ ಹೆದ್ದಾರಿ ಎಂಬ ಸ್ಥಾನಮಾನವೂ ಅರ್ಥಪೂರ್ಣವಾಗುತ್ತದೆ.
– ಶಿವರಾಮ ಭಟ್, ಉರಿಮಜಲು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾರಣ
ಜನಪ್ರತಿನಿಧಿಗಳ ನಿರ್ಲಕ್ಷéದಿಂದ ಈ ಸ್ಥಿತಿ ಬಂದಿದೆ. ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆ ಸುಸ್ಥಿತಿಯಲ್ಲಿಲ್ಲದಿರುವುದು ದುರಂತ. ತೇಪೆ ತಾತ್ಕಾಲಿಕ ಪರಿಹಾರ ಅಷ್ಟೇ. ಶಾಶ್ವತ ಪರಿಹಾರ ಬೇಕು. ರಸ್ತೆ ಪೂರ್ತಿ ಮರುಡಾಮರಾಗಬೇಕು.
-ಭಾಸ್ಕರ ರೈ
ಉದಯಶಂಕರ್, ನೀರ್ಪಾಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.