ಮಳೆ ನೀರಿಗೆ ಕೊಚ್ಚಿ ಹೋಗುತ್ತಿವೆ ಗಡಿಭಾಗದ ರಸ್ತೆಗಳು
Team Udayavani, Jul 11, 2018, 2:30 AM IST
ಈಶ್ವರಮಂಗಲ: ಕೇರಳ- ಕರ್ನಾಟಕ ಗಡಿಭಾಗದಲ್ಲಿರುವ ಜಿ.ಪಂ. ರಸ್ತೆಗಳಲ್ಲಿ ಮಳೆಯ ನೀರು ಹರಿ ಯುತ್ತಿದ್ದು, ಅಕ್ಷರಶಃ ಹೊಳೆಯಾಗಿ ಹರಿಯುತ್ತಿದೆ. ಜಿ.ಪಂ. ರಸ್ತೆಗಳು ಕೆಲವು ಕಡೆ ಮಳೆ ನೀರಿಗೆ ಕೊಚ್ಚಿ ಹೋಗಿ ಸಂಚಾರಕ್ಕೆ ಅಯೋಗ್ಯವಾಗಿದೆ. ಗ್ರಾಮೀಣ ಪ್ರದೇಶದ ಹೆಚ್ಚಿನ ರಸ್ತೆಗಳು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ, ಜಿಲ್ಲಾ ಮುಖ್ಯ ರಸ್ತೆಯಾಗಿ, ಡಾಮರು ರಸ್ತೆಯಾಗಿ ಪರಿವರ್ತನೆಯಾಗಿವೆ. ಇನ್ನು ಕೆಲವು ಜಿ.ಪಂ. ರಸ್ತೆಗಳಾಗಿವೆ. ಉಳಿದವು ಪಂಚಾಯತ್ ರಸ್ತೆಗಳು. ಗಡಿಭಾಗದಲ್ಲಿ ನೆಟ್ಟಣಿಗೆ ಮುಟ್ನೂರು ಗ್ರಾಮದ ಪಂಚೋಡಿ- ಗಾಳಿಮುಖ, ಪಡುವನ್ನೂರು ಗ್ರಾಮದ ಈಶ್ವರಮಂಗಲ-ಸುಳ್ಯಪದವು- ಪಿಲಿಪ್ಪುಡೆ ಸುಳ್ಯಪದವು- ದೇವಸ್ಯ ರಸ್ತೆಗಳು ಜಿ.ಪಂ. ರಸ್ತೆಗಳಾಗಿವೆ. ಈ ರಸ್ತೆಗಳಲ್ಲಿ ಮಳೆಗಾಲದಲ್ಲಿ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ.
ಪಡುವನ್ನೂರು ಗ್ರಾಮ ಮತ್ತು ನೆಟ್ಟಣಿಗೆಮುಟ್ನೂರು ಗ್ರಾಮದಲ್ಲಿ ಹಾದು ಹೋಗುವ ಈಶ್ವರಮಂಗಲ-ಸುಳ್ಯಪದವು- ಪಿಲಿಪ್ಪುಡೆ ಜಿ.ಪಂ. ರಸ್ತೆಗೆ ಹೆಚ್ಚು ಹಾನಿಯಾಗಿದೆ. ಇದಕ್ಕೆ ಕಾರಣ ರಸ್ತೆ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದು. ಗೋಳಿತ್ತಡಿಯಲ್ಲಿ ಚರಂಡಿ, ಮೋರಿ ಇದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ಮಳೆಯ ನೀರು ರಸ್ತೆಯ ಮೇಲೆ ಹೋಗುತ್ತಿದ್ದು, ಪಾದಚಾರಿಗಳು, ದ್ವಿಚಕ್ರ ಸವಾರರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಮೀನಾವು ಎನ್ನುವಲ್ಲಿ ಖಾಸಗಿ ಸ್ಥಳದಿಂದ ನೇರವಾಗಿ ನೀರು ರಸ್ತೆಗೆ ಬರುತ್ತಿದೆ. ಇಲ್ಲಿಯೇ ಸಮೀಪ ಚರಂಡಿಯಲ್ಲಿಯೇ ವಿದ್ಯುತ್ ಕಂಬ, ಕುಡಿಯುವ ನೀರಿನ ಕೊಳವೆಬಾವಿ, ವಿದ್ಯುತ್ ಶೆಡ್ ಇರುವುದರಿಂದ ಮಳೆಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಹೊಂಡ ಸೃಷ್ಟಿಯಾಗಿ ನೀರು ಸಂಗ್ರಹವಾಗುತ್ತಿದೆ.
ಚರಂಡಿಯಲ್ಲಿದೆ ಜಲ್ಲಿ ರಾಶಿ
ಕನ್ನಡ್ಕ ಶಬರಿನಗರ ಕಾಂಕ್ರಿಟ್ ರಸ್ತೆ ಕಾಮಗಾರಿ ಮೇ ತಿಂಗಳಲ್ಲಿ ಮುಗಿದಿದೆ. ರಸ್ತೆ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿ ಮಾಡದೇ ಇರುವುದರಿಂದ ಮಳೆಯ ನೀರು ರಸ್ತೆಯಲ್ಲಿ ನಿಲ್ಲುವುದರಿಂದ ವಾಹನಗಳಿಗೆ, ಪಾದಚಾರಿಗಳಿಗೆ ಕೆಸರಿನ ಮಜ್ಜನವಾಗುತ್ತಿದೆ. ಜಲ್ಲಿ ಮತ್ತು ಮರಳುಗಳನ್ನು ಚರಂಡಿಗಳಿಗೆ ಸುರಿದಿದ್ದು ಚರಂಡಿಯನ್ನು ಮುಚ್ಚಲಾಗಿದೆ. ಶಬರಿ ನಗರದಿಂದ ಸುಳ್ಯಪದವು-ಪಿಲಿಪ್ಪುಡೆ ಜಿ.ಪಂ. ರಸ್ತೆ ನೀರಿನ ಒರತೆ ಮತ್ತು ಕೆಂಪು ಕಲ್ಲು ಸಾಗಾಟದ ಲಾರಿಗಳು ಮಿತಿಗಿಂತ ಹೆಚ್ಚು ಕಲ್ಲು ಸಾಗಾಟ ಮಾಡುವುದರಿಂದ ರಸ್ತೆಗಳು ಹೊಂಡಗಳಾಗಿ ಪರಿವರ್ತನೆಯಾಗಿದೆ. ಪಾದಚಾರಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ದಿನಾ ಕೆಸರಿನ ಸ್ನಾನ ಆಗುತ್ತಿದೆ. ಕೇರಳವನ್ನು ಸಂಪರ್ಕಿಸುವ ಸುಳ್ಯಪದವು-ದೇವಸ್ಯ ಜಿ.ಪಂ. ರಸ್ತೆ ಇಕ್ಕೆಲಗಳಲ್ಲಿರುವ ಚರಂಡಿ ಮುಚ್ಚಿ ಹೋಗಿ ಮಳೆಯ ನೀರು ನೆರೆಯಾಗಿ ಸಮೀಪದ ಮನೆಗಳಿಗೆ ನುಗ್ಗುತ್ತಿದೆ.
ಪಂಚೋಡಿ-ಕರ್ನೂರು- ಗಾಳಿಮುಖ ಜಿ.ಪಂ. ರಸ್ತೆಯಲ್ಲಿ ಚರಂಡಿಯಲ್ಲಿ ನೀರು ಹರಿಯದೇ ರಸ್ತೆ ಅಂಚಿನಲ್ಲಿ ನೀರು ಹರಿಯುವುದರಿಂದ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ವಾಹನಗಳು ಎದುರು- ಬದುರು ಆದರೆ ಸೈಡ್ ಕೊಡುವ ವಿಚಾರದಲ್ಲಿ ತೊಂದರೆಯಾಗುತ್ತಿದೆ. ಗಾಳಿಮುಖದಲ್ಲಿ ಜಿ.ಪಂ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆಯ ನೀರು ಕೇರಳದ ಲೋಕೋಪಯೋಗಿ ರಸ್ತೆ ಮೇಲೆ ಹಾದು ಹೋಗುತ್ತದೆ. ಈ ಹಿಂದೆ ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ ಗ್ಯಾಂಗ್ ಮನ್ ಇರುತ್ತಿದ್ದರು. ಇವರು ಗ್ರಾಮದಲ್ಲಿರುವ ರಸ್ತೆಗಳ ಚರಂಡಿಯನ್ನು ದುರಸ್ತಿಗೊಳಿಸಿ ಮಳೆಯ ನೀರು ಸಮರ್ಪಕವಾಗಿ ಹೋಗುವಂತೆ ನೋಡಿಕೊಳ್ಳುತ್ತಿದ್ದರು. ಇಂತಹವರು ಇಂದು ಇಲ್ಲದೇ ಇರುವುದರಿಂದ ಚರಂಡಿಯನ್ನು ದುರಸ್ತಿ ಮಾಡುವುದು ಮರೀಚಿಕೆಯಾಗಿದೆ.
ಮುತುವರ್ಜಿ ವಹಿಸಲಿ
ಮೊದಲು ಗ್ರಾಮಮಟ್ಟದಲ್ಲಿ ಚರಂಡಿ ದುರಸ್ತಿಗೆ ಕ್ರಮಕೈಗೊಳ್ಳಲಾಗುತ್ತಿತ್ತು. ಈಗ ಇದು ನಿಂತು ಹೋಗಿದೆ. ರಸ್ತೆ ಡಾಮರು ಮಾಡುವಾಗ ಕಡ್ಡಾಯವಾಗಿ ಚರಂಡಿ ವ್ಯವಸ್ಥೆ ಮಾಡುವಂತೆ ಗುತ್ತಿಗೆದಾರರಿಗೆ ತಿಳಿಸಬೇಕು. ಸಂಘ ಸಂಸ್ಥೆಗಳ ಸಹಕಾರ ಪಡೆದುಕೊಂಡು ಗ್ರಾ.ಪಂ. ಮುತುವರ್ಜಿ ವಹಿಸಿಕೊಂಡು ಚರಂಡಿ ದುರಸ್ತಿ ಕಾರ್ಯಕ್ಕೆ ಇಳಿದರೆ ರಸ್ತೆ ದೀರ್ಘಾವಧಿ ಉಳಿಯಬಹುದು.
– ಮನೋಜ್ ಗಾಳಿಮುಖ, ವಾಹನ ಚಾಲಕ
ಮೋರಿ ನಿರ್ಮಾಣಕ್ಕೆ ಪ್ರಸ್ತಾವನೆ
ಈಶ್ವರಮಂಗಲ ಸಮೀಪದ ಗೋಳಿತ್ತಡಿಯಲ್ಲಿ ಮಣ್ಣು ತುಂಬಿಸಿ ರಸ್ತೆಯನ್ನು ಎತ್ತರ ಮಾಡಲು ಮತ್ತು ನೂತನ ಮೋರಿಯನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರ ಅನುದಾನ ಒದಗಿಸಿಕೊಟ್ಟರೆ ಚರಂಡಿ ದುರಸ್ತಿಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
– ಗೋವರ್ಧನ್, ಜಿ.ಪಂ. ಎಂಜಿನಿಯರ್
— ಮಾಧವ ನಾಯಕ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.