ನಿಯಮ ಉಲ್ಲಂಘನೆಯ ಸಂಚಾರಕ್ಕೆ ಬೇಕು ಕಡಿವಾಣ
Team Udayavani, Apr 5, 2018, 12:36 PM IST
ನಗರ: ಪುತ್ತೂರು ಪೇಟೆಯ ಮುಖ್ಯರಸ್ತೆಯಲ್ಲಿರುವ ಎರಡು ಸೇತುವೆಗಳಲ್ಲಿ ಡಿವೈಡರ್ ನಿಯಮ ಮೀರಿ ವಾಹನಗಳು ಸಂಚರಿಸುತ್ತಿದ್ದು, ಕಡಿವಾಣ ಹಾಕಲು ಪೊಲೀಸರು ಕ್ರಮ ಕೈಗೊಳ್ಳಬೇಕಾದ ಆವಶ್ಯಕತೆ ಇದೆ.
ಪುತ್ತೂರು ಪೇಟೆ ಹಾಗೂ ಮುಖ್ಯರಸ್ತೆ ವಾಹನಗಳ ಸಂಚಾರ ದಟ್ಟಣೆಯಿಂದ ನಲುಗುತ್ತಿದೆ. ಇದರ ಜತೆಗೆ ವಾಹನ ಸವಾರರ ನಿಯಮ ಮೀರಿದ ನಿರ್ಭೀತ ಸಂಚಾರ ಮತ್ತಷ್ಟು ಅಪಾಯಗಳಿಗೆ ಕಾರಣವಾಗುತ್ತಿದೆ. ಬೊಳುವಾರು ಹಾಗೂ ಕಲ್ಲಾರೆಯಲ್ಲಿ ನಿಯಮ ಉಲ್ಲಂಘನೆಯ ಕಾರಣದಿಂದ ಎರಡು ಕಡೆ ಅಪಘಾತದ ಸ್ಥಳಗಳಾಗಿ ಗುರುತಿಸಿಕೊಂಡಿವೆ.
ಸಮಸ್ಯೆ ಏನು?
ಎರಡು ಹಳೆಯ ಸೇತುವೆಗಳ ಮೇಲೆ ಹಾದುಹೋಗುವ ಮುಖ್ಯರಸ್ತೆಯಲ್ಲಿ ಜಾಗವನ್ನು ವಿಸ್ತಾರಗೊಳಿಸಿ ಡಿವೈಡರ್ ಅಳವಡಿಸಲಾಗಿದೆ. ಡಿವೈಡರ್‌ನ ಎಡ ಮತ್ತು ಬಲದಲ್ಲಿ ಏಕಮುಖ ಸಂಚಾರ ನಿಯಮವನ್ನು ಎಲ್ಲ ವಾಹನ ಸವಾರರು ಪಾಲನೆ ಮಾಡುತ್ತಿಲ್ಲ. ಪೇಟೆಯಿಂದ ಹೋಗುವ ಮತ್ತು ಬರುವ ವಾಹನಗಳು ನಿಯಮ ಮೀರಿ ಒಂದೇ ಬದಿಯಲ್ಲಿ ಸಂಚರಿಸುವುದರಿಂದ ಅಪಾಯ ಸಂಭವಿಸುತ್ತಿದೆ.
ರಾತ್ರಿ ಅಪಾಯ
ರಾತ್ರಿ ವೇಳೆಯಂತೂ ಈ ಜಾಗಗಳಲ್ಲಿ ಸಂಚಾರ ಹೆಚ್ಚು ಅಪಾಯಕಾರಿಯಾಗಿದೆ. ಕಡಿಮೆ ಎತ್ತರದ ಡಿವೈಡರ್‌ನ್ನು ಅಳವಡಿಸಲಾಗಿರುವುದರಿಂದ ಮತ್ತು ತತ್‌ಕ್ಷಣಕ್ಕೆ ಈ ಡಿವೈಡರ್ ಕಾಣದಂತಿರುವುದರಿಂದ ಹೊಸದಾಗಿ ಈ ರಸ್ತೆಯಲ್ಲಿ ಸಾಗುವವರಿಗೆ ಅಪಘಾತ ಸಂಭವಿಸುವ ಸಾಧ್ಯತೆಯಿದೆ.
ಕ್ರಮ ಏಕಿಲ್ಲ?
ನಗರದ ಮುಖ್ಯರಸ್ತೆಯಾದರೂ ಇಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿರುವ ಕುರಿತು ಸಂಚಾರ ಪೊಲೀಸರೂ ಗಂಭೀರವಾಗಿ ಪರಿಗಣಿಸಿಲ್ಲ. ಕನಿಷ್ಠ ಕೆಲವು ದಿನಗಳ ಮಟ್ಟಿಗೆ ಈ ಎರಡು ಜಾಗಗಳಲ್ಲಿ ಸಿಬಂದಿಯನ್ನು ನೇಮಿಸಿ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳ ಸವಾರರಲ್ಲಿ ಜಾಗೃತಿ ಮೂಡಿಸುವ ಕ್ರಮವನ್ನಾದರೂ ಕೈಗೊಂಡರೆ ಭವಿಷ್ಯದ ಅಪಾಯಗಳನ್ನು ತಪ್ಪಿಸಬಹುದು. ಜತೆಗೆ ರಸ್ತೆಯ ಡಿವೈಡರ್‌ನ್ನು ಎತ್ತರಕ್ಕೇರಿಸಿ ಬಣ್ಣ ಬಳಿಯುವ ಆವಶ್ಯಕತೆಯೂ ಇದೆ.
ಜಾಗೃತಿ ಮೂಡಿಸಲಿ
ರಸ್ತೆ ವಿಭಾಜಕವನ್ನು ಅಳವಡಿಸಿ ಸಮರ್ಪಕ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರೂ ಶೇ.30 ರಷ್ಟು ವಾಹನಗಳು ನಿಯಮ ಮೀರಿಯೇ ಸಂಚರಿಸುತ್ತಿವೆ. ಈ ಕಾರಣದಿಂದ ಇತರ ವಾಹನ ಸವಾರರಿಗೆ ಗೊಂದಲ ಉಂಟಾಗಿ ಅಪಘಾತಗಳು ನಡೆಯುತ್ತಿವೆ. ಈ ಕುರಿತು ಸಂಬಂಧಪಟ್ಟ ಸಂಚಾರ ಸುವ್ಯವಸ್ಥೆಯ ಪೊಲೀಸರು ಕ್ರಮ ಕೈಗೊಂಡು ಜಾಗೃತಿ ಮೂಡಿಸಬೇಕಾಗಿದೆ.
– ಶಂಕರನಾರಾಯಣ
ಸಾಮಾಜಿಕ ಕಾರ್ಯಕರ್ತರು, ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.