ದೇಶೀಯ ಗ್ರಾಮೀಣ ಕ್ರೀಡೆ ಕಬಡ್ಡಿಗೆ ಸಿಗಬೇಕಿದೆ ಇನ್ನಷ್ಟು ಪ್ರೋತ್ಸಾಹ
Team Udayavani, Apr 21, 2018, 8:45 AM IST
ಕಡಬ: ಭಾರತದ ದೇಶೀಯ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಇಂದಿಗೂ ಹಳ್ಳಿಗಾಡಿನಲ್ಲಿ ಅತ್ಯಂತ ಜನಪ್ರಿಯ. ಕಬಡ್ಡಿ ಆಟಗಾರರನ್ನು ನಿಯಮಬದ್ಧವಾಗಿ ತರಬೇತುಗೊಳಿಸಿ ಉತ್ತಮ ಕಬಡ್ಡಿಪಟುಗಳನ್ನಾಗಿ ರೂಪಿಸಬೇಕೆಂಬ ಉದ್ದೇಶದಿಂದ ಮಂಗಳೂರು ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಬಿಳಿನೆಲೆಯ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಸಹಕಾರದೊಂದಿಗೆ ಹಮ್ಮಿಕೊಂಡಿರುವ ಉಚಿತ ಕಬಡ್ಡಿ ತರಬೇತಿ ಶಿಬಿರವು ಕಳೆದ ಕೆಲವು ದಿನಗಳಿಂದ ಬಿಳಿನೆಲೆಯಲ್ಲಿ ನಡೆಯುತ್ತಿದೆ.
15 ದಿನಗಳ ತರಬೇತಿ ಶಿಬಿರ
ನುರಿತ ಸಂಪನ್ಮೂಲವ್ಯಕ್ತಿಗಳು ತರಬೇತುದಾರರಾಗಿ ನಡೆಸಿಕೊಡುತ್ತಿರುವ ಶಿಬಿರದಲ್ಲಿ 9 ಮಂದಿ ಬಾಲಕಿಯರು ಸಹಿತ ಕಡಬ, ಕೊಂಬಾರು, ಸುಬ್ರಹ್ಮಣ್ಯ, ನೆಟ್ಟಣ, ಬಿಳಿನೆಲೆ ಪರಿಸರದ ಒಟ್ಟು 36 ಮಂದಿ ಶಿಬಿರಾರ್ಥಿಗಳಿದ್ದಾರೆ. 15 ದಿನಗಳ ಈ ಶಿಬಿರದಲ್ಲಿ ಈಗಾಗಲೇ ಕಬಡ್ಡಿ ಪಂದ್ಯಾಟಗಳಲ್ಲಿ ಭಾಗ ವಹಿಸುವುದರೊಂದಿಗೆ ಕಬಡ್ಡಿಯ ಬಗ್ಗೆ ಆಸಕ್ತಿ ಹೊಂದಿರುವ 7ನೇ ತರಗತಿಯಿಂದ ಪಿಯುಸಿವರೆಗಿನ ವಯೋಮಾನದ ವಿದ್ಯಾರ್ಥಿಗಳಿದ್ದಾರೆ.
ಏನೆಲ್ಲಾ ಕಲಿಕೆ
ಕಬಡ್ಡಿ ಆಟದ ನಿಯಮಾವಳಿಗಳು, ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವ ಕುರಿತು ಮಾಹಿತಿ, ವ್ಯಾಯಾಮದ ಕ್ರಮ, ಕಬಡ್ಡಿ ಆಟದಲ್ಲಿ ಬೇಕಾದ ಅಗತ್ಯ ಕೌಶಲಗಳು, ಕಬಡ್ಡಿ ಆಟಗಾರರಿಗೆ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಸಿಗುವ ಅವಕಾಶಗಳು ಇತ್ಯಾದಿ ವಿಚಾರಗಳನ್ನು ಶಿಬಿರದಲ್ಲಿ ಹೇಳಿಕೊಡಲಾಗುತ್ತಿದೆ. ರಾಷ್ಟ್ರಮಟ್ಟದ ಕಬಡ್ಡಿ ತೀರ್ಪುಗಾರ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಮುಂಡಾಜೆ ಪ.ಪೂ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಂದೀಪ್ ಪಂಜ ಹಾಗೂ ರಾಷ್ಟ್ರೀಯ ಕಬಡ್ಡಿ ಆಟಗಾರ ಸುಮಂತ್ ನೆಟ್ಟಣ ಅವರು ತರಬೇತಿ ನೀಡುತ್ತಿದ್ದಾರೆ. ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಿ.ಕೆ. ಮಾಧವ, ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಎನ್.ರಾಮಚಂದ್ರ ಕಡಬ, ಮೇದಪ್ಪ ಗೌಡ ಬಿಳಿನೆಲೆ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಜಿಲ್ಲೆಯಲ್ಲಿ ಅವಕಾಶ ಬೇಕು
ಈಗಾಗಲೇ ಆಯ್ದ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳು ಕಬಡ್ಡಿ ತಂಡವನ್ನು ಹೊಂದುವುದರೊಂದಿಗೆ ಕಬಡ್ಡಿಗೆ ವಿಶೇಷ ಆದ್ಯತೆ ನೀಡುತ್ತಿವೆ. ಕೆಲವು ಇಲಾಖೆಗಳ ಸಿಬಂದಿ ನೇಮಕಾತಿಯ ವೇಳೆ ಕಬಡ್ಡಿ ಆಟಗಾರರಿಗೆ ವಿಶೇಷ ಅವಕಾಶ ನೀಡಲಾಗುತ್ತಿದೆ. ಅದೇ ರೀತಿ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್‌ಗಳು, ಉದ್ಯಮ ಕ್ಷೇತ್ರಗಳು ಸಿಬಂದಿ ನೇಮಕಾತಿಯ ವೇಳೆ ಕಬಡ್ಡಿ ಆಟಗಾರರಿಗೆ ಅವಕಾಶ ನೀಡಿ ಸಂಸ್ಥೆಗಳ ಹೆಸರಿನಲ್ಲಿ ಕಬಡ್ಡಿ ತಂಡಗಳನ್ನು ಕಟ್ಟಿದರೆ ಪ್ರೋತ್ಸಾಹ ನೀಡುವುದರೊಂದಿಗೆ ಸಂಸ್ಥೆ ಗಳಿಗೆ ಹೆಸರೂ ಬರುತ್ತದೆ ಎನ್ನುವುದು ಜಿಲ್ಲೆಯ ಕ್ರೀಡಾಪ್ರೇಮಿಗಳ ಅಭಿಮತ.
ಜಿಲ್ಲೆಯಲ್ಲಿ ಇಂದು ಉತ್ತಮ ಕ್ರೀಡಾಪಟುಗಳಿಗೆ ಬಹುತೇಕ ಎಲ್ಲಾ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ವಸತಿಯುತ ಉಚಿತ ಶಿಕ್ಷಣದ ಕೊಡುಗೆಯನ್ನು ನೀಡುತ್ತಿವೆ. ಜಿಲ್ಲೆಯ ಕೆಲವು ಕಾಲೇಜುಗಳು ಪ್ರತಿ ವರ್ಷ ಕಬಡ್ಡಿ, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪಿಯುಸಿಯಲ್ಲಿ ವಸತಿಯುತ ಉಚಿತ ಶಿಕ್ಷಣದೊಂದಿಗೆ ಕ್ರೀಡಾ ತರಬೇತಿಯನ್ನೂ ನೀಡುತ್ತಿದೆ. ಹಾಗೆಯೇ ಕ್ರೀಡಾ ಸಾಧನೆಯೊಂದಿಗೆ ಶೈಕ್ಷಣಿಕವಾಗಿಯೂ ಉತ್ತಮ ಅಂಕಗಳನ್ನು ಪಡೆದರೆ ಔದ್ಯೋಗಿಕವಾಗಿಯೂ ಉತ್ತಮ ಅವಕಾಶಗಳು ಸಿಗುತ್ತಿವೆ.
ಪ್ರೋತ್ಸಾಹಕ್ಕೆ ಧನ್ಯವಾದಗಳು
ಕ್ರೀಡಾಳುಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಸೂಕ್ತ ತರಬೇತಿ ಸಿಕ್ಕಿದರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎನ್ನುವ ನಿಟ್ಟಿನಲ್ಲಿ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಮಂಗಳೂರು ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಕಿಶೋರ್ ಅವರ ಮುತುವರ್ಜಿಯಿಂದ ನಡೆಯುತ್ತಿರುವ ಈ ಶಿಬಿರಕ್ಕೆ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕವೃಂದದ ಪ್ರೋತ್ಸಾಹ ಅನನ್ಯವಾದುದು.
– ಶಿವರಾಮ ಏನೆಕಲ್, ರಾಷ್ಟ್ರಮಟ್ಟದ ಕಬಡ್ಡಿ ತೀರ್ಪುಗಾರ
ಪರಿಣಾಮಕಾರಿ
ಯಾವುದೇ ಕ್ರೀಡೆಯಲ್ಲಿ ದೈಹಿಕ ಕ್ಷಮತೆ ಮತ್ತು ಆರೋಗ್ಯ ಮುಖ್ಯ. ನಿಯಮಿತವಾದ ವ್ಯಾಯಾಮದ ಮೂಲಕ ದೈಹಿಕ ಕ್ಷಮತೆಯನ್ನು ವೃದ್ಧಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ಕೂಡ ಶಿಬಿರದಲ್ಲಿ ನಮಗೆ ತಿಳಿಸಿಕೊಡುತ್ತಿದ್ದಾರೆ. ಸಮಯಪಾಲನೆ, ಶಿಸ್ತು ಮುಂತಾದ ವಿಚಾರಗಳೊಂದಿಗೆ ಉತ್ತಮ ಕಬಡ್ಡಿಪಟುವಾಗಲು ಪೂರಕವಾದ ತರಬೇತಿ ಸಿಗುತ್ತಿದೆ.
– ಕೌಶಿಕ್ ಬಿಳಿನೆಲೆ, ಶಿಬಿರಾರ್ಥಿ
ಅವಕಾಶಗಳ ಅರಿವಾಗಿದೆ
ಶಿಬಿರದಿಂದಾಗಿ ನಾವು ಸಾಕಷ್ಟು ಕಲಿತುಕೊಂಡಿದ್ದೇವೆ. ಕಬಡ್ಡಿ ಆಟದ ಪ್ರಾಥಮಿಕ ನಿಯಮಾವಳಿಗಳು, ವಿವಿಧ ಹಂತಗಳ ಕೌಶಲಗಳ ಕುರಿತು ಉತ್ತಮ ತರಬೇತಿ ಸಿಗುತ್ತಿದೆ. ಅದರೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಮುಂದೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಿಗಬಹುದಾದ ಅವಕಾಶಗಳ ಕುರಿತು ಕೂಡ ಶಿಬಿರದಲ್ಲಿ ಮಾಹಿತಿ ನೀಡಲಾಗುತ್ತಿದೆ.
– ಶರಣ್ಯಾ ನೆಟ್ಟಣ, ಶಿಬಿರಾರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.