ಶಬರಿಮಲೆ: ಕೋವಿಡ್ ನಿಬಂಧನೆಗಳಲ್ಲಿ ಸಡಿಲಿಕೆ
Team Udayavani, Dec 13, 2021, 6:15 AM IST
ಶಬರಿಮಲೆ/ಕಾಸರಗೋಡು,: ಕೋವಿಡ್ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆಗೆ ವಿಧಿ ಸಲಾಗಿದ್ದ ಕೋವಿಡ್ ನಿಬಂಧನೆಗಳಲ್ಲಿ ಕೆಲವೊಂದು ಸಡಿಲಿಕೆ ಮಾಡಲಾಗಿದೆ.
ಕೇರಳದಲ್ಲಿ ಕೋವಿಡ್ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆಗೆ ಕೆಲವೊಂದು ನಿರ್ಬಂಧಗಳನ್ನು ಸಡಿಲಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಅವರ ನಡುವೆ ನಡೆದ ಚರ್ಚೆಯ ಬಳಿಕ ನಿರ್ಧರಿಸಿದೆ.
ನೀಲಿಮಲೆ ಮತ್ತು ಅಪಾಚೆ ಮೇಡುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪಂಪಾದಿಂದ ನೀಲಿಮಲೆ, ಅಪಾಚೆ ಮೇಡು ಹಾಗು ಮರಕೂಟಂ ಮೂಲಕ ಶಬರಿಮಲೆಗೆ ಸಾಂಪ್ರದಾಯಿಕ ಮಾರ್ಗವನ್ನು ಭಕ್ತರಿಗೆ ತೆರೆಯಲು ನಿರ್ಧರಿಸಲಾಗಿದೆ.
ಪಂಪಾನದಿಯಲ್ಲಿ ಯಾರಿಗೂ ಸ್ನಾನಕ್ಕೆ ಅವಕಾಶವಿಲ್ಲ. ಅಲ್ಲದೆ ಶಬರಿಮಲೆ ಸನ್ನಿಧಾನ, ಪಂಪಾ ಗಣಪತಿ ಸನ್ನಿಧಾನ ಸೇರಿದಂತೆ ಎಲ್ಲಿಯೂ ಭಕ್ತರಿಗೆ ತಂಗಲು ಅವಕಾಶ ನೀಡಲಾಗಿಲ್ಲ. ಸಂಜೆ 7ರಿಂದ ರಾತ್ರಿ 1ರ ತನಕ ನೀಲಕ್ಕಲ್‌ನಿಂದ ಪಂಪಾ ಕಡೆಗೆ ಸಂಚಾರವನ್ನು ನಿಷೇಧಿಸಲಾಗಿದೆ.
ಭಕ್ತರು ಆನ್‌ಲೈನ್ ಟಿಕೆಟ್ , ಕೋವಿಡ್ 2 ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರ ಅಥವಾ RTPCR Negative ರಿಪೋರ್ಟ್ ಕಡ್ಡಾಯವಾಗಿದೆ. ನೀಲಕಲ್ ನಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಭಕ್ತರಿಗೆ ಅನುಮತಿ ನೀಡಲಾಗುತ್ತದೆ. ನೀಲಕಲ್ ಮಹಾದೇವ ದೇವಸ್ಥಾನದ ಆವರಣ ದಲ್ಲಿ ಮಧ್ಯಾಹ್ನ 12.30ಯಿಂದ ಅನ್ನದಾನದ ವ್ಯವಸ್ಥೆಯನ್ನು ದೇವಸ್ಥಾನ ಹಾಗೂ ತಿರುವಾಂಕೂರು ದೇವಸ್ವಂ ಬೋರ್ಡ್ ವತಿಯಿಂದ ಮಾಡಲಾಗಿದೆ.ಸನ್ನಿ ಧಾನದಲ್ಲೂ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ.ಆದರೆ ಭಕ್ತರಿಗೆ ಭಸ್ಮಕೊಳ,ಒರಿಕುಳಿ ತೀರ್ಥದಲ್ಲಿ ಸ್ನಾನ ಮಾಡಲು ನಿರ್ಬಂದ ಹೇರಲಾಗಿದೆ.
ಅಭಿಷೇಕಕ್ಕೆ ಅವಕಾಶ ಇಲ್ಲ
ಸನ್ನಿಧಾನದಲ್ಲಿ ಭಕ್ತರಿಗೆ ನೇರವಾಗಿ ತುಪ್ಪಾಭಿಷೇಕ ಮಾಡಲು ಅವಕಾಶವಿಲ್ಲ. ದೇವಸ್ಥಾನದ ಕೌಂಟರ್‌ನಲ್ಲಿ ತುಪ್ಪ ನೀಡಿ ರಶೀದಿ ಪಡೆದುಕೊಂಡು ಸನ್ನಿಧಾನ ಪೊಲೀಸ್ ಠಾಣೆಯ ಬಳಿಯಿಂದ ರಶೀದಿ ಹಾಗೂ ತುಪ್ಪದ ಪಾತ್ರೆಯ ಗುರುತು ಹೇಳಿ ಅಭಿಷೇಕ ಮಾಡಿದ ತುಪ್ಪ ಪಡೆದುಕೊಳ್ಳಬಹುದಾಗಿದೆ.
ಸನ್ನಿಧಾನದಲ್ಲಿ ಭಕ್ತರಿಗೆ ನೀಡ ಲಾಗುವ ಅಪ್ಪಂ ಪ್ರಸಾದದ ಕೊರತೆ ಇದೆ. ಬೇಡಿಕೆಯಷ್ಟೂ ಅಪ್ಪಂ ಭಕ್ತರಿಗೆ ದೊರಕುತ್ತಿಲ್ಲ.ಅರವಣ ಪ್ರಸಾದ ಬೇಡಿಕೆಯಷ್ಟೂ ಲಭ್ಯವಿದೆ.
ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ
ಪ್ಲಾಸ್ಟಿಕ್ ಸಂಪೂರ್ಣ ನಿಷೇಧ
ಪುಣ್ಯಂ ಪೂಂಗಾವನ ಅಭಿಯಾನದಡಿಯಲ್ಲಿ ಪ್ಲಾಸ್ಟಿಕ್ ಮುಕ್ತ ಶಬರಿಮಲೆ ಯಾತ್ರೆಗೆ ಕೇರಳ ಅರಣ್ಯ ಇಲಾಖೆ ಮತ್ತು ತಿರುವಾಂಕೂರು ದೇವಸ್ವಂ ಬೋರ್ಡ್ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಪಂಪಾದಿಂದ ಸನ್ನಿಧಾನದವರೆಗೂ ಪ್ಲಾಸ್ಟಿಕ್ ಬಾಟಲಿ, ಲಕೋಟೆ ಸಹಿತ ಯಾವುದೇ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಪ್ಲಾಸ್ಟಿಕ್ ಮುಕ್ತ ಶಬರಿಮಲೆಯಾತ್ರೆ ಭಕ್ತರಿಗೂ ಸಂತಸ ತಂದಿದೆ.