ಮೀನುಗಾರಿಕಾ ಬೋಟ್‌ಗಳಲ್ಲೇ ಉಪ್ಪು ನೀರು ಸಂಸ್ಕರಣೆ!
Team Udayavani, Aug 30, 2021, 7:40 AM IST
ಮಂಗಳೂರು: ಕಡಲಿನ ಉಪ್ಪು ನೀರನ್ನು ಸಿಹಿನೀರಾಗಿಸುವ ಪ್ರಯತ್ನ ನಡೆಯುತ್ತಿರುವಾಗಲೇ, ಮೀನುಗಾರಿಕೆಗೆ ತೆರಳುವ ಬೋಟ್‌ಗಳು ಕೂಡ ಕಡಲಿನ ಉಪ್ಪು ನೀರನ್ನೇ ಸಂಸ್ಕರಿಸಿ ಸಿಹಿನೀರಾಗಿ ಪಡೆಯುವ ವಿನೂತನ ಪ್ರಯೋಗ ಸದ್ಯ ಮಂಗಳೂರಿನಲ್ಲಿ ನಡೆಯುತ್ತಿದೆ!
ಒಂದು ವಾರ ಹಾಗೂ ಅದಕ್ಕೂ ಹೆಚ್ಚಿನ ದಿನದ ಮೀನುಗಾರಿಕೆಗೆಂದು ಕಡಲಿಗೆ ತೆರಳುವ ಮೀನುಗಾರರಿಗೆ ಕುಡಿಯಲು ಹಾಗೂ ನಿತ್ಯದ ಬಳಕೆಗೆ ಬೇಕಾಗುವ ನೀರನ್ನು ತೆರಳುವಾಗಲೇ ಬೋಟ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಸುಮಾರು 3 ಸಾವಿರ ಲೀ. ನೀರು ಬೇಕಾಗುತ್ತದೆ. ಆದರೆ, ಇನ್ನು ಮುಂದೆ ನೀರನ್ನು ಕೊಂಡೊಯ್ಯುವ ಬದಲು ಕಡಲಿನಿಂದಲೇ ಪಡೆದು ಅದನ್ನು ಶುದ್ಧಗೊಳಿಸಿ ಬಳಕೆ ಮಾಡುವ ಈ ಪ್ರಯೋಗ ಸದ್ಯ ಮಂಗಳೂರಿ ನಲ್ಲಿ ಪರಿಶೀಲನ ಹಂತದಲ್ಲಿದೆ. ವಿದೇಶದಲ್ಲಿ ಇಂತಹ ಪರಿಕಲ್ಪನೆ ಈಗಾಗಲೇ ಜಾರಿಯಲ್ಲಿದೆ.
ಈ ನಿಟ್ಟಿನಲ್ಲಿ ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಅಳಿವೆ ಬಾಗಿಲಿನಲ್ಲಿ ಪ್ರಾತ್ಯಕ್ಷಿಕೆ ನೀಡಲಾಗಿದ್ದು ಪರಿಶೀಲನೆ ನಡೆಸಲಾಗಿದೆ. ಇದರ ಆಧಾರದಲ್ಲಿ ಮುಂದೆ ಮೀನುಗಾರಿಕಾ ಸಚಿವರು, ಇಲಾಖಾ ಅಧಿಕಾರಿಗಳು ಮತ್ತು ಪ್ರಮುಖರ ಜತೆ ಮತ್ತೆ ಪ್ರಾತ್ಯಕ್ಷಿಕೆ ನೀಡಲು ಉದ್ದೇಶಿಸಲಾಗಿದೆ.
ಬೋಟ್‌ನಲ್ಲಿ ಯಂತ್ರ ಅಳವಡಿಕೆಗೆ ಸುಮಾರು 4.50 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದ್ದು, ಇದು ಮೀನುಗಾರರಿಗೆ ದೊಡ್ಡ ಹೊರೆಯಾಗಲಿದೆ. ಇದಕ್ಕಾಗಿ ಶೇ. 50ರಷ್ಟು ಸಬ್ಸಿಡಿ ನೀಡುವ ಸಂಬಂಧ ಮಾತುಕತೆ ನಡೆಯುತ್ತಿದೆ.
ಕಾರ್ಯನಿರ್ವಹಣೆ ಹೇಗೆ?:
ಬೋಟ್‌ಗಳು ತೆರಳುವಾಗಲೇ ಉಪ್ಪುನೀರನ್ನು ಸಣ್ಣ ಪೈಪ್ ಮೂಲಕ ಸಂಗ್ರಹಿಸಲಾಗುತ್ತದೆ. ಬಳಿಕ ನೀರು ಶುದ್ಧೀಕರಿಸುವ ಯಂತ್ರದ ಮೂಲಕ ಶುದ್ಧ ನೀರನ್ನು ಸಂಗ್ರಹಿಸಲಾಗುತ್ತದೆ. ಈ ರೀತಿ ದಿನಕ್ಕೆ 2 ಸಾವಿರ ಲೀ.ನೀರು ಸಂಗ್ರಹಿಸಬಹುದಾಗಿದೆ. ಸದ್ಯ ನೀರು ಸಂಗ್ರಹಿಸಿಡಲು ಬೋಟ್‌ನಲ್ಲಿ ಸ್ಥಳಾವಕಾಶ ಸಮಸ್ಯೆ ಜತೆ ಅಧಿಕ ಭಾರದ ಹೊರೆ ಇದೆ. ಉಪ್ಪು ನೀರನ್ನು ಶುದ್ಧೀಕರಿಸುವ ಪ್ರಯತ್ನ ಯಶಸ್ವಿಯಾದರೆ ನೀರು ಸಂಗ್ರಹಿಸಡಬೇಕಾದ ಮತ್ತು ಭಾರದ ಸಮಸ್ಯೆ ಇರುವುದಿಲ್ಲ ಎನ್ನುವುದು ಇಲಾಖೆಯ ಪ್ರಮುಖರ ಲೆಕ್ಕಾಚಾರ.
ಮೀನುಗಾರಿಕಾ ಮುಖಂಡರಾದ ರಾಮಚಂದ್ರ ಬೈಕಂಪಾಡಿ ಅವರು “ಉದಯವಾಣಿ’ ಜತೆಗೆ ಮಾತನಾಡಿ, “ಮೀನುಗಾರಿಕೆಗೆ ತೆರಳುವಾಗ ಸುಮಾರು 3 ಸಾವಿರ ರೂ.ಗಳ ನೀರು ಕೊಂಡೊಯ್ಯುತ್ತಾರೆ. ಅಂದರೆ ತಿಂಗಳಿಗೆ 12 ಬಾರಿ ತೆರಳುವುದರೆ 36 ಸಾವಿರ ರೂ. ಬೇಕು. ಹೀಗಾಗಿ ಉಪ್ಪು ನೀರು ಸಂಸ್ಕರಿಸುವ ಯಂತ್ರ ಅಳವಡಿಕೆ ಮಾಡಿದರೆ ಪ್ರತೀವರ್ಷ ಖರ್ಚಾಗುವ ಈ ಮೊತ್ತ ಉಳಿಕೆಯಾಗಲಿದೆ’ ಎನ್ನುತ್ತಾರೆ ಅವರು.
ಸಿಹಿ ನೀರಿನ ಮಿತ ಬಳಕೆ :
ಸದ್ಯ ಮೀನುಗಾರಿಕೆಗೆ ತೆರಳುವಾಗ ಸಿಹಿ ನೀರನ್ನು ಮಿತವಾಗಿ ಬಳಕೆ ಮಾಡಬೇಕಿದೆ. ಯಾಕೆಂದರೆ, ಕೆಲವೊಮ್ಮೆ ಬೋಟ್ ಕಡಲಿನಲ್ಲಿರುವಾಗಲೇ ಸಿಹಿ ನೀರು ಖಾಲಿಯಾದರೆ ಮೀನುಗಾರರಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಬೋಟ್‌ನಲ್ಲಿರುವ ಪ್ರತೀ ಹನಿ ಸಿಹಿ ನೀರನ್ನು ಕೂಡ ಮಿತವಾಗಿ ಬಳಸಲಾಗುತ್ತದೆ. ಹೀಗಾಗಿ ಹೊಸ ಅನ್ವೇಷಣೆ ಜಾರಿಗೊಂಡರೆ ಇಂತಹ ಸಮಸ್ಯೆಗೆ ಮುಕ್ತಿ ಸಿಗಬಹುದು ಎಂದು ನಿರೀಕ್ಷೆ ಇರಿಸಲಾಗಿದೆ.
ತಣ್ಣೀರುಬಾವಿಯಲ್ಲಿ ಘಟಕ :
ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಕೈಗಾರಿಕೆಗಳಿಗೆ ನೀಡುವ “ಉಪ್ಪು ನೀರು ಸಂಸ್ಕರಣ ಘಟಕ’ ಎಂಆರ್‌ಪಿಎಲ್ ವತಿಯಿಂದ ತಣ್ಣೀರುಬಾವಿಯಲ್ಲಿ ಬಹುತೇಕ ಅಂತಿಮವಾಗಿದೆ. ಅಲ್ಲಿ ಸಂಸ್ಕರಣೆ ಮಾಡಿದ ಸಮುದ್ರದ ನೀರನ್ನು ಪೈಪ್‌ಲೈನ್ ಮೂಲಕ ಎಂಆರ್‌ಪಿಎಲ್‌ಗೆ ಸರಬರಾಜು ಮಾಡಲಾಗುತ್ತದೆ.
“ಅಧ್ಯಯನ ನಡೆಯುತ್ತಿದೆ’ :
ಕಡಲಿನ ಉಪ್ಪು ನೀರನ್ನು ಬಳಕೆ ಮಾಡುವ ಸಲುವಾಗಿ ಮೀನುಗಾರಿಕೆಗೆ ತೆರಳುವ ಬೋಟ್‌ಗಳಲ್ಲಿ ಸಂಸ್ಕರಣಾ ಎಂಜಿನ್ ಅಳವಡಿಕೆ ಸಂಬಂಧ ಪ್ರಾತ್ಯಕ್ಷಿಕೆ ನಡೆದಿದೆ. ಇದರ ಸಾಧಕ-ಬಾಧಕದ ಬಗ್ಗೆ ಮೀನುಗಾರರು ಹಾಗೂ ಇಲಾಖೆಯ ವತಿಯಿಂದ ವಿಸ್ತೃತ ಅಧ್ಯಯನ ನಡೆಯುತ್ತಿದೆ. – ಹರೀಶ್ ಕುಮಾರ್, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ-ದ.ಕ.
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.