ಮಾದರಿ ಮದುವೆ: ಆರತಕ್ಷತೆಯಲ್ಲಿ ಅಭಯಾಕ್ಷರ ಅಭಿಯಾನ
Team Udayavani, Nov 15, 2017, 2:29 PM IST
ಮಹಾನಗರ: ಮದುವೆ ಎಂದಾಕ್ಷಣ ಸಂಭ್ರಮವಷ್ಟೇ ಕಾಣುತ್ತದೆ. ನೃತ್ಯ, ಹಾಡು ಹಾಗೂ ಮನೋರಂಜನೆ ಜತೆಗೆ ಹೊಟ್ಟೆ ತುಂಬ ಊಟ. ಆದರೆ ಇಲ್ಲೊಂದು ಜೋಡಿ ಮದುವೆ ಸಂಭ್ರಮದಲ್ಲೂ ರಾಷ್ಟ್ರ ಜಾಗೃತಿ ಮೆರೆದು ಮಾದರಿಯಾಗಿದ್ದಾರೆ. ಗೋಹತ್ಯೆ ನಿಷೇಧಕ್ಕಾಗಿ ತಮ್ಮ ಮದುವೆ ಆರತಕ್ಷತೆಯಲ್ಲಿ ‘ಅಭಯಾಕ್ಷರ’ ಸಹಿ ಸಂಗ್ರಹ ಅಭಿಯಾನದ ಮೂಲಕ ಗೋರಕ್ಷಣೆಯ ಸಂಕಲ್ಪ ತೊಟ್ಟಿದ್ದಾರೆ.
ಶಕ್ತಿನಗರದ ಗೋಪಾಲಕೃಷ್ಣ ನಾಯಕ್- ಗೀತಾ ನಾಯಕ್ ಅವರ ಪುತ್ರ ವಿಕ್ರಮ್ ನಾಯಕ್ ಹಾಗೂ ಕಲ್ಲಡ್ಕ ಅಡ್ಯೆಮನೆ
ಮೋಹನ ಪ್ರಭು-ಮಮತಾ ದಂಪತಿ ಪುತ್ರಿ ಮಧುರಾ ಪ್ರಭು ಅವರ ವಿವಾಹ ಆರತಕ್ಷತೆಯು ಕುಲಶೇಖರದ ವೀರ ನಾರಾಯಣ ಸಭಾಭವನದಲ್ಲಿ ಸೋಮವಾರ ಜರಗಿದ್ದು, ಇದರಲ್ಲಿ ರಾಷ್ಟ್ರಜಾಗೃತಿಯೂ ನಡೆಯಬೇಕೆಂಬ ನಿಟ್ಟಿನಲ್ಲಿ ವಿಕ್ರಮ್ ದಂಪತಿ ಈ ಅಭಯಾಕ್ಷರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮಂಟಪದಲ್ಲಿ ದಂಪತಿ ಅಭಯಾಕ್ಷರ ಅರ್ಜಿಗೆ ಸಹಿ ಹಾಕುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮಠದ ಪ್ರೇರಣೆ
ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಮತ್ತು ಭಾರತೀಯ ಗೋವಂಶ ಉಳಿಸುವುದಕ್ಕಾಗಿ ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಾರಥ್ಯದಲ್ಲಿ ‘ಅಭಯಾಕ್ಷರ’ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಗೋವುಗಳನ್ನು ಉಳಿಸಲು ಇದೊಂದು ಸಾತ್ವಿಕ ಹೋರಾಟವಾಗಿದ್ದು, ಕೋಟಿ ಗೋಪ್ರೇಮಿಗಳ ಧ್ವನಿ ಸರಕಾರವನ್ನು ತಲುಪಬೇಕು ಎಂಬುದು ಮಠದ ಉದ್ದೇಶ. ರಾಮಚಂದ್ರಾಪುರ ಮಠದ ಕಾರ್ಯಕ್ರಮದಿಂದ ಪ್ರೇರಣೆ ಪಡೆದು ಆರತಕ್ಷತೆಯಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗಿದೆ ಎನ್ನುತ್ತಾರೆ ವಿಕ್ರಮ್.
500 ಸಹಿ ಸಂಗ್ರಹ
ಗೋ ಹತ್ಯೆ ನಿಷೇಧ ಮಾಡುವುದರೊಂದಿಗೆ ಗೋವಂಶ ಉಳಿಸಬೇಕು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 500ಕ್ಕೂ ಹೆಚ್ಚು ಮಂದಿ ಅಭಯಾಕ್ಷರ ಅರ್ಜಿಗೆ ಹಸ್ತಾಕ್ಷರ ಹಾಕಿ ಅಭಿಯಾನವನ್ನು ಬೆಂಬಲಿಸಿದರು. ಗೋವಿನ ಮಹತ್ವದ ಬಗ್ಗೆ ಉಪನ್ಯಾಸವನ್ನೂ ಆಯೋಜಿಸಲಾಗಿತ್ತು. ವಿದ್ಯಾಲಕ್ಷ್ಮಿ ಕೈಲಂಕಜೆ ಅವರು ಗೋ ಸಂಜೀವಿನಿ ಮತ್ತು ಶರವು ರಮೇಶ್ ಭಟ್ ಅಭಯಾಕ್ಷರದ ಬಗ್ಗೆ ಉಪನ್ಯಾಸ ನೀಡಿದರು.
ನಿಧಿ ಸಮರ್ಪಣೆ
ಶ್ರೀ ರಾಮಚಂದ್ರಾಪುರ ಮಠದ ಗೋ ಸಂಜೀವಿನಿ ಯೋಜನೆಗೆ ವಿಕ್ರಮ್ ದಂಪತಿ ನಿಧಿ ಸಮರ್ಪಿಸಿದರು. ನೆರೆದ ಅತಿಥಿಗಳು ಸಾಕ್ಷಿಯಾದರು.
ಶುಭಗಳಿಗೆಯಲ್ಲಿ ರಾಷ್ಟ್ರ ಕಾರ್ಯ
ಯಾವುದೇ ಶುಭ ಕಾರ್ಯ ಮಾಡುವಾಗ ಧರ್ಮಜಾಗೃತಿ, ರಾಷ್ಟ್ರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ನಮ್ಮ ಮನೆಯ ಪದ್ಧತಿ. ಈ ಹಿಂದೆ ಗೃಹಪ್ರವೇಶ ಸಂದರ್ಭದಲ್ಲಿ ಗೋಗ್ರಾಸ ಅರ್ಪಣ ಕಾರ್ಯಕ್ರಮ ಮಾಡಿದ್ದೆವು. ಈಗ ಮಗ ತನ್ನ ಮದುವೆಯ ಸಂಭ್ರಮವನ್ನು ರಾಷ್ಟ್ರ ಜಾಗೃತಿ ಕಾರ್ಯದೊಂದಿಗೆ ಸಂಭ್ರಮಿಸಬೇಕೆಂಬ ನಿಟ್ಟಿನಲ್ಲಿ ಆತನೇ ಮುಂಚೂಣಿಯಲ್ಲಿ ನಿಂತು ಅಭಯಾಕ್ಷರ ಕಾರ್ಯಕ್ರಮ ಹಮ್ಮಿಕೊಂಡಿದ್ದಾನೆ.
– ಗೋಪಾಲಕೃಷ್ಣ ನಾಯಕ್, ವಿಕ್ರಮ್ ತಂದೆ
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.