‘ಅವಕಾಶ ದೊರೆತರೆ ಗ್ರಾಮೀಣ ವಿದ್ಯಾರ್ಥಿಗಳಿಂದಲೂ ಸಾಧನೆ’
Team Udayavani, Jul 1, 2017, 3:00 AM IST
ಬಂಟ್ವಾಳ: ಅಮೆರಿಕದ ಶಿಕ್ಷಣ ಪದ್ದತಿಗೂ ಭಾರತೀಯ ಶಿಕ್ಷಣ ಪದ್ದತಿಗೂ ಬಹಳಷ್ಟು ವ್ಯತ್ಯಾಸವೇನಿಲ್ಲ. ಭಾರತೀಯ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಸಾಮರ್ಥ್ಯ ಇದೆ. ಸರಿಯಾದ ಮಾರ್ಗದರ್ಶನ , ಅವಕಾಶ ದೊರೆತರೆ ಅವರು ಕೂಡ ಉತ್ತಮ ಸಾಧನೆ ಮಾಡಬಲ್ಲರು ಎಂದು ಶೈಕ್ಷಣಿಕ ಸಾಧನೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ಒಬಾಮ ಅವರಿಂದ ಅಕಾಡೆಮಿಕ್ ಪ್ರಸಿಡೆನ್ಸಿಯಲ್ ಅವಾರ್ಡ್ ಎಕ್ಸಲೆನ್ಸಿ ಸರ್ಟಿಫಿಕೇಟ್ ಪಡೆದ ಅನಿವಾಸಿ ಭಾರತೀಯ ಯುವತಿ ಸಂಜನಾ ಐತಾಳ ಅಭಿಪ್ರಾಯಪಟ್ಟರು. ತನ್ನ ಹೆತ್ತವರ ಹುಟ್ಟೂರು ಬಂಟ್ವಾಳ ತಾಲೂಕು ಸಜೀಪಮೂಡ ಗ್ರಾಮ ಸುಭಾಶ್‌ನಗರ ಸರಕಾರಿ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳ ಜತೆ ಜೂ. 29ರಂದು ನಡೆಸಿದ ಸಂವಾದದಲ್ಲಿ ಸಂಜನಾ ತನ್ನ ಅನುಭವ ಹಂಚಿಕೊಂಡರು.
ತಾನು ಎಲ್ಲೇ ಹುಟ್ಟಿ ಬೆಳೆದರೂ ಭಾರತೀಯಳು. ತಾಯ್ನಾಡಿನ ಕರುಳ ಕರೆ ನನ್ನನ್ನು ಇಲ್ಲಿಗೆ ಕರೆತಂದಿದೆ ಎಂದರೆ ತಪ್ಪಲ್ಲ. ಸ್ಥಳೀಯ ಮಕ್ಕಳ ಪ್ರತಿಭೆಯನ್ನು ಉದ್ದೀಪಿಸುವುದಕ್ಕೆ, ತಿಳಿವಳಿಕೆ ನೀಡುವುದಕ್ಕೆ ಕಾರ್ಯಕ್ರಮ ಹಾಕಿಕೊಂಡಿದ್ದೇನೆ. ಮುಂದಿನ ಹಂತದಲ್ಲೂ ಪ್ರಯತ್ನ ಮುಂದುವರಿಸಿ ಇಲ್ಲಿನ ವಿದ್ಯಾರ್ಥಿಗಳನ್ನು ಅಮೆರಿಕಕ್ಕೆ ಆಹ್ವಾನಿಸುವ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಪ್ರತೀ ಹಂತದ ಪರೀಕ್ಷೆಗೆ ಆದ್ಯತೆ
ಅಮೆರಿಕದ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಸಂಪೂರ್ಣ ಉಚಿತ. ಖಾಸಗಿ ಶಾಲೆಯಲ್ಲಿ ಮಾತ್ರ ನಿರ್ದಿಷ್ಟ ಮೊತ್ತದ ಹಣಪಾವತಿ ಇರುತ್ತದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳು ಇರುತ್ತವೆ. ಕೇವಲ ಓದು ಮಾತ್ರವಲ್ಲ, ಪಠ್ಯೇತರ ಚಟುವಟಿಕೆಗೂ ಅಷ್ಟೇ ಮಹತ್ವವಿದೆ. ವಾರ್ಷಿಕ ಪರೀಕ್ಷೆ ಪ್ರಾಮುಖ್ಯವಲ್ಲ. ಪ್ರತೀ ಹಂತದ ಪರೀಕ್ಷೆ ಹೆಚ್ಚಿನ ಪ್ರಾಧಾನ್ಯ ಹೊಂದಿದೆ. ಅಲ್ಲಿ ತಂಟೆ ಮಾಡಿದ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆ ಇರುವುದಿಲ್ಲ. ಶಾಲಾ ಸಮಯದ ಬಳಿಕ ಒಂದು ನಿರ್ದಿಷ್ಟ ಸಮಯದಲ್ಲಿ ಅಂತಹ ತಂಟೆಕೋರ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಮೌನ ಆಚರಣೆಯ ಮೂಲಕ ಕುಳ್ಳಿರಿಸುವ ಮೂಲಕ ಅವರ ತಪ್ಪೇನು ಎಂದು ತಿಳಿಸಿಕೊಡುವ ಕ್ರಮವಿದೆ. ಶೈಕ್ಷಣಿಕ ಸಾಧನೆಗಾಗಿ ಪ್ರಸಿಡೆನ್ಸಿಯಲ್ ಅವಾರ್ಡ್ ಪಡೆದಿದ್ದೇನೆ. ಪ್ರತೀ ಶೈಕ್ಷಣಿಕ ಹಂತದಲ್ಲೂ ಶೇ. 98 ಅಂಕಗಳ ಸಾಧನೆ ಅವಾರ್ಡ್‌ಗೆ ಕಾರಣ ಎಂದವರು ಹೇಳಿದರು.
ಭಾರತಕ್ಕೆ ಬರಬೇಕು. ಇಲ್ಲಿನ ಮಕ್ಕಳಲ್ಲಿ ಅಲ್ಲಿನ ವಿಚಾರಗಳ ಬಗ್ಗೆ ಚರ್ಚಿಸಬೇಕು ಎಂಬ ತುಡಿತಕ್ಕೆ ನನ್ನದೇ ಮಾತೃನಾಡಿನಲ್ಲಿ ಅವಕಾಶ ದೊರೆತಿದೆ. ಮುಂದಕ್ಕೆ ಇಲ್ಲಿಗೂ ಅಲ್ಲಿಗೂ ನಾನು ಸಾಂಸ್ಕೃತಿಕ ಸೇತುವಾಗುತ್ತೇನೆ. ಅಮೆರಿಕದ ಫ್ರಿಮೆಂಟ್‌ನಲ್ಲಿರುವ ನಮ್ಮ ಮನೆ ಒಂದು ಮಿನಿ ಭಾರತದಂತೆ. ಭಾರತದಿಂದ ಬರುವ ಬಹುತೇಕ ಮಂದಿಯನ್ನು ಆಹ್ವಾನಿಸುವ ಕ್ರಮವನ್ನು ನಾವು ಮಾಡುತ್ತೇವೆ ಎಂದರು ಸಂಜನಾ. ಸಂವಾದ ಕಾರ್ಯಕ್ರಮಕ್ಕೆ ಹೆತ್ತವರು, ಅಜ್ಜಿ ಕಸ್ತೂರಿ ಐತಾಳ, ಸ್ಥಳೀಯ ಶಾಲಾ ಮುಖ್ಯ ಶಿಕ್ಷಕಿ ವತ್ಸಲಾ, ಸ್ಥಳೀಯ ಪ್ರಮುಖರಾದ ಶೋಭಿತ್ ಪೂಂಜ ಸಹಕರಿಸಿದರು.
ಕಲ್ಲಾಡಿಗೋಳಿಯ ಕುಟುಂಬ
ಆಕೆ ಹುಟ್ಟಿದ್ದು ಅಮೆರಿಕ ದೇಶದ ಫ್ರಿಮೆಂಟ್‌ನಲ್ಲಿ. ಆಕೆಯ ತಂದೆ ರವಿಶಂಕರ ಐತಾಳ ಕಲ್ಲಾಡಿಗೋಳಿ ಕುಟುಂಬವು ಎರಡು ದಶಕಗಳ ಹಿಂದೆ ಬೆಂಗಳೂರಿನ ಸಾಫ್ಟ್ವೇರ್ ಕಂಪೆನಿಯ ಉದ್ಯೋಗಿಗಳಾಗಿ ಅಮೆರಿಕಕ್ಕೆ ತೆರಳಿದ್ದರು. ಅವರ ಇಬ್ಬರು ಪುತ್ರಿಯರಲ್ಲಿ ಸಂಜನಾ ಮೊದಲಿಗರು. ಆಕೆಯ ಕುಟುಂಬದ ಹಿರಿಯರು ಬಂಟ್ವಾಳ ತಾಲೂಕು ಸಜೀಪಮೂಡ ಗ್ರಾಮ ಸುಭಾಶ್‌ನಗರ ಸರಕಾರಿ ಹಿ.ಪ್ರಾ.ಶಾಲೆ, ಪ್ರೌಢಶಾಲೆ, ಅಂಗನವಾಡಿಗೆ ಸುಮಾರು ಐದು ಎಕರೆ ಜಮೀನನ್ನು ಉಚಿತವಾಗಿ ಬಿಟ್ಟುಕೊಟ್ಟ ದಾನಶೀಲರು.
ಅಮೆರಿಕ ಶೈಕ್ಷಣಿಕ ವ್ಯವಸ್ಥೆಯ ವಿಶೇಷ…
ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಐಕ್ಯೂ ವಿದ್ಯಾರ್ಥಿಗಳನ್ನು ಗುರುತಿಸಿಕೊಂಡು, ಸಾಮಾನ್ಯ ಐಕ್ಯೂ ವಿದ್ಯಾರ್ಥಿಗಳನ್ನು ಪ್ರತಿಭಾವಂತರ ಸಾಲಿಗೆ ತರುವ ಪ್ರಯತ್ನ ಅಮೆರಿಕದ ಶೈಕ್ಷಣಿಕ ವ್ಯವಸ್ಥೆಯ ವಿಶೇಷವಾಗಿದೆ. ಯಾವುದೇ ಉದ್ಯೋಗ, ಕೆಲಸ ಮಾಡುವುದಾದರೂ ಅಲ್ಲಿ ಸಾಕಷ್ಟು ಅವಕಾಶವಿದೆ. ಪ್ರಯತ್ನಶೀಲರಿಗೆ ಸೌಕರ್ಯಗಳು ದೊರೆಯುತ್ತವೆ. ಶೈಕ್ಷಣಿಕ ಕಲಿಕೆ ಆಂಗ್ಲ ಭಾಷೆಯಲ್ಲಿದ್ದರೂ, ಯಾವುದೇ ಇತರ ಭಾಷೆ ಕಲಿಯುವ ಅವಕಾಶವಿದೆ. ನಾನು ಸ್ಪಾನಿಷ್ ಭಾಷೆ, ಕನ್ನಡ ಅಭ್ಯಾಸ ಮಾಡುತ್ತಿದ್ದೇನೆ. ನನಗೆ ಭಾರತೀಯ ಸಂಸ್ಕೃತಿಯೇ ಅಚ್ಚುಮೆಚ್ಚು. ಶಾಸ್ತ್ರೀಯ ಸಂಗೀತ, ಭರತನಾಟ್ಯ ಕಲಿಯುತ್ತಿದ್ದೇನೆ. ನಮ್ಮ ಮನೆಯೊಳಗೆ ಕನ್ನಡದಲ್ಲಿ ಮಾತನಾಡುತ್ತೇವೆ.
– ಸಂಜನಾ ಐತಾಳ, ಅಮೆರಿಕಾದ ಪ್ರಸಿಡೆನ್ಶಿಯಲ್ ಸರ್ಟಿಫಿಕೇಟ್ ವಿಜೇತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.