ಶರತ್‌ ಕೊಲೆ ಪ್ರಕರಣ: ಚಾಮರಾಜನಗರ PFI ಅಧ್ಯಕ್ಷ ಸಹಿತ ಇಬ್ಬರ ಬಂಧನ


Team Udayavani, Aug 16, 2017, 7:50 AM IST

16-PTI-3.jpg

ಮಂಗಳೂರು: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ, ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಅವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪಶ್ಚಿಮ ವಲಯ ಐಜಿಪಿ ಪಿ. ಹರಿಶೇಖರನ್‌ ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ಶರತ್‌ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ; ಇನ್ನೂ ಐವರ ಬಗ್ಗೆ ಮಹತ್ವದ ಸುಳಿವು ಲಭಿಸಿದ್ದು, ಅವರೆಲ್ಲರೂ ಶೀಘ್ರದಲ್ಲೇ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ ಎಂದರು.

ಸಜೀಪಮುನ್ನೂರು ಗ್ರಾಮದ ಆಲಾಡಿ ಇಂದಿರಾ ನಗರದ ನಿವಾಸಿ ಅಬ್ದುಲ್‌ ಶಾಫಿ ಅಲಿಯಾಸ್‌ ಶಾಫಿ (36) ಹಾಗೂ ಚಾಮರಾಜನಗರದ ಗಾಳಿಪುರ ಗ್ರಾಮದ ಖಲೀಲ್‌ವುಲ್ಲಾ (30) ಬಂಧಿತರು. ಖಲೀಲ್‌ವುಲ್ಲಾ ಪಿಎಫ್‌ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಸಂಘಟನೆಯ ಚಾಮರಾಜನಗರ ಘಟಕದ ಅಧ್ಯಕ್ಷನಾಗಿದ್ದಾನೆ. ಆದರೆ ಅಬ್ದುಲ್‌ ಶಾಫಿ ಪಿಎಫ್‌ಐ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಶಾಫಿಯನ್ನು ಬಂಟ್ವಾಳದಲ್ಲಿ ಹಾಗೂ ಖಲೀಲ್‌ವುಲ್ಲಾನನ್ನು ಚಾಮರಾಜನಗರದಲ್ಲಿ ಬಂಧಿಸಲಾಯಿತು ಎಂದು ಅವರು ವಿವರಿಸಿದರು.

ಇನ್ನೂ ಐವರ ಬಂಧನಕ್ಕೆ ಕಾರ್ಯಾಚರಣೆ: ಈ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಇಬ್ಬರು ಆರೋಪಿಗಳ ಪೈಕಿ ಅಬ್ದುಲ್‌ ಶಾಫಿ ಮೇಲೆ ಕೊಲೆ ಯತ್ನಕ್ಕೆ ಸಂಬಂಧಪಟ್ಟಂತೆ ಐಪಿಸಿ ಸೆಕ್ಷನ್‌ 307ರಡಿ ಪ್ರಕರಣ ದಾಖಲಿಸಲಾಗಿದೆ. ಖಲೀಲ್‌ವುಲ್ಲಾ  ಮೇಲೆ ಚಾಮರಾಜನಗರ ಅಥವಾ ಇತರ ಕಡೆ ಬೇರೆ ಯಾವುದಾದರೂ ಪ್ರಕರಣ ದಾಖಲಾಗಿದೆಯೇ ಎಂಬ ಬಗ್ಗೆ ಚಾಮರಾಜನಗರದ ಪೊಲೀಸರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಶರತ್‌ ಹತ್ಯೆ ಪ್ರಕರಣದಲ್ಲಿ ಇನ್ನೂ ಐವರು ಭಾಗಿಯಾಗಿರುವುದು ತನಿಖೆಯಿಂದ ಈಗಾಗಲೇ ಖಚಿತಪಟ್ಟಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ. ಶರತ್‌ ಕೊಲೆ ತನಿಖೆಗೆ ರಚಿಸಲಾಗಿರುವ ವಿಶೇಷ ಪೊಲೀಸ್‌ ತಂಡಗಳು ಬಾಕಿ ಉಳಿದಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದು, ಅತೀ ಶೀಘ್ರದಲ್ಲೇ ಎಲ್ಲರನ್ನೂ ಬಂಧಿಸ ಲಾಗುವುದು. ಈ ಪ್ರಕರಣ ಸಂಬಂಧ ಪೊಲೀಸ್‌ ತಂಡಗಳು ಈಗಾಗಲೇ ಅಲ್ಲಲ್ಲಿ ಕಾರ್ಯಾಚರಣೆ ನಿರತವಾಗಿವೆ. 

ಬಂಧಿತರನ್ನು ಮಂಗಳವಾರ ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಅನಂತರ ಹೆಚ್ಚಿನ ವಿಚಾರಣೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಐಜಿಪಿ ತಿಳಿಸಿದರು. ಕೊಲೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದಿಲ್ಲ
ಪ್ರಸ್ತುತ ಬಂಧನವಾಗಿರುವ ಇಬ್ಬರು ಆರೋಪಿಗಳಲ್ಲಿ ಓರ್ವ ಪಿಎಫ್‌ಐ ಸಂಘಟನೆಯ ಚಾಮರಾಜನಗರ ಜಿಲ್ಲಾ ಘಟಕದ ಅಧ್ಯಕ್ಷ. ಇನ್ನುಳಿದ ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಎಲ್ಲ ಆರೋಪಿಗಳ ಬಂಧನವಾದ ಬಳಿಕವಷ್ಟೇ ಶರತ್‌ ಮಡಿವಾಳ ಅವರ ಕೊಲೆಗೆ ಕಾರಣ ಏನೆಂಬುದು ಬಹಿರಂಗಗೊಳ್ಳಲಿದೆ ಎಂದು ಹರಿಶೇಖರನ್‌ ತಿಳಿಸಿದರು.

ಶರತ್‌ ಮಡಿವಾಳ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಕಳೆದ 40 ದಿನಗಳಲ್ಲಿ ಪೊಲೀಸ್‌ ಇಲಾಖೆ ವ್ಯಾಪಕ ಕಾರ್ಯಾಚರಣೆ ನಡೆಸಿದೆ. ಪಶ್ಚಿಮ ವಲಯ ಐಜಿಪಿ ನಿರ್ದೇಶನದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ನೇತೃತ್ವದಲ್ಲಿ ಸಿಸಿಬಿ, ಡಿಸಿಬಿಐ, ಪುತ್ತೂರು ಪೊಲೀಸ್‌ ಇನ್ಸ್‌ಪೆಕ್ಟರ್‌ ಒಳಗೊಂಡಂತೆ ಒಟ್ಟು ಏಳು ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ 30 ಸಿಬಂದಿಯ ವಿಶೇಷ ಪೊಲೀಸ್‌ ತಂಡಗಳನ್ನು ರಚಿಸಲಾಗಿತ್ತು. ಈ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ಕಲೆ ಹಾಕಿತ್ತು. ಈ ತಂಡಗಳು ಕೊಲೆ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲು ಮಂಗಳೂರು, ಬೆಳಗಾವಿ, ಕಾರವಾರ ಹಾಗೂ ಮೈಸೂರು ಕಾರಾಗೃಹಗಳಿಗೂ ಭೇಟಿ ನೀಡಿ ಮಹತ್ವದ ತನಿಖೆ ನಡೆಸಿದೆ. ಆ ಮೂಲಕ ಪೆರೋಲ್‌ ಮೇಲೆ ಹೋಗಿದ್ದ ಕೈದಿಗಳು, ಜೈಲಿನಲ್ಲಿ ರುವ ಕೈದಿಗಳನ್ನು ಭೇಟಿ ಮಾಡಲು ಬಂದಿರುವರ ಬಗ್ಗೆಯೂ ನಿಗಾ ಇಡಲಾಗಿತ್ತು. ಹೊರ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ ಹಾಗೂ ತಮಿಳು ನಾಡು ಹಾಗೂ ಬೆಂಗಳೂರು, ಶಿವಮೊಗ್ಗ, ಕಾರವಾರ ಮುಂತಾದ ಕಡೆಗಳಲ್ಲಿಯೂ ಪ್ರಕರಣದ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿದೆ. ಶರತ್‌ ಕೊಲೆ ಸಂಬಂಧ ಪೊಲೀಸರು ಸುಮಾರು 50 ಮಂದಿಯನ್ನು ವಿಚಾರಣೆ ನಡೆಸಿದ್ದರು ಎಂದವರು ವಿವರಿಸಿದರು.

ಸವಾಲಿನ ಪ್ರಕರಣವಾಗಿತ್ತು
ಶರತ್‌ ಹತ್ಯೆಯನ್ನು ಭೇದಿಸುವುದು ಪೊಲೀಸ್‌ ಇಲಾಖೆಗೆ ಒಂದು ಸವಾಲಾಗಿತ್ತು. “ನಾನು ಸ್ವತಃ ಈ ಪ್ರಕರಣದ ಉಸ್ತುವಾರಿ ವಹಿಸಿಕೊಂಡಿದ್ದೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಒಂದೂವರೆ ತಿಂಗಳು ಮೊಕ್ಕಾಂ ಹೂಡಿ ತನಿಖೆಯ ಪ್ರಗತಿಯನ್ನು ಪರಿಶೀಲಿಸುತ್ತಿದ್ದೆ. ಈ ನಡುವೆ ಜಿಲ್ಲೆಯ ಹಿಂದಿನ ಪೊಲೀಸ್‌ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ, ಉಪ ಪೊಲೀಸ್‌ ವರಿಷ್ಠಾಧಿಕಾರಿ, ಬಂಟ್ವಾಳ ಪೊಲೀಸ್‌ ನಿರೀಕ್ಷಕರು ವರ್ಗಾವಣೆಗೊಂಡರು. ನೂತನವಾಗಿ ಬಂದ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ಸಹಿತ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹರಿಶೇಖರನ್‌ ಮೆಚ್ಚುಗೆ ವ್ಯಕ್ತಪಡಿಸಿದರು. ದುಷ್ಕೃರ್ಮಿಗಳು ಎಲ್ಲೇ ತಲೆಮರೆಸಿಕೊಂಡಿದ್ದರೂ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಈ ಪ್ರಕರಣ ಒಂದು ಉದಾಹರಣೆಯಾಗಿದೆ ಎಂದರು.ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ, ಸಿಸಿಬಿ ಎಸಿಪಿ ವೆಲೆಂಟೈನ್‌ ಡಿ’ಸೋಜಾ ಉಪಸ್ಥಿತರಿದ್ದರು.

ಹೊಸ ಐಜಿಪಿ ಇಂದು ಅಧಿಕಾರ
ಪಶ್ಚಿಮ ವಲಯ ಐಜಿಪಿಯಾಗಿದ್ದ ಹರಿಶೇಖರನ್‌ ಅವರು ಈಗಾಗಲೇ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದು, ಬುಧವಾರ ಅವರು ನೂತನ ಐಜಿಪಿಗೆ ಅಧಿಕಾರ ಹಸ್ತಾಂತರಿಸುವ ಸಾಧ್ಯತೆಯಿದೆ. ಪಶ್ಚಿಮ ವಲಯದ ನೂತನ ಐಜಿಪಿಯಾಗಿ ಹೇಮಂತ್‌ ನಿಂಬಾಳ್ಕರ್‌ ಬುಧವಾರ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ. ಇದೇ ಕಾರಣಕ್ಕೆ ಶರತ್‌ ಕೊಲೆ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದ ಹರಿಶೇಖರನ್‌ ಅವರು ಆರೋಪಿಗಳ ಬಂಧನದ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಪೊಲೀಸ್‌ ತಂಡಕ್ಕೆ ನಗದು ಬಹುಮಾನ
ಶರತ್‌ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ, ಸಿಸಿಬಿ ಎಸಿಪಿ ವೆಲೆಂಟೈನ್‌ ಡಿ’ಸೋಜಾ, ಡಿಸಿಬಿ ಇನ್ಸ್‌ಪೆಕ್ಟರ್‌ ಸುನೀಲ್‌ ನಾಯ್ಕ, ಪಿಎಸ್‌ಐ ಶ್ಯಾಮ್‌ ಸುಂದರ್‌, ಪುತ್ತೂರು ಇನ್ಸ್‌ಪೆಕ್ಟರ್‌ ಮಹೇಶ್‌ ಪ್ರಸಾದ್‌, ಬೆಳ್ತಂಗಡಿಯ ಪಿಎಸ್‌ಐ ರವಿ, ಡಿಸಿಬಿಐ ಇನ್ಸ್‌ಪೆಕ್ಟರ್‌ ಅಮಾನುಲ್ಲಾ ಖಾನ್‌ ಹಾಗೂ ಸಿಬಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಶರತ್‌ ಪ್ರಕರಣದ ತನಿಖಾ ತಂಡಕ್ಕೆ ಪಶ್ಚಿಮ ವಲಯ ಐಜಿಪಿ ನೆಲೆಯಲ್ಲಿ 25,000 ರೂ. ನಗದು ಪುರಸ್ಕಾರ ನೀಡುವುದಾಗಿ ಹರಿಶೇಖರನ್‌ ಘೋಷಿಸಿದರು. ಬಳಿಕ ಈ ಮೊತ್ತವನ್ನು ವೆಲೆಂಟೈನ್‌ ಡಿ’ಸೋಜಾ ಅವರಿಗೆ ಪ್ರದಾನ ಮಾಡಿದರು. ಜತೆಗೆ,ಪೊಲೀಸ್‌ ಇಲಾಖೆ ವತಿಯಿಂದಲೂ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗುವುದು ಹಾಗೂ ಅವರ ಸೇವಾ ದಾಖಲೆಯಲ್ಲಿ ಈ ಸಾಧನೆಯನ್ನು ಸೇರಿಸಲಾಗುವುದು ಎಂದವರು ತಿಳಿಸಿದರು.

ಶರತ್‌ ಹತ್ಯೆ ಪ್ರಕರಣದ ಹಿನ್ನೆಲೆ 
ಆರ್‌ಎಸ್‌ಎಸ್‌ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಶರತ್‌ ಮಡಿವಾಳ ಬಿ.ಸಿ.ರೋಡಿನ ತನ್ನ ಲಾಂಡ್ರಿಯಲ್ಲಿದ್ದಾಗ ಜು. 4ರಂದು ರಾತ್ರಿ ಸುಮಾರು 9.30ಕ್ಕೆ ದುಷ್ಕರ್ಮಿಗಳು ಅಂಗಡಿಯೊಳಗೆ ನುಗ್ಗಿ ಮಾರಕಾಯುಧಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯ
ಗೊಂಡಿದ್ದ ಶರತ್‌ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸುಮಾರು 3 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಜು. 7ರಂದು ರಾತ್ರಿ ಮೃತಪಟ್ಟಿದ್ದರು. ಶರತ್‌ ಕೊಲೆ ಪ್ರಕರಣ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಕೊಲೆಯನ್ನು ಖಂಡಿಸಿ ಹಾಗೂ ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆದಿದ್ದವು. ಸಂಸತ್‌ ಭವನದ ಮುಂಭಾಗದಲ್ಲಿಯೂ ಕರ್ನಾಟಕದ ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದ್ದು ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದರು.

ಓರ್ವ ಆರೋಪಿ ಶರತ್‌ ಗ್ರಾಮದವ
ಅಬ್ದುಲ್‌ ಶಾಫಿ ಸಜೀಪ ಮುನ್ನೂರು ಗ್ರಾಮದ ಆಲಾಡಿ ನಿವಾಸಿ. ಹತ್ಯೆಗೊಳಗಾದ ಶರತ್‌ ಮಡಿವಾಳ ಕೂಡ ಸಜೀಪ ಮುನ್ನೂರು ಗ್ರಾಮದ ಕಂದೂರು ಸಮೀಪದ ಪಾಡಿ ನಿವಾಸಿ. ಆಲಾಡಿ ಕಂದೂರಿಗಿಂತ ಸುಮಾರು 3ರಿಂದ 4 ಕಿ.ಮೀ. ದೂರದಲ್ಲಿದೆ. ಇಬ್ಬರು ಒಂದೇ ಗ್ರಾಮದವರಾಗಿರಬೇಕಾದರೆ ಶರತ್‌ನ ಚಲನ-ವಲನಗಳನ್ನು ಆತ ಗಮನಿಸುತ್ತಿದ್ದನೇ? ಎನ್ನುವ ಪತ್ರಕರ್ತರ ಪ್ರಶ್ನೆಗೆ ಪೂರ್ಣ ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ಐಜಿಪಿ ತಿಳಿಸಿದರು.

ಶರತ್‌ ಕೊಲೆ ಅನಂತರದ ಬೆಳವಣಿಗೆಗಳು

ಜುಲೈ 4: ನಿಷೇಧಾಜ್ಞೆ ಜಾರಿಯಲ್ಲಿರುವಾಗಲೇ, ಬಿ.ಸಿ.ರೋಡ್‌ನ‌ಲ್ಲಿ ಸಜೀಪ ಮುನ್ನೂರು ಗ್ರಾಮದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು.

ಜು. 5: ಶರತ್‌ ಮೇಲಿನ ಹಲ್ಲೆಗೆ ಹಿಂದೂ ಪರ ಸಂಘಟನೆಗಳಿಂದ ತೀವ್ರ ಖಂಡನೆ; ಬಂಟ್ವಾಳದಲ್ಲಿ ಬಿಗು ಬಂದೋಬಸ್ತು, ಹೆಚ್ಚಿನ ಪೊಲೀಸರ ನಿಯೋಜನೆೆ.

ಜು. 6: ಶರತ್‌ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ. ಆಸ್ಪತ್ರೆಗೆ ಸಂಸದ ನಳಿನ್‌ ಕುಮಾರ್‌, ಸಚಿವ ಯು.ಟಿ. ಖಾದರ್‌ ಹಾಗೂ ಬಿಜೆಪಿ ಮುಖಂಡರ ಭೇಟಿ, ಆರೋಗ್ಯ ವಿಚಾರಣೆ. ಆರೋಪಿಗಳ ಪತ್ತೆಗೆ ಪೊಲೀಸರ ಆರು ವಿಶೇಷ ತಂಡ ರಚಿಸುವುದಾಗಿ ಎಸ್‌ಪಿ ಸುಧೀರ್‌ ರೆಡ್ಡಿ ಹೇಳಿಕೆ. ಮಂಗಳೂರಿಗೆ ಹೊರ ವಲಯದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ; ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ.

ಜು. 7: ಶರತ್‌ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ತತ್‌ಕ್ಷಣವೇ ಬಂಧಿಸುವಂತೆ ಆಗ್ರಹಿಸಿ ನಿಷೇಧಾಜ್ಞೆ ನಡುವೆಯೇ ಬಿ.ಸಿ.ರೋಡ್‌ನ‌ಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಬೃಹತ್‌ ಪ್ರತಿಭಟನೆ. ಸಂಸದರಾದ ನಳಿನ್‌ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ಸುನಿಲ್‌ ಕುಮಾರ್‌, ಆರ್‌ಎಸ್‌ಎಸ್‌ ಪ್ರಮುಖ ಪ್ರಭಾಕರ ಭಟ್‌ ಸೇರಿದಂತೆ ನೂರಾರು ಮಂದಿ ಭಾಗಿ.

ಜು. 7: ಹಲ್ಲೆಗೊಳಗಾಗಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಎ.ಜೆ. ಆಸ್ಪತ್ರೆಯಲ್ಲಿ ಸಾವು. ಆಸ್ಪತ್ರೆಗೆ ಮತ್ತೆ ಬಿಜೆಪಿ ಮುಖಂಡರ ಭೇಟಿ, ಕುಟುಂಬದವರಿಗೆ ಸಾಂತ್ವನ.

ಜು. 8: ಆಸ್ಪತ್ರೆಯಿಂದ ಶರತ್‌ ಹುಟ್ಟೂರು ಸಜೀಪ ಮುನ್ನೂರು ಗ್ರಾಮಕ್ಕೆ ಶವಯಾತ್ರೆ. ಮೆರವಣಿಗೆ ಮೂಲಕ ಮೃತದೇಹ ಕೊಂಡೊಯ್ಯಬೇಕಾದರೆ, ಬಿ.ಸಿ. ರೋಡ್‌ನ‌ಲ್ಲಿ ದುಷ್ಕರ್ಮಿಗಳಿಂದ ಕಲ್ಲುತೂರಾಟ; ಹಲವು ವಾಹನಗಳಿಗೆ ಹಾನಿ. ಪೊಲೀಸರಿಂದ ಲಘು ಲಾಠಿಚಾರ್ಜ್‌. ದೊಡ್ಡ ಮಟ್ಟದ ಜನಸ್ತೋಮದ ನಡುವೆ ಶರತ್‌ ಅಂತ್ಯಕ್ರಿಯೆ. ಕೊಲೆ ಪ್ರಕರಣವನ್ನು ಎನ್‌ಐಎಯಿಂದ ತನಿಖೆ ನಡೆಸುವಂತೆ ಕೋರಿ ಸಂಸದೆ ಶೋಭಾ ಕರಂದ್ಲಾಜೆಯಿಂದ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ಗೆ ಪತ್ರ.

ಜು. 10: ಶರತ್‌ ಶವಯಾತ್ರೆ ವೇಳೆ ಕಲ್ಲೆಸೆತ ಪ್ರಕರಣ; 20 ಮಂದಿ ವಿರುದ್ಧ ಪ್ರಕರಣ ದಾಖಲು-13 ಮಂದಿಗೆ ನ್ಯಾಯಾಂಗ ಬಂಧನ. ನಿಷೇಧಾಜ್ಞೆ ಉಲ್ಲಂಘನೆ ಮಾಡಿ ಪ್ರತಿಭಟನೆ ಹಾಗೂ ಶವಯಾತ್ರೆ ನಡೆಸಿದ ಕಾರಣಕ್ಕಾಗಿ ಕೆಲವು ಸಂಘಟನೆ ಕಾರ್ಯಕರ್ತರ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು.

ಜು. 11: ಶರತ್‌ ಮನೆಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭೇಟಿ, ರಾಜ್ಯ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಕಾನೂನು ಹಾಗೂ ಸುವ್ಯವಸ್ಥೆ) ಆಲೋಕ್‌ ಮೋಹನ್‌ ಹಾಗೂ ರಾಜ್ಯ ಗುಪ್ತ ವಾರ್ತೆ ಎಡಿಜಿಪಿ ಅಮೃತ್‌ಪಾಲ್‌ ಜಿಲ್ಲೆಗೆ ಆಗಮನ.

ಜು. 12: ಶರತ್‌ ಸಾವಿನ ಸುದ್ದಿಗೆ ಸಂಬಂಧಿಸಿದಂತೆ ವೈದ್ಯರು ದೃಢೀಕರಿಸಿದ ಮರಣ ವರದಿ ಬಹಿರಂಗ. ಆ ಪ್ರಕಾರ, ಶರತ್‌ ಮೊದಲೇ ಸಾವನ್ನಪ್ಪಿದ್ದರೂ 20 ತಾಸಿನ ಬಳಿಕ ಘೋಷಣೆ ಮಾಡಿದ ವಿಚಾರ ಬೆಳಕಿಗೆ ಬಂದಿದ್ದು, ಮುಖ್ಯಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾವಿನ ಸುದ್ದಿ ಮುಚ್ಚಿಟ್ಟಿರುವುದಾಗಿ ಬಿಜೆಪಿ ಆರೋಪ. ಜು. 6ರಂದು ಮಧ್ಯರಾತ್ರಿ 12.30ಕ್ಕೆ ಶರತ್‌ ಮೃತಪಟ್ಟಿರುವುದಾಗಿ ವರದಿಯಲ್ಲಿ ಉಲ್ಲೇಖ. ಶರತ್‌ ಮನೆಗೆ ಸಚಿವ ರಮಾನಾಥ ರೈ ಭೇಟಿ ನೀಡಿ ಸಾಂತ್ವನ.

ಜು.13: ಶರತ್‌ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭೇಟಿ, ಸಾಂತ್ವಾನ. ಮಂಗಳೂರಿನ ಪುರಭವನದಲ್ಲಿ ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಂತಿ ಸಭೆ.

ಜು.14: ಕಲ್ಲಡ್ಕದಲ್ಲಿ ಮೇ 26ರಂದು ನಡೆದ ಇರಿತ ಪ್ರಕರಣದ ಬಳಿಕ ಉಂಟಾದ ಕೆಲವು ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಮೇ 27ರಿಂದ ನಿಷೇಧಾಜ್ಞೆ ಜಾರಿಯಾಗಿ ಜು. 14ಕ್ಕೆ 50 ದಿನ ಪೂರೈಕೆ. ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಆರ್‌.ಕೆ.ದತ್ತಾ ಅವರು ಬಿ.ಸಿ.ರೋಡ್‌ನ‌ ಘಟನಾ ಸ್ಥಳಕ್ಕೆ ಭೇಟಿ; ಮಂಗಳೂರಿನಲ್ಲಿ ಪೊಲೀಸ್‌ ಅಧಿಕಾರಿಗಳ ಉನ್ನತ ಮಟ್ಟದ ಸಭೆ. ಶರತ್‌ ಹತ್ಯೆ ಕುರಿತಂತೆ ಸ್ಫೋಟಕ ಮಾಹಿತಿ ಇರುವುದಾಗಿ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿಕೆ.

ಜು.15: ಶರತ್‌ ಹತ್ಯೆ ಕುರಿತ ಸ್ಫೋಟಕ ಮಾಹಿತಿ ಇದೆ ಎಂದು ಹೇಳಿದ ವಜ್ರದೇಹಿ ಸ್ವಾಮೀಜಿಗಳಿಗೆ ಬಂಟ್ವಾಳ ಪೊಲೀಸ್‌ ಠಾಣೆಯಿಂದ ನೋಟಿಸ್‌ ಜಾರಿ.

ಜು. 17: ಕಾನೂನು ತಜ್ಞರ ಮೂಲಕ ಪೊಲೀಸ್‌ ಠಾಣೆಗೆ ಮಾಹಿತಿ ರವಾನಿಸಿದ ವಜ್ರದೇಹಿ ಶ್ರೀಗಳು. ಶರತ್‌ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸುವಂತೆ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿ ಮಾಡಿದ ಡಿ.ವಿ. ಸದಾನಂದ ಗೌಡ, ಬಿ.ಎಸ್‌. ಯಡಿಯೂರಪ್ಪ, ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ ಮನವಿ ಸಲ್ಲಿಕೆ.

ಜು.18: ಶರತ್‌ ಹತ್ಯೆ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಲು ಆಗ್ರಹಿಸಿ ಕರ್ನಾಟಕದ ಬಿಜೆಪಿ ಸಂಸದರಿಂದ ಹೊಸದಿಲ್ಲಿಯಲ್ಲಿ ಸಂಸತ್‌ ಭವನದ ಮುಂಭಾಗ ಪ್ರತಿಭಟನೆ.

ಜು. 21: ಕೊಲೆ ಆರೋಪಿಗಳ ಬಂಧನವಾಗಲಿ ಎಂದು ಸಚಿವ ಬಿ. ರಮಾನಾಥ ರೈ ಅವರು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಮಲ್ಲೂರು ಸಯ್ಯದ್‌ ಹೈದ್ರೋಸ್‌ ಜುಮಾ ಮಸೀದಿ ಹಾಗೂ ಮೊಡಂಕಾಪು ಇನ್‌ಫೆಂಟ್‌ ಜೀಸಸ್‌ ಚರ್ಚ್‌ನಲ್ಲಿ ಪ್ರಾರ್ಥನೆ.

ಜು. 23: ಶರತ್‌ ಹತ್ಯೆ ಕುರಿತಂತೆ ಸಿ.ಐ.ಡಿ. ವಿಭಾಗದ ಎಡಿಜಿಪಿ ಪ್ರತಾಪ್‌ ರೆಡ್ಡಿ ಮಂಗಳೂರಿಗೆ ಆಗಮನ; ಪೊಲೀಸ್‌ ಅಧಿಕಾರಿಗಳ ಜತೆಗೆ ಚರ್ಚೆ.

ಜು.25: ಶರತ್‌ ಕೊಲೆ ಪ್ರಕರಣದ ಆರೋಪಿಗಳ ಶೋಧಕ್ಕೆ ಹೊರ ರಾಜ್ಯಕ್ಕೆ ಪೊಲೀಸ್‌ ತಂಡ.

ಆ.1: ಶರತ್‌ ಹತ್ಯೆ ಹಿನ್ನೆಲೆಯಲ್ಲಿ ವಿವಿಧ ಮತೀಯ ಸಂಘಟನೆಗಳನ್ನು ನಿಷೇಧಿಸಬೇಕು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರನ್ನು ಹೊಸದಿಲ್ಲಿಯಲ್ಲಿ ಬಿಜೆಪಿ ಸಂಸದರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಕೆ.

ಆ. 8: ಶರತ್‌ ಹತ್ಯೆಯಾಗಿ ಒಂದು ತಿಂಗಳು ಕಳೆದರೂ ಆರೋಪಿಗಳ ಬಂಧನ ಆಗದಿರುವುದನ್ನು ಪ್ರತಿಭಟಿಸಿ ಮಂಗಳೂರು ಸಹಿತ ಜಿಲ್ಲೆಯ ಒಟ್ಟು ಆರು ಕಡೆ ದ.ಕ. ಜಿಲ್ಲಾ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಉಪವಾಸ ಸತ್ಯಾಗ್ರಹ.

ಆ. 15: ಶರತ್‌ ಹತ್ಯೆ ಪ್ರಕರಣವನ್ನು ಭೇದಿಸಿದ ದಕ್ಷಿಣ ಕನ್ನಡದ ಪೊಲೀಸರು, ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳ ಬಂಧನ.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.