ನೀರಿಲ್ಲದೆ ಅತಂತ್ರರಾಗಿರುವ ಕುಂಪಲ ಜನತೆ
Team Udayavani, Mar 15, 2018, 11:47 AM IST
ಕುಂಪಲ: ಪುರಸಭೆಯಾಗಿ ಮೇಲ್ದರ್ಜೆಗೇರುವ ಕನಸು ಕಾಣುತ್ತಿರುವ ರಾಜ್ಯದ ಅತೀ ದೊಡ್ಡ ಗ್ರಾಮಪಂಚಾಯತ್ ಆಗಿರುವ ಸೋಮೇಶ್ವರದಲ್ಲಿ ನೀರಿನ ಸಮಸ್ಯೆಗೆ ಇನ್ನೂ ಪರಹಾರ ಸಿಕ್ಕಿಲ್ಲ. ಸಮುದ್ರ ತಟದಲ್ಲಿರುವ ಈ ಗ್ರಾಮ ಪಂಚಾಯತ್‌ನ ಅತೀ ಹೆಚ್ಚು ಜನವಸತಿ ಇರುವ ಕುಂಪಲ ಪ್ರದೇಶದಲ್ಲಿ ಕುಡಿಯುವ ನೀರಿಲ್ಲದೆ ಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಮಾರ್ಚ್ ತಿಂಗಳು ಬಂದರೆ ಇಲ್ಲಿನ ಜನರಿಗೆ ನೀರಿನ ಸಮಸ್ಯೆ ಪ್ರಾರಂಭವಾಗುತ್ತದೆ. ಇರುವ ಬಾವಿಗಳು, ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಟ್ಯಾಂಕರ್ ನೀರನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕುಂಪಲ ಕುಜುಮಗದ್ದೆ ಮತ್ತು ಬಾರ್ದೆಯನ್ನು ಹೊರತುಪಡಿಸಿದರೆ, ಉಳಿದ ಕಡೆ ನೀರಿನ ಸಮಸ್ಯೆಯಿದೆ. ಕುಂಪಲ ಆಶ್ರಯ ಕಾಲನಿ, ವಿದ್ಯಾನಗರ, ಸುರಕ್ಷಾನಗರ, ಮೂರುಕಟ್ಟೆ, ಪ್ರಕಾಶ್ ನಗರ, ಚಿತ್ರಾಂಜಲಿ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ.
ಅರ್ಧ ಗಂಟೆ ನೀರಿಗೆ ಮೂರು ದಿನ
ಸುರಕ್ಷಾ ನಗರ, ವಿದ್ಯಾನಗರದಲ್ಲಿ ಅರ್ಧ ಗಂಟೆ ನೀರಿಗಾಗಿ ಮೂರು ದಿನ ಕಾಯುವ ಸ್ಥಿತಿಯಿದೆ. ಸಾಮಾನ್ಯ ದಿನಗಳಲ್ಲಿ ಕೆಲವೆಡೆ ದಿನಾ ನೀರು ಸರಬರಾಜಾದರೆ, ಕೆಲವೆಡೆ ಎರಡು ದಿನಕ್ಕೊಮ್ಮೆ ನೀರು ಸಿಗುತ್ತಿತ್ತು. ಈಗ ಅರ್ಧಗಂಟೆಗೊಮ್ಮೆ ಬರುವ ನೀರಿಗೆ ಮೂರು ದಿನ ಕಾಯುವಂತಾಗಿದೆ. ಬಟ್ಟೆ ತೊಳೆಯುವ ನೀರನ್ನು ಮರು ಬಳಕೆ ಮಾಡಿ ನೀರನ್ನು ಸರಿದೂಗಿಸಿದರೂ ಟ್ಯಾಂಕರ್ ನೀರನ್ನೇ ಆಶ್ರಯಿಸಬೇಕಾಗುತ್ತದೆ ಎನ್ನುತ್ತಾರೆ ಸುರಕ್ಷಾ ನಗರದ ಲೀನಾ ಅವರು.
ಟ್ಯಾಂಕ್ ಕಟ್ಟಿ 20 ವರ್ಷ ತೊಟ್ಟು ನೀರು ಬಿದ್ದಿಲ್ಲ
ಕುಂಪಲ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ವಿದ್ಯಾನಗರದ ಬಳಿ ಓವರ್‌ಹೆಡ್ ಟ್ಯಾಂಕ್ ಕಟ್ಟಿ 20 ವರ್ಷಗಳೇ ಸಂದಿದೆ. ಆದರೆ ಈತನಕ ಒಂದು ಹನಿ ನೀರು ಟ್ಯಾಂಕ್‌ಗೆ ಬಿದ್ದಿಲ್ಲ. ಟ್ಯಾಂಕ್ ಕಟ್ಟಿದ ಸ್ಥಳದಲ್ಲಿ ಸುಮಾರು 5ಕ್ಕೂ ಹೆಚ್ಚು ಬೋರ್‌ವೆಲ್ ತೆಗೆದರೂ ನೀರು ಸಿಕ್ಕಿಲ್ಲ ಎನ್ನುತ್ತಾರೆ ಸ್ಥಳೀಯ ಜನಪ್ರತಿನಿಧಿ.
ಹೆದ್ದಾರಿ ಪಾಲಾದ ನೀರಿನ ಮೂಲ
ಕುಂಪಲ ಬೈಪಾಸ್ ಬಳಿ ಹೆದ್ದಾರಿ ಕಾಮಗಾರಿ ವೇಳೆ ನೀರಿನ ಮೂಲಗಳು ಹೆದ್ದಾರಿ ಪಾಲಾಗಿತ್ತು. ಪರ್ಯಾಯವಾಗಿ ಒಂದು ಬೋರ್‌ವೆಲ್ ಕೊರೆದಿದ್ದು ಇದರ ನೀರು ಕುಂಪಲ ಚೇತನ್‌ನಗರದವರೆಗೆ ವಿತರಿಸಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಉಚ್ಚಿಲ್.
ನೀರಿನ ಮೂಲವೇ ಇಲ್ಲ
ಕುಂಪಲದಲ್ಲಿ ಸುಮಾರು 500ಕ್ಕೂ ಹೆಚ್ಚು ಮನೆಗಳಿಗೆ ನೀರಿನ ತೊಂದರೆ ಇದೆ. ಕಳೆದ ಬಾರಿ 7 ಬೋರ್‌ವೆಲ್ ಕೊರೆದಿದ್ದು ಈಗ ಎರಡು ಬೋರ್ ವೆಲ್‌ನಲ್ಲಿ ನೀರು ಸಿಗುತ್ತಿದೆ. ಈ ಪ್ರದೇಶದಲ್ಲಿ ಹಲವು ವರ್ಷಗಳಿಂದ 25ಕ್ಕೂ ಹೆಚ್ಚು ಬೋರ್‌ವೆಲ್ ಕೊರೆದರೂ ನೀರು ಸಿಕ್ಕಿಲ್ಲ ಎನ್ನುತ್ತಾರೆ. ನೀರಿನ ಸಮಸ್ಯೆಬಗೆಹರಿಯಬೇಕಾದರೆ ನೇತ್ರಾವತಿ ನದಿಗೆ ವೆಂಟೆಡ್ ಡ್ಯಾಂ ನಿರ್ಮಿಸಿ ಸರಬರಾಜು ಮಾಡುವುದೊಂದೇ ದಾರಿ ಎನ್ನುತ್ತಾರೆ ಸ್ಥಳೀಯ ಜನಪ್ರತಿನಿಧಿಯೊಬ್ಬರು.
ನೀರಿಗಾಗಿ ಪರದಾಟ
ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಮ್ಮದು. ಕೆಲವೊಮ್ಮೆ ಸುರಕ್ಷಾನಗರ, ವಿದ್ಯಾನಗರಕ್ಕೆ ಮೂರುಕಟ್ಟದಿಂದ ನೀರು ಸರಬರಾಜು ಆಗುತ್ತಿದ್ದು, ನೀರು ವಾಸನೆ ಬರುತ್ತದೆ. ಅಲ್ಲೇ ಇರುವ ಇನ್ನೊಂದು ಬಾವಿಯಿಂದ ಬರುವ ನೀರು ಮಾತ್ರ ಕುಡಿಯಲು ಯೋಗ್ಯವಾಗಿದೆ. ಹಣ ಇದ್ದವರು ಹಣ ಕೊಟ್ಟು ಟ್ಯಾಂಕರ್ ನೀರು ತರಿಸುತ್ತಾರೆ. ನಮಗೆ ಸಾಧ್ಯವಾಗುತ್ತಿಲ್ಲ.
– ಪುಷ್ಪಲತಾ, ಸ್ಥಳೀಯರು
ಟ್ಯಾಂಕರ್ ನೀರು ಸರಬರಾಜು
ಸೋಮೇಶ್ವರ ಗ್ರಾಮ ಪಂಚಾಯತ್‌ನ ಕುಂಪಲ, ಉಚ್ಚಿಲ ಕಾಟುಂಗರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕುಂಪಲದಲ್ಲಿ ತುರ್ತಾಗಿ ಬೋರ್‌ವೆಲ್ ತೆಗೆಯಲು ಅವಕಾಶವಿದ್ದರೂ, ನೀರಿನ ಮೂಲ ಇಲ್ಲದೆ ಕೈಬಿಡಲಾಗಿದೆ. ಮುಂದಿನ ಎರಡು ತಿಂಗಳು ಟ್ಯಾಂಕರ್‌ನಲ್ಲೇ ನೀರು ಸರಬರಾಜು ಮಾಡಲು ಪಂಚಾಯತ್ ಕ್ರಿಯಾ ಯೋಜನೆ ಮಾಡಿದೆ.
– ರಾಜೇಶ್ ಉಚ್ಚಿಲ್ , ಅಧ್ಯಕ್ಷರು ಸೋಮೇಶ್ವರ ಗ್ರಾ. ಪಂ.
ವಸಂತ್ ಎನ್. ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.