ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳ ಟ್ರಿಪ್ ಕಾನೂನುಬಾಹಿರ
Team Udayavani, Jun 3, 2017, 3:10 PM IST
ಮಂಗಳೂರು: ಖಾಸಗಿ ವಾಹನಗಳಲ್ಲಿ ಬಾಡಿಗೆ ಆಧಾರದ ಮೇಲೆ ಶಾಲಾ ಮಕ್ಕಳನ್ನು ಕೊಂಡೊಯ್ಯುವುದು ಕಾನೂನುಬಾಹಿರ. ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕೊಂಡೊಯ್ಯುವುದು ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ವಾಹನದ ನೋಂದಣಿ ಅಮಾನತುಪಡಿಸಲಾಗುವುದು ಎಂದು ಮಂಗಳೂರು ಉಪಸಾರಿಗೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಶಾಲಾ ವಾಹನಗಳಲ್ಲಿ ವಹಿಸಬೇಕಾದ ಪ್ರಮುಖ ಅಂಶಗಳು
ಮೋಟಾರು ವಾಹನ ಕಾಯ್ದೆ 1988ರ ಕಲಂ 74ರ ಪ್ರಕಾರ ಒಪ್ಪಂದ ವಾಹನ ರಹದಾರಿ ಹೊಂದಿರಬೇಕು. ವಾಹನದ ಆಸನ ಸಾಮರ್ಥ್ಯ (school cab) 12+1ಗೆ ಮೀರದಂತೆ ಇರಬೇಕು. ನಿಗದಿತ ಆಸನ ಸಾಮರ್ಥ್ಯ ಬದಲಾವಣೆ ಮಾಡಿರಬಾರದು. ಅನುಮೋದಿತ ಸ್ಪೀಡ್ ಗೌರ್ನರ್ ಅಳವಡಿಸಿದ್ದು, ವೇಗ ಮಿತಿ 40 ಕಿ.ಮೀ.ಗೆ ನಿಯಂತ್ರಿತವಾಗುವಂತಿರಬೇಕು. ವಾಹನ ನೋಂದಣಿ ದಿನಾಂಕದಿಂದ 15 ವರ್ಷ ಮೀರಿರಬಾರದು. ವಾಹನಕ್ಕೆ ಹೆದ್ದಾರಿ ಹಳದಿ ಬಣ್ಣ ಬಳಿದಿದ್ದು, ವಾಹನದ ಹೊರ ಕವಚದ ಮಧ್ಯದಲ್ಲಿ 150 ಮಿ.ಮೀ. ಅಳತೆಯ ಹಸುರು ಬಣ್ಣದ ಪಟ್ಟಿ ಹಾಕಿ ಅದರಲ್ಲಿ ವಾಹನದ ಹೊರ ಭಾಗದ ನಾಲ್ಕು ಭಾಗಗಳಲ್ಲಿ “ಶಾಲಾ ವಾಹನ’ ಎಂದು ಬರೆಸಿರಬೇಕು. ವಾಹನಕ್ಕೆ ಎಲ್.ಪಿ.ಜಿ. ಇಂಧನ ಕಿಟ್ ಅಳವಡಿಸಿದಲ್ಲಿ, ಅನುಮೋದಿತ ಕಿಟ್ ಸರಬರಾಜುದಾರರಿಂದ ಅಳವಡಿಸಿ, ನೋಂದಣಿ ಪ್ರಾಧಿಕಾರದಿಂದ ಪ್ರಮಾಣೀಕರಿಸಿರಬೇಕು ಮತ್ತು ಎಲ್.ಪಿ.ಜಿ. ಕಿಟ್‌ಗಳ ಮೇಲೆ ಯಾವುದೇ ಆಸನಗಳನ್ನು ಅಳವಡಿಸಬಾರದು. ಟಿಂಟೆಡ್ ಗ್ಲಾಸ್ ಹೊಂದಿರಬಾರದು. ವಾಹನದ ಬಾಗಿಲುಗಳಿಗೆ ಸುರಕ್ಷಿತ ಲಾಕಿಂಗ್ ವ್ಯವಸ್ಥೆ ಹೊಂದಿರಬೇಕು. ಚಾಲಕರು ಎಲ್.ಎಂ.ವಿ. ಸಾರಿಗೆ ವಾಹನ ಚಾಲನೆ ಮಾಡಲು ಲೈಸನ್ಸ್ ಹೊಂದಿದ್ದು, ಕನಿಷ್ಠ ನಾಲ್ಕು ವರ್ಷದ ಅನುಭವ ಹೊಂದಿರಬೇಕು. ವಾಹನದ ಒಳ ಬಾಗಿಲಲ್ಲಿ ಸ್ಕೂಲ್ ಬ್ಯಾಗ್ ಇಡಲು ಸ್ಥಳಾವಕಾಶವಿರಬೇಕು.
ವಾಹನ ಪರ್ಮಿಟ್‌ದಾರರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆ ಇತ್ಯಾದಿ ವಿವರಗಳನ್ನು ವಾಹನದ ಹೊರ ಭಾಗದಲ್ಲಿ ಬರೆಸಿರಬೇಕು ಅಥವಾ ವಿವರಗಳ ಪಟ್ಟಿಯನ್ನು ಅಳವಡಿಸಿರಬೇಕು. ವಾಹನಗಳಲ್ಲಿ ಕರೆದೊಯ್ಯುವ ಮಕ್ಕಳ ಹೆಸರು, ತರಗತಿ ಮತ್ತು ಮನೆಯ ವಿಳಾಸ, ದೂರವಾಣಿ ಸಂಖ್ಯೆ/ಮೊಬೈಲ್ ಸಂಖ್ಯೆ, ರಕ್ತದ ಗುಂಪು, ಮಾರ್ಗದ ವಿವರ ಇತ್ಯಾದಿ ಪಟ್ಟಿಯನ್ನು ವಾಹನದಲ್ಲಿ ಇಟ್ಟಿರಬೇಕು. ಶಾಲಾ ವಾಹನವಾಗಿ ಉಪಯೋಗಿಸುವ ವಾಹನ ಗಟ್ಟಿಮುಟ್ಟಾದ ಮೇಲ್ಛಾವಣಿ ಹೊಂದಿದ್ದು, ಮುಚ್ಚಿದ ಕವಚ ಹೊಂದಿರಬೇಕು. ಪ್ರತಿ ಶಾಲೆಯಲ್ಲಿ ಶಾಲಾ ವಾಹನ ಸುರಕ್ಷಾ ಸಮಿತಿ ರಚಿಸಬೇಕು ಎಂದು ಮಂಗಳೂರು ಉಪಸಾರಿಗೆ ಆಯುಕ್ತ ಜಿ.ಎಸ್. ಹೆಗಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.