ಶಿಲ್ಪಕಲಾ ಸಾಧನೆಗಾಗಿ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
Team Udayavani, Jun 27, 2019, 10:15 AM IST
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಶಿಲ್ಪಕಲಾ ಪ್ರದರ್ಶನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಶಿಲ್ಪಕಲಾಕೃತಿಗಳನ್ನು ಅಕಾಡೆಮಿ ಬಹುಮಾನಕ್ಕೆ ಆಯ್ಕೆ ಮಾಡಿದ್ದು, ಶಿಲ್ಪಿಗಳ ಪರಿಚಯ ಇಲ್ಲಿದೆ.
ಪಾಣಾಜೆಯ ಜಿ.ಎಸ್. ಮೋಹನ್ ಕುಮಾರ್
ಪುತ್ತೂರು: ದ. ಕ. ಜಿಲ್ಲೆಯ ಪುತ್ತೂರು ತಾ|ನ ಪಾಣಾಜೆ ನಿವಾಸಿ ಕಲಾಶಿಲ್ಪಿ ಜಿ.ಎಸ್. ಮೋಹನ್ ಕುಮಾರ್ ಅವರ ಹೊಯ್ಸಳ ಗಣೇಶ ಕಲ್ಲು ಶಿಲ್ಪ ಅಕಾಡೆಮಿ ಬಹುಮಾನಕ್ಕೆ ಆಯ್ಕೆಯಾಗಿದೆ.
ಪಾಣಾಜೆ ಗ್ರಾಮದ ಸುಂದರ ಪೂಜಾರಿ ಹಾಗೂ ಲಕ್ಷ್ಮೀ ಅವರ ಪುತ್ರನಾದ ಮೋಹನ್ ಕುಮಾರ್ ಜಿ.ಎಸ್. ಅವರು ಪ್ರೌಢ ಶಿಕ್ಷಣ ಮುಗಿಸಿದ ಬಳಿಕ ರೇಖಾಚಿತ್ರ ಶಿಕ್ಷಕಿ ಶಾರದಾ ಅವರ ಮಾರ್ಗದರ್ಶನದಂತೆ ಕಾರ್ಕಳ ಸಿ.ಇ. ಕಾಮತ್ ಕಲಾ ಶಾಲೆಯಲ್ಲಿ ರೇಖಾ ಚಿತ್ರ ಮತ್ತು ಕಲ್ಲಿನ ಕೆತ್ತನೆಯನ್ನು ಒಂದೂವರೆ ವರ್ಷ ವ್ಯಾಸಂಗ ಮಾಡಿದ್ದಾರೆ. ಹಲವು ಶಿಲ್ಪಕಲಾ ಶಿಬಿರಗಳಲ್ಲಿ ಭಾಗವಹಿಸಿರುವ ಅವರು ವಿಗ್ರಹಗಳನ್ನು ನಿರ್ಮಿಸಿದ್ದಾರೆ ಪ್ರಸ್ತುತ ಮೋಹನ್ ಕುಮಾರ್ ಬೆಂಗಳೂರಿನಲ್ಲಿ ವರ್ಕ್‌ಶಾಪ್ ನಡೆಸುತ್ತಿದ್ದಾರೆ.
ಹಲವು ಸಮಯದ ಕನಸು ನನಸಾಗಿದೆ. ಅಕಾಡೆಮಿಯ ಗೌರವಕ್ಕೆ ಪಾತ್ರನಾಗಿರುವುದು ಖುಷಿ ನೀಡಿದೆ. ಕಲ್ಲಿನ, ಮರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆಯಿದೆ. ಈ ಗೌರವ ಮುಂದೆ ಹೆಚ್ಚು ಸಾಧನೆ ಮಾಡಲು ಪ್ರೇರಣೆಯಾಗಿದೆ.
– ಮೋಹನ್ ಕುಮಾರ್
ಬೆಳ್ತಂಗಡಿ ನ್ಯಾಯತರ್ಪು ಜಯಚಂದ್ರ
ಬೆಳ್ತಂಗಡಿ: ದ.ಕ.ಜಿಲ್ಲೆಯ ಬೆಳ್ತಂಗಡಿಯ ಎನ್. ಜಯಚಂದ್ರ ಅವರ ಕಲ್ಲಿನ ಗಣೇಶ ಕಲಾಕೃತಿ ಸಹಿತ ಸಾಂಪ್ರದಾಯಿಕ, ಸಮಕಾಲೀನ, ಜಾನಪದ ಶೈಲಿಯ ಕಲಾಕೃತಿಗಳಲ್ಲಿ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನಕ್ಕೆ ಆಯ್ಕೆಯಾಗಿದೆ.
ಮೂಲತಃ ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ, ನಾಳ ಶ್ಯಾಮರಾಯ ಆಚಾರ್ಯ ಹಾಗೂ ಲಲಿತಾ ಅವರ ಪುತ್ರ. ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಾಗರದ ಶಿಲ್ಪಾ ಗುರುಕುಲದಲ್ಲಿ 2 ವರ್ಷ ಗುರುಗಳಾದ ವಿಪಿನ್ ಬದೌರಿಯ ಮಾರ್ಗದರ್ಶನದಲ್ಲಿ ಹೊಯ್ಸಳ ಶೈಲಿಯ ಕೆತ್ತನೆ ತರಬೇತಿ ಪಡೆದು ಶಿಲ್ಪ ಕಲಾಕೃತಿ ಕೆತ್ತನೆಯಲ್ಲಿ ಪರಿಣತಿ ಪಡೆದಿದ್ದಾರೆ. ಸಂಘ ಸಂಸ್ಥೆಗಳು ಅವರನ್ನು ಗುರುತಿಸಿ ವಿಶ್ವಕರ್ಮ ಅನಘì ರತ್ನ, ವಿಶ್ವ ಕರ್ಮ ಶಿಲ್ಪ ರತ್ನ ಸೇರಿದಂತೆ ಹತ್ತಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಷ್ಟ ಪಟ್ಟು ಕಲಿತ ವಿದ್ಯೆಯಿಂದಾಗಿ ಸಮಾಜ ಕಲಾವಿದ ಎಂದು ಗುರುತಿಸಿಕೊಳ್ಳುವಲ್ಲಿ ನೆರವಾಗಿದೆ. ಶಿಲ್ಪ ಕಲಾ ಪ್ರಶಸ್ತಿ ನನಗೆ ತುಂಬಾ ಖುಷಿ ನೀಡಿದೆ. ಉಚಿತವಾಗಿ ವಿದ್ಯೆ ನೀಡಿದ ಸಂಸ್ಥೆ ಹಾಗೂ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನ.
– ಜಯಚಂದ್ರ ಎನ್.
ಉಡುಪಿ ಸೂರಾಲಿನ ರತ್ನಾ ಟಿ.ಎನ್
ಉಡುಪಿ: ಮೂಲತಃ ತುಮಕೂರು ಜಿಲ್ಲೆ ತಿಪಟೂರು ತಾಲೂಕು ಆಲ್ಬೂರಿನವರಾದ ರತ್ನಾ ಟಿ.ಎನ್ ಅವರು ನಾಗರಾಜು ಟಿ.ಎನ್. ಮತ್ತು ಪದ್ಮಾ ದಂಪತಿಯ ಪುತ್ರಿ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಬಿಎ ಪದವಿ ಪಡೆದು 1983ರಲ್ಲಿ ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳಿದರು. ಗುರುಗಳಾದ ಬಿ. ಶ್ಯಾಮಾಚಾರ್ಯ ಅವರ ಮಾರ್ಗದರ್ಶನದಲ್ಲಿ ಮರದ ಕೆತ್ತನೆಯಲ್ಲಿ ಎರಡು ವರ್ಷ ಹಾಗೂ ಮತ್ತೂಂದು ವರ್ಷದ ಉನ್ನತ ತರಬೇತಿ ಪಡೆದರು. “ಕದಂಬ’ ಎಂಬ ಶಿಲ್ಪ ಸಂಸ್ಥೆಯ ಮೂಲಕ ಯುವಶಿಲ್ಪಿಗಳಿಗೆ ತರಬೇತಿ ನೀಡಿದ್ದಾರೆ. 2007ರಲ್ಲಿ ಕದಂಬ ಸಂಸ್ಥೆಯಿಂದ ಹೊಯ್ಸಳ ಶೈಲಿಯ ಎಲ್ಲ ವಿನ್ಯಾಸಗಳನ್ನು ಅಳವಡಿಸಿಕೊಂಡು ಸುಮಾರು 750 ವರುಷಗಳ ಹಿಂದಿನ ಈ ಶೈಲಿಯನ್ನು ಮರುಸೃಷ್ಟಿಸಿದ್ದಾರೆ. ಕಲಾಸಕ್ತರ ಮನೆಗಳಲ್ಲಿ ಇವರ ಕೈಚಳಕದ ಸುಂದರ ಶಿಲ್ಪಗಳು ನೆಲೆಗೊಂಡಿವೆ.
ಪ್ರಶಸ್ತಿ ಬಂದಿರುವುದು ತುಂಬಾ ಖುಷಿಯಾಗಿದೆ. ಕಲೆಯನ್ನು ಜನರ ಹತ್ತಿರ ಕೊಂಡೊಯ್ಯುವ ಪ್ರಯತ್ನ ನಡೆಸುತ್ತಿದ್ದೇವೆ. ಕೇವಲ ವಿಗ್ರಹಗಳಿಗೆ ಮಾತ್ರ ಶಿಲ್ಪಕಲೆ ಸೀಮಿತವಾಗಿಲ್ಲ. ವಿವಿಧೆಡೆ ಅಲಂಕಾರಕ್ಕೆ ಉಪಯೋಗಿಸಬಹುದು.
– ರತ್ನಾ ಟಿ.ಎನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.