ಕಡಲ ತೀರದ ಮನೆಗಳ ಸ್ಥಳಾಂತರಕ್ಕೆ ಸರ್ವೆ: ಯು.ಟಿ. ಖಾದರ್ ಸೂಚನೆ
Team Udayavani, Jul 7, 2017, 3:00 AM IST
ಮಂಗಳೂರು: ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ಕಡಲ್ಕೊರೆತ ಸಮಸ್ಯೆಯಿಂದಾಗಿ ಜೀವ ಹಾನಿ ಹಾಗೂ ಮನೆ ಹಾನಿ ನಿರಂತರವಾಗಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಎಲ್ಲ ಅಪಾಯಕಾರಿ ಮನೆಗಳ ತೆರವು ಅನಿವಾರ್ಯ. ನಿರಾಶ್ರಿತರಿಗಾಗಿ ಪ್ರತ್ಯೇಕ ಜಾಗ ನಿಗದಿ ಮಾಡಿ ಮನೆ ಕಟ್ಟಿಕೊಡಲು ವ್ಯವಸ್ಥೆ ಮಾಡಬೇಕು. ಈ ಕುರಿತು ಸಮಗ್ರ ಸರ್ವೆ ನಡೆಸಬೇಕು ಎಂದು ಆಹಾರ ಖಾತೆ ಸಚಿವ ಯು.ಟಿ. ಖಾದರ್ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಕಡಲ್ಕೊರೆತ ಸಮಸ್ಯೆ ಕುರಿತಂತೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಡಲ್ಕೊರೆತ ಸಂಭವಿಸುವ ಪ್ರದೇಶಗಳಲ್ಲಿ ಕಡಲ ಬದಿಗೆ ಕಲ್ಲು ಹಾಕುವ ಪ್ರಕ್ರಿಯೆ ಪ್ರತೀವರ್ಷ ನಡೆಯುತ್ತಲೇ ಇದೆ. ಮನೆಗಳಿಗೆ ಮತ್ತೆ ಮತ್ತೆ ಹಾನಿಯೂ ಮುಂದುವರಿದಿದೆ. ಇದೇ ಸಮಸ್ಯೆ ಮುಂದುವರಿದರೆ ಅಲ್ಲಿನ ಮಕ್ಕಳ, ಯುವಕರ ಭವಿಷ್ಯ ನಲುಗಿ ಹೋಗಲಿದೆ. ಇದಕ್ಕಾಗಿ ಈ ಭಾಗದಲ್ಲಿರುವ ಮನೆಗಳನ್ನು ಸ್ಥಳಾಂತರ ಮಾಡುವುದೇ ಉತ್ತಮ. ಕೊಣಾಜೆ, ಪೆರ್ಮನ್ನೂರು ಹಾಗೂ ಮುನ್ನೂರು ವ್ಯಾಪ್ತಿಯಲ್ಲಿರುವ ಸ್ಥಳವನ್ನು ಲೇಔಟ್ ಮಾದರಿಯಲ್ಲಿ ಸಿದ್ಧಗೊಳಿಸಿ ನಿರಾಶ್ರಿತರಿಗೆ ಮನೆ ಕಟ್ಟಿಕೊಡುವ ವ್ಯವಸ್ಥೆ ಅನಿವಾರ್ಯ ಎಂದರು.
ಕಡಲಿನಿಂದಾಗಿ ಸಮಸ್ಯೆ ಎದುರಾದ ಹಿನ್ನೆಲೆ ಯಲ್ಲಿ ಯು.ಟಿ. ಫರೀದ್ ಅವರು ಶಾಸಕರಾಗಿದ್ದ ಸಮಯದಲ್ಲಿ ನಿರಾಶ್ರಿತರಿಗೆ ಹಲವು ಭಾಗದಲ್ಲಿ ಮನೆ ಕಟ್ಟಿ ಕೊಡಲಾಗಿತ್ತು. ಈಗಲೂ ಆ ಮನೆ ಮಂದಿ ಅತ್ಯಂತ ಸಂತೋಷದಲ್ಲಿದ್ದಾರೆ. ಹೀಗಾಗಿ ಈಗ ಕಡಲ್ಕೊರೆತ ಸಮಸ್ಯೆ ಎದುರಿಸುವವರಿಗೆ ಸೂಕ್ತ ಮನೆ ಕಟ್ಟಿಕೊಟ್ಟರೆ ಅವರ ಭವಿಷ್ಯವೂ ಸುಂದರವಾಗಿರುತ್ತದೆ ಎಂದರು. ಉಳ್ಳಾಲದಿಂದ ಸೋಮೇಶ್ವರ ತನಕ ಕಡಲ ತೀರದಲ್ಲಿರುವ ಒಟ್ಟು ಮನೆಗಳ ಬಗ್ಗೆ ಸರ್ವೇ ನಡೆಸಬೇಕು. ಬಳಿಕ ಅದರಲ್ಲಿ ಅತ್ಯಂತ ಅಪಾಯಕಾರಿ ಹಾಗೂ ಅಪಾಯಕಾರಿ ಎಂಬ ವಿಂಗಡನೆ ಮಾಡಿ ಮನೆಗಳ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬೇಕು ಎಂದರು. ಕಡಲ್ಕೊರೆತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆ ಸೃಷ್ಟಿಸಿದೆ. ಕಡಲ ತೀರದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಧರ್ಮನಗರ, ಮೊಗವೀರ ಶಾಲೆ ಹಾಗೂ ಒಂಬತ್ತುಕೆರೆಯಲ್ಲಿ ಆರಂಭಿಸಿದ ಗಂಜಿ ಕೇಂದ್ರವನ್ನು ಸುಸಜ್ಜಿತವಾಗಿಡಬೇಕು ಎಂದರು.
ಉಚಿತ ಗ್ಯಾಸ್ ಸಂಪರ್ಕ
ಉಜ್ವಲ ಯೋಜನೆಯಲ್ಲಿ ಬಿಟ್ಟು ಹೋದ ಎಲ್ಲ ಗ್ಯಾಸ್ ರಹಿತರಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಲ್ಲಿ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡುವ ಯೋಜನೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಪಂಚಾಯತ್ ಮಟ್ಟದಲ್ಲಿಯೇ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಇದಕ್ಕಾಗಿ ನಡೆಯಲಿದೆ. ಆಯಾ ವಿಧಾನಸಭಾ ವ್ಯಾಪ್ತಿಯಲ್ಲಿ ಗ್ಯಾಸ್ ಫಲಾನುಭವಿಗಳ ಆಯ್ಕೆ ಹಾಗೂ ಪ್ರಕ್ರಿಯೆ ನಡೆಸುವಾಗ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ತರದಿದ್ದರೆ ಸಂಬಂಧಪಟ್ಟ ಗ್ಯಾಸ್ ಏಜೆನ್ಸಿಯವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಎಡಿಸಿ ಕುಮಾರ್ ಉಪಸ್ಥಿತರಿದ್ದರು.
94ಸಿಸಿ; ಹಕ್ಕುಪತ್ರ ಪಡೆಯುವಾಗ ಮಾತ್ರ ಹಣ ಪಾವತಿ
94 ಸಿಸಿ ಅಡಿಯಲ್ಲಿ ಸ್ವೀಕರಿಸಲಾದ ಎಲ್ಲ ಅರ್ಜಿಗಳನ್ನು ನಿಯಮದ ಪ್ರಕಾರ ತುರ್ತಾಗಿ ವಿಲೇವಾರಿ ಮಾಡಲು ಎಲ್ಲ ತಹಶೀಲ್ದಾರರಿಗೆ ಸೂಚಿಸಲಾಗಿದೆ. 94ಸಿಸಿ ಅರ್ಜಿ ಹಾಕುವ ಸಂದರ್ಭ ಕೇವಲ 65 ರೂ.ಗಳ ಅರ್ಜಿ ಪಡೆದು, ಬಳಿಕ ಸರಕಾರಿ ಅನುಮತಿ ದೊರೆತು ಹಕ್ಕುಪತ್ರ ಪಡೆಯುವಾಗ ಮಾತ್ರ ಸರಕಾರಕ್ಕೆ ಹಣ ಪಾವತಿಸಬೇಕಾಗುತ್ತದೆ. ಅದರಲ್ಲೂ ಎಸ್‌ಸಿ/ಎಸ್‌ಟಿಯವರು 5,000 ರೂ. ಹಾಗೂ ಉಳಿದವರು 10,000 ರೂ. ಪಾವತಿ ಮಾಡಬೇಕು. ಹಣವನ್ನು ಡಿಡಿ ರೂಪದಲ್ಲಿಯೇ ಪಾವತಿಸಬೇಕು. ಉಳಿದಂತೆ ಯಾವುದೇ ಹಣ ಕೊಡಲು ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಬರಲೊಪ್ಪದವರು ಬರೆದು ಕೊಡಿ
ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಮಾತನಾಡಿ, ಕಡಲ್ಕೊರೆತ ಬಾಧಿತ ಮನೆಗಳ ತೆರವು ಅತ್ಯಗತ್ಯ. ಮನೆ ಕಳೆದುಕೊಳ್ಳುವವರಿಗೆ ಲೇಔಟ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಬಳಿಕ ಮನೆ ಕಟ್ಟುವುದಕ್ಕೆ 3.30 ಲಕ್ಷ ರೂ. ಸರಕಾರದಿಂದ ಹಣ ನೀಡಲಾಗುವುದು. ಲೇಔಟ್ ಮಾಡಿದ ಅನಂತರ ಮನೆ ಕಳೆದುಕೊಂಡವರು ಈ ಸ್ಥಳಕ್ಕೆ ಬರಲು ಅವಕಾಶ ನೀಡಲಾಗುವುದು. ಒಂದು ವೇಳೆ ಕಡಲ್ಕೊರೆತ ಪ್ರದೇಶದಲ್ಲಿಯೇ ಇರಲು ಬಯಸುವುದಿದ್ದರೆ ಅಂತವರು ‘ಕಡಲ್ಕೊರೆತದಿಂದ ನಮ್ಮ ಮನೆಗೆ ಹಾನಿಯಾದರೆ ಸರಕಾರ ಅಥವಾ ಜಿಲ್ಲಾಡಳಿತ ಜವಾಬ್ದಾರರಲ್ಲ ಹಾಗೂ ನಾವೇ ಹೊಣೆಗಾರರು’ ಎಂದು ಅಫಿದವಿತ್ ಬರೆದುಕೊಡಬೇಕು ಎಂದು ಸೂಚಿಸಿದರು. ಒಮ್ಮೆ ಪರ್ಯಾಯವಾಗಿ ಮನೆ ಕಟ್ಟಲು ವ್ಯವಸ್ಥೆ ಮಾಡಿದ ಬಳಿಕ, ಕಡಲ ಬದಿಯ ಮನೆಯನ್ನು ಬುಲ್ಡೋಜರ್ ಮೂಲಕ ತೆರವು ಮಾಡಲಾಗುತ್ತದೆ ಎಂದರು.
ಮರಳಿಗಾಗಿ ಪಿಡಬ್ಲ್ಯೂಡಿ ಸಂಪರ್ಕಿಸಿ
ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಮರಳು ಲಭ್ಯತೆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವ ಕುರಿತಂತೆ ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರದಲ್ಲಿ ಅಂತಿಮ ನಿರ್ಧಾರ ಪ್ರಕಟವಾಗುವ ನಿರೀಕ್ಷೆ ಇದೆ. ಉಳಿದಂತೆ ಜಿಲ್ಲೆಯಲ್ಲಿ ಮರಳಿನ ಆವಶ್ಯಕತೆ ಇರುವವರು ಪಿಡಬ್ಲ್ಯೂಡಿ (ಲೋಕೋಪಯೋಗಿ) ಇಲಾಖೆಯನ್ನು ಸಂಪರ್ಕಿಸಬಹುದು. 1 ಲೋಡ್‌ನಿಂದ ಆರಂಭವಾಗಿ ಅಗತ್ಯ ಇರುವಷ್ಟು ಲೋಡ್ ಮರಳು ಈ ಇಲಾಖೆಯ ಮೂಲಕ ದೊರೆಯಲಿದೆ. ಮರಳಿಗೆ ಸರಕಾರಿ ದರದ ಪ್ರಕಾರ 1 ಲೋಡ್‌ಗೆ 3,600 ರೂ. ಇಲಾಖೆಗೆ ಪಾವತಿಸಿ, ತಾವೇ ತರಿಸುವ ಲಾರಿಯಲ್ಲಿ ಮರಳು ಕೊಂಡೊಯ್ಯಬಹುದು. ಹೀಗಾಗಿ ಮರಳು ಬೇಕಾದವರು ಪಿಡಬ್ಲ್ಯೂಡಿ ಇಲಾಖೆಯನ್ನು ಸಂಪರ್ಕಿಸಲಿ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Hyderabad: ಗಂಟಲಿಗೆ ಪೂರಿ ಸಿಲುಕಿ ವಿದ್ಯಾರ್ಥಿ ಸಾವು
Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.