ಇಂದಿನಿಂದ ಮತ್ತೆ ಸಮುದ್ರದಲ್ಲಿ ಮೀನುಗಾರಿಕಾ ಬೋಟುಗಳ ಕಲರವ
Team Udayavani, Aug 1, 2018, 10:14 AM IST
ಮಹಾನಗರ: ಸಮುದ್ರಕ್ಕೆ ಇಳಿಯಲು ಸಿದ್ಧವಾಗುತ್ತಿರುವ ನೂರಾರು ಬಣ್ಣ- ಬಣ್ಣದ ಬೋಟ್‌ಗಳು; ಅವುಗಳ ಮಧ್ಯೆ ಬಲೆ, ಬೋಟುಗಳನ್ನು ದುರಸ್ತಿ ಮಾಡುತ್ತಿರುವ ಕಾರ್ಮಿಕರು. ಇನ್ನೊಂದೆಡೆ, ಎರಡು ತಿಂಗಳ ರಜೆ ಮುಗಿಸಿ ಮೀನುಗಾರಿಕೆಗೆ ತೆರಳಲು ಅಣಿಯಾಗುತ್ತಿರುವ ಮೀನುಗಾರ ಕುಟುಂಬಗಳು! ಹಳೆಬಂದರಿಗೆ ಮಂಗಳವಾರ ‘ಸುದಿನ’ ಭೇಟಿ ನೀಡಿದಾಗ ಕಂಡುಬಂದ ದೃಶ್ಯಗಳಿವು. ರಜೆ ಬಳಿಕ, ಬುಧವಾರದಿಂದ ಈ ಋತುವಿನ ಮೀನುಗಾರಿಕೆಗೆ ಚಾಲನೆ ದೊರೆಯಲಿದೆ. ಈಗ, ಕಡಲ ತಡಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.
ಜೂ. 1ರಿಂದ ಜು. 31ರ ವರೆಗೆ ಮೀನುಗಾರಿಕೆಗೆ ನಿಷೇಧ ಹೇರಿದ್ದರಿಂದ ಹಳೇ ಬಂದರಿನಲ್ಲಿ ಸುಮಾರು 1,420 ಮೋಟರೀಕೃತ ನಾಡದೋಣಿ ಹಾಗೂ 1,234ರಷ್ಟು ಯಾಂತ್ರೀಕೃತ ನಾಡದೋಣಿಗಳು ಲಂಗರು ಹಾಕಿದ್ದವು. ಈಗ ಒಂದೊಂದೇ ಬೋಟುಗಳು ಲಂಗರು ಬಿಚ್ಚಿ ಆಳ ಸಮುದ್ರಕ್ಕೆ ತೆರಳಲು ಸಿದ್ಧವಾಗಿವೆ. ಉಪ್ಪು ನೀರು ಹಾಗೂ ಎರಡು ತಿಂಗಳಿನಿಂದ ಬೋಟು ನಿಂತಲ್ಲೇ ನಿಂತದ್ದಕ್ಕಾಗಿ ಕೆಲವು ಬೋಟಿನಲ್ಲಿ ರಂಧ್ರಗಳು ಕಾಣಿಸಿಕೊಂಡಿವೆ. ಜತೆಗೆ ಪಂಪ್ ಹಾಗೂ ಇತರ ತಾಂತ್ರಿಕ ಉಪಕರಣಗಳನ್ನೂ ಸಜ್ಜುಗೊಳಿಸಲಾಗುತ್ತಿದೆ.
ಸಾಮಾನ್ಯವಾಗಿ 6ರಿಂದ 10 ದಿನಕ್ಕೆ ಸಂಚರಿಸುವ ಟ್ರಾಲ್ ಬೋಟುಗಳಲ್ಲಿ 6 ಸಾವಿರ ಲೀಟರ್‌ನಷ್ಟು ಡೀಸೆಲ್ ಸಂಗ್ರಹ ಇರಬೇಕು. 70 ರೂ. ಗಳಂತೆ ಲೆಕ್ಕ ಹಾಕಿದರೆ 4.20 ಲಕ್ಷ ರೂ. ಇದಕ್ಕೆ ಮೀಸಲು. ಹಳೆ ಬಂದರಿನಲ್ಲಿರುವ 5 ಡೀಸೆಲ್ ಬಂಕ್‌ಗಳಲ್ಲಿ ಮೀನುಗಾರರಿಗೆ ಸಬ್ಸಿಡಿ ಆಧಾರಿತವಾಗಿ ಡೀಸೆಲ್ ನೀಡಲಾಗುತ್ತದೆ. ಪ್ರತೀ ಲೀಟರ್ ಗೆ 9 ರೂ. ನಂತೆ ಸಬ್ಸಿಡಿ ಸಂಬಂಧಪಟ್ಟ ಮೀನುಗಾರರ ಖಾತೆಗೆ ಬೀಳಲಿದೆ.
ಮೀನಿನ ಬೋಟ್‌ನಲ್ಲಿ ಮಂಜುಗೆಡ್ಡೆ ಸಂಗ್ರಹ ಅವಶ್ಯ. ಸಾಮಾನ್ಯವಾಗಿ 450 ಬಾಕ್ಸ್ ಗಳಷ್ಟು ಮಂಜುಗೆಡ್ಡೆ ಕೊಂಡೊಯ್ಯಲಾಗುತ್ತದೆ. ಒಂದು ಬಾಕ್ಸ್ ಗೆ ಸುಮಾರು 80 ರೂ.ಗಳಂತೆ 28 ಸಾವಿರ ರೂ. ನೀಡಬೇಕು. ಇನ್ನು ಈ ಬೋಟ್‌ಗಳಲ್ಲಿ ಜಿಪಿಎಸ್, ಫಿಶ್ ಫೈಂಡರ್, ಲೈಫ್ ಜಾಕೆಟ್, ಲೈಫ್ ಬಾಯ್, ಮೆಡಿಕಲ್ ಕಿಟ್ ವ್ಯವಸ್ಥೆ ಇದ್ದೇ ಇರುತ್ತದೆ.
ಬೋಟಿನೊಳಗೆ ಕಿಚನ್ ರೂಂ!
ದೊಡ್ಡದಾದ ಹಡಗಿನೊಳಗೆ ನಾವು ವೈಭವೋಪೇತ ಹೋಟೆಲ್‌ನ್ನು ನೋಡಿರಬಹುದು. ಅದರಂತೆಯೇ ಈ ಬೋಟುಗಳಲ್ಲೂ ಅಡುಗೆ ಮನೆ ಇರುತ್ತದೆ. ಯಾಕೆಂದರೆ ಈ ಬೋಟ್‌ಗಳು ಒಮ್ಮೆ ತೆರಳಿದರೆ ವಾಪಸಾಗುವುದು 5-6 ದಿನಗಳ ಬಳಿಕವೇ(ಕೆಲವು 2-3 ದಿನ).ಅಷ್ಟೂ ದಿನ ಊಟ-ಉಪಾಹಾರಕ್ಕೆ ಈ ಅಡುಗೆ ಮನೆಯೇ ಆಧಾರ. ಅದರಲ್ಲಿ ಎರಡು ಗ್ಯಾಸ್ ಸಿಲಿಂಡರ್, ಅಗತ್ಯದಷ್ಟು ಅಕ್ಕಿ, ಚಾ ಹುಡಿ, ತಿಂಡಿ, ತರಕಾರಿ ಸೇರಿದಂತೆ ಎಲ್ಲ ವಸ್ತುಗಳಿರಲಿವೆ. ಸುಮಾರು 8 ಸಾವಿರ ಲೀ. ನೀರು ಸಂಗ್ರಹವಿರಲಿದೆ. ಇಂಥ ಖರ್ಚಿಗಾಗಿ ಬೋಟು ಮಾಲೀಕರು ಸುಮಾರು 20 ಸಾವಿರ ರೂ. ನಷ್ಟು ವೆಚ್ಚ ಮಾಡುತ್ತಾರೆ.
ಟ್ರಾಲ್ ಬೋಟ್‌ನಲ್ಲಿ ಸಾಮಾನ್ಯವಾಗಿ 10ರಿಂದ 12 ಮಂದಿ ಮೀನುಗಾರರಿರುತ್ತಾರೆ. ಇದರಲ್ಲಿ ಒಬ್ಬ ಬೋಟ್ ಚಾಲಕನಾಗಿದ್ದರೆ, ಇನ್ನೊಬ್ಬ ಹೆಚ್ಚುವರಿ ಚಾಲಕ. ಉಳಿದವರು ಮೀನು ಹಿಡಿಯುವವರು.ಇನ್ನು ಪರ್ಸಿನ್ ಬೋಟ್‌ನಲ್ಲಿ ಸುಮಾರು 30ರಷ್ಟು ಮೀನುಗಾರರು ಒಮ್ಮೆಗೆ ತೆರಳುತ್ತಾರೆ. ಮುಂದಿನ ಮೀನುಗಾರಿಕೆ ನಿಷೇಧದ ವೇಳೆಗೆ ಹೆಚ್ಚಾ ಕಡಿಮೆ 25ರಷ್ಟು ಬಾರಿ ಹೋಗಿ ಬರುತ್ತಾರೆ. ಈ ಬೋಟುಗಳು ಗುಂಪಾಗಿ ಕಡಲಿನಲ್ಲಿ ಸುತ್ತಾಡುತ್ತವೆ. ಹೀಗಾಗಿ ಯಾವುದೇ ಅವಘಡವಾದರೂ ಇತರ ಬೋಟ್‌ನವರು ತತ್‌ಕ್ಷಣ ಮಾಹಿತಿ ನೀಡುತ್ತಾರೆ.
ಕೋಟಿ ತೂಗುವ ಬೋಟುಗಳು!
ಒಂದು ಟ್ರಾಲ್ ಬೋಟ್‌ಗೆ ಸಾಮಾನ್ಯವಾಗಿ 1.10 ಕೋ.ರೂ. ಮೌಲ್ಯ. ಪರ್ಸಿನ್ ಬೋಟ್ ಬಲೆ ಸೇರಿದರೆ ಸುಮಾರು 2 ಕೋ. ರೂ. ಮಂಗಳೂರಿನಲ್ಲಿ ಸ್ಟೀಲ್ ದೋಣಿಗಳೇ ಹೆಚ್ಚಿವೆ. ಸ್ಟೀಲ್ ದೋಣಿಯ ಬದಿ (ಹಲ್) ಭಾಗಕ್ಕೆ ತಿಳಿಗೆಂಪು (ರೆಡ್ ಆಕ್ಸೈಡ್) ಫೌಂಡರ್ ಭಾಗಕ್ಕೆ ಕಪ್ಪು ಹಾಗೂ ಕ್ಯಾಬಿನ್‌ಗೆ ಕೆಳ ಅರ್ಧ ನೀಲಿ ಮೇಲಿನ ಅರ್ಧ ನೀಲಿ ಬಣ್ಣ ಹಚ್ಚಲಾಗುತ್ತದೆ. ಇತರ ದೋಣಿಗಳಿಗೆ ಹಲ್ ಭಾಗಕ್ಕೆ ಬಿಳಿ, ಫೌಂಡರ್ ಭಾಗಕ್ಕೆ ಕಪ್ಪು, ಕ್ಯಾಬಿನ್ ಭಾಗಕ್ಕೆ ಕೆಳ ಅರ್ಧ ನೀಲಿ, ಮೇಲೆ ಅರ್ಧ ಬಿಳಿ ಬಣ್ಣ ಹಚ್ಚಲಾಗುತ್ತದೆ ಎನ್ನುತ್ತಾರೆ ಬೋಟ್ ಮಾಲಕ ರಾಜರತ್ನ ಸನಿಲ್.
ಸಮುದ್ರ ಸ್ವಚ್ಛತೆಗೆ ಈ ಬಾರಿ ಆದ್ಯತೆ
ಸಮುದ್ರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಯಾಂತ್ರೀಕೃತ ಬೋಟುಗಳಲ್ಲಿ ಕಸದ ಬುಟ್ಟಿ ಇರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕಸದ ಬುಟ್ಟಿಯಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ತೀರಕ್ಕೆ ತಂದು ವಿಲೇವಾರಿ ಮಾಡಬೇಕು. ಈ ಸಂಬಂಧ ಎಲ್ಲ ದೋಣಿಯ ಮಾಲೀಕರಿಗೆ ಮೀನುಗಾರಿಕಾ ಇಲಾಖೆ ಸೂಚನೆ ನೀಡಿದೆ.
ಒಂದು ಬೋಟು ಮೀನುಗಾರಿಕೆಗೆ ತೆರಳಿದರೆ ಸುಮಾರು 5 ಲಕ್ಷ ರೂ. ಮೌಲ್ಯದ ಮೀನುಗಳನ್ನು ತರುತ್ತದೆ. ಕೆಲವೊಮ್ಮೆ ಹೆಚ್ಚು ಕಡಿಮೆಯಾಗಬಹುದು. ಈ ಹಿಂದೆ ಮೀನುಗಾರರಿಗೆ ಸಂಬಳ ನೀಡಲಾಗುತ್ತಿತ್ತು. ಆದರೆ ಈಗ ಕಮಿಷನ್ ಆಧಾರದಲ್ಲಿ ಸಂಭಾವನೆ ನೀಡಲಾಗುತ್ತದೆ. ಅಂದರೆ ಸಂಗ್ರಹಿಸಿದ ಮೀನಿನ ಶೇ.25ರಷ್ಟು ಮೊತ್ತ ಮೀನುಗಾರರಿಗೆ ನೀಡುವುದಿದೆ. ಸುಮಾರು 1.15 ಲಕ್ಷ ರೂ (10-12 ಮೀನುಗಾರರಿಗೆ) ಮೀನುಗಾರರ ಪಾಲು.
ಬೇರೆ ರಾಜ್ಯದ ಗಡಿ ದಾಟುವ ಹಾಗಿಲ್ಲ!
ರಾಜ್ಯದ ಸಮುದ್ರ ವ್ಯಾಪ್ತಿಯ 12 ನಾಟಿಕಲ್ ಮೈಲು (1 ನಾಟಿಕಲ್ ಮೈಲು ಅಂದರೆ 1.8 ಕಿ.ಮೀ.) ಒಳಗೆ ಇತರ ರಾಜ್ಯದ ಮೀನುಗಾರರು ಬಂದು ಮೀನುಗಾರಿಕೆ ನಡೆಸುವಂತಿಲ್ಲ. ಅದರಂತೆ ಮಂಗಳೂರಿನವರು ಕೇರಳ, ತಮಿಳುನಾಡು ಅಥವಾ ಇತರ ಭಾಗದ ಅಲ್ಲಿನ 12 ನಾಟಿಕಲ್ ಮೈಲಿನ ಒಳಗೆ ಪ್ರವೇಶಿಸಿ ಮೀನುಗಾರಿಕೆ ನಡೆಸುವಂತಿಲ್ಲ. ಆದರೆ, 12 ನಾ.ಮೈಲಿನ ಬಳಿಕ ಮೀನುಗಾರಿಕೆಗೆ ತೊಂದರೆಯಿಲ್ಲ. 200 ನಾಟಿಕಲ್ ಮೈಲಿನಲ್ಲಿ ನೌಕಾ ಸೇನೆಯ ಕಾವಲಿರುತ್ತದೆ. ಅದರ ಬಳಿಕ ಮೀನುಗಾರಿಕೆ ನಡೆಸುವಂತಿಲ್ಲ.
ಕಡಲಿಗಿಳಿಯುವ ಮುನ್ನ ಐಡಿ ಕಾರ್ಡ್ ಬೇಕು!
ಭದ್ರತೆಯ ನಿಯಮ ಪಾಲನೆಯ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗೆ ಇಳಿಯುವಾಗ ಅಧಿಕೃತ ದಾಖಲೆಯನ್ನು ಹೊಂದಿರಬೇಕು. ಕಡಲಿನಲ್ಲಿರುವ ಮೀನುಗಾರರ ಬಗ್ಗೆ ಹಾಗೂ ಅವರ ಚಲನವಲನದ ಬಗ್ಗೆ ಕರಾವಳಿ ತಟ ರಕ್ಷಕ ಪಡೆ ಕಣ್ಣಿಡಲಿದೆ. ಜತೆಗೆ ಪರಿಶೀಲನೆ ನಡೆಸುತ್ತದೆ. ಈ ಸಂಬಂಧ ಹಳೆ ಬಂದರ್‌ನಿಂದ ಮೀನುಗಾರಿಕೆಗೆ ತೆರಳುವ 11,270 ಮೀನುಗಾರರಿಗೆ ಇಲಾಖೆ ಬಯೋಮೆಟ್ರಿಕ್ ಕಾರ್ಡ್ ನೀಡಲಾಗಿದೆ. ಉಳಿದವರಿಗೆ ಆಧಾರ್ ಕಾರ್ಡ್‌ನ ಆಧಾರದಲ್ಲಿ ತಾತ್ಕಾಲಿಕ ಗುರುತಿನ ಚೀಟಿ ನೀಡಲಾಗಿದೆ. ಮೀನುಗಾರರ ಕುರಿತ ಮಾಹಿತಿ ಹಾಗೂ ಬೋಟ್‌ನ ಹೆಸರು ಇದರಲ್ಲಿ ನಮೂದಾಗಿರುತ್ತದೆ. ಇದು ಇಲ್ಲದವರು ತಮ್ಮ ಚಾಲನಾ ಪರವಾನಿಗೆ ಸೇರಿದಂತೆ ಯಾವುದಾದರೂ ಒಂದು ಐಡಿ ಕಾರ್ಡ್ ಹೊಂದಿರಬೇಕು.
ಸಂಪರ್ಕಕ್ಕಾಗಿ ರೇಡಿಯೋ ಟೆಲಿಫೋನ್!
ಮೀನುಗಾರರು ಕಡಲಿಗೆ ಇಳಿದ ಬಳಿಕ ಸುಮಾರು 15 ಕಿ.ಮೀ.ವ್ಯಾಪ್ತಿಯವರೆಗೆ ಮಾತ್ರ ಮೊಬೈಲ್ ನೆಟ್‌ವರ್ಕ್ ಸಿಗುತ್ತದೆ. ಆ ಬಳಿಕ ಮೀನುಗಾರರು ಇತರರ ಸಂಪರ್ಕಕ್ಕಾಗಿ ರೇಡಿಯೋ ಟೆಲಿಫೋನ್ ಬಳಸುತ್ತಾರೆ. ಗುಂಪು ಗುಂಪಾಗಿ ಚಲಿಸುವ ಬೋಟ್‌ಗಳ ಮಂದಿ ಯಾವುದೇ ಸಹಾಯ ಹಾಗೂ ಮಾಹಿತಿ ವಿನಿಮಯಕ್ಕಾಗಿ ಇದನ್ನು ಬಳಸುತ್ತಾರೆ. ಜತೆಗೆ ಕೋಸ್ಟ್‌ಗಾರ್ಡ್‌ಗೂ ಇದೇ ಸಂವಹನ ಸಾಧನ.
ಕೋಸ್ಟ್ ಗಾರ್ಡ್ ಕಣ್ಣು
ಸಮುದ್ರದಲ್ಲಿ 20 ಕಿಮೀ.ವ್ಯಾಪ್ತಿಗಿಂತ ಹೆಚ್ಚು ದೂರ ಸಂಚರಿಸುವ ಬೋಟ್ ಗಳಿಗೆ ಆಟೋಮೆಟಿಕ್ ಐಡೆಂಟಿಫಿಕೇಶನ್ ಮೆಷಿನ್ ಅಳವಡಿಸಬೇಕು. ಇದನ್ನು ಇಲಾಖೆಯ ಅನುಮೋದನೆಯೊಂದಿಗೆ ಖಾಸಗಿ ಕಂಪೆನಿಯಿಂದ ಪಡೆದು ಅದರ ನಂಬರನ್ನು ನೀಡಲಾಗುತ್ತದೆ. ಇದರ ಆಧಾರದಲ್ಲಿ ಕಡಲಿನಲ್ಲಿ ಸಂಚರಿಸುವ ಬೋಟುಗಳ ಮೇಲೆ ಕಣ್ಣಿಡಲಾಗುತ್ತದೆ. ಬೋಟು ಅಪಾಯದಲ್ಲಿದೆಯೇ? ಅಪಘಾತವಾಗಿದೆಯೇ? ನಿಂತಿದೆಯೇ? ಎಂಬೆಲ್ಲ ವಿಚಾರಗಳ ಬಗ್ಗೆ ಈ ಯಂತ್ರ ಸೂಕ್ತ ಮಾಹಿತಿಯನ್ನು ನೌಕಾ ಪಡೆ ಹಾಗೂ ಕೋಸ್ಟ್ ಗಾರ್ಡ್‌ಗೆ ನೀಡುತ್ತದೆ.
ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುವಂತಿಲ್ಲ!
ಸರಕಾರದ ಆದೇಶದಂತೆ ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲ್ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಬುಲ್ ಟ್ರಾಲ್ ಅಂದರೆ ಎರಡು ಬೋಟುಗಳ ಮಧ್ಯೆ ಬಲೆ ಹಾಕಿ ಮೀನು ಹಿಡಿಯುವ ಕ್ರಮ. ಅವೈಜ್ಞಾನಿಕವಾಗಿ ಪಚ್ಚಿಲೆ ಮೀನುಗಾರಿಕೆ, ಚೌರಿ ಮತ್ತು ಪ್ಲಾಸ್ಟಿಕ್ ಬಳಸಿ ಅನಧಿಕೃತವಾಗಿ ಕಪ್ಪೆ ಬಂಡಸನ್ನೂ ಹಿಡಿಯುವಂತಿಲ್ಲ. ಈ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಆ ಮೀನುಗಾರಿಕಾ
ದೋಣಿಗಳ ಲೈಸನ್ಸ್ ಹಾಗೂ ಕರರಹಿತ ಡೀಸೆಲ್ ಸೌಲಭ್ಯ ರದ್ದುಗೊಳ್ಳಲಿದೆ. ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ (1986) ಯಂತೆ ಆ ದೋಣಿಗಳು ಹಿಡಿದ ಮೀನಿನ 5 ಪಟ್ಟು ದರದಲ್ಲಿ ದಂಡವನ್ನು ತೆರಬೇಕು. ಆದ್ದರಿಂದ ಮೀನುಗಾರರು ನಿಯಮ ಪಾಲಿಸಬೇಕೆನ್ನುವುದು ಮೀನುಗಾರಿಕಾ ಇಲಾಖೆ ಮನವಿ.
ಸಮಗ್ರ ಮಾಹಿತಿ
ಸಮುದ್ರದಲ್ಲಿ ಮೀನು ಹಿಡಿಯಲು ಬಳಸುವ ಬಲೆಯ ಕಣ್ಣು ಗಾತ್ರ ಕನಿಷ್ಠ 35 ಎಂ.ಎಂ ಕಡ್ಡಾಯಗೊಳಿಸಿ ಮೀನುಗಾರಿಕಾ ಇಲಾಖೆ ಆದೇಶ ಹೊರಡಿಸಿದೆ. ಜತೆಗೆ ಸಮುದ್ರ ಸ್ವತ್ಛತೆಗೆ ಆದ್ಯತೆ ನೀಡಲು ಬೋಟಿನಲ್ಲಿ ಕಸದ ಬುಟ್ಟಿ ಇರಿಸಲಾಗುತ್ತಿದೆ. ಬೆಳಕು ಮತ್ತು ಬುಲ್ ಟ್ರಾಲ್ ಮೀನುಗಾರಿಕೆ ನಿಷೇಧ ಕುರಿತು ಮಾಹಿತಿಯನ್ನು ಮೀನುಗಾರರಿಗೆ ನೀಡಲಾಗಿದೆ.
– ಮಹೇಶ್ ಕುಮಾರ್, ಉಪನಿರ್ದೇಶಕರು,
ಮೀನುಗಾರಿಕೆ ಇಲಾಖೆ, ಮಂಗಳೂರು.
ಕಡಲಿನಲ್ಲಿ ಮೀನುಗಾರರು ತುರ್ತು ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆ ತಟರಕ್ಷಕ್: 1554 ಕರಾವಳಿ ಪೊಲೀಸ್: 1093.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.