ಹತ್ತು ದಿನದಲ್ಲಿ ಗೇರು ಬೀಜದ ಸೀಸನ್ ಅಂತ್ಯ
Team Udayavani, May 6, 2018, 5:20 PM IST
ಮುಂದಿನ ಹತ್ತೇ ದಿನದಲ್ಲಿ ಗೇರು ಬೀಜದ ಸೀಸನ್ ಅಂತ್ಯವಾಗಲಿದೆ. ಅಷ್ಟರಲ್ಲಿ ನಿರೀಕ್ಷೆಯಷ್ಟು ಧಾರಣೆ ಏರಿಕೆ ಕಾಣುವ ಯಾವುದೇ ಸೂಚನೆ ಲಭ್ಯವಾಗುತ್ತಿಲ್ಲ. ಶನಿವಾರ ಮಾರುಕಟ್ಟೆಯಲ್ಲಿ ಗೇರುಬೀಜ ಕೆ.ಜಿ.ಗೆ 140 ರೂ. ನಂತೆ ಬಿಕರಿಯಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಇನ್ನೂ ಕಡಿಮೆಯೇ ಇದೆ. ಹೆಚ್ಚು- ಕಡಿಮೆ 125 ರೂ. ಗೆ ಖರೀದಿಯಾದ ಉದಾಹರಣೆಯೂ ಇದೆ. 142 ರೂ. ನಲ್ಲಿದ್ದ ಧಾರಣೆ ಹಿಂದಿನ ಶನಿವಾರ 145 ರೂ. ಗೂ ತಲುಪಿತ್ತು.
ಆದರೆ ಈ ಶನಿವಾರ ಮತ್ತೆ 140 ರೂ. ಗೆ ಆಗಿದೆ. ಹಿಂದಿನ ಶನಿವಾರ 142 ರೂ.ನಲ್ಲಿದ್ದ ಗೇರು ಬೀಜ ಧಾರಣೆ ಈ ಶನಿವಾರಕ್ಕೆ 145 ರೂ.ಗೆ ಏರಿಕೆಯಾಗಿದೆ. ಅಂದರೆ ಬೆಲೆಯಲ್ಲಿ 3 ರೂ. ಏರಿಕೆ ಕಂಡಿದೆ. ಇದು ಗೇರು ಬೀಜದ ಸೀಸನ್ ಆಗಿರುವುದರಿಂದ, ಬೇಡಿಕೆ ಮೂಡುತ್ತಿದೆ. ಬೇಡಿಕೆ ತಕ್ಕಂತೆ ಧಾರಣೆಯೂ ಹೆಜ್ಜೆ ಹಾಕುತ್ತಿದೆ.
ಅಡಿಕೆ
ಮಾರುಕಟ್ಟೆಗೆ ಪ್ರವೇಶಿಸುವ ಅಡಿಕೆಯ ಗುಣಮಟ್ಟ ಉತ್ತಮವಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ತಿಂಗಳ ಅಂತ್ಯಕ್ಕೆ ಒಂದಷ್ಟು ಉತ್ತಮ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರಬಹುದು. ಶನಿವಾರ ಹಳೆ ಅಡಿಕೆ ಕೆ.ಜಿ.ಗೆ 270 ರೂ., ಡಬಲ್ ಚೋಲು 274 ರೂ., ಹೊಸ ಅಡಿಕೆ 222 ರೂ.ಗೆ ಖರೀದಿ ನಡೆಸಿದೆ. ಹಿಂದಿನ ಶನಿವಾರ ಇದು ಕ್ರಮವಾಗಿ ಹಳೆ ಅಡಿಕೆ 265 ರೂ., ಹೊಸ ಅಡಿಕೆ 222 ರೂ.ನಲ್ಲಿ ಖರೀದಿಯಾಗಿತ್ತು. ಸದ್ಯದ ಮಟ್ಟಿಗೆ ಅಡಿಕೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟಿನ ನಿರೀಕ್ಷೆ ಇಟ್ಟುಕೊಂಡಿಲ್ಲ.
ಕಾಳುಮೆಣಸು
330 ರೂ. – 340 ರೂ. ನಲ್ಲಿ ಹಿಂದಿನ ವಾರ ಖರೀದಿಯಾಗಿದ್ದ ಕಾಳುಮೆಣಸು ಈ ವಾರ 325- 330 ರೂ.ಗೆ ಇಳಿಕೆಯಾಗಿದೆ. ಹಿಂದಿನ ವಾರ 10 ರೂ. ಏರಿಕೆ ಕಂಡಿದ್ದರೆ, ಈ ವಾರ 10 ರೂ. ಇಳಿಕೆ ಕಂಡಿದೆ. ಈ ಹಾವು- ಏಣಿ ಆಟದಿಂದ ಕೃಷಿಕರ ಆತಂಕ ಎಲ್ಲೆ ಮೀರುತ್ತಿದೆ. ಚುನಾವಣೆ ನಂತರವಾದರೂ ಇದಕ್ಕೊಂದು ಶಾಶ್ವತ ಪರಿಹಾರ ಸಿಗಬಹುದೇ ಎಂಬ ಮಾತು ಮಾರುಕಟ್ಟೆಯಲ್ಲಿ ಕೇಳಿಬರುತ್ತಿದೆ. ಈಗಾಗಲೇ ಆಮದು ಸುಂಕದ ಮೇಲೆ ಯಾವುದೇ ಕಟ್ಟುನಿಟ್ಟಿನ ನಿರ್ಬಂಧ ಹೇರದ ಕಾರಣ, ಧಾರಣೆಯಲ್ಲಿ ಬೆಳವಣಿಗೆಯಲ್ಲಿ ಇಲ್ಲ.
ರಬ್ಬರ್
ಅಂತಾರಾಷ್ಟ್ರೀಯ ಮಾರುಕಟ್ಟೆಗಳಾದ ಬ್ಯಾಂಕಾಕ್, ವಿಯೆಟ್ನಾಂ, ಥಾçಲ್ಯಾಂಡ್‌ಗಳಲ್ಲಿ ರಬ್ಬರ್ ಧಾರಣೆಯಲ್ಲಿ ಏರಿಕೆ ಕಂಡುಬರುತ್ತಿದೆ. ಇದಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲೂ ಸಣ್ಣ ಪ್ರಮಾಣದ ಏರಿಕೆ ಕಂಡುಬಂದಿದೆ. ಇತ್ತೀಚಿನ ರಬ್ಬರ್ ಧಾರಣೆಯ ಹಾದಿಯನ್ನು ಗಮನಿಸುವಾಗ, ರಬ್ಬರ್ ವಿಷಯದಲ್ಲಿ ತುಂಬಾ ಖುಷಿ ಪಡುವಂತೆಯೂ ಇಲ್ಲ.
116 ರೂ.ನಲ್ಲಿದ್ದ ಆರ್‌ಎಸ್‌ಎಸ್4 ದರ್ಜೆ 117.5 ರೂ., 113 ರೂ.ನಲ್ಲಿದ್ದ ಆರ್‌ಎಸ್‌ಎಸ್5 ದರ್ಜೆ 114 ರೂ., 108 ರೂ.ನಲ್ಲಿದ್ದ ಲಾಟ್ 109.5 ರೂ., 75 ರೂ.ನಲ್ಲಿದ್ದಸ್ಕ್ರಾಪ್ ದರ್ಜೆ 75 ರೂ., 68 ರೂ.ನಲ್ಲಿದ್ದ ಸ್ಕ್ರಾಪ್ 2 ದರ್ಜೆ 69.5 ರೂ.ನಲ್ಲಿ ಖರೀದಿಯಾಗಿದೆ.
ಕೊಕ್ಕೋ
ಕೊಕ್ಕೋ ಬೀಜಗಳಿಗೆ ಬೇಡಿಕೆ ವ್ಯಕ್ತವಾಗುತ್ತಿದೆ. ಸೀಸನ್ ಅವಧಿಯಲ್ಲಿರುವ ಕೊಕ್ಕೋ ಈ ವಾರ ಧಾರಣೆ ಏರಿಸಿಕೊಂಡಿದೆ. 56 ರೂ.ನಲ್ಲಿದ್ದ ಹಸಿ ಕೊಕ್ಕೋ 60 ರೂ.ಗೆ ಹಾಗೂ 175 ರೂ.ನಲ್ಲಿದ್ದ ಒಣ ಕೊಕ್ಕೋ 185 ರೂ.ಗೆ ಖರೀದಿ ನಡೆಸಿದೆ. ಮಾರುಕಟ್ಟೆ ಯಲ್ಲಿ ಉತ್ತಮ ಆವಕ ಕಂಡುಬರುತ್ತಿರುವ ಕೊಕ್ಕೋ, ಇನ್ನಷ್ಟು ಧಾರಣೆ ಏರಿಸಿಕೊಳ್ಳುವ ನಿರೀಕ್ಷೆ ಇದೆ.
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.