ಶಾಂತಿಮೊಗರು: ಸೆಲ್ಫಿ ಪ್ರಿಯರ ತಾಣವಾದ ನೂತನ ಸೇತುವೆ
Team Udayavani, Jun 17, 2018, 2:25 PM IST
ಆಲಂಕಾರು: ಕುಮಾರಧಾರಾ ನದಿಗೆ ಶಾಂತಿಮೊಗರು ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ಸೇತುವೆ ಈಗ ಸೆಲ್ಫಿ ಹಾಗೂ ಮೊಬೈಲ್ ಚಿತ್ರೀಕರಣದ ತಾಣವಾಗಿದೆ. ಧಾರಾಕಾರ ಸುರಿಯುವ ಮಳೆಯಿಂದಾಗಿ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದೆ. ಸೇತುವೆ ಮೇಲೆ ಯುವಕರು ಅಪಾಯಕಾರಿ ಭಂಗಿಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಲೈಕ್, ಕಾಮೆಂಟ್ ಗಳಿಸುವ ಭರದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ.
ಎಚ್ಚರಿಸಿದರೂ ಲೆಕ್ಕಕ್ಕಿಲ್ಲ
ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ನದಿ, ಹಳ್ಳ, ಹೊಳೆಗಳ ಅಂಚಿನಲ್ಲಿ, ಸೇತುವೆಗಳ ಮಧ್ಯಭಾಗಗಳಲ್ಲಿ ನಿಂತು ಸೆಲ್ಫಿ ತೆಗೆಯುವ ಹುಚ್ಚಾಟದಿಂದಾಗಿ ಕೆಲವು ಯುವಕ – ಯುವತಿಯರು ತಮ್ಮ ಸಾವನ್ನು ತಾವೇ ಆಹ್ವಾನಿಸಿಕೊಳ್ಳುತ್ತಿದ್ದಾರೆ. ಕಡಬ ಸಮೀಪದ ಹೊಸ್ಮಠದಲ್ಲಿ ಹಳೆಯ ಸೇತುವೆ ಮುಳುಗಿದಾಗ, ನೆಟ್ಟಣ ಸೇತುವೆಯ ಮೇಲೆ ನೆರೆ ನೀರು ನಿಂತಾಗ ಸೇತುವೆಯಲ್ಲಿ ಸೆಲ್ಫಿ ತೆಗಯುವ ಹುಚ್ಚು ಸಾಹಸಕ್ಕೆ ಇಳಿದವರನ್ನು ಸಾರ್ವಜನಿಕರೇ ಎಚ್ಚರಿಕೆ ನೀಡಿ ಕಳುಹಿಸಿದ ಘಟನೆಗಳು ನಡೆದಿವೆ. ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಸ್ವಲ್ಪ ಯಾಮಾರಿದರೂ ನದಿ ನೀರಿನಲ್ಲಿ ಲೀನವಾಗುವ ಸಂಭವ ಇರುವಾಗ ಸೇತುವೆ, ಹೊಳೆಗಳ ಬಳಿ ರಕ್ಷಣೆಯೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಂತಿಮೊಗರು ಸೇತುವೆ
ನೂತನ ಸೇತುವೆ ಸಂಪರ್ಕಕ್ಕೆ ಮುಕ್ತವಾದ ಬಳಿಕ ಪುತ್ತೂರಿಗೆ ಸಂಪರ್ಕ ಬೆಳೆಸಲು ಕಡಬ, ಬಲ್ಯ, ಕುಂತೂರು ಹಾಗೂ ಆಲಂಕಾರು ವ್ಯಾಪ್ತಿಯ ಜನತೆಗೆ ಇದು ಬಹಳಷ್ಟು ಹತ್ತಿರದ ಮಾರ್ಗವಾಗಿದೆ. ಈ ಭಾಗದಲ್ಲಿ ವಾಹನಗಳ ದಟ್ಟನೆ ಅಷ್ಟೊಂದಿಲ್ಲ. ಜನಸಂಚಾರವೂ ಕಡಿಮೆಯಿರುವ ಕಾರಣ ಸೆಲ್ಫಿ ಪ್ರಿಯರಿಗೆ ಈ ಸೇತುವೆ ಸ್ವರ್ಗದಂತಾಗಿದೆ. ಸಂಜೆ ವೇಳೆ, ಸೆಲ್ಫಿ ತೆಗೆಯುವ ಹುಚ್ಚು ಸಾಹಸಕ್ಕೆ ಕೆಲವರು ಮುಂದಾಗುತ್ತಿದ್ದಾರೆ. ಬೈಕ್ ಸವಾರರು, ಪ್ರೇಮಿಗಳು ಸೆಲ್ಫಿ ತೆಗೆದುಕೊಳ್ಳುವುದು ಹೆಚ್ಚು.
ಎಂಟು ತಿಂಗಳ ಹಿಂದೆ ಈ ಸೇತುವೆಯ ಅಡಿಯಲ್ಲಿ ಸ್ನಾನಕ್ಕಿಳಿದ ಕಡಬ ಮೂಲದ ಸಹೋದರರು ಹಾಗೂ ಇಲ್ಲಿಂದ 300 ಮೀ. ಕೆಳಗೆ ಕಕ್ವೆ ಎಂಬಲ್ಲಿ ಸ್ನಾನಕ್ಕಿಳಿದ ಯುವಕ ನೀರುಪಾಲಾಗಿದ್ದಾರೆ. ಈಗ ಮಳೆಗಾಲ. ಹೊಳೆಯಲ್ಲಿ ಜಾಸ್ತಿ ನೀರು ಇರುವುದರಿಂದ ಯುವಜನರ ಸೆಲ್ಫಿ ಹುಚ್ಚು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹೊಸ್ಮಠದಲ್ಲಿ ಸೆಲ್ಫಿ ಚೆಲ್ಲಾಟ
ಕೆಲವು ವರ್ಷಗಳ ಹಿಂದೆ ಕಡಬಕ್ಕೆ ಸಿಮೆಂಟು ಹೊತ್ತು ತರುತ್ತಿದ್ದ ಲಾರಿಯಲ್ಲಿದ್ದ ನಾಲ್ವರು, ಭದ್ರತಾ ಸಿಬಂದಿಯ ಎಚ್ಚರಿಕೆಯನ್ನು ಉಪೇಕ್ಷಿಸಿ, ಸೇತುವೆ ದಾಟಿ ನೀರು ಪಾಲಾಗಿದ್ದರು. ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ. ಅಂತಹುದರಲ್ಲಿ ಸೇತುವೆ ಮೇಲೆ ಅಲ್ಪಸ್ವಲ್ಪ ನೀರಿದೆ ಎಂದು ಸೇತುವೆ ಮಧ್ಯೆ ಹೋಗಿ ಫೋಟೋ, ಸೆಲ್ಫಿ ತೆಗೆಯುವವರ ಸಂಖ್ಯೆ ಹೆಚ್ಚಾಗಿದೆ. ಪ್ರವಾಹ ಬಂದು ಸೇತುವೆ ಮುಳುಗಿದಾಗ ಹೊಸ್ಮಠದಲ್ಲಿ ಪೊಲೀಸ್ ಹಾಗೂ ಗೃಹರಕ್ಷಕ ಸಿಬಂದಿಯನ್ನು ನೇಮಿಸಲಾಗುತ್ತದೆ. ಆದರೆ. ಅವರ ಮಾತು ಕೇಳದೆ ಸೆಲ್ಫಿ ತೆಗೆಯಲು ಹೋಗಿ ಹಲವರು ಅಪಾಯಕ್ಕೆ ಸಿಲುಕಿದ ನಿದರ್ಶನಗಳಿವೆ.
ಸದಾನಂದ ಆಲಂಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.