ಶಿರಾಡಿ: ಕಾಮಗಾರಿ ವಿಳಂಬಕ್ಕೆ ಮಳೆ ಕಾರಣ
Team Udayavani, Jul 3, 2018, 9:59 AM IST
ನೆಲ್ಯಾಡಿ: ಕೆಲವು ವಾರಗಳ ಕಾಲ ಎಡೆಬಿಡದೆ ಸುರಿದ ಮಳೆಯಿಂದಾಗಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿರಾಡಿ ಘಾಟಿ ರಸ್ತೆಯ 2ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಕೆಲಸ 15 ದಿನಗಳ ಹೆಚ್ಚುವರಿ ಕಾಲಾವಕಾಶ ತೆಗೆದುಕೊಂಡ ಕಾರಣದಿಂದ ಈಗಷ್ಟೇ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದೆ. ಇನ್ನು 15 ದಿನಗಳ ಕ್ಯೂರಿಂಗ್ ಬಳಿಕ ಜು. 15ರ ಸುಮಾರಿಗೆ ರಸ್ತೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಗಳಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 12.38 ಕಿ.ಮೀ. ಉದ್ದ ಮತ್ತು 8.50 ಮೀ. ಅಗಲದ ಕಾಂಕ್ರೀಟ್ ರಸ್ತೆ ಕೆಲಸ ಕೆಲವು ದಿನಗಳ ಹಿಂದೆಯೇ ಪೂರ್ಣಗೊಂಡಿತ್ತು. ಆದರೆ ಘಾಟಿ ಪ್ರದೇಶದಲ್ಲಿ ಎಡೆಬಿಡದ ಮಳೆಯಿಂದಾಗಿ ಮೂರು ಸೇತುವೆಗಳನ್ನು ರಸ್ತೆಗೆ ಸಂಪರ್ಕಿಸುವಲ್ಲಿ ಕೆಲಸ ಬಾಕಿ ಉಳಿದಿತ್ತು. ಇದು ಕೂಡ ಶನಿವಾರ ರಾತ್ರಿ ಪೂರ್ಣಗೊಂಡಿದೆ.
ತಡೆಗೋಡೆ ಕಾಮಗಾರಿ ಬಾಕಿ
ರಸ್ತೆ ಬದಿಯಲ್ಲಿ ಶೇ. 80ರಷ್ಟು ತಡೆಗೋಡೆ ಕೆಲಸ ಬಾಕಿ ಇದ್ದು, ಈ ಕಾಮಗಾರಿ ಭರದಿಂದ ಸಾಗುತ್ತಿದೆ. ಇದಕ್ಕೆ ಎರಡು ತಿಂಗಳ ಅವಧಿ ಬೇಕಾಗಬಹುದು. ಕೆಲವು ಕಡೆಗಳಲ್ಲಿ ಹೊಳೆಯ ಸಮೀಪ ಕಡಿದಾದ ಇಳಿಜಾರು ಇರುವುದು ಹಾಗೂ ಈ ಪ್ರದೇಶಗಳಲ್ಲಿ ಹೊಳೆಯಿಂದಲೇ ಮೇಲಿನವರೆಗೆ ತಡೆಗೋಡೆ ನಿರ್ಮಿಸಬೇಕಿರುವುದರಿಂದ ಕಾಮಗಾರಿ ಪೂರ್ಣಗೊಳ್ಳಲು ಒಂದೆರಡು ತಿಂಗಳುಗಳೇ ಬೇಕಾಗಬಹುದು.
74 ಕೋ. ರೂ. ಕಾಮಗಾರಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 13 ಕಿ.ಮೀ. ಕಾಂಕ್ರೀಟ್ ರಸ್ತೆ 2ನೇ ಹಂತದ ಕಾಮಗಾರಿಗೆ 74 ಕೋ. ರೂ. ಮಂಜೂರು ಆಗಿದ್ದು, ಜರ್ಮನಿಯಿಂದ ತರಿಸಲಾದ ಹೊಸ ಯಂತ್ರ ಬಳಸಿಕೊಂಡು ಆಧುನಿಕ ತಂತ್ರಜ್ಞಾನದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಮಧ್ಯೆ 77 ಮೋರಿಗಳ ಅಭಿವೃದ್ಧಿ ಮಾಡಲಾಗಿದೆ. ಈ ಪೈಕಿ ಮೂರು ಸೇತುವೆಯ ವಿಸ್ತರಣೆ ಕಾಮಗಾರಿ ನಡೆದಿದೆ.
ಕನಿಷ್ಠ ಅವಧಿ
ಮೊದಲ ಹಂತದ ಕಾಮಗಾರಿ ಹೆಗ್ಗದ್ದೆಯಿಂದ ಕೆಂಪುಹೊಳೆ ತನಕ 11.77 ಕಿ.ಮೀ. ಕಾಂಕ್ರಿಟೀಕರಣ 69.90 ಕೋಟಿ ರೂಪಾಯಿಯಲ್ಲಿ ಆಗಿದ್ದು, ಇದನ್ನು ಓಷಿಯನ್ ಕನ್‌ಸ್ಟ್ರಕ್ಷನ್ ಸಂಸ್ಥೆ ನಿರ್ವಹಿ ಸಿತ್ತು. ಕಾಮಗಾರಿ ಗುಣಮಟ್ಟದ ಬಗ್ಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಹೆದ್ದಾರಿ ಇಲಾಖೆಯಿಂದಲೂ ಪ್ರಶಂಶೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ 2ನೇ ಹಂತದ ಕಾಮಗಾರಿಯನ್ನು ಇದೇ ಸಂಸ್ಥೆಗೆ ನೀಡಲಾಗಿತ್ತು. ಕಾಮಗಾರಿಯ ಗುತ್ತಿಗೆ ಅವಧಿ 2018ರ ಜ. 12ರಿಂದ 2019ರ ಎ. 7ರ ವರೆಗೆ ಇದ್ದರೂ ದಾಖಲೆಯ ಐದೂವರೆ ತಿಂಗಳಲ್ಲಿ ಕಾಮಗಾರಿ ಮುಗಿಯುತ್ತಿದೆ.
ಭರದ ಕೆಲಸ
ಒಂದು ಹಂತದ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ. ಈಗ ತಡೆಗೋಡೆ ಮತ್ತು ರಸ್ತೆಯ ಬದಿಯನ್ನು ಸರಿಪಡಿಸುವ ಕೆಲಸ ಭರದಿಂದ ನಡೆಯುತ್ತಿದೆ. ಕ್ಯೂರಿಂಗ್ ಮುಗಿದ ಬಳಿಕ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಓಷಿಯನ್ ಕನ್‌ಸ್ಟ್ರಕ್ಷನ್ ಇಂಡಿಯಾ ಪ್ರೈ. ಲಿ. ಸಂಸ್ಥೆಯ ನಿರ್ದೇಶಕ ಶಫುದ್ದೀನ್ ತಿಳಿಸಿದ್ದಾರೆ.
ಅಕ್ರಮ ಸಂಚಾರ ಸ್ಥಗಿತಕ್ಕೆ ಎಸ್‌ಪಿ ಸೂಚನೆ
ಕಾಂಕ್ರೀಟ್ ಕಾಮಗಾರಿ ಮುಗಿಯುವ ಹಂತದಲ್ಲಿ ಕೆಲವು ದಿನಗಳಿಂದ ಕೆಲವು ವಾಹನಗಳವರು ಒತ್ತಡ, ಬೆದರಿಕೆ ತಂತ್ರಗಳನ್ನು ಬಳಸಿ ಅಕ್ರಮ ಸಂಚಾರಕ್ಕೆ ಯತ್ನಿಸಿರುವ ಹಿನ್ನೆಲೆಯಲ್ಲಿ ಮುಂದಿನ ಸೂಚನೆ ತನಕ ಯಾವುದೇ ವಾಹನಗಳನ್ನು ಬಿಡದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖಡಕ್ ಸೂಚನೆ ನೀಡಿದ್ದಾರೆ. ತೀರಾ ಅನಾರೋಗ್ಯ ಮತ್ತು ತುರ್ತು ಸಂದರ್ಭಗಳಲ್ಲಿ ವಾಹನ ತಡೆ ಗೇಟ್‌ನಲ್ಲಿ ಇದ್ದ ಸಿಬಂದಿ ಮಾನವೀಯ ನೆಲೆಯಲ್ಲಿ ಕೆಲವು ವಾಹನಗಳಿಗೆ ತೆರಳಲು ಅನುವು ಮಾಡಿಕೊಟ್ಟಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಸ್ಥಳೀಯ ವಾಹನವೊಂದು ಮುನ್ನುಗ್ಗಿ ಕಾಂಕ್ರೀಟ್ ರಸ್ತೆ ಮೇಲೆಯೇ ಹೋಗಲು ಯತ್ನಿಸಿತ್ತು. ಈ ಬಗ್ಗೆ ಕಾಮಗಾರಿ ನಿರ್ವಹಿಸುತ್ತಿರುವ ಓಷಿಯನ್ ಸಂಸ್ಥೆಯವರು ನೀಡಿರುವ ಪೊಲೀಸ್ ದೂರಿನ ಮೇರೆಗೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಖಡಕ್ ಸೂಚನೆ ನೀಡಿದ್ದರು.
ಕಾಂಕ್ರೀಟ್ ರಸ್ತೆ ಕಾಮಗಾರಿ ಸಂಪೂರ್ಣವಾಗಿದೆ. ಕ್ಯೂರಿಂಗ್ ಆಗಲು ಕನಿಷ್ಠ 15 ದಿವಸ ಬೇಕು. ಈ ಮಧ್ಯೆ ತಡೆಗೋಡೆ ಕೆಲಸ ಆಗಬೇಕಿದೆ. ವಾಹನ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾಡಳಿತ ತೀರ್ಮಾನ ಮಾಡಲಿದೆ.
– ರಾಘವನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಎಂಜಿನಿಯರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.