ಶಿರಾಡಿ ಘಾಟಿ: ಹೆದ್ದಾರಿ ಹೊಂಡಗಳಿಂದ ಜೀವ ಹಾನಿ?
Team Udayavani, Jul 17, 2017, 2:40 AM IST
ನೆಲ್ಯಾಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿ ರಸ್ತೆಯಲ್ಲಿ ಅಪಾಯಕಾರಿ ಹೊಂಡಗಳು ನಿರ್ಮಾಣವಾಗಿ ಅಪಾಯಕ್ಕೆ ಆಹ್ವಾನ ನೀಡಿದೆ. ವಾಹನ ಸವಾರರು ಬಹಳ ಎಚ್ಚರಿಕೆ ಯಿಂದ ವಾಹನ ಚಲಾಯಿಸಬೇಕಾದ ಸ್ಥಿತಿ ಉದ್ಭವಿಸಿದೆ. ಸ್ವಲ್ಪಮೈ ಮರೆತರೂ ಅವಘಡ ಖಚಿತ ಎನ್ನುವಂತಾಗಿದೆ. ನೆಲ್ಯಾಡಿಯಿಂದ ಸ್ವಲ್ಪ ಮುಂದೆ ಸಾಗುವಾಗ ಪೆರಿಯಶಾಂತಿ ಅನಂತರದ ಹೆದ್ದಾರಿ ರಸ್ತೆಯಲ್ಲಿ ಹತ್ತಾರು ಹೊಂಡಗಳು ನಿರ್ಮಾಣವಾಗಿವೆ. ಇವು ಬಹಳ ಆಳವೂ ಆಗಿರುವುದರಿಂದ, ಮಳೆ ನೀರು ತುಂಬಿಕೊಳ್ಳುತ್ತವೆ. ವಾಹನ ಸವಾರರು ನೀರು ತುಂಬಿದ ಕಾರಣದಿಂದ ಹೊಂಡಗಳನ್ನು ಅರಿಯಲಾಗದೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಕೆಲವು ವಾಹನಗಳು ಹೊಂಡಗಳಿಗೆ ಇಳಿದು, ಕೆಟ್ಟು ನಿಲ್ಲುತ್ತಿವೆ. ಇನ್ನು ಕೆಲವು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸುವ ಮೂಲಕ ಅಪಘಾತಕ್ಕೀಡಾಗುತ್ತಿವೆ. ಗುಂಡ್ಯದ ಬಳಿಕ ಬಾಕಿ ಉಳಿದ 23 ಕಿ.ಮೀ. ರಸ್ತೆಗೆ ಕಾಂಕ್ರೀಟ್ ಹಾಕದ ಕಾರಣ ಹೊಂಡಗಳ ನಡುವೆ ರಸ್ತೆಯನ್ನು ಹುಡಕುವ ಸ್ಥಿತಿ ಉದ್ಭವಿಸಿದೆ. ಕೆಲವು ಕಡೆಗಳಲ್ಲಿ ರಸ್ತೆ ವಿಸ್ತರಿಸಲು ಕಡಿದುರುಳಿಸಿದ ಮರಗಳು ಡಾಮರ್ ರಸ್ತೆಯ ಅಂಚಿನಲ್ಲೇ ಬಿದ್ದಿರುವುದು ಮತ್ತು ಕಾಮಗಾರಿ ನಡೆಸುವ ವಾಹನಗಳ ಓಡಾಟವೂ ಅಪಘಾತಗಳಿಗೆ ಕಾರಣವಾಗುತ್ತಿದೆ ಎನ್ನುವುದು ವಾಹನ ಚಾಲಕರ ಆಕ್ರೋಶ.
ಆಮೆಗತಿಯಲ್ಲಿ ಕಾಮಗಾರಿ
ಹೆದ್ದಾರಿ ಕಾಂಕ್ರೀಟ್ ಕಾಮಗಾರಿ ಆಮೆಗತಿಯಲ್ಲಿ ನಡೆದುದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣ. ಶಿರಾಡಿ ಘಾಟಿ ಕಾಂಕ್ರೀಟ್ ಹಾಕುವ ಪ್ರಕ್ರಿಯೆ ಪ್ರಾರಂಭವಾಗಿ ನಾಲ್ಕೂವರೆ ವರ್ಷಗಳು ಕಳೆದರೂ ಕೇವಲ 23 ಕಿ.ಮೀ. ಮಾತ್ರ (ಬರ್ಚಿನ ಹಳ್ಳ ಸೇತುವೆಯವರೆಗೆ) ಕಾಮಗಾರಿ ಪೂರ್ತಿಗೊಂಡಿದೆ. ಉಳಿದ 23 ಕಿ.ಮೀ. (ಅಡ್ಡಹೊಳೆ)ವರೆಗೆ ಬಾಕಿಯಿದೆ. ಈ 23 ಕಿ.ಮೀ ಹಾಗೂ ನೆಲ್ಯಾಡಿವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದರೂ ಜನಪ್ರತಿನಿಧಿಗಳಾಗಲೀ, ಇಲಾಖೆ ಅಧಿಕಾರಿಗಳಾಗಲೀ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸ್ಥಳೀಯರ ಟೀಕೆ.
ಹೆದ್ದಾರಿ ಇಲಾಖೆಗೆ ಸಂಬಂಧವಿಲ್ಲ
ಹೆದ್ದಾರಿಯಲ್ಲಿನ ಅಪಾಯಕಾರಿ ಹೊಂಡಗಳಿಂದ ನಿರಂತರ ಅಪಘಾತಗಳಾಗುತ್ತಿದ್ದು, ಕೂಡಲೇ ರಸ್ತೆ ದುರಸ್ತಿ ನಡೆಸುವಂತೆ ಮಲೆನಾಡು ಹಿತರಕ್ಷಣಾ ವೇದಿಕೆ ಸ್ಥಳೀಯರನ್ನು ಸಂಘಟಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಲಾಖೆಯ ಅಭಿಯಂತರರಿಗೆ ಈ ಬಗ್ಗೆ ಮನವಿ ನೀಡಿದಾಗ ದುರಸ್ತಿಗೆ ಎಲ್.ಎನ್.ಟಿ. ಕಂಪೆನಿಗೆ ಗುತ್ತಿಗೆ ನೀಡಿದ್ದು, ದುರಸ್ತಿಗೊಳಿಸುವುದು ಅವರಿಗೆ ಬಿಟ್ಟಿದ್ದು ಎಂದು ಉತ್ತರಿಸಿದ್ದಾರೆ. ಇದರಿಂದ ಹೆದ್ದಾರಿ ಇಲಾಖೆಗೂ ಇದಕ್ಕೂ ಸಂಬಂಧವೇ ಇಲ್ಲದಂತಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಹೆದ್ದಾರಿ ಬಂದ್‌ಗೆ ಸಿದ್ಧತೆ
ಹೆದ್ದಾರಿಯ ಹದಗೆಟ್ಟ ಪರಿಸ್ಥಿತಿ ಕುರಿತು ಜನಪ್ರತಿನಿಧಿಗಳು ಚಕಾರವೆತ್ತುತ್ತಿಲ್ಲ. ಇಲಾಖೆಯ ಅಧಿಕಾರಿಗಳಲ್ಲಿ ಈ ಬಗ್ಗೆ ಮನವಿ ಮಾಡಿದರೆ ದುರಸ್ತಿ ಕಾರ್ಯ ನಡೆಸಲು ಎಲ್.ಎನ್.ಟಿ. ಕಂಪೆನಿಗೆ ಗುತ್ತಿಗೆ ನೀಡಲಾಗಿದೆ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ. ಕೂಡಲೇ ಹೆದ್ದಾರಿಯ ಹೊಂಡಗಳನ್ನು ಮುಚ್ಚದಿದಲ್ಲಿ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಮಲೆನಾಡು ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಸಿದ್ದಾರೆ.
ಇಲಾಖೆ ಎಚ್ಚೆತ್ತಿಲ್ಲ
ಕೆಲವು ದಿನಗಳ ಹಿಂದೆ ಇದೇ ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಿದ್ದ ಬೈಕ್ ಸವಾರನೊಬ್ಬ ಹೊಂಡವನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ಸಂಭವಿಸಿದೆ. ಹಲವು ಬೈಕ್ ಸವಾರರು ಈ ಹೊಂಡಗಳ ಕಾರಣದಿಂದ ಅಪಘಾತಕ್ಕೀಡಾಗಿ ಕೈಕಾಲು ಮುರಿದುಕೊಂಡ ಘಟನೆಗಳಿವೆ. ಹಲವು ವಾಹನಗಳು ತಡರಾತ್ರಿ ಈ ಹೊಂಡಗಳಿಗೆ ಬಿದ್ದು, ಕೆಟ್ಟು ಗ್ಯಾರೇಜ್ ಸೇರುವ ಸ್ಥಿತಿ ನಿರ್ಮಾಣವಾಗಿದೆ. ಆದರೂ ಇಲಾಖೆ ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ದೂರುತ್ತಾರೆ ಸ್ಥಳೀಯರು.
– ಗುರುಮೂರ್ತಿ ಎಸ್. ಕೊಕ್ಕಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.