ಶಿರಾಡಿ – ಅಡ್ಡಹೊಳೆಯಲ್ಲಿ ನಕ್ಸಲರ ಸಂಚಾರ
Team Udayavani, Jan 16, 2018, 6:05 AM IST
ನೆಲ್ಯಾಡಿ: ಶಿರಾಡಿ ಗ್ರಾಮದ ಅಡ್ಡಹೊಳೆಯ ಅರಣ್ಯದಂಚಿನಲ್ಲಿರುವ ಮಿತ್ತಮಜಲಿನ ಮೂರು ಮನೆಗಳಿಗೆ ರವಿವಾರ ಸಂಜೆ 6.30ರ ಸುಮಾರಿಗೆ ನಾಲ್ವರು ಇದ್ದ ಶಂಕಿತ ನಕ್ಸಲರ ತಂಡ ವೊಂದು ಭೇಟಿ ನೀಡಿ ಮರಳಿದೆ.
ತಂಡದಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರಿದ್ದರು. ಅವರು ಕೋವಿ, ಗನ್‌ಗಳನ್ನು ಹೊಂದಿದ್ದರು ಎನ್ನಲಾಗಿದೆ.
ಮಿತ್ತಮಜಲಿನ ಮೋಹನ್, ಅವರ ತಂಗಿ ಲೀಲಾ ಹಾಗೂ ತಮ್ಮ ಸುರೇಶ್ ಅವರ ಮನೆಗಳು ಮಾತ್ರ ಪರಿಸರದಲ್ಲಿದ್ದು, ಮೂರೂ ಮನೆಗಳಿಗೆ ಅಪರಿಚಿತರ ತಂಡ ಭೇಟಿ ನೀಡಿ ದಿನಸಿ ಸಾಮಗ್ರಿಗಳನ್ನು ಕೇಳಿ ಪಡೆಕೊಂಡಿತು.
ದೋಸೆ ಮಾಡಿಸಿ ತಿಂದರು !
ಮನೆಯ ಹತ್ತಿರ ಬಂದವರೇ “ನಾವು ಕಾಡಿನಲ್ಲಿರುವ ನಕ್ಸಲರು; ನಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗ್ಳನ್ನು ಚಾರ್ಜ್ ಮಾಡಿಕೊಡಿ’ ಎಂದು ಮನೆಯವರಲ್ಲಿ ಕೇಳಿಕೊಂಡಿದ್ದಾರೆ. ನಮಗೆ ಹಸಿವಾಗುತ್ತಿದ್ದು ಮನೆಯಲ್ಲಿ ತಿನ್ನುವುದಕ್ಕೆ ಏನಿದೆ ಎಂದೂ ಕೇಳಿದ್ದಾರೆ. ಅಕ್ಕಿ ಕಡೆದಿಟ್ಟಿರುವುದು ಇದೆ ಎಂದು ತಿಳಿದಾಗ ದೋಸೆ ಮಾಡಿಕೊಡಿ ಎಂದು ಹೇಳಿ ಮಾಡಿಸಿ ತಿಂದಿದ್ದಾರೆ.
ಬಳಿಕ ನಕ್ಸಲರು ಸುರೇಶ್ ಅವರ ಮನೆಯಲ್ಲಿ ಊಟ ಮಾಡಿ ಹೋಗಿದ್ದಾರೆ ಎನ್ನುವ ಮಾಹಿತಿಯೂ ಲಭಿಸಿದೆ. ಮೂರೂ ಮನೆಗಳಿಂದ ಅಕ್ಕಿ, ಸಕ್ಕರೆ, ತರಕಾರಿ, ನೀರುಳ್ಳಿ ಮುಂತಾದ ತಮ್ಮ ಅಗತ್ಯದ ಸಾಮಗ್ರಿಗಳನ್ನು ಕೇಳಿ ಪಡೆದು ರಾತ್ರಿ ವೇಳೆ ಕಾಡಿನತ್ತ ಮರಳಿದರು ಅನ್ನುವ ಮಾಹಿತಿಯೂ ತಿಳಿದು ಬಂದಿದೆ.
ಗೊಂದಲ – ಅಸ್ಪಸ್ಟ ಮಾಹಿತಿ
ಶಂಕಿತ ನಕ್ಸಲರ ತಂಡ ಲೀಲಾ ಅವರ ಮನೆಗೆ ಬಂದು ದೋಸೆ ಮಾಡಿಸಿ ತಿಂದ ಬಳಿಕ ಕೂಡಲೇ ಸುರೇಶ್ ಅವರ ಮನೆಗೆ ಹೋಗಿ ಊಟವನ್ನೂ ಮಾಡಿ ಹೋಗಿದ್ದಾರೆ ಎನ್ನುವ ಗೊಂದಲದ ಹೇಳಿಕೆಗಳು ಹಾಗೂ ಈ ಬಗ್ಗೆ ಹಲವು ವದಂತಿಗಳಿಂದಾಗಿ ಪ್ರಕರಣವು ಗೊಂದಲಮಯವಾಗಿದೆ. ಹಿಂದೊಮ್ಮೆ ಕೊಕ್ಕಡದ ಸಮೀಪದ ಹತ್ಯಡ್ಕಕ್ಕೆ ನಕ್ಸಲರು ಬಂದುಹೋಗಿದ್ದಾರೆ ಎಂಬ ಸುದ್ದಿ ಹರಡಿ ಬಳಿಕ ಅದು ಸುಳ್ಳು ಸುದ್ದಿ ಎಂದು ಸಾಬೀತಾಗಿತ್ತು. ಪ್ರಾರಂಭದಲ್ಲಿ ಇದೂ ಕೂಡ ಹಾಗೆಯೇ ಆಗಿರಬಹುದು ಎನ್ನುವ ಕಾರಣದಿಂದಲೇ ತಡವಾಗಿ ಬೆಳಕಿಗೆ ಬರಲು ಕಾರಣವಾಗಿದೆ.
ನಕ್ಸಲರು ತಮ್ಮ ತಂಡದ ಇತರ ಸದಸ್ಯರು ಮೇಲಿನ ಗುಡ್ಡದಲ್ಲಿದ್ದಾರೆ ಎಂದೂ ತಿಳಿಸಿದ್ದಾರೆ. ಮಲಯಾಳ, ತಮಿಳು, ತುಳುವಿನಲ್ಲಿ ಮಾತನಾಡು ತ್ತಿದ್ದರು ಎನ್ನಲಾಗಿದೆ.
ತಡವಾಗಿ ಬೆಳಕಿಗೆ
ಶಂಕಿತ ನಕ್ಸಲರು ಭೇಟಿ ನೀಡಿ ಹೋದ ಬಳಿಕ ಮರುದಿನ ಮಧ್ಯಾಹ್ನದ ವರೆಗೂ ಈ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ. ಶಂಕಿತ ನಕ್ಸಲರು ತಾವು ತೆಗೆದುಕೊಂಡು ಹೋದ ವಸ್ತುಗಳಿಗೆ ಹಣ ನೀಡಿರುವುದು ಹಾಗೂ ತಮಗೆ ಯಾವುದೇ ತೊಂದರೆ ಉಂಟು ಮಾಡದಿರುವುದರಿಂದ ಯಾರೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರಲಾರರು; ಅಥವಾ ಶಿಕಾರಿಗೆ ಹೋದ ತಂಡ ಇದಾಗಿರ ಬಹುದು ಎಂದು ಭಾವಿಸಿದ್ದರಿಂ ದಲೂ ವಿಷಯ ತಡವಾಗಿ ಬೆಳಕಿಗೆ ಬಂದಿರ ಬಹುದು ಎನ್ನಲಾಗಿದೆ.
ಇಲಾಖಾ ಮಾಹಿತಿ
ನಾಲ್ವರು ಅನುಮಾನಾಸ್ಪದ ವ್ಯಕ್ತಿ ಗಳು ಭೇಟಿ ನೀಡಿರುವ ಘಟನೆ ನಡೆದಿದ್ದು ಮನೆಗಳಿಂದ ದಿನಸಿ ಸಾಮಗ್ರಿ ಕೊಂಡೊಯ್ದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ನಕ್ಸಲರ ಆಗಮನವಾಗಿರಲು ಸಾಧ್ಯವಿಲ್ಲ, ಶಿಕಾರಿಗೆಂದು ಹೋದ ಯಾರೋ ಭೇಟಿ ನೀಡಿರುವ ಸಾಧ್ಯತೆಯೇ ಹೆಚ್ಚು. ಬಂದವರು ತಮ್ಮ ಹೆಸರನ್ನು ಲತಾ, ರಾಜೇಶ್, ಹಾಗೂ ಪುರುಷೋತ್ತಮ ಎಂದು ಹೇಳಿಕೊಂಡಿದ್ದಾರೆ. ಆದರೆ ಅಂತಹಾ ಹೆಸರಿನವರು ನಕ್ಸಲರ ಪಟ್ಟಿಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.
ಶೋಧ: ಮಂಗಳವಾರ ಬೆಳಗ್ಗಿನಿಂದಲೇ ನಕ್ಸಲರಿಗೆ ಶೋಧ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.