ಬೆಳ್ತಂಗಡಿ ಸಂಚಾರಿ ಠಾಣೆಗೆ ಎಸ್‌ಐ ನೇಮಕ; ಮೂಲ ಸೌಲಭ್ಯಗಳಿಲ್ಲ
Team Udayavani, Jul 20, 2017, 5:30 AM IST
ಬೆಳ್ತಂಗಡಿ: ಹಲವಾರು ವರ್ಷಗಳಿಂದ ಬೇಡಿಕೆಯಲ್ಲಿದ್ದ ದ.ಕ.ಜಿಲ್ಲೆಯ ಅತಿ ದೊಡ್ಡ ತಾಲೂಕು ಬೆಳ್ತಂಗಡಿಗೆ ಸಂಚಾರಿ ಪೊಲೀಸ್ ಠಾಣೆ ಮಂಜೂರುಗೊಳಿಸಿದ ಸರಕಾರ ಈಗ ಎಸ್‌ಐಯನ್ನು ನೇಮಿಸಿದೆ. ಆದರೆ ಯಾವ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಬೇಕು, ಎಷ್ಟು ಮಂದಿ ಸಿಬಂದಿ ನಿಯೋಜಿಸಬೇಕು, ಠಾಣೆಗೆ ಬೇಕಾದ ಮೂಲ ಸೌಕರ್ಯಗಳ ಕುರಿತು ಇನ್ನಷ್ಟೇ ತೀರ್ಮಾನಿಸಬೇಕಿದೆ. ಆದ್ದರಿಂದ ಎಸ್‌ಐ ಮಾತ್ರ ಇರುವ ರಾಜ್ಯದ ಏಕೈಕ ಪೊಲೀಸ್ ಠಾಣೆ ಎಂಬ ಹೆಸರು ಬೆಳ್ತಂಗಡಿ ಸಂಚಾರಿ ಠಾಣೆಗೆ ಬರಲಿದೆ.
ಸಮಸ್ಯೆಗಳ ಸರಣಿ
ಧರ್ಮಸ್ಥಳ ಪೊಲೀಸ್ ಠಾಣೆ ಆರಂಭ ಗೊಂಡಿರುವುದರಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕಾರ್ಯನಿರ್ವಹಣೆಯ ಹೊರೆ ಕಡಿಮೆಯಾಗಿದ್ದರೂ, ಕಾನೂನು ಸುವ್ಯವಸ್ಥೆಯ ದೃಷ್ಟಿಯಲ್ಲಿ ಸಂಚಾರಿ ಪೊಲೀಸ್ ಠಾಣೆಯ ಬಗ್ಗೆ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಗುರುವಾಯನಕೆರೆಯಿಂದ ಉಜಿರೆಯವರೆಗೆ ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ ತಲೆದೋರಿತ್ತು. ಇದಲ್ಲದೆ ಹೆಲ್ಮೆಟ್‌ರಹಿತ ಪ್ರಯಾಣ, ದಾಖಲೆ, ಪರವಾನಿಗೆ ಇಲ್ಲದೆ ಕಾನೂನು ಉಲ್ಲಂ ಸುವವರ ಬಗ್ಗೆ ನಿಗಾ ವಹಿಸಲು ಸಿಬಂದಿ ಕೊರತೆ ಇತ್ತು. ಇದರ ನಡುವೆಯೂ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಪೊಲೀಸರು ಪ್ರಮುಖ ನಗರ ಕೇಂದ್ರಗಳಾದ ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಗುರುವಾಯನಕೆರೆಗಳಲ್ಲಿ ಸಂಚಾರಿ ನಿರ್ವಹಣೆ ಕರ್ತವ್ಯ ನಿರ್ವಹಿಸುತ್ತಿದ್ದರು. ಧರ್ಮಸ್ಥಳದಲ್ಲಿ ವಾರದಲ್ಲಿ ಮೂರು ದಿನ ಸಾವಿರಾರು ಮಂದಿ, ಕೆಲವೊಮ್ಮೆ ಲಕ್ಷಾಂತರ ಮಂದಿಯೂ ಭಕ್ತರ ಸಂದಣಿ ಇರುತ್ತದೆ. ಈ ಸಂದರ್ಭ ಇರುವ ಸೀಮಿತ ಸಂಖ್ಯೆಯ ಪೊಲೀಸರು ನಿಭಾಯಿಸಬೇಕಿದೆ.
ಮನವಿ
ಗೃಹಸಚಿವರಾಗಿದ್ದ ಡಾ| ಜಿ. ಪರಮೇಶ್ವರ್ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭ ಬೆಳ್ತಂಗಡಿಗೆ ಸಂಚಾರಿ ಪೊಲೀಸ್ ಠಾಣೆ ಅಗತ್ಯವಿರುವ ಬಗ್ಗೆ ಶಾಸಕ ವಸಂತ ಬಂಗೇರ ಅವರು ಮನವಿ ಮಾಡಿದ್ದರು. ಅನಂತರ ಎಸ್‌ಪಿ ಅವರ ಮುಖಾಂತರ ಸಲ್ಲಿಸಿದ ಪ್ರಸ್ತಾವನೆಗೆ ಸರಕಾರ ಮಂಜೂರಾತಿ ನೀಡಿದೆ. ಈಗಾಗಲೇ ಮಂಗಳೂರು, ಬಂಟ್ವಾಳ ಹಾಗೂ ಪುತ್ತೂರಿನಲ್ಲಿ ಸಂಚಾರಿ ಪೊಲೀಸ್ ಠಾಣೆ ಕಾರ್ಯಾಚರಿಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಉಜಿರೆಯನ್ನು ಕೇಂದ್ರೀಕರಿಸಿ ಬೆಳ್ತಂಗಡಿಯ ಸಂಚಾರಿ ಪೊಲೀಸ್ ಠಾಣೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಅಲ್ಲಿ ಹಾಗೆ
ಮೇಲ್ಕಾರ್‌ನಲ್ಲಿ ಟ್ರಾಫಿಕ್ ಪೋಲಿಸ್ ಠಾಣೆ ಆರಂಭವಾದಾಗ ಸಂಚಾರಿ ಉಪನಿರೀಕ್ಷಕ ಸೇರಿದಂತೆ 12 ಸಿಬಂದಿ ನೇಮಕದ ಕುರಿತಾಗಿ ಮಂಜೂರು ಆದೇಶದಲ್ಲಿ ಉಲ್ಲೇಖೀಸಲ್ಪಟ್ಟಿದ್ದರೂ ಆರಂಭವಾದಾಗ ಅಲ್ಲಿ ಕರ್ತವ್ಯದಲ್ಲಿರುವ ಹನ್ನೆರಡೂ ಮಂದಿಯೂ ಒಒಡಿಯಂತೆ ಓಡಿ ಬಂದಿದ್ದ ವಲಸಿಗರು. ಪ್ರಭಾರ ಸಂಚಾರಿ ಉಪನಿರೀಕ್ಷಕ, ಪುತ್ತೂರಿನಿಂದ 1, ಬೆಳ್ತಂಗಡಿಯಿಂದ 3, ಪೂಂಜಾಲಕಟ್ಟೆ 1, ಅಬಕಾರಿ ಮತ್ತು ಲಾಟರಿ ಜಾರಿಗೆ ದಳದಿಂದ 3, ಡಿಸಿಆರ್ ಬಿ ಯಿಂದ 1, ಡಿಸಿಐಬಿಯಿಂದ 1, ವೇಣೂರು ಠಾಣೆಯಿಂದ ಒಬ್ಬರನ್ನು ನಿಯೋಜಿಸಿ ವಲಸೆ ಸಿಬಂದಿಯಿಂದಲೇ ನೂತನ ಠಾಣೆಯನ್ನು ಭರ್ತಿ ಮಾಡಲಾಗಿತ್ತು.
ಇಲ್ಲಿ ಹೇಗೆ
ಬೆಳ್ತಂಗಡಿಯಲ್ಲಿ ಬೇಡಿಕೆಗೆ ಬೇಕಾಗುವಷ್ಟು ನೇಮಕಾತಿ ಮತ್ತು ವಾಹನದ ಪ್ರಾಮುಖ್ಯತೆಯನ್ನು ಮನಗಾಣಬೇಕಿದೆ. ಅತೀ ಅಗತ್ಯವಿರುವ ಕೆಲವು ವ್ಯವಸ್ಥೆಗಳನ್ನಾದರೂ ಮಾಡಿಯೇ ಸ್ಟೇಷನ್ ಉದ್ಘಾಟನೆ ಮಾಡಬೇಕು ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಠಾಣೆ ಮಂಜೂರಾಗಿಸುವಲ್ಲಿ ವಿಶೇಷ ಆಸ್ಥೆ ವಹಿಸಿದ ಶಾಸಕ ಬಂಗೇರ ಅವರೇ ಈ ಬಗ್ಗೆಯೂ ದೃಷ್ಟಿ ಹರಿಸಿದರೆ ಸಮಸ್ಯೆ ಬೇಗ ಬಗೆಹರಿಯಲು ಸಾಧ್ಯ.
ವೇಣೂರು ಎಸ್‌ಐ ನೇಮಕ
ಪ್ರಸ್ತುತ ವೇಣೂರು ಠಾಣೆಯಲ್ಲಿ ಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಲೋಲಾಕ್ಷ ಅವರನ್ನು ಮಂಗಳವಾರ ಸರಕಾರ ಬೆಳ್ತಂಗಡಿ ಸಂಚಾರಿ ಠಾಣೆ ಎಸ್‌ಐ ನೇಮಿಸಿ ಆದೇಶ ನೀಡಿದೆ. ಆದರೆ ಪೂರ್ಣಪ್ರಮಾಣದ ವ್ಯವಸ್ಥೆಗಳು ಆಗದೇ ಅವರು ಅಧಿಕಾರ ವಹಿಸಿಕೊಂಡರೂ ಬೆಳ್ತಂಗಡಿ ಠಾಣೆಯನ್ನೇ ಆಶ್ರಯಿಸಬೇಕಿದೆ. ಎಸ್‌ಪಿಯವರು ಸಂಚಾರಿ ಠಾಣೆಯ ಇತರ ವ್ಯವಸ್ಥೆಗಳ ಕುರಿತು ಗಮನಹರಿಸಬೇಕಿದೆ. ಸಿಬಂದಿ ಸಂಖ್ಯೆ, ಯಾವ ಠಾಣೆಯಿಂದ ಯಾರು ನಿಯೋಜನೆ ಇತ್ಯಾದಿ ಎಲ್ಲ ಚಟುವಟಿಕೆಗಳೂ ಇನ್ನಷ್ಟೇ ನಡೆಯಬೇಕಿದೆ.
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.