ಸಿದ್ಧಾರ್ಥ್ ವಿ.ಜಿ. ಸಾವು; 3 ದಿನಗಳಲ್ಲಿ ತನಿಖೆ ಪೂರ್ಣ: ಸೂಚನೆ
Team Udayavani, Aug 2, 2019, 9:36 AM IST
ಮಂಗಳೂರು: ಕಾಫಿ ಡೇ ಮಾಲಕ ಸಿದ್ಧಾರ್ಥ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮೂರು ದಿನಗಳಲ್ಲಿ ಪೂರ್ಣಗೊಳಿಸುವಂತೆ ತನಿಖಾ ತಂಡಕ್ಕೆ ಸೂಚನೆ ನೀಡಲಾಗಿದೆ ಎಂದು ಕಮಿಷನರ್ ಸಂದೀಪ್ ಪಾಟೀಲ್ ಹೇಳಿದ್ದಾರೆ.
ತನಿಖೆಗೆ ನಾಲ್ಕು ತನಿಖಾ ತಂಡ ಗಳನ್ನು ರಚಿಸಲಾಗಿತ್ತು. ಈಗ ಸಿದ್ಧಾರ್ಥ್ ಶವವಾಗಿ ಪತ್ತೆಯಾಗಿರುವುದರಿಂದ ಮೊದಲ ಎರಡು ತಂಡಗಳ ಅಗತ್ಯವಿಲ್ಲ. ಉಳಿದ ಎರಡರ ಪೈಕಿ ಒಂದು ತಂಡ ಬೆಂಗಳೂರಿಗೆ ತೆರಳಿದ್ದು, ಕುಟುಂಬ ಮತ್ತು ಉದ್ಯಮದ ಬಗ್ಗೆ ತನಿಖೆ ನಡೆಸಲಿದೆ. ಇನ್ನೊಂದು ತಂಡ ತಾಂತ್ರಿಕ ತನಿಖೆ ಕೈಗೆತ್ತಿಕೊಳ್ಳಲಿದೆ ಎಂದು ಗುರುವಾರ ತಿಳಿಸಿದರು.
ಪತ್ರ ವಶಕ್ಕೆ
ಮಂಗಳೂರಿಗೆ ಆಗಮಿಸುವ ಮುನ್ನ ಸಿದ್ಧಾರ್ಥ್ ಬರೆದ ಪತ್ರದಲ್ಲಿ ಐಟಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದರು. ಈಗ ಪತ್ರವನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ಪತ್ರದ ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬಳಿಕ ಪತ್ರದ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು. ಪತ್ರಕ್ಕೆ ಸಂಬಂಧಿಸಿ ಇದುವರೆಗೆ ಐಟಿ ಅಧಿಕಾರಿಗಳಿಗೆ ತನಿಖಾ ನೋಟಿಸ್ ನೀಡಿಲ್ಲ ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದರು.
ಹಣಕಾಸು ಸಲಹೆಗಾರರ ತನಿಖೆ
ಸಿದ್ಧಾರ್ಥ್ ಹಣಕಾಸು ಸಲಹೆಗಾರ ರಿಂದ ಮಾಹಿತಿ ಪಡೆಯಲಾಗುವುದು. ಪ್ರಮುಖ ಸಲಹೆಗಾರರು ವಿದೇಶ ದಲ್ಲಿದ್ದು, ಅವರು ಸ್ವದೇಶಕ್ಕೆ ಬಂದ ಬಳಿಕ ವಿಸ್ತೃತ ಮಾಹಿತಿಯನ್ನು ಪಡೆಯಲಾಗುವುದು. ಇನ್ನೂ ಎರಡು ಮೂರು ಮಂದಿ ಹಣಕಾಸು ಸಲಹೆಗಾರರಿಗೆ ತನಿಖೆಗೆ ಸಹಕಾರ ನೀಡುವಂತೆ ಸೂಚನೆ ನೀಡಲಾಗಿದೆ ಎಂಬುದಾಗಿ ಆಯುಕ್ತರು ಮಾಹಿತಿ ನೀಡಿದ್ದಾರೆ.
ಮಂಗಳೂರು ಎಸಿಬಿ ತಂಡ ಬೆಂಗಳೂರಿಗೆ ತೆರಳಿ ಸಿದ್ಧಾರ್ಥ್ ಅವರ ಕುಟುಂಬ ಮತ್ತು ಆಪ್ತರನ್ನು ಭೇಟಿ ಮಾಡಿ ತನಿಖೆ ನಡೆಸಲಾಗಿದೆ. ಮೂರು ದಿನದಲ್ಲಿ ತನಿಖೆ ಪೂರ್ತಿಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಮಂಗಳೂರಿನಲ್ಲಿ ದಕ್ಷಿಣ ಎಸಿಪಿ ಕೋದಂಡರಾಮ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸಿದ್ಧಾರ್ಥ್ ಕಾರು ಚಾಲಕನನ್ನು ವಿಚಾರಣೆ ನಡೆಸಲಾಗಿದೆ. ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಿಂದ ಪಂಪ್‌ವೆಲ್‌ಗೆ
ಬಂದ ಬಳಿಕ ಎಲ್ಲಿಗೆ ಹೋಗಿದ್ದರು ಮತ್ತು ನೇತ್ರಾವತಿ ಸೇತುವೆಯಿಂದ ನಾಪತ್ತೆ ಆದಲ್ಲಿಯವರೆಗಿನ ಎಲ್ಲ ಮಾಹಿತಿಗಳನ್ನು ಪಡೆಯಲಾಗಿದೆ ಎಂದು ಕಮಿಷನರ್ ಹೇಳಿದ್ದಾರೆ.
ಇಂದು ಮರಣೋತ್ತರ ವರದಿ?
ಸಿದ್ಧಾರ್ಥ್ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ವೆನಾಕ್ ಆಸ್ಪತ್ರೆಯಲ್ಲಿ ಬುಧವಾರ ನಡೆಸಲಾಗಿದೆ. ಇದರ ವರದಿಯನ್ನು 30 ದಿನಗಳೊಳಗೆ ಆಸ್ಪತ್ರೆಯ ಅಧೀಕ್ಷಕರಿಗೆ ಸಲ್ಲಿಸಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದರು. ಆದರೆ ಪೊಲೀಸ್ ಮೂಲಗಳ ಪ್ರಕಾರ, ವರದಿ ಆ.2 ರಂದು ಸಲ್ಲಿಕೆಯಾಗುವ ಸಾಧ್ಯತೆ ಇದೆ. ಮುಂದಿನ ತನಿಖಾ ದೃಷ್ಟಿಯಿಂದ ಈ ವರದಿ ಮಹತ್ವ ಪಡೆದುಕೊಂಡಿದೆ.
ಆತ್ಮಹತ್ಯೆ?
ಸಿದ್ಧಾರ್ಥ್ ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗಿರು ವಂತೆಯೇ ಅವರದು ಆತ್ಮಹತ್ಯೆಯೇ ವಿನಾ ಕೊಲೆ ಆಗಿರಲಾರದು ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಈ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ. ಸಿದ್ಧಾರ್ಥ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅವರು ನದಿಗೆ ಟೀ ಶರ್ಟ್ ತೆಗೆದು ಜಿಗಿದಿರಬಹುದು. ಟೀ ಶರ್ಟ್ ಧರಿಸಿ ಹಾರಿದರೂ ಬಳಿಕ ಅದು ಸಡಿಲವಾಗಿ ದೇಹದಿಂದ ಕಳಚಿಹೋಗಿರಬಹುದು. ಟೀ ಶರ್ಟ್ ಇಲ್ಲದಿರುವುದನ್ನು ಮುಂದಿಟ್ಟುಕೊಂಡು ಆತ್ಮಹತ್ಯೆ ಅಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಾಗದು ಎಂಬ ತರ್ಕವನ್ನು ಪೊಲೀಸರು ಮುಂದಿಡುತ್ತಿದ್ದಾರೆ ಎನ್ನಲಾಗಿದೆ.
ಮುಂದುವರಿದ ಅನುಮಾನ
ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ವಿ.ಜಿ. ಅವರ ನಿಗೂಢ ಸಾವಿನ ಬಗ್ಗೆ ತನಿಖೆ ಮುಂದುವರಿದಿದೆ. ಆದರೆ ನಿಗೂಢತೆಗೆ ತೆರೆ ಬಿದ್ದಿಲ್ಲ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಸಿದ್ದಾರ್ಥ್ ಸಾವಿನ ಸುತ್ತ ಅನುಮಾನಗಳೂ ಹುಟ್ಟಿಕೊಂಡಿವೆ. ಜು.29 ರಂದು ಉಳ್ಳಾಲ ಸೇತುವೆ ಬಳಿ ಕಾರಿನಿಂದ ಇಳಿದು ವಾಕಿಂಗ್ ಹೋಗುವಾಗ ಅವರು ಟಿಶರ್ಟ್ ಧರಿಸಿದ್ದರು ಎಂದು ಹೇಳಲಾಗುತ್ತಿದ್ದು, ಜು. 31ರಂದು ಅವರ ಮೃತದೇಹ ಹೊಯಿಗೆ ಬಜಾರ್ ಸಮೀಪ ಪತ್ತೆಯಾದಾಗ ದೇಹದಲ್ಲಿ ಟಿಶರ್ಟ್ ಇರಲಿಲ್ಲ. ಜು. 29ರಂದು ಬೆಂಗಳೂರಿನಿಂದ ಮಂಗಳೂರಿಗೆ ಬರುವ ಸಂದರ್ಭದಲ್ಲಿ ಸಂಜೆ 5.28ಕ್ಕೆ ಅವರ ಕಾರು ಬಿ.ಸಿ. ರೋಡ್ ಟೋಲ್‌ಗೇಟ್ ದಾಟಿದೆ. ಆದರೆ ಉಳ್ಳಾಲ ಸೇತುವೆ ಬಳಿ ತಲಪುವಾಗ ಸಂಜೆ 6.30 ಕಳೆದಿದೆ. ಕಾರಿನಲ್ಲಿ ಪ್ರಯಾಣಿಸುವಾಗ ಬಿ.ಸಿ. ರೋಡ್‌ನಿಂದ ಪಂಪ್‌ವೆಲ್‌ಗೆ 20 ನಿಮಿಷ ಮತ್ತು ಅಲ್ಲಿಂದ ಉಳ್ಳಾಲ ಸೇತುವೆ ಬಳಿಗೆ ತಲುಪಲು 5 ನಿಮಿಷ ಸಾಕು. ಹಾಗಾದರೆ ಅವರು ಉಳ್ಳಾಲ ಸೇತುವೆ ಬಳಿ ತಲುಪಲು ಸುಮಾರು ಒಂದೂವರೆ ಗಂಟೆ ಕಾಲಾವಕಾಶ ತೆಗೆದುಕೊಂಡದ್ದು ಏಕೆ ಎನ್ನುವುದು ರಹಸ್ಯವಾಗಿ ಉಳಿದಿದೆ. ಇಷ್ಟೇ ಅಲ್ಲದೆ ಅವರು ತಮ್ಮ ಬದುಕಿನ ಕೊನೆಯ ಅವಧಿಯಲ್ಲಿ ಮಂಗಳೂರಿಗೆ ಬಂದದ್ದೇಕೆ ಎನ್ನುವುದು ಕೂಡ ನಿಗೂಢವಾಗಿದೆ. ಇವೆಲ್ಲ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.