ತಲಪಾಡಿ ಪಂಚಾಯತ್‌ಗೆ ಗ್ರಾಮಸ್ಥರಿಂದ ಮುತ್ತಿಗೆ
Team Udayavani, Aug 9, 2018, 11:38 AM IST
ತಲಪಾಡಿ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲಂಕಾರುಗುಡ್ಡೆ, ಮಕ್ಯಾರು ರಸ್ತೆ ಅವ್ಯವಸ್ಥೆ ಹಾಗೂ ಇದರಿಂದ ಗ್ರಾಮಸ್ಥರಿಗೆ, ಶಾಲಾ ಮಕ್ಕಳಿಗೆ ಆಗುತ್ತಿರುವ ತೊಂದರೆಯನ್ನು ಮುಂದಿಟ್ಟು ಸ್ಥಳೀಯರು ಪ್ರತಿಭಟನೆ ನಡೆಸಿ ತಲಪಾಡಿ ಗ್ರಾಮ ಪಂಚಾಯತ್ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದರು.
ಸುಮಾರು 50ಕ್ಕೂ ಅಧಿಕ ಮನೆಗಳಿರುವ ಮಕ್ಯಾರು ಪ್ರದೇಶಕ್ಕೆ 100 ವರ್ಷಗಳ ಇತಿಹಾಸವಿರುವ ಕಾಲುದಾರಿಯಿತ್ತು. ಕ್ರಮೇಣ ಅಭಿವೃದ್ಧಿ ಆಗುತ್ತಿದ್ದಂತೆ 25 ವರ್ಷಗಳ ಹಿಂದೆ ರಸ್ತೆಯನ್ನು ವಿಸ್ತರಿಸಿ ವಾಹನಗಳು ತೆರಳುವ ರಸ್ತೆಯಾಗಿ ಮಾರ್ಪಾಡು ಮಾಡಲಾಯಿತು. ಈಗ 1 ಕಿ.ಮೀ. ಉದ್ದದ ರಸ್ತೆ ಇಡೀ ಹೊಂಡಗಳಿಂದ ಕೂಡಿದೆ. ಗ್ರಾಮ ಸಭೆಗಳಲ್ಲಿ, ವಾರ್ಡ್ ಸಭೆಗಳಲ್ಲಿ ಗ್ರಾಮಸ್ಥರು ಹಲವು ಬಾರಿ ಜ್ವಲಂತ ಸಮಸ್ಯೆಯ ಕುರಿತು ಗಮನಹರಿಸುವಂತೆ ಒತ್ತಾಯಿಸಿದರು. ಪಂಚಾಯತ್ ಅಧಿಕಾರಿಗಳಾಗಲಿ, ಆಡಳಿತ ಸಮಿತಿಯಾಗಲಿ, ವಾರ್ಡ್ ಸದಸ್ಯರಾಗಲಿ ಯಾವುದೇ ಮುತುವರ್ಜಿ ವಹಿಸಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.
ಗ್ರಾಮಸ್ಥ ಸತ್ಯೇಂದ್ರ ಮಾತನಾಡಿ, ಮಕ್ಯಾರು ಪ್ರದೇಶ ಮೂಲ ಸೌಕರ್ಯಗಳಿಂದ ಕಡೆಗಣಿಸಲ್ಪಟ್ಟಿದೆ. ಜನಪ್ರತಿನಿಧಿಗಳು ಪ್ರದೇಶವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಪ್ರತಿಭಟನೆಯ ಮೂಲಕ ಸಂಬಂಧಪಟ್ಟ ಇಲಾಖೆ ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಗ್ರಾಮಸ್ಥ ಭಾಸ್ಕರ್ ದೇವಾಡಿಗ ಮಾತನಾಡಿ, ಸಮಸ್ಯೆಯ ಬಗ್ಗೆ ಪಂಚಾಯತ್‌ಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ತಲಪಾಡಿಯ ಪ್ರಮುಖ ರಸ್ತೆ ಇದಾಗಿದ್ದರು ಈ ವರೆಗೆ ಅಭಿವೃದ್ಧಿಗೆ ಅನುದಾನವನ್ನು ಮೀಸಲು ಇರಿಸಲು ಸಾಧ್ಯವಾಗಿಲ್ಲ. ವೀಕ್ಷಣೆಗೆಂದು ಹಲವು ಬಾರಿ ಸಚಿವರು ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತುರ್ತಾಗಿ ಜಲ್ಲಿ ಹುಡಿ ಹಾಕಿಯಾದರು ಪಂಚಾಯತ್ ಆಡಳಿತ ಸಹಕರಿಸಬೇಕು ಎಂದರು. ವಿದ್ಯಾರ್ಥಿನಿ ಸ್ವಾತಿ, ಗ್ರಾಮಸ್ಥ ಇಸ್ಮಾಯಿಲ್ ಅವರು ಮಾತನಾಡಿದರು.
ಪಂಚಾಯತ್‌ಗೆ ಮುತ್ತಿಗೆ
ಮಕ್ಯಾರು ಗ್ರಾಮಸ್ಥರು ಪ್ರತಿಭಟನೆಯ ಬಳಿಕ ತಲಪಾಡಿ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದರು. ತತ್‌ಕ್ಷಣವೇ ರಸ್ತೆ ದುರಸ್ತಿ ನಡೆಸಿಕೊಡುವಂತೆ ಆಗ್ರಹಿಸಿದರು ಅಭಿವೃದ್ಧಿ ಅಧಿಕಾರಿಗಳು ಪ್ರತಿಭಟನೆಕಾರರನ್ನು ಸಮಾಧಾನಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ವಾರ್ಡ್‌ನ ಸದಸ್ಯರು ಹಾಗೂ ಪಂಚಾಯತ್ ಅಧ್ಯಕ್ಷರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.
ಶೀಘ್ರ ಅಭಿವೃದ್ಧಿ
ಹಿಂದೆ ಇದ್ದಂತಹ ಕಾಲುದಾರಿಯನ್ನು ವಿಸ್ತರಿಸಿದ ಹಿನ್ನೆಲೆಯಲ್ಲಿ ಅಲ್ಲಿ ಜಾಗ ಖರೀದಿಸಿದ ಖಾಸಗಿ ವ್ಯಕ್ತಿಯೋರ್ವರು ಗ್ರಾ.ಪಂ. ವಿರುದ್ಧವೇ ದಾವೆ ಹೂಡಿದ್ದರಿಂದ ಅಭಿವೃದ್ಧಿ ಸಾಧ್ಯವಾಗಿಲ್ಲ. ಶೀಘ್ರದಲ್ಲೇ ರಸ್ತೆ ಅಭಿವೃದ್ಧಿಗೆ ಕ್ರಮ ಗೊಳ್ಳಲಾಗುವುದು.
– ಸುರೇಶ್ ಆಳ್ವ, ಅಧ್ಯಕ್ಷ, ತಲಪಾಡಿ ಪಂಚಾಯತ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.