ಅಣ್ಣನ ಕೊಲೆಗೆ ಸುಪಾರಿ ನೀಡಿದ ತಂಗಿ !
Team Udayavani, Apr 30, 2017, 11:48 AM IST
ಮಂಗಳೂರು: ಕೊಣಾಜೆಯ ಅಸೈಗೋಳಿಯಲ್ಲಿ 6 ತಿಂಗಳ ಹಿಂದೆ ನಡೆದ ಬಹಳಷ್ಟು ಕುತೂಹಲ ಮತ್ತು ರಾಜಕೀಯ ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಫಜೀರು ಸುದರ್ಶನ ನಗರದ ಕಾರ್ತಿಕ್ ರಾಜ್ ಕೊಲೆಗೆ ಸಂಬಂಧಿಸಿ ಮೃತನ ತಂಗಿ ಸಹಿತ ಮೂವರನ್ನು ಬಂಧಿಸುವ ಮೂಲಕ ಪೊಲೀಸರು ಕೊನೆಗೂ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ತಿಕ್‌ರಾಜ್‌ನ ತಂಗಿ ಕಾವ್ಯಶ್ರೀ (25), ಕುತ್ತಾರು ಸಂತೋಷನಗರದ ಗೌತಮ್ (26) ಮತ್ತು ಆತನ ಸೋದರ ಗೌರವ್ (19) ಬಂಧಿತ ಆರೋಪಿಗಳು. ಮೂವರು ಆರೋಪಿಗಳನ್ನು ತೊಕ್ಕೊಟ್ಟಿನಲ್ಲಿ ಬಂಧಿಸಿ ಅವರು ಕೃತ್ಯಕ್ಕೆ ಉಪಯೋಗಿಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣದ ಹಿನ್ನೆಲೆ
ಕಾರ್ತಿಕ್ ರಾಜ್ 2016 ಅ. 22ರಂದು ಬೆಳಗ್ಗೆ 5.30ಕ್ಕೆ ಎಂದಿನಂತೆ ಜಾಗಿಂಗ್‌ಗೆ ಹೋಗಿದ್ದ ಸಂದರ್ಭ ಅಸೈಗೋಳಿಯಲ್ಲಿ ಕೊಣಾಜೆ ಪೊಲೀಸ್ ಠಾಣೆ ಸಮೀಪ ರಸ್ತೆಯಲ್ಲಿ ಅವರ ಗಮನವನ್ನು ಬೇರೆಡೆಗೆ ಸೆಳೆದು ಬಲವಾದ ಆಯುಧದಿಂದ ತಲೆಗೆ ಹೊಡೆದು ಗಾಯಗೊಳಿಸಲಾಗಿತ್ತು. ತೀವ್ರವಾಗಿ ಗಾಯಗೊಂಡು ಬಿದ್ದಿದ್ದ ಅವರನ್ನು ಸಾರ್ವಜನಿಕರು ಮತ್ತು ಕೊಣಾಜೆ ಪೊಲೀಸರ ಸಹಾಯದಿಂದ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ
ಸ್ವರೂಪದ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅ. 23ರಂದು ಅವರು ಸಾವನ್ನಪ್ಪಿದ್ದರು. ಕಾರ್ತಿಕ್‌ರಾಜ್ ಬಿಜೆಪಿ ಕಾರ್ಯಕರ್ತರೂ ಆಗಿದ್ದ ರಿಂದ ಈ ಪ್ರಕರಣ ಕುತೂಹಲ ಕೆರಳಿಸಿತ್ತು.
ಬಹಳಷ್ಟು ಶ್ರಮಿಸಿದ್ದರೂ ಪ್ರಕರಣದ ಆರೋಪಿಗಳ ಪತ್ತೆಯಾಗಿರಲಿಲ್ಲ. ಬಳಿಕ ಸಿಸಿಆರ್‌ಬಿ ಘಟಕದ ಎಸಿಪಿ ವೆಲೆಂಟೈನ್ ಡಿ’ಸೋಜಾ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಪ್ರಕರಣದ ಬಗ್ಗೆ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಕೂಲಂಕುಷ ಮಾಹಿತಿಯನ್ನು ಕಲೆ ಹಾಕಿದಾಗ ಖಾಸಗಿ ಆಸ್ಪತ್ರೆಯ ಉದ್ಯೋಗಿಯಾಗಿರುವ ಮೃತ ಕಾರ್ತಿಕ್ ರಾಜ್‌ನ ತಂಗಿ ಕಾವ್ಯಶ್ರೀ ಅದೇ ಆಸ್ಪತ್ರೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿರುವ ಗೌತಮ್ ಹಾಗೂ ಆತನ ಸಹೋದರ ಎಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿ ಗೌರವ್ ಅವರು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡು ಅವರನ್ನು ವಶಕ್ಕೆ ಪಡೆದು ಬಂಧಿಸಿತು ಎಂದು ಕಮಿಷನರ್ ವಿವರಿಸಿದರು.
5 ಲಕ್ಷ ರೂ.ಗಳಿಗೆ ಸುಪಾರಿ
ಕಾರ್ತಿಕ್‌ರಾಜ್‌ನನ್ನು ಕೊಲೆ ಮಾಡಿದರೆ ಕಾವ್ಯಶ್ರೀ ಆರೋಪಿಗಳಾದ ಗೌತಮ್ ಮತ್ತು ಗೌರವ್‌ಗೆ 5 ಲಕ್ಷ ರೂ. ನೀಡುವುದಾಗಿ ಭರವಸೆಯಿತ್ತಿದ್ದಳು. ಗೌತಮ್ ಮಾಡೂರು ಕೊಂಡಾಣ ಬಳಿ ಹೊಸ ಮನೆ ಕಟ್ಟಿಸುತ್ತಿದ್ದು, ಆರ್ಥಿಕ ಅಡಚಣೆಯಿಂದ ಬಳಲುತ್ತಿದ್ದನು. ಆತನಿಗೆ ಹಣದ ಆವಶ್ಯಕತೆ ಇರುವುದನ್ನು ಮನಗಂಡು ಕಾವ್ಯಶ್ರೀ ಹಣದ ಆಮಿಷವೊಡ್ಡಿ ಕೃತ್ಯ ಎಸಗುವಂತೆ ಪ್ರೇರೇಪಿಸಿದ್ದಳು. ಸುಲಭ ದಾರಿಯಲ್ಲಿ ಹಣಸಿಗುತ್ತದೆ ಎಂದು ಯೋಚಿಸಿ ಗೌತಮ್ ತನ್ನ ಸೋದರನ ಜತೆಗೂಡಿ ಕಾರ್ತಿಕ್ ಕೊಲೆ ಮಾಡಿದ್ದಾನೆ. ಆದರೆ ಕಾವ್ಯಶ್ರೀ ಭರವಸೆ ನೀಡಿದಂತೆ 5 ಲಕ್ಷ ರೂ. ಸುಪಾರಿ ಹಣ ಗೌತಮ್ ಕೈಗೆ ಇನ್ನೂ ಲಭಿಸಿಲ್ಲ ಎಂದು ವಿವರಿಸಿದರು.
ವಿವಾಹಿತೆ ಕಾವ್ಯಶ್ರೀ
ಕಾವ್ಯಶ್ರೀಗೆ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ಪತಿ ವಿದೇಶದಲ್ಲಿದ್ದಾರೆ. ಆದರೆ ಅವರೊಳಗೆ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ ಹಾಗೂ ಕಾವ್ಯಶ್ರೀ ಪತಿಯ ಮನೆಗೆ ಹೋ ಗದೆ ತವರಿನಲ್ಲಿಯೇ ಉಳಿದುಕೊಂಡಿದ್ದಳು. ಇತ್ತ ಮನೆಯಲ್ಲಿ ಕಾರ್ತಿಕ್‌ರಾಜ್ ಮತ್ತು ಕಾವ್ಯಶ್ರೀ ಮಧ್ಯೆ ವೈಮನಸ್ಸು ಬೆಳೆದಿತ್ತು. ಅದುವೇ ಅಣ್ಣನ ಕೊಲೆಗೆ ಕಾರಣವಾಯಿತು. ಕಾವ್ಯಶ್ರೀ ಮತ್ತು ಗೌತಮ್ ಮಧ್ಯೆ ಖಾಸಗಿ ಆಸ್ಪತ್ರೆಯಲ್ಲಿ ಸಹೋದ್ಯೋಗಿಗಳು ಎನ್ನುವುದನ್ನು ಹೊರತು ಪಡಿಸಿ ಬೇರೆ ಸಂಬಂಧ ಏನಾದರೂ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಕಮಿಷನರ್ ಹೇಳಿದರರು. ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಕೊಣಾಜೆ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.
ಪ್ರತಿಭಟನೆ, ಆರೋಪ, ಪ್ರತ್ಯಾರೋಪ
ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳಿಂದ ಆರೋಪಿಗಳ ಬಂಧನಕ್ಕಾಗಿ ಎರಡು ಬಾರಿ ಪ್ರತಿಭಟನೆಗಳು ನಡೆದಿದ್ದವು. ರಾಜಕೀಯ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಕೆಲವು ಸಂಘಟನೆಗಳು ಆರೋಪಿಗಳ ಪತ್ತೆಗೆ ಪೊಲೀಸರಿಗೆ ಗಡುವನ್ನೂ ನೀಡಿದ್ದವು. ಪ್ರತಿಭಟನ ಸಭೆಯೊಂದರಲ್ಲಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಅವರು ಆರೋಪಿಗಳನ್ನು ಬಂಧಿಸದಿದ್ದರೆ “ಜಿಲ್ಲೆಗೆ ಬೆಂಕಿ ಹಾಕಬೇಕಾದೀತು’ ಎಂಬ ವಿವಾದಿತ ಹೇಳಿಕೆಯನ್ನೂ ನೀಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೂ ಮೃತ ಕಾರ್ತಿಕ್ ರಾಜ್ ಮನೆಗೆ ಭೇಟಿ ನೀಡಿದ್ದರು.
ಸ್ಥಳೀಯ ಶಾಸಕ ಹಾಗೂ ಸಚಿವ ಯು.ಟಿ. ಖಾದರ್ ಈ ಪ್ರದೇಶದಲ್ಲಿ ನಡೆಯುವ ಅಹಿತಕರ ಘಟನೆಗಳ ಬಗ್ಗೆ ಏನೂ ಮಾಡುವುದಿಲ್ಲ ಎಂದು ಆರೋಪಿಸಲಾಗಿತ್ತು. ಸ್ವತಃ ಕಾರ್ತಿಕ್ ರಾಜ್ ತಂದೆ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು. ತನಿಖೆಗಾಗಿ ಎನ್‌ಐಎ ತಂಡದವರೂ ಆಗಮಿಸಿದ್ದರು. ಈ ಕೊಲೆ ಕೃತ್ಯದ ಹಿನ್ನೆಲೆಯಲ್ಲಿ ಕೇರಳದ ಭಯೋತ್ಪಾದಕ ಸಂಘಟನೆಯ ಕೈವಾಡ ಇದೆ ಎಂದು ಆರೋಪಿಸಲಾಗಿತ್ತು. ಆರೋಪಿಗಳನ್ನು ಪತ್ತೆ ಮಾಡಿದವರಿಗೆ ಒಂದು ಲಕ್ಷ ರೂ.ಗಳನ್ನು ನೀಡುವುದಾಗಿ ಮಹನೀಯರೊಬ್ಬರು ಪ್ರಕಟಿಸಿದ್ದರು.
ವಿಶೇಷ ತಂಡದ ಸಾಧನೆ
ಸಿಸಿಆರ್‌ಬಿ ಘಟಕದ ಎಸಿಸಿ ವೆಲೆಂಟೈನ್ ಡಿ’ಸೋಜಾ ನೇತೃತ್ವದ ವಿಶೇಷ ತಂಡ ಈ ಪ್ರಕರಣವನ್ನು ಭೇದಿಸಿದೆ. ದಕ್ಷಿಣ ಉಪವಿಭಾಗದ ಎಸಿಪಿ ಶ್ರುತಿ, ಕೊಣಾಜೆ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್, ಪಾಂಡೇಶ್ವರ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಸುನಿಲ್ ಕುಮಾರ್, ಮಂಗಳೂರು ಗ್ರಾಮಾಂತರ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ದಾಮೋದರ, ಕಾನ್‌ಸ್ಟೆಬಲ್‌ಗಳಾದ ರಿಜಿ ವಿ.ಎಂ. (ಕೊಣಾಜೆ), ಸುಧೀರ್ ಶೆಟ್ಟಿ (ಬಜಪೆ), ಮನೋಜ್ ಕುಮಾರ್ ಮತ್ತು ಮಹಮದ್ ಇಕ್ಬಾಲ್ (ಟ್ರಾಫಿಕ್ ಉತ್ತರ ಠಾಣೆ) ಅವರು ಈ ವಿಶೇಷ ತಂಡದಲಿದ್ದರು.
– 25,000 ರೂ. ಬಹುಮಾನ
ಪ್ರಕರಣ ಪತ್ತೆಹಚ್ಚಿದ ಎಸಿಪಿ ವೆಲೆಂಟೈನ್ ನೇತೃತ್ವದ ತಂಡಕ್ಕೆ 25,000 ರೂ. ಬಹು ಮಾನವನ್ನು ಕಮಿಷನರ್ ಪ್ರಕಟಿಸಿದರು.
– ಟಫ್ ಮ್ಯಾಚ್
ನಮಗೆ ಇದೊಂದು ಟಫ್ ಮ್ಯಾಚ್ ಆಗಿತ್ತು. ಮ್ಯಾಚನ್ನು ಸವಾಲಾಗಿ ಸ್ವೀಕರಿಸಿ ವೃತ್ತಿಪರ ಪೊಲೀಸಿಂಗ್ ವಿಧಾನ ಮತ್ತು ಬುದ್ಧಿಮತ್ತೆಯಿಂದ ಈ ಪತ್ತೆ ಕಾರ್ಯ ಸಾಧ್ಯವಾಗಿದೆ. ಸಾವಿರ ಕೋಟಿ ರೂ. ಮೌಲ್ಯದ ಕೆಲಸವನ್ನು ನಾವು ಮಾಡಿದ್ದೇವೆ. 1 ಲಕ್ಷ ರೂ. ಘೋಷಿ ಸಿದವರ ಹಣ ನಮಗೆ ಬೇಡ ಎಂದು ಕಮಿಷನರ್ ಚಂದ್ರಶೇಖರ್ ವಿವರಿಸಿದರು.
– ಗಡುವು ನೀಡಿಕೆ ಸರಿಯಲ್ಲ
ಸ್ಥಳದಲ್ಲಿ ಯಾವುದೇ ಸುಳಿವು ಇಲ್ಲದ ಇಂತಹ ಪ್ರಕರಣಗಳ ಪತ್ತೆಗೆ ಗಡುವು ವಿಧಿಸುವುದು ಸರಿಯಲ್ಲ. ಯಾವುದೇ
ಶಾರ್ಟ್ ಕಟ್ ಬೇಡ, ನೈಜ ಆರೋಪಿಗಳನ್ನು ಬಂಧಿಸ ಬೇಕು; ಸಾಕಷ್ಟು ಸಮಯಾವಕಾಶ ತಗೊಳ್ಳಿ ಎಂದು ಸೂಚಿಸಿದ್ದೆ ಎಂದರು.
– ಜನರ ಸಹಕಾರ ಬೇಕು
ಪ್ರಕರಣದ ಬಗ್ಗೆ ಕೆಲವರಿಗೆ ಮಾಹಿತಿ ಇದ್ದರೂ ಪೊಲೀಸರಿಗೆ ತಿಳಿಸಲು ಯಾರೂ ಮುಂದಾಗಿಲ್ಲ. ಮಾಹಿತಿ ಒದಗಿಸಿ ಸಹಾಯ ಮಾಡಿದ್ದರೆ ಪ್ರಕರಣವನ್ನು ಭೇದಿಸಲು 6 ತಿಂಗಳು ಬೇಕಿರಲಿಲ್ಲ. ಪೊಲೀಸರೇ ಸುಳಿವುಗಳನ್ನು ಪತ್ತೆಹಚ್ಚಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಇಂಥವರೇ ನೈಜ ಆರೋಪಿಗಳು ಎಂಬುದಾಗಿ ಇದಮಿತ್ಥಂ ನಿರ್ಧಾರಕ್ಕೆ ಬರ ಬೇಕಾಯಿತು. ಪೊಲೀಸರ ಮೇಲೆ ವಿಶ್ವಾಸ ಇರಿಸಿ ಮಾಹಿತಿ ನೀಡಿ ಜನರು ಸಹಕರಿಸಬೇಕು. ಮಾಹಿತಿದಾರರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು ಎಂದು ಕಮಿಷನರ್ ಮನವಿ ಮಾಡಿದರು.
– ಹೊಸ ಮನೆ ನಿರ್ಮಾಣ
ಆರೋಪಿ ಗೌತಮ್ ಮಾಡೂರು ಸಮೀಪದ ಕೊಂಡಾಣದಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದು, ಗೃಹ ಪ್ರವೇಶ ಸಮಾರಂಭವನ್ನು ಮೇ 1ರಂದು ನಿಗದಿ ಪಡಿಸಿ ಆಹ್ವಾನ ಪತ್ರಿಕೆಯನ್ನು ಈಗಾಗಲೇ ವಿತರಿಸಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.