ನಕ್ಸಲ್ ಯಲ್ಲಪ್ಪ ಎನ್‌ಕೌಂಟರ್‌ಗೆ ಆರು ವರ್ಷ!
Team Udayavani, Sep 5, 2018, 10:30 AM IST
ಸುಬ್ರಹ್ಮಣ್ಯ: ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ದ.ಕ. ಜಿಲ್ಲೆಯ ಪುತ್ತೂರು ತಾಲೂಕು ಹಾಗೂ ಬಿಸಿಲೆ ಗಡಿಭಾಗದಲ್ಲಿ ನಡೆದ ಈ ಭಾಗದ ಮೊದಲ ನಕ್ಸಲ್ ಎನ್ ಕೌಂಟರ್‌ಗೆ ಆರು ವರ್ಷ ಸಂದಿದೆ. 2012ರ ಸೆ. 4ರಂದು ಬಾಗಿಮಲೆ ಅರಣ್ಯದಲ್ಲಿ ನಡೆದ ಎಎನ್‌ಎಪ್ ಎನ್‌ಕೌಂಟರ್ ನಲ್ಲಿ ನಕ್ಸಲ್ ಸದಸ್ಯ ರಾಯಚೂರಿನ ಯಲ್ಲಪ್ಪ (39) ಬಲಿಯಾಗಿದ್ದು, ರಕ್ತಸಿಕ್ತ ಹೋರಾಟಕ್ಕೆ ಒಂದು ಹಂತದ ನಾಂದಿ ಹಾಡಿತ್ತು. 2012ರಲ್ಲಿ ಆ. 30 ಮತ್ತು 31ರಂದು ಮೊದಲ ಬಾರಿಗೆ ಈ ಭಾಗಕ್ಕೆ ಪ್ರವೇಶ ಪಡೆದ 9 ಮಂದಿ ಸಶಸ್ತ್ರ ನಕ್ಸಲರು, ಪಳ್ಳಿಗದ್ದೆಯ ನಾಲ್ಕು ಮನೆಗಳಿಗೆ ಭೇಟಿ ನೀಡಿದ್ದರು. ಅಡ್ಡಹೊಳೆ, ಚೇರು, ಭಾಗ್ಯ, ಎರ್ಮಾಯಿಲ್ ನಡುತೋಟ ಮೊದಲಾದೆಡೆ ಓಡಾಡಿದ್ದರು. ಈ ಮನೆಗಳಿಂದ ಆಹಾರ ಸಾಮಗ್ರಿ ಪಡೆದು ಮರಳಿದ್ದರು. ತಾವು ಭೇಟಿ ನೀಡಿದ ವಿಚಾರವನ್ನು ಯಾರಿಗೂ ತಿಳಿಸಬಾರದೆಂದು ತಾಕೀತು ಮಾಡಿದ್ದರು. ಬಾಯಿಬಿಟ್ಟರೆ ಕೊಲ್ಲುವ ಬೆದರಿಕೆ ಒಡ್ಡಿದ್ದರು. ಆದರೆ, ಈ ಮಾಹಿತಿ ಅದು ಹೇಗೋ ಪೊಲೀಸರಿಗೆ ತಲುಪಿ, ಉನ್ನತ ಅಧಿಕಾರಿಗಳ ತಂಡ ಹಾಗೂ ನಿಗ್ರಹ ಪಡೆ ಯೋಧರು ಆಗಮಿಸಿ, ದಟ್ಟ ಅರಣ್ಯಗಳಲ್ಲಿ ಕೂಂಬಿಂಗ್ ನಡೆಸಿದ್ದರು.
ಸೆ. 1ರಂದು ಪಳ್ಳಿಗದ್ದೆ ಸಮೀಪದ ಅರಣ್ಯದಲ್ಲಿ ಎಎನ್‌ಎಫ್ ಮತ್ತು ನಕ್ಸಲ್ ತಂಡದ ಸದಸ್ಯರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಅಂದು ಕೂದಲೆಳೆಯ ಅಂತರದಿಂದ ನಕ್ಸಲರು ಪಾರಾಗಿದ್ದರು. ಬಳಿಕ ನಕ್ಸಲ್ ನಿಗ್ರಹ ಪಡೆಯ ಯೋಧರು ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಪಶ್ಚಿಮ ಘಟ್ಟ ತಪ್ಪಲಿನ ದ.ಕ. ಮತ್ತು ಬಿಸಿಲೆ ಗಡಿ ಭಾಗದ ಕಾಡುಗಳಲ್ಲಿ ನಕ್ಸಲರಿಗಾಗಿ ತೀವ್ರ ಶೋಧ ನಡೆಸಿದ್ದರು.
ಎಎನ್‌ಎಫ್ ಅಧಿಕಾರಿಯಾಗಿದ್ದ ಅಲೋಕ್ ಕುಮಾರ್ ನೇತೃತ್ವದಲ್ಲಿ ಸೆ. 4ರಂದು ಬಿಸಿಲೆಯ ಬಾಗಿಮಲೆ ಅರಣ್ಯದೊಳಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕೋಟೆಸಾರ್ ಎಂಬಲ್ಲಿ ನಕ್ಸಲರೊಂದಿಗೆ ಭಾರೀ ಪ್ರಮಾಣದ ಗುಂಡಿನ ಚಕಮಕಿ ನಡೆಯಿತು. ಈ ಹೋರಾಟದಲ್ಲಿ ನಕ್ಸಲ್ ತಂಡದ ಸದಸ್ಯ ರಾಯಚೂರಿನ ಯಲ್ಲಪ್ಪ ಅಸುನೀಗಿದ.
ಇತ್ತಿಚಿನ ತನಕ ಓಡಾಟವಿತ್ತು
ಪಶ್ಚಿಮ ಘಟ್ಟದ ತಪ್ಪಲಿನ ಜನವಸತಿ ಇರುವ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಸಕ್ರಿಯವಾಗಿತ್ತು. ಶಿರಾಡಿ ಅಡ್ಡಹೊಳೆ, ಕಡಮಕಲ್ಲು, ಕುಲ್ಕುಂದ, ಸುಬ್ರಹ್ಮಣ್ಯ, ಮಡಪ್ಪಾಡಿ, ಸಂಪಾಜೆ, ಮಡಿಕೇರಿ, ಗಾಳಿಬೀಡು, ವನಚ್ಚಿಲ್ ಮೊದಲಾದ ಮೀಸಲು ಅರಣ್ಯಗಳಲ್ಲಿ ನಕ್ಸಲರು ಆಗಾಗ್ಗೆ ಕಾಣಿಸಿಕೊಂಡಿದ್ದರು. ಇತ್ತೀಚಿನ ತನಕವೂ ಈ ಭಾಗದಲ್ಲಿ ನಕ್ಸಲರು ಓಡಾಡಿ ಸುದ್ದಿಯಲ್ಲಿದ್ದರು. ಮೂರು ಜಿಲ್ಲೆಗಳಿಗೆ ಹೊಂದಿಕೊಂಡಿರುವ ಕಾಡು ಹಾಸನ-ಕೊಡಗು ಜಿಲ್ಲೆಗಳಿಗೆ ನಕ್ಸಲರು ಸಂಚರಿಸಲು, ಪೊಲೀಸರ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಹೇಳಿ ಮಾಡಿಸಿದಂತಿದೆ. ಇದನ್ನು ಅಡಗುದಾಣ ಮಾಡಿಕೊಳ್ಳಲು ನಕ್ಸಲರು ಯತ್ನಿಸಿದ್ದರು.
ಪರಿಹಾರ ಮರೀಚಿಕೆ
ಪಳ್ಳಿಗದ್ದೆಯ ನಾಲ್ಕು ಮನೆಗಳಿಗೆ ಸರಕಾರ ಜಿಲ್ಲಾಡಳಿತದ ಮೂಲಕ ರಕ್ಷಣೆ, ನಿವೇಶನ, ಸವಲತ್ತು, ಭದ್ರತೆ ಒದಗಿಸುವ ಭರವಸೆ ನೀಡಿದ್ದರು. ಕೆಲ ದಿನ ಪೊಲೀಸರ ಬೂಟು, ವಾಹನಗಳು ಇವರ ಮನೆ ಪರಿಸರದಲ್ಲಿ ಸದ್ದು ಮಾಡಿದ್ದು ಬಿಟ್ಟರೆ ರಕ್ಷಣೆಯೂ ಇಲ್ಲ, ಬದುಕಿಗೆ ನೆಲೆಯೂ ಇಲ್ಲದಾಗಿದೆ. ಇನ್ನು ಕುಟುಂಬಗಳ ಬದುಕಿಗೆ ಶಾಶ್ವತ ಪರಿಹಾರ ದೊರಕಿಲ್ಲ ಎಂಬುದು ಸ್ಥಳೀಯರ ಅಳಲು.
ಅನನುಭವಿ ಯಲಪ್ಪ
ನಕ್ಸಲ್ ಯಲ್ಲಪ್ಪ ಎನ್‌ಕೌಂಟರ್ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಆತ ಕೆಲವು ದಿನಗಳ ಹಿಂದಷ್ಟೇ ನಕ್ಸಲ್ ಸಂಘಟನೆಗೆ ಸೇರಿಕೊಂಡಿದ್ದ. ಸರಕಾರ ಈ ಎನ್‌ಕೌಂಟರನ್ನು ಸಮರ್ಥಿಸಿಕೊಂಡಿತ್ತು. ಈ ವೇಳೆ ಕೆಲ ಮಾನವ ಹಕ್ಕು ಹೋರಾಟಗಾರರು ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ಅಪಸ್ವರ ಎತ್ತಿದ್ದರು. ನಕ್ಸಲ್ ಸದಸ್ಯನ ನೆತ್ತರು ಹರಿದಿದ್ದರಿಂದ ಈ ಭಾಗದಲ್ಲಿ ಹೋರಾಟಕ್ಕೆ ಹಿನ್ನಡೆಯಾಯಿತು.
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.