ಅಂತರ್ಜಲ ವೃದ್ಧಿಗೆ ಕಿಂಡಿ ಅಣೆಕಟ್ಟು
Team Udayavani, Nov 20, 2018, 3:05 AM IST
ಪುತ್ತೂರು: ಹರಿದು ಹೋಗುವ ನೀರನ್ನು ನಿಲ್ಲಿಸುವ, ನಿಲ್ಲುವ ನೀರನ್ನು ಇಂಗಿಸುವ ಕುರಿತು ಜನರಿಗೆ ಅರಿವು ಹೆಚ್ಚಾಗುತ್ತಿದೆ. ಕಿಂಡಿ ಅಣೆಕಟ್ಟುಗಳ ಮೂಲಕ ಅಂತರ್ಜಲದ ಮಟ್ಟವನ್ನು ಏರಿಸುವ ಜಾಗೃತಿ ರೈತವರ್ಗದಲ್ಲಿ ಮೂಡಿದೆ. ಸಾಮಾನ್ಯವಾಗಿ ಜನವರಿ ಬಳಿಕ ನಡೆಯುತ್ತಿದ್ದ ಈ ಪ್ರಕ್ರಿಯೆಗಳು ಈ ಬಾರಿ ನವೆಂಬರ್ ತಿಂಗಳಲ್ಲೇ ಕಾಣಿಸಿಕೊಂಡಿರುವುದು ಇದಕ್ಕೆ ಸಾಕ್ಷಿ. ಹಿಂದೆ ಹಳ್ಳಿಗಳಲ್ಲಿನ ರೈತರು ಮಣ್ಣಿನ ಕಟ್ಟಗಳನ್ನು ನಿರ್ಮಾಣ ಮಾಡುತ್ತಿದ್ದರು. ಅದರಿಂದ ಅಂತರ್ಜಲದ ಮಟ್ಟ ವೃದ್ಧಿಸುವ ಮೂಲಕ ಕೃಷಿಗೆ ಸಹಾಯಕವಾಗುತ್ತಿತ್ತು. ಭತ್ತದ ಕೃಷಿಯಿಂದ ರೈತರು ವಿಮುಖರಾಗುತ್ತಿದ್ದಂತೆ ಮಣ್ಣಿನ ಕಟ್ಟಗಳು ರೈತರಿಂದ ದೂರವಾದವು. ಆದರೆ ನೀರಿನ ಮಹತ್ವದ ಕುರಿತು ಸರಕಾರವೇ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಅವಕಾಶ ನೀಡಿತು. ಪ್ರಸ್ತುತ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಅನುದಾನವನ್ನೂ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದ್ದು, ಪ್ರತಿಯೊಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಕನಿಷ್ಠ 5 ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವಂತೆ ಗುರಿ ನಿಗದಿಪಡಿಸಿದೆ.
ಕಿಂಡಿ ಅಣೆಕಟ್ಟುಗಳ ನಿರ್ಮಾಣ
ತಾಲೂಕಿನ 41 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಮಹತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಳೆದ ವರ್ಷ 65 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಈ ವರ್ಷ 10 ಕಿಂಡಿ ಅಣೆಕಟ್ಟುಗಳು ಸೇರಿ ಒಟ್ಟು 75 ನಿರ್ಮಾಣಗೊಂಡಿವೆ. ಸಣ್ಣ ನೀರಾವರಿ ಇಲಾಖೆ ಮತ್ತು ಜಲಾನಯನ ಇಲಾಖೆ ಪ್ರತ್ಯೇಕವಾಗಿದ್ದ ಸಂದರ್ಭದಲ್ಲಿಯೂ ಸುಮಾರು ಇಷ್ಟೇ ಪ್ರಮಾಣದ ಕಿಂಡಿ ಅಣೆಕಟ್ಟುಗಳ ನಿರ್ಮಾಣವಾಗಿತ್ತು. ಇದಕ್ಕೆ ಕೆಲವು ಕಡೆಗಳಲ್ಲಿ ಮಾತ್ರ ಹಲಗೆ ಅಳವಡಿಸಲಾಗುತ್ತಿದೆ.
ಬಹಳ ಪ್ರಯೋಜನ
ತೋಟ, ಗದ್ದೆಗಳು ಇರುವ ಗ್ರಾಮಾಂತರ ಭಾಗದಲ್ಲಿ ಸಣ್ಣ ತೋಡುಗಳು, ತೊರೆ, ಕಣಿ, ಹೊಳೆಗಳು ಹರಿಯುತ್ತವೆ. ಡಿಸೆಂಬರ್, ಜನವರಿ ತನಕ ಇಲ್ಲಿ ಹರಿಯುವ ನೀರಿಗೆ ತಡೆಕಟ್ಟಿದರೆ ನೀರು ಶೇಖರಣೆಗೊಂಡು ಇಂಗುವಿಕೆ ಜತೆಗೆ ಸುತ್ತಲಿನ ಪರಿಸರದಲ್ಲಿರುವ ತೋಟಗಳಿಗೂ ಪ್ರಯೋಜನವಾಗುತ್ತದೆ. ಮುಂದೆ ನೀರಿನ ಕೊರತೆಯಾದರೆ ಶೇಖರಣೆಗೊಂಡ ನೀರಿನ ಪರಿಣಾಮದ ಲಾಭ ಸುತ್ತಲಿನ ತೋಟ, ಬಾವಿ, ಕೊಳವೆ ಬಾವಿಗಳಿಗೆ ಸಿಗುತ್ತದೆ.
ಸಾಂಪ್ರದಾಯಿಕ ಕ್ರಮ
ಅಡಿಕೆ ಸಹಿತ ತೋಟಗಳ ಬೆಳೆಯನ್ನು ಬೆಳೆಯುವ ರೈತರು ಹಿಂದಿನಿಂದಲೇ ಇಂತಹ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ತೋಟದ ಮಧ್ಯೆ ಇರುವ ಕಣಿಗಳಲ್ಲಿ ಮಣ್ಣಿನ ತಡೆಯೊಡ್ಡಿ ನೀರು ನಿಲ್ಲಿಸುವ ಯೋಜನೆಯಿಂದ ಪ್ರಯೋಜನ ಪಡೆಯುವಲ್ಲಿ ಅವರು ಯಶಸ್ಸಿಯಾಗಿದ್ದಾರೆ. ಆದ್ದರಿಂದ ಬೆಳೆಗಾರರಿಗೆ ಇದು ಸಾಂಪ್ರದಾಯಿಕ ಕ್ರಮ. ಜಲಸಾಕ್ಷರತೆಯತ್ತ ರೈತವರ್ಗದ ಜಾಗೃತಿಯಿಂದ ಗ್ರಾಮೀಣ ಭಾಗದಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಾಣದ ಜತೆಗೆ ನೀರು ಉಳಿಸುವ, ನೀರು ಇಂಗಿಸುವ ಕಾಯಕದತ್ತ ಮುಖಮಾಡಿರುವುದು ಆಶಾದಾಯಕ ಬೆಳವಣಿಗೆೆಯಾಗಿದೆ.
ಒಸರಿನ ಪ್ರಮಾಣ ಹೆಚ್ಚಿದೆ
ಕಳೆದ ವರ್ಷ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 2.92 ಲಕ್ಷ ರೂ. ವೆಚ್ಚದಲ್ಲಿ ಬನ್ನೂರು ಗ್ರಾ.ಪಂ. ಮೂಲಕ ಕಿಂಡಿ ಅಣೆಕಟ್ಟು ನಿರ್ಮಿಸಿ ಹಲಗೆ ಅಳವಡಿಸಿದ್ದೇನೆ. ಅಡಿಕೆ ತೋಟಕ್ಕೆ ಹೆಚ್ಚು ಪ್ರಯೋಜನವಾಗಿದೆ. ಸುತ್ತಮುತ್ತಲ ಹಲವು ರೈತರ ಕೃಷಿಗೆ ಹಾಗೂ ಕೊಳವೆ ಬಾವಿಗಳಿಗೂ ಇದರ ಪ್ರಯೋಜನ ಕಂಡುಬಂದಿದೆ. ಈ ಬಾರಿ ಒಸರಿನ ಪ್ರಮಾಣ ಹೆಚ್ಚು ಕಂಡುಬಂದಿರುವುದರಿಂದ ಮಾರ್ಚ್ ತನಕ ತೋಟಕ್ಕೆ ನೀರು ಸಾಕಾಗಬಹುದು.
– ಕೃಷ್ಣಪ್ಪ ಗೌಡ ಕೆಮ್ಮಾಯಿ ಕೃಷಿಕರು
ಈ ಬಾರಿಯಿಂದ ಸಿಮೆಂಟ್ ಹಲಗೆ
ಉದ್ಯೋಗ ಖಾತರಿ ಯೋಜನೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 75 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಇನ್ನೂ ಬೇಡಿಕೆ ಬರುತ್ತಿದೆ. 2 ವೆಂಟ್ ನಿರ್ಮಿಸಿದರೆ ಕೂಲಿ ಹಾಗೂ ಕೂಲಿಯೇತರ ವೆಚ್ಚವಾಗಿ ಗರಿಷ್ಠ 5 ಲಕ್ಷ ರೂ. ತನಕ ಉದ್ಯೋಗ ಖಾತರಿಯಲ್ಲಿ ಅನುದಾನ ನೀಡಲು ಸಾಧ್ಯವಾಗುತ್ತದೆ. ಈ ಬಾರಿ ಮರದ ಹಲಗೆಯ ಬದಲು ಸಿಮೆಂಟ್ ಹಲಗೆ ಅಳವಡಿಕೆ ಮಾಡುತ್ತಿದ್ದೇವೆ. ಇದು ಹೆಚ್ಚು ವರ್ಷ ಬಾಳಿಕೆ ಬರಬಹುದು. ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬಹುದು.
– ನವೀನ್ ಭಂಡಾರಿ, ಸ. ನಿರ್ದೇಶಕರು, ತಾ.ಪಂ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
— ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.