ಹಾವುಹಿಡಿಯುತ್ತ, ಆಟೊ ಓಡಿಸುತ್ತಿದ್ದ ವ್ಯಕ್ತಿ ಬರೆದ ಲೇಖನ ಪದವಿ ಪಾಠ!
Team Udayavani, Jul 7, 2017, 3:50 AM IST
ಮಂಗಳೂರು: ಹತ್ತನೇ ತರಗತಿ ಪಾಸ್ ಮಾಡಲು ಸಾಧ್ಯವಾಗದೆ ಆಟೋ ರಿಕ್ಷಾ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಜನಸಾಮಾನ್ಯನೊಬ್ಬ ಬರೆದಿರುವ ಲೇಖನವೊಂದು ಇದೀಗ ಮಂಗಳೂರು ವಿಶ್ವವಿದ್ಯಾಲಯದ ಬಿಕಾಂ ವಿದ್ಯಾರ್ಥಿಗಳಿಗೆ ಪಾಠವಾಗಿದೆ. ಆ ಮೂಲಕ, ಕಾಲೇಜು ಮೆಟ್ಟಿಲು ಹತ್ತದ ಸಾಮಾನ್ಯ ವ್ಯಕ್ತಿಯ ಬರಹಗಳು ಪದವಿ ವಿದ್ಯಾರ್ಥಿಗಳಿಗೆ ಪಠ್ಯ ವಿಷಯವಾಗಿವೆ!
ಹೌದು, ಉರಗ ತಜ್ಞರಾಗಿ ಕರಾವಳಿ ಭಾಗದಲ್ಲಿ ಜನಪ್ರಿಯರಾಗಿರುವ ಉಡುಪಿಯ ಗುರುರಾಜ್ ಸನಿಲ್ ಅವರೇ ಇಂಥದೊಂದು ಸಾಧನೆ ಮಾಡಿದ ವ್ಯಕ್ತಿ. ಕಡುಬಡತನದಲ್ಲಿ ಉಡುಪಿಯ ತೆಂಕಪೇಟೆಯಲ್ಲಿ ಹುಟ್ಟಿ ಬೆಳೆದ ಗುರುರಾಜ್ ಬಡತನದಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗದೆ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದವರು. ಉರಗಗಳ ಬಗೆಗಿನ ಅವರ ವಿಶೇಷ ಪ್ರೀತಿ ಅವರನ್ನು ಉರಗ ತಜ್ಞನನ್ನಾಗಿ ಮಾಡಿತು. ಬಳಿಕ ಅವರು ಉರಗಗಳಿಂದ ತನಗಾದ ಅನುಭವಗಳನ್ನೆಲ್ಲ ದಾಖಲಿಸಿಕೊಂಡು ಒಟ್ಟು ಆರು ಪುಸ್ತಕಗಳನ್ನು ಬರೆದರು.
ಇದೀಗ ಅವರು ಬರೆದಿರುವ ‘ನಾಗಬೀದಿಯೊಳಗಿಂದ’ ಕೃತಿಯಿಂದ ಆಯ್ದ ‘ನಮ್ಮ ನಂಬಿಕೆ ನಾಗನಿಗೆ ವರವೇ ಶಾಪವೇ?’ ಎಂಬ ಲೇಖನ ಪಠ್ಯಪುಸ್ತಕದಲ್ಲಿ ಅಡಕವಾಗಿದೆ. ಮಂಗಳೂರು ವಿ.ವಿ.ಯು ಪ್ರೊ| ಬಿ. ಶಿವರಾಮ ಶೆಟ್ಟಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಬಿ.ಕಾಂ. ಪದವಿಗಾಗಿ ಸಿದ್ಧಗೊಳಿಸುತ್ತಿರುವ ‘ಜೇನು ಹುಟ್ಟು’ ಪಠ್ಯಪುಸ್ತಕದಲ್ಲಿ ಇವರ ಈ ಲೇಖನವು 10ನೇ ಪಾಠವಾಗಿ ಸೇರ್ಪಡೆಗೊಂಡಿದೆ.
ಸಾಮಾನ್ಯವಾಗಿ ಪಿಎಚ್‌ಡಿ ಪದವೀಧರರು, ಖ್ಯಾತ ಲೇಖಕರು, ಸಾಹಿತಿಗಳು ಬರೆದ ಲೇಖನ-ಬರಹಗಳು ಪಠ್ಯ ಪುಸ್ತಕಕ್ಕೆ ಆಯ್ಕೆಗೊಳ್ಳುವುದು ಕೂಡ ಅಷ್ಟೇನು ಸುಲಭವಿಲ್ಲ. ಹೀಗಿರುವಾಗ ಪ್ರೌಢ ಶಿಕ್ಷಣವನ್ನೂ ಪೂರ್ಣಗೊಳಿಸಲು ಸಾಧ್ಯವಾಗದೆ ಇದ್ದ ಗುರುರಾಜ್ ಬರೆದ ಪುಸ್ತಕವೊಂದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ಪದವಿ ಕನ್ನಡ ಪಠ್ಯ ಪುಸ್ತಕಕ್ಕೆ ಸೇರ್ಪಡೆಗೊಂಡಿರುವುದು ವಿಶೇಷ. ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಪದವಿ ಹಂತದಲ್ಲೇ ಗಟ್ಟಿಕೊಳ್ಳಬೇಕೆಂಬ ಉದ್ದೇಶದಿಂದ ಈ ಬಾರಿಯ ಪಠ್ಯದಲ್ಲಿ ಗುರುರಾಜ್ ಲೇಖನಗಳನ್ನು ಆಯ್ದುಗೊಳ್ಳಲಾಗಿದೆ ಎನ್ನುತ್ತಾರೆ ಪಠ್ಯ ಪುಸ್ತಕದ ಸಂಪಾದಕ ಶಿವರಾಮ ಶೆಟ್ಟಿ.
ನಾಗಾರಾಧನೆ ಆಚರಣೆಯು ಬರಬರುತ್ತಾ ತನ್ನ ಮೂಲ ಉದ್ದೇಶವನ್ನು ಮರೆತಂತಿದೆ. ಇದರಿಂದ ಸ್ವಾಭಾವಿಕ ನಾಗ ಬನಗಳು ನಾಶವಾಗಿ ಕಾಂಕ್ರೀಟಿ ಕೃತ ನಾಗ ಭವನಗಳು ತಲೆಯೆತ್ತುತ್ತಿವೆ. ಪ್ರಕೃತಿಯ ಸಮತೋಲನದಲ್ಲಿ ಇದೊಂದು ಗಂಭೀರ ವಿಚಾರ. ಇಂತಹ ಅನಾಹುತಗಳ ಸರಮಾಲೆಯನ್ನೇ ಈ ಲೇಖನ ಒಳಗೊಂಡಿದೆ. ಜತೆಗೆ, ನಾಗಾರಾಧನೆ ಎಂದರೆ ಏನು ಎಂಬ ವಾಸ್ತವಾಂಶವನ್ನು ತಿಳಿಸುತ್ತದೆ.
ಹಾವು ಹಿಡಿಯುವ ಕಾಯಕ
ಗುರುರಾಜ್ ಬಾಲಕನಾಗಿದ್ದಾಗ ಶಿಕ್ಷಕರೋರ್ವರು ಶಾಲೆಯಲ್ಲಿ ಹೆಬ್ಟಾವೊಂದನ್ನು ಸಾಕುತ್ತಿದ್ದರು. ಆಗ ಮೂಡಿದ ಕುತೂಹಲವು ಅವರನ್ನು ಹಾವುಗಳ ಜೀವನ ಕ್ರಿಯೆಯ ಅಭ್ಯಾಸಕ್ಕೆ ಪ್ರೇರೇಪಿಸಿತ್ತು. ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಹೊಟ್ಟೆಪಾಡಿಗಾಗಿ ಮುಂಬಯಿಯ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಬಳಿಕ ಉಡುಪಿಗೆ ಬಂದು ರಿಕ್ಷಾ ಓಡಿಸುವ ಕಾಯಕ ಆರಂಭಿಸಿದರು. ಆಗೊಮ್ಮೆ ಈಗೊಮ್ಮೆ ಜನವಸತಿ ಪ್ರದೇಶದಲ್ಲಿ ಹಾವು ಕಾಣಿಸಿದಾಗ ಅದನ್ನು ಹಿಡಿದು ಸುರಕ್ಷಿತ ಗಕ್ಕೆ ತಂದು ಬಿಡುತ್ತಿದ್ದರು. ಮುಂದೆ ಹಾವು ಹಿಡಿಯುವುದೇ ವೃತ್ತಿಯಾಗಿ ಜೀವನಕ್ಕೂ ದಾರಿಯಾಯಿತು.
20,000ಕ್ಕೂ ಅಧಿಕ ಹಾವುಗಳ ರಕ್ಷಣೆ
ಕಳೆದ 25 ವರ್ಷಗಳಲ್ಲಿ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದ್ದ ಸುಮಾರು 20,000ಕ್ಕೂ ಅಧಿಕ ಹಾವುಗಳನ್ನು ಹಿಡಿದು ಸಂರಕ್ಷಿಸಿದ ದಾಖಲೆ ಅವರದ್ದು. ಆ ಪೈಕಿ 58 ಕಾಳಿಂಗ ಸರ್ಪಗಳೂ ಸೇರಿವೆ. ಈ ರೀತಿ ಹಾವುಗಳ ಬಗ್ಗೆ ತನಗಿರುವ ಅನುಭವಗಳನ್ನು ಲೇಖನ ರೂಪವಾಗಿ ಬರೆದು ‘ಹಾವು ನಾವು’, ‘ದೇವರ ಹಾವು’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’ ಹಾಗೂ ‘ವಿಷಯಾಂತರ’ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಮಧುರ ಚಿನ್ನ’ ದತ್ತಿನಿಧಿ ಪುಸ್ತಕ ಪ್ರಶಸ್ತಿ ಕೂಡ ಲಭಿಸಿದೆ. ವಿಶೇಷ ಅಂದರೆ ಗುರುರಾಜ್ ಬರೆದಿದ್ದ ಚೊಚ್ಚಲ ಕೃತಿಗೇ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪುರಸ್ಕೃತರಾಗಿದ್ದಾರೆ. ತನ್ನ ಜೀವನವನ್ನೇ ಪರಿಸರ ಹಾಗೂ ಉರಗಗಳಿಗೆ ಮೀಸಲಿಟ್ಟ ಇವರು ಅನೇಕ ಬಾರಿ ಹಾವಿನಿಂದ ಕಡಿಸಿಕೊಂಡು ಕೋಮಾ ಸ್ಥಿತಿಗೂ ತಲುಪಿದ್ದು ಕೂಡ ಇದೆ.
ಪರಿಸರ ಸೇವೆಗೆ ಸಂದ ಗೌರವ
‘ಕಾಲೇಜು ಕಲಿತವರಿಗೆ ಪದವಿ ಮಾನದಂಡವಿದೆ. ಸಂಶೋಧಕರಿಗೆ ಪಿಎಚ್‌ಡಿ ಮಾನದಂಡವಿದೆ. ನಾನು ಪ್ರಕೃತಿಯೊಂದಿಗೆ ಒಡನಾಡಿ ಕಲಿತವ. ಉರಗಗಳೊಂದಿಗಿನ ನನ್ನ ಅನುಭವಗಳನ್ನೇ ಬರೆದ ಲೇಖನವೊಂದು ವಿಶ್ವವಿದ್ಯಾನಿಲಯದ ಪಠ್ಯ ಪುಸ್ತಕದಲ್ಲಿ ಸೇರ್ಪಡೆಯಾಗಿರುವುದು ಖುಷಿ ತಂದಿದೆ. ಇದು ನನ್ನ ಪರಿಸರ ಸೇವೆಗೆ ಸಂದ ಗೌರವವಾಗಿದ್ದು, ನನಗೆ ಅತ್ಯುತ್ತಮ ಪ್ರಶಸ್ತಿ ಪಡೆದಷ್ಟು ಹೆಮ್ಮೆಯಾಗಿದೆ. ವಿದ್ಯಾರ್ಥಿಗಳು ಇದರಿಂದ ಸ್ಫೂರ್ತಿ ಪಡೆದು ಪರಿಸರಾಸಕ್ತಿ ಬೆಳೆಸಿಕೊಂಡರೆ ನನ್ನ ಶ್ರಮ ಸಾರ್ಥಕವಾಗುತ್ತದೆ.’
– ಗುರುರಾಜ್ ಸನಿಲ್
‘ಸಂಶೋಧನಾತ್ಮಕ, ಸಾಹಿತ್ಯಾತ್ಮಕ ಪಠ್ಯಗಳು ಸಾಕಷ್ಟು ಪ್ರಕಟನೆಗೊಂಡಿದೆ. ಆದರೆ, ಅಷ್ಟೇ ಮಹತ್ವವುಳ್ಳ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಅನುಭವಿಗಳು ಬರೆದ ಲೇಖನಗಳೂ ವಿದ್ಯಾರ್ಥಿಗಳಿಗೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಮಂಗಳೂರು ವಿ.ವಿ.ಯು 2006ರಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ಪಠ್ಯಗಳನ್ನು ಪರಿಷ್ಕರಿಸಿ ಮುದ್ರಿಸುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಗುರುರಾಜ್ ಸನಿಲ್ ಸೇರಿದಂತೆ ಕೃಷಿ, ಜನಪದ, ಬದುಕು ಮುಂತಾದವುಗಳ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಅನುಭವಿಗಳ ಲೇಖನಗಳನ್ನು ಪಠ್ಯಕ್ಕೆ ಆಯ್ಕೆಗೊಳಿಸಲಾಗಿದೆ.’
– ಪ್ರೊ| ನಾಗಪ್ಪ ಗೌಡ ಆರ್., ಪಠ್ಯ ಪುಸ್ತಕ ರಚನಾ ಸಮಿತಿ ಕಾರ್ಯ ನಿರ್ವಾಹಕ ಸಂಪಾದಕ
– ಸತೀಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.