ಬ್ರಹ್ಮಕಲಶಕ್ಕೆ ಸಜ್ಜುಗೊಂಡಿರುವ ನೂತನ ಶಿಲಾಮಯ ಭಂಡಾರದ ಮನೆ
Team Udayavani, Jul 3, 2017, 3:40 AM IST
ಬಂಟ್ವಾಳ: ಸುಜೀರುಗುತ್ತು ಶ್ರೀ ಅರಸು ವೈದ್ಯನಾಥ ಧೂಮಾವತಿ – ಬಂಟ ಶ್ರೀ ಧರ್ಮದೈವಗಳ ಬ್ರಹ್ಮಕಲಶೋತ್ಸವ ಜು.5ರಂದು ನಡೆಯಲಿದ್ದು ನೂತನ ಶಿಲಾಮಯ ಭಂಡಾರದ ಮನೆ ದೈವಗಳ ಪುನಃ ಪ್ರತಿಷ್ಠೆಗೆ ಸಜ್ಜಾಗಿದೆ. ಅಭಿವೃದ್ಧಿ ಕಾರ್ಯದೈವದ ಸಾನ್ನಿಧ್ಯದ ಭಂಡಾರದ ಮನೆ ಜೀರ್ಣೋದ್ಧಾರಕ್ಕೆ ಸುಜೀರುಗುತ್ತು ಯಜಮಾನರ ಪರವಾಗಿ ಸುಜೀರುಗುತ್ತು ಐತಪ್ಪ ಆಳ್ವ ಅವರ ಅಧ್ಯಕ್ಷತೆಯಲ್ಲಿ ಸುಜೀರು ಶ್ರೀ ಧರ್ಮದೈವಗಳ ಭಂಡಾರದ ಮನೆ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿತ್ತು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಶಿಲಾಮಯ ಭಂಡಾರದ ಮನೆಗೆಎ. 21ರಂದು ಶಿಲಾನ್ಯಾಸ ನೆರವೇರಿಸಿದ್ದರು. ಸಮಿತಿಯ ಬಳಿಕ ಶಾಸ್ತ್ರೀಯವಾದ ಶಿಲಾಮಯ ಎರಡು ಗರ್ಭಗುಡಿಗಳು, ಹಾಗೂ ಚಾವಡಿ ನಿರ್ಮಾಣಗೊಂಡಿತ್ತು. ಸುಮಾರು 1.50 ಕೋ. ರೂ. ಅಂದಾಜು ವೆಚ್ಚದ ಯೋಜನೆಗೆ ಶಿಲ್ಪಿಗಳಾದ ಮಹೇಶ ಮುನಿಯಂಗಳ ನೀಲ ನಕಾಶೆ ತಯಾರಿಸಿ ದೇವಸ್ಯ ರಾಜಶೇಖರ ಚೌಟ ದುಬೈ ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚಿಸಿಕೊಂಡು ಮುಂದಡಿ ಇಡಲಾಗಿದೆ.
ಕುಂಟಾರು ಬ್ರಹ್ಮಶ್ರೀ ರವೀಶ್‌ತಂತ್ರಿಗಳ ವೈದಿಕ ವಿಧಿ ವಿಧಾನಗಳೊಂದಿಗೆ, ಏರ್ಯ ರಘುರಾಮ ಮಯ್ಯ ಅವರ ಸಹಭಾಗಿತ್ವದಲ್ಲಿ ಶ್ರೀ ಧರ್ಮದೈವಗಳ ನೂತನ ಶಿಲಾಮಯ ಭಂಡಾರದ ಮನೆಯಲ್ಲಿ ಧರ್ಮದೈವ ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕಕ್ಕೆ ಪೂರ್ವಭಾವಿಯಾಗಿ ಜೂ. 30ರಿಂದ ಆರಂಭವಾಗಿ ಜು. 5ರಂದು ವಿಧಿಬದ್ದ ಬ್ರಹ್ಮಕಲಶದ ವಿವಿಧ ವೈದಿಕ ವಿಧಿಗಳು ಸಂಪನ್ನಗೊಳ್ಳಲಿವೆ.
ಆಧುನಿಕ ವ್ಯವಸ್ಥೆಯಂತೆ ಸುತ್ತುಪೌಳಿ, ಗೋಪುರ, ಮುಖಮಂಟಪ, ಬಂಡಿಕೊಟ್ಟಿಗೆ, ನೆಲಹಾಸು, ಶ್ರೀರಾಮ ವೈದ್ಯನಾಥ ಭಜನ ಮಂದಿರ ನಿರ್ಮಾಣವಾಗಿದೆ. ಕಳೆದ ಅವಧಿಯಲ್ಲಿ ಊರ ಭಕ್ತಾದಿಗಳ ಪಾಲ್ಗೊಳ್ಳುವಿಕೆಯಲ್ಲಿ ನವೀಕರಣ ಸಮಿತಿ ರಚಿಸಿಕೊಂಡು ಶ್ರೀ ಅರಸು ವೈದ್ಯನಾಥ ಹಾಗೂ ಧೂಮಾವತಿ ಬಂಟ ದೈವಗಳ ಮೂರು ಶಿಲಾಮಯ ಗರ್ಭಗುಡಿಗಳನ್ನು ಶಾಸ್ತ್ರೀಯವಾಗಿ ಶಿಲ್ಪಾಧಾರದ ಪರಿಣತರ ಸಹಕಾರದೊಂದಿಗೆ ಪುನರ್ ನಿರ್ಮಾಣ ಹಾಗೂ ಧ್ವಜಸ್ತಂಭಕ್ಕೆ ತಾಮ್ರದ ಹೊದಿಕೆ, ಬೆಳ್ಳಿಯ ಗರುಡ, ಶಿಲೆ ಕಲ್ಲಿನ ಧ್ವಜಪೀಠ ಮತ್ತು ಅರಸು ದೈವಸ್ಥಾನದ ಅಂಗಣಕ್ಕೆ ಹಾಸುಕಲ್ಲು, ತೀರ್ಥಬಾವಿಗೆ ಆವರಣ ಗೋಡೆ ರಚನೆ, ನೂತನ ಪಲ್ಲಕಿ, ವೈದ್ಯನಾಥನ ಮೂಲಮುಗಕ್ಕೆ ಬೆಳ್ಳಿಯ ಹೊದಿಕೆ, ಧೂಮಾವತಿ ಬಂಟ ದೈವಗಳಿಗೆ ನೂತನ ಮುಖವಾಡ, ಬೆಳ್ಳಿಯ ಕಡ್ತಳೆ, ಬೆಳ್ಳಿಯ ಬೊಲ್ಗುಡೆಗಳೊಂದಿಗೆ ನವೀಕರಿಸಿ 2004 ಮಾರ್ಚ್ 5ರಂದು ಬ್ರಹ್ಮಕಲಶ ನೆರವೇರಿತ್ತು.
ದೈವಸ್ಥಾನದಲ್ಲಿ ಪ್ರತೀ ಸಂಕ್ರಮಣ ಆಚರಣೆ, ನಾಗರಪಂಚಮಿ, ಅಷ್ಟಮಿ, ಅನಂತ ಚತುರ್ದಶಿ(ನೋಂಪು) ಸಾನ ತುಂಬಿಸುವುದು, ದೀಪಾವಳಿ ಪರ್ವ ಬಲಿಯೇಂದ್ರ ಪೂಜೆ, ಜನವರಿ ತಿಂಗಳು ( ಪೆರಾರ್ದೆ ಹುಣ್ಣಿಮೆಗೆ) ಶ್ರೀರಾಮ ವೈದ್ಯನಾಥ ಭಜನ ಮಂದಿರದಲ್ಲಿ ಏಕಾಹ ಭಜನೆ, ಫೆಬ್ರವರಿ ತಿಂಗಳು ( ಪುಯಿಂತೇಲ್-ಪೂವೆ) ಅರಸು ದೈವಕ್ಕೆ ಕೋಳಿಕುಂಟ, ಗಡುಸ್ಥಳದಲ್ಲಿ ದೊಂಪದಬಲಿ, ಮಾರ್ಚ್ (ಮಾಯಿ) ಪೂವೆಗೆ ಭಂಡಾರ ಏರಿ ಕೊಡಿ ಏರುವುದು, ಹುಣ್ಣಿಮೆಗೆ ಸುಜೀರ್ ಜಾತ್ರೆ ಆರಂಭ, ಪ್ರಥಮ ದಿನ ಶ್ರೀ ಅರಸು ದೈವಗಳ ನೇಮ, ಎರಡನೇ ದಿನ ಶ್ರೀ ವೈದ್ಯನಾಥ ದೈವದ ಪ್ರಥಮ ಬಂಡಿ ನೇಮ, ಮೂರನೇ ದಿನ ಶ್ರೀ ವೈದ್ಯನಾಥ ದೈವದ ದ್ವಿತೀಯ ಬಂಡಿ, ನಾಲ್ಕನೇ ದಿನ ಶ್ರೀ ಅರಸು ದೈವಗಳ ನೇಮ, ಐದನೇ ದಿನ ಧೂಮಾವತಿ ಬಂಟ ದೈವಗಳ ನೇಮ, ಆರನೇ ದಿನ ಬೆಳಗ್ಗೆ ಕೊಡಿ ಭಂಡಾರ ಇಳಿಸಿ ಸಂಪ್ರೋಕ್ಷಣೆ, ಶ್ರೀ ನಾಗದೇವರಿಗೆ ತಂಬಿಲ ನಡೆಯುವುದು ರೂಢಿಯಲ್ಲಿದೆ. ಕ್ಷೇತ್ರಕ್ಕೆ ಸಂಪರ್ಕಿಸಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತ್ಯೇಕ ರಸ್ತೆಯನ್ನು ನಿರ್ಮಿಸಲಾಗಿದೆ. ಅನ್ನದಾನಕ್ಕೆ ಪ್ರತ್ಯೇಕ ವ್ಯವಸ್ಥೆ, ಸಭಾ ಕಾರ್ಯಕ್ರಮಕ್ಕಾಗಿ ಭವ್ಯ ವೇದಿಕೆ ನಿರ್ಮಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
ಸ್ಥಳ ಚರಿತ್ರೆ
ಅನಾದಿ ಕಾಲದಲ್ಲಿ ಹೆಸರಿಸಲಾಗದ ವೃಕ್ಷದ ಬುಡದಲ್ಲಿ ನೆಲೆಯೂರಿದ ಧರ್ಮದೈವ ಶ್ರೀ ವೈದ್ಯನಾಥ ದೈವಕ್ಕೆ ಸುಜೀರುಗುತ್ತು ಯಜಮಾನ ಶಂಕರ ಅರಿಗ ಸ್ಥಾನಮಾನ ಕಲ್ಪಿಸಿದ್ದರು. ಅವರು ಉದ್ಯಾವರ ಮಾಡದ ಶ್ರೀ ಧರ್ಮಅರಸು ದೈವದ ನೇಮಕ್ಕೆ ಹೋಗಿದ್ದ ಸಂದರ್ಭ ದೈವವು ಮಲ್ಲಿಗೆ ಪುಷ್ಪದಲ್ಲಿ ಸೇರಿಕೊಂಡು ಹಿಂಬಾಲಿಸಿ ಬಂದು ನೆಲೆ ಕೇಳಿಕೊಂಡಂತೆ ಸಾನಮಾಡವನ್ನು ನಿರ್ಮಿಸಿಕೊಟ್ಟಿದ್ದರು. ಬಳಿಕ ಶ್ರೀ ಧರ್ಮ ಅರಸು ವೈದ್ಯನಾಥ ಧೂಮಾವತಿ ಬಂಟ ಪರಿವಾರ ದೈವಗಳನ್ನು ಸುಜೀರುಗುತ್ತು, ಸತ್‌ಗುತ್ತುಗಳಾದ ಕೊಲ್ಲಬೆಟ್ಟು, ಬೆಳ್ಳಿಪಾಡಿ, ಕೊಟ್ರಬೆಟ್ಟು, ಪದೆಂಜಾರು, ದೇವಸ್ಯ, ಕಬೇಲ, ತೆಕ್ಕಿಹಿತ್ಲು, ಕೆಸನಮೊಗರು ಹಾಗೂ ಊರಿನ ಜನತೆ ಆರಾಧಿಸಿಕೊಂಡು ಬರುತ್ತಿದ್ದರು. ಇಲ್ಲಿ ಶ್ರೀ ವೈದ್ಯನಾಥ ದೈವದ ಬಂಡಿ, ಆರು ಅಶ್ವತ್ಥ ಕಟ್ಟೆಗಳು, ಎರಡು ಜಳಕದ ಕೆರೆಗಳು, ಎರಡು ಭಂಡಾರದ ಮನೆಗಳು, ಚಾವಡಿ, ಧ್ವಜಸ್ತಂಭ ಮತ್ತು ನಾಗಸಾನ್ನಿಧ್ಯವು ಅನಾದಿಯಲ್ಲೇ ನಿರ್ಮಿಸಲ್ಪಟ್ಟಿದ್ದವು. ಶ್ರೀ ವೈದ್ಯನಾಥ ದೈವದ ತೀರ್ಥವು ವಿಷಜಂತುಗಳ ಕಡಿತಕ್ಕೆ ದಿವ್ಯ ಔಷಧ ಎಂದು ಪರಿಗಣಿತವಾಗಿತ್ತು. ದೈವಗಳ ವಾರ್ಷಿಕ ನೇಮ, ಇತರ ಆಚರಣೆಗಳು ನಡೆದು ಬಂದಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.