ನಮ್ಮ ಶಾಲೆ ನಮ್ಮ ಹೆಮ್ಮೆ : ನಾಲ್ಕೂರುಗಳಲ್ಲಿ ಅಕ್ಷರದ ಬೆಳಕು ಹಬ್ಬಿಸಿದ ಕೊರಂಜ ಸರಕಾರಿ ಶಾಲೆ
ಈ ಶಾಲೆ ಶತಮಾನೋತ್ತರ ಬೆಳ್ಳಿಹಬ್ಬವನ್ನೂ ದಾಟಿದೆ ! ; ಸಹಕಾರಿ ಪಿತಾಮಹ ಮೊಳಹಳ್ಳಿಯವರು ಇಲ್ಲೇ ಕಲಿಸಿದ್ದರು
Team Udayavani, Nov 1, 2019, 4:39 PM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಶ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
— ಚೈತ್ರೇಶ್ ಇಳಂತಿಲ
ಬೆಳ್ತಂಗಡಿ: ಸ್ವಾತಂತ್ರ್ಯಪೂರ್ವದಲ್ಲೇ ಅಸ್ತಿತ್ವಕ್ಕೆ ಬಂದ ಕೊರಂಜದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಶಾಲೆಗೆ ಈಗ 136 ವರ್ಷ. ತಾಲೂಕಿನ ಅತಿ ಹಿರಿಯ ಶಾಲೆ ಇದು. ಶಾಲೆ ಆರಂಭಗೊಂಡದ್ದು 1883ರಲ್ಲಿ. ಆಗ ಕಳಿಯ ಗ್ರಾಮದಲ್ಲಿ 1.35 ಎಕ್ರೆ ವಿಸ್ತೀರ್ಣದ ಜಾಗದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಾಗಿತ್ತು, 1ರಿಂದ 4ನೇ ವರೆಗೆ ತರಗತಿಗಳಿದ್ದವು. 1983ರಲ್ಲಿ ಶತಮಾನದ ಸಂಭ್ರಮದ ಬಳಿಕ 1994ರ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಶಾಲೆಯಾಯಿತು. ಪ್ರಸಕ್ತ 1ರಿಂದ 8ನೇ ತರಗತಿ ವರೆಗೆ ಇದ್ದು, 260 ವಿದ್ಯಾರ್ಥಿಗಳು, 10 ಶಿಕ್ಷಕರನ್ನು ಒಳಗೊಂಡಿದೆ. ಕಳೆದ ವರ್ಷ ಈ ಶಾಲೆಗೆ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮ.
ಊರಿಗೆ ಮೊದಲ ಶಾಲೆ
ಈ ಊರಿನಲ್ಲಿ ಆಗ ಗುರುಕುಲ ಮಾದರಿಯ ಶಿಕ್ಷಣವಿತ್ತು. ಆಧುನಿಕ ವಿದ್ಯಾಭ್ಯಾಸ ಇಲ್ಲಿನ ಮಕ್ಕಳಿಗೂ ಸಿಗಬೇಕೆಂಬ ಆಶಯದಂತೆ ಬ್ರಿಟಿಷ್ ಆಡಳಿತ ಕಾಲದಲ್ಲಿ ಶಾಲೆ ಆರಂಭವಾಯಿತು. ಸಹಕಾರಿ ರಂಗದ ಪಿತಾಮಹರೆಂದೇ ಪ್ರಖ್ಯಾತಿ ಪಡೆದ ಮೊಳಹಳ್ಳಿ ಶಿವರಾಯರು ಇಲ್ಲಿನ ಮೊದಲ ಶಿಕ್ಷಕ ಮತ್ತು ಮುಖ್ಯೋಪಾಧ್ಯಾಯರು. ಆ ಬಳಿಕ ಕೆ. ಶ್ರೀನಿವಾಸ್ ಭಟ್ 27 ವರ್ಷ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ಮುಂದೆ ನಾರಾಯಣ ರೈ, ಸದಾಶಿವ ಕೇಕುಣ್ಣಾಯ, ಕರುಣಾಕರ ಉಚ್ಚಿಲ ಸೇವೆ ಸಲ್ಲಿಸಿದ್ದರು. ಪ್ರಭಾಕರ ರಾವ್, ಸೇಸಪ್ಪ ಮೂಲ್ಯ, ರಾಧಾಕೃಷ್ಣ ಜೋಗಿತ್ತಾಯರವರೆಗೆ ಅನೇಕ ಮುಖ್ಯ ಶಿಕ್ಷಕರನ್ನು ಕಂಡಿದೆ. ಪ್ರಸ್ತುತ ಆಲಿಸ್ ವಿಮಲಾ ಅವರು ಮುಖ್ಯ ಶಿಕ್ಷಕಿಯಾಗಿದ್ದಾರೆ.
ಸಾಧಕ ಹಳೆವಿದ್ಯಾರ್ಥಿಗಳು
ಪ್ರಖ್ಯಾತ ಜಾದೂಗಾರ ಪ್ರೊ| ಶಂಕರ್, ರಾಜ್ಯ ಸಚಿವಾಲಯದ ಕೆಎಎಸ್ ಗ್ರೇಡ್ ಅಧಿಕಾರಿ ಹಿದಾಯತುಲ್ಲ, ಭೂಸೇನೆಯ ಅಧಿಕಾರಿ ಉಮೇಶ್ ಆಚಾರ್ಯ, ಮಾಜಿ ಜಿ.ಪಂ. ಸದಸ್ಯೆ ರಾಜಶ್ರೀ ಹೆಗ್ಡೆ, ತಾ.ಪಂ. ಸದಸ್ಯ ಕೇಶವ ಬಂಗೇರ, ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕ ದಿವಾಕರ ಆಚಾರ್ಯ ಹೀಗೆ ಈ ಶಾಲೆಯ ಸಾಧಕ ಹಳೆ ವಿದ್ಯಾರ್ಥಿಗಳ ಪಟ್ಟಿ ಬೆಳೆಯುತ್ತದೆ. ಕೊಯ್ಯೂರು, ಓಡಿಲಾ°ಳ, ನಾಳ, ಗೋವಿಂದೂರು ಹೀಗೆ ಸುತ್ತಮುತ್ತಲ ನಾಲ್ಕು ಗ್ರಾಮಗಳ ವಿದ್ಯಾರ್ಥಿಗಳಿಗೆ ಈ ಶಾಲೆ ವರದಾನವಾಗಿತ್ತು. ಈಗ ಇದೇ ಪ್ರದೇಶದಲ್ಲಿ ನಾಲ್ಕು ಹಿರಿಯ ಪ್ರಾಥಮಿಕ ಶಾಲೆಗಳಿವೆ.
ಶಿಥಿಲ ಕಟ್ಟಡಕ್ಕೆ ಕಾಯಕಲ್ಪ ಬೇಕು
ಶಾಲೆ ಸ್ವಚ್ಛ ಪರಿಸರ ಹೊಂದಿದ್ದು, ಬಿಸಿಯೂಟಕ್ಕೆ ಬೇಕಾದ ತರಕಾರಿಯನ್ನು ಇಲ್ಲಿಯೇ ಬೆಳೆಯುತ್ತಿದ್ದಾರೆ. ಬಾಳೆಗಿಡ, 15 ತೆಂಗು, ಹಲಸಿನ ಮರ, ಪುಟ್ಟ ಹೂದೋಟವಿದೆ. ಆದರೆ ಶಾಲೆಯಿನ್ನೂ ಹಳೆಯ ಕಟ್ಟಡದಲ್ಲಿಯೇ ಇದೆ. ಬ್ರಿಟಿಷರ ಕಾಲದ ಕಟ್ಟಡ ಕಾಯಕಲ್ಪಕ್ಕೆ ಕಾಯುತ್ತಿದೆ. ಆರು ತರಗತಿ ಕಟ್ಟಡಗಳು ಶಿಥಿಲಗೊಂಡಿವೆ. ಶಾಲೆಯ ದುರಸ್ತಿಗಾಗಿ 75 ಲಕ್ಷ ರೂ.ಗಳ ಅಂದಾಜು ಪಟ್ಟಿ ಸಿದ್ಧಗೊಂಡಿದೆ. ಪ್ರಸಕ್ತ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಾನಂದ ಶೆಟ್ಟಿ ಮತ್ತು ಪೋಷಕರ ಮುತುವರ್ಜಿಯಿಂದ ಕರಕುಶಲ ವಸ್ತು ತಯಾರಿ, ಕಸದಿಂದ ರಸ ಪ್ರಯೋಗ, ಯಕ್ಷಗಾನ ಕಲಿಕೆ, ಪ್ರತಿಭಾ ಸ್ಪರ್ಧೆಗಳ ಆಯೋಜನೆಯಾಗುತ್ತಿದೆ.
ಶಾಲೆಯ ಅಭಿವೃದ್ಧಿಗೆ ಸರಕಾರವೇ ಮುತುವರ್ಜಿ ವಹಿಸಬೇಕು. ಸರಕಾರಿ ಶಾಲೆಗೆ ಅಗತ್ಯ ಸವಲತ್ತು ಒದಗಿಸಿದಲ್ಲಿ ಗ್ರಾಮೀಣ ಪ್ರತಿಭಾವಂತರ ಸಾಧನೆಗೆ ವೇದಿಕೆಯಾಗಲಿದೆ.
– ಆಲಿಸ್ ವಿಮಲಾ, ಮುಖ್ಯೋಪಾಧ್ಯಾಯರು
ನನ್ನ ಮನೆಯ ಪಕ್ಕದಲ್ಲೇ ಇವರು ಶಾಲೆಯಾದ್ದರಿಂದ ನಮ್ಮ ಮನೆಯ 11 ಮಕ್ಕಳು ಇದೇ ಶಾಲೆಯಲ್ಲಿ ಕಲಿತು ಬೇರೆ ಬೇರೆ ಹುದ್ದೆ ಅಲಂಕರಿಸಿದ್ದಾರೆ. ನಾಲ್ಕಾರು ಗ್ರಾಮಗಳ ವಿದ್ಯಾರ್ಥಿಗಳ ಶಿಕ್ಷಣ, ಅಭಿರುಚಿಯನ್ನು ಕಟ್ಟಿ ಬೆಳೆಸಿದ ಶಾಲೆ ಶತಮಾನೋತ್ತರ ಬೆಳ್ಳಿಹಬ್ಬ ಆಚರಿಸಿರುವುದು ಊರಿಗೇ ಹೆಮ್ಮೆಯ ವಿಚಾರ.
– ದಿವಾಕರ್ ಆಚಾರ್ಯ, ಹಳೇ ವಿದ್ಯಾರ್ಥಿ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್ ಪ್ರೌಢಶಾಲೆಗೆ 121ರ ಸಂಭ್ರಮ
ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ
ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ
112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.