ಭಯದಿಂದ ಬದುಕುವ ಪರಿಸ್ಥಿತಿ ದೂರವಾಗಲಿ
Team Udayavani, Apr 17, 2018, 8:20 AM IST
ನೀವು ಜೆ.ಡಿ.ಎಸ್.ಗೆ ಹೋದ ಕಾರಣ?
– ಬಿಜೆಪಿ ಪಕ್ಷದಿಂದ ನನಗೆ ಯಾವುದೇ ತೊಂದರೆಯಾಗಿಲ್ಲ. ನನಗೆ ಸಂಘ ಪರಿವಾರದ ಕೆಲವು ನಾಯಕರಿಂದ ತೊಂದರೆಯಾದ ಕಾರಣದಿಂದ ಜೆಡಿಎಸ್‌ಗೆ ಹೋಗಬೇಕಾಯಿತು. ಈಗ ನಾನು ಬಿಜೆಪಿಯಲ್ಲೇ ಇದ್ದರೂ ತೊಂದರೆ ಮುಂದುವರಿದಿದೆ. ಅವರ ಹೆಸರು ಏನೆಂದು ಹೇಳುವುದಿಲ್ಲ. ಅದು ಬಿಟ್ಟು ನಾನು ಸಂಘ, ಬಿಜೆಪಿ ವಿರೋಧಿಯಲ್ಲ. ಅವರಿಗೆ ಕಾರ್ಯಕರ್ತರನ್ನು ದುಡಿಸುವುದು ಮಾತ್ರ ಗೊತ್ತಿದೆ.
ಬಿಜೆಪಿಯ ಚುನಾವಣಾ ತಯಾರಿ ಹೇಗಿದೆ?
– ಚುನಾವಣಾ ತಯಾರಿ ಬಹಳ ಜೋರಾಗಿ ನಡೆಯುತ್ತಿದೆ. ನಾನು ಬಿಜೆಪಿಯ ಜಿಲ್ಲಾ ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದುಕೊಂಡು ಇಡೀ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ಇದೆ. ಮಂಗಳೂರು ಉತ್ತರ, ಮೂಡಬಿದಿರೆಯಲ್ಲಿ ಈಗಾಗಲೇ ತಯಾರಿಗಳು ನಡೆದಿವೆ. ಮುಂದೆ ಇತರ ಕ್ಷೇತ್ರದಲ್ಲಿಯೂ ಸಿದ್ಧತೆಗಳು ನಡೆಯುತ್ತವೆ. ಬಂಟ್ವಾಳದಲ್ಲಿ ಈಗಾಗಲೇ ರಾಜೇಶ್ ನಾಯ್ಕ ಅವರು ಅಭ್ಯರ್ಥಿ ಎಂಬುದು ಘೋಷಣೆಯಾಗಿದ್ದು, ಎಲ್ಲ ರೀತಿಯ ತಯಾರಿ ನಡೆಯುತ್ತಿದೆ.
ಬಿಜೆಪಿ ಜನರಿಗೆ ಏನು ಭರವಸೆ ನೀಡುತ್ತದೆ?
– ಪ್ರಸ್ತುತ ಜಿಲ್ಲೆಯಲ್ಲಿ ಹಿಂದೂಗಳು ತಲೆ ಎತ್ತಿ ಬದುಕಲಾಗದ ಪರಿಸ್ಥಿತಿ ಇದೆ. ಬೇರೆ ಜಿಲ್ಲೆಗಳಲ್ಲಿ ರೈತಪರ ಹೋರಾಟಗಳು ಪ್ರಮುಖವಾದರೆ ಇಲ್ಲಿ ಬದುಕುವ ಸಾತಂತ್ರ್ಯಕ್ಕಾಗಿ ಹೋರಾಟ ನಡೆಸಬೇಕಿದೆ. ಅಭಿವೃದ್ಧಿಯನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಬದುಕುವುದೇ ಕಷ್ಟವಾದರೆ ಅಭಿವೃದ್ಧಿ ಯಾರಿಗೆ ಬೇಕಾಗಿದೆ? ಹೀಗಾಗಿ ಬಿಜೆಪಿಯು ಭಯದಿಂದ ಬದುಕುವ ವಾತಾವರಣ ದೂರ ಮಾಡಲಿದೆ.
ಬಂಟ್ವಾಳದಲ್ಲಿ ಬಿಜೆಪಿ ಗೆಲ್ಲುವ ಪರಿಸ್ಥಿತಿ ಇದೆಯೇ?
– ಖಂಡಿತವಾಗಿಯೂ ಈ ಬಾರಿ ಬಿಜೆಪಿ ಗೆಲ್ಲುತ್ತದೆ. ಜನರು ಕೂಡ ಒಮ್ಮೆ ಬದಲಾವಣೆ ಬೇಕು ಎಂದು ಬಯಸುತ್ತಿದ್ದಾರೆ. ಹೀಗಾಗಿ ಬಂಟ್ವಾಳ ಮಾತ್ರವಲ್ಲದೆ ಇಡೀ ಜಿಲ್ಲೆಯಲ್ಲೇ
ಬಿಜೆಪಿ ಗೆಲ್ಲುತ್ತದೆ.
ಬಂಟ್ವಾಳದ ಪಕ್ಷಾಂತರ ರಾಜಕೀಯದ ಕುರಿತು?
– ಬಂಟ್ವಾಳದಲ್ಲಿ ಪಕ್ಷ ಸೇರ್ಪಡೆ ಎನ್ನುವುದು ಜೋರಾಗಿದ್ದರೂ ಅದು ಯಾವುದೇ ಪಕ್ಷದ ನಾಯಕರು ಸೇರ್ಪಡೆಯಾಗುವುದಲ್ಲ. ವಿವಿಧ ಸಂಘಟನೆಗಳ ಪ್ರಮುಖರು ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ಮುಖ್ಯವಾಗಿ ಬಿಜೆಪಿಯು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. 10 ಮತ ಹೊಂದಿರುವ ನಾಯಕರನ್ನೂ ನಾವು ಸೇರಿಸಿಕೊಳ್ಳುತ್ತಿದ್ದೇವೆ.
— ಕೃಷ್ಣಪ್ಪ ಪೂಜಾರಿ, ಕಳೆದ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ (ಪರಾಜಿತ)
— ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.