ಮಾನವಧರ್ಮ ಕಾಯಲು ಎಲ್ಲರೊಂದಾಗೋಣ: ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ
Team Udayavani, Jul 6, 2018, 10:01 AM IST
ಮಂಗಳೂರು: ಮಾನವರೆಲ್ಲರೂ ಅನ್ಯೋನ್ಯವಾಗಿ ಬದುಕಬೇಕು. ಮನುಷ್ಯನ ಘನತೆ, ಗೌರವಗಳನ್ನು ಕಾಯ್ದುಕೊಂಡು ಬರುವಂತಾಗಲು ರಾಜಕೀಯ, ಧಾರ್ಮಿಕ ನಾಯಕರು, ಸಮಾಜ ಸುಧಾರಕರು ಒಂದಾಗಿ ಕುಳಿತು ಚರ್ಚಿಸಿ ಕ್ರಿಯಾ ಯೋಜನೆ ರೂಪಿಸಬೇಕು. ಇದು ಮಂಗಳೂರು ಕೆಥೋಲಿಕ್ ಧರ್ಮಪ್ರಾಂತದ ನೂತನ ಬಿಷಪ್ ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಸಲಹೆ. ಮೂರೂವರೆ ಶತಮಾನಗಳ ಇತಿಹಾಸವಿರುವ ಮಂಗಳೂರು ಕೆಥೋಲಿಕ್ ಧರ್ಮ ಪ್ರಾಂತದ 14ನೇ ಬಿಷಪ್ ಆಗಿ ಜುಲೈ 3ರಂದು ನೇಮಕಗೊಂಡ ಅವರು “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.
ಪದಗ್ರಹಣ ದಿನಾಂಕ ನಿಗದಿ ಆಗಿದೆಯೇ?
ಆಗಿಲ್ಲ. ಅಧಿಕಾರ ಸ್ವೀಕಾರ ಮೂವರು ಬಿಷಪರ ಸಮಕ್ಷಮ ನಡೆಯಬೇಕಿರುವುದರಿಂದ ಅವರ ಲಭ್ಯತೆ ಮತ್ತು ನನ್ನ ಕುಟುಂಬದ ಎಲ್ಲ ಸದಸ್ಯರ ಲಭ್ಯತೆಯನ್ನು ನೋಡಿಕೊಂಡು ನಿಗದಿಪಡಿಸಲಾಗುವುದು. ಆಗಸ್ಟ್ ಅಥವಾ ಸೆಪ್ಟಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ.
ನಿಮ್ಮ ಸೇವಾ ಕಾರ್ಯಗಳ ಬಗ್ಗೆ….
ವಿವಿಧೆಡೆ ಸಹಾಯಕ ಗುರುವಾಗಿದ್ದಾಗ ರಕ್ತದಾನ ಶಿಬಿರಗಳನ್ನು ನಡೆಸಲು ಯುವ ಜನರಿಗೆ ಪ್ರೋತ್ಸಾಹ, ಮಾರ್ಗದರ್ಶನ ನೀಡಿದ್ದೆ. ಮಿಲಾಗ್ರಿಸ್ ಚರ್ಚ್‌ನಲ್ಲಿದ್ದಾಗ ವಿಶೇಷವಾಗಿ ಮನೋರೋಗಿಗಳ ಪುನರ್ವಸತಿಗೆ ಶ್ರಮಿಸಿದ್ದೆ. ಜಪ್ಪು ಸೆಮಿನರಿಯಲ್ಲಿ ಪ್ರಾಧ್ಯಾಪಕನಾಗಿದ್ದಾಗ ಯುವಜನರಿಗೆ ಆಧ್ಯಾತ್ಮಿಕ ಜೀವನದ ಬಗ್ಗೆ ಮಾರ್ಗದರ್ಶನ ನೀಡಿದ್ದೇನೆ. 2015ರಲ್ಲಿ ರೋಮ್‌ನ ಪೊಂತಿಫಿಕಲ್ ಉರ್ಬಾನಿಯಾ ವಿ.ವಿ.ಯಲ್ಲಿ ಪೂರ್ಣ ಪ್ರಮಾಣದ ಪ್ರಾಧ್ಯಾಪಕರಾಗಿ ಸೇರ್ಪಡೆಗೊಂಡು ಈ ವರೆಗೆ ಅದೇ ಹುದ್ದೆಯಲ್ಲಿದ್ದೇನೆ. ಪೋಪ್ ಅವರು 2015ರ ಮಾರ್ಚ್‌ನಲ್ಲಿ ಬಿಷಪ್ ಅವರ ಸಂಘಟನೆಯಾದ ಸಿನೋಡ್‌ನ ಮಹಾ ಕಾರ್ಯದರ್ಶಿಯ ಸಲಹೆಗಾರನಾಗಿ ನನ್ನನ್ನು ನೇಮಿಸಿದ್ದರು.
ಹವ್ಯಾಸಗಳು, ಭಾಷೆಯ ಬಗ್ಗೆ …
ಕೋಶ ಓದುವುದು, ದೇಶ ಸುತ್ತುವುದು ಹವ್ಯಾಸ. ಮಾಲ್ಟಾ, ಫ್ರಾನ್ಸ್, ಪೋರ್ಚುಗಲ್, ಇಟೆಲಿ, ರುಮಾನಿಯಾ, ಅಮೆರಿಕ, ಬೆಲ್ಜಿಯಂ, ಜರ್ಮನಿ, ಆಸ್ಟ್ರಿಯಾ, ಸ್ಪೈನ್, ನೈಜೀ ರಿಯಾ ಮತ್ತಿತರ 12ಕ್ಕೂ ಅಧಿಕ ದೇಶ ಗಳಿಗೆ ಭೇಟಿ ನೀಡಿದ್ದೇನೆ. ಮಾತೃ ಭಾಷೆ ಕೊಂಕಣಿ. ಕನ್ನಡ, ತುಳು, ಇಂಗ್ಲಿಷ್, ಹಿಂದಿಯ ಜತೆಗೆ ಇಟಾಲಿ ಯನ್, ಫ್ರೆಂಚ್, ಜರ್ಮನ್, ಸ್ಪಾ ನಿಷ್ ಭಾಷೆಗಳು ಗೊತ್ತಿವೆ. ಇಟಾಲಿಯನ್ ಭಾಷೆ ಯಲ್ಲಿ ಬೋಧಿಸುತ್ತಿದ್ದೇನೆ.
ಪೋಪ್ ಜತೆಗಿನ ಒಡನಾಟ ಹೇಗಿತ್ತು?
ಸಿನೋಡ್ ಸಭೆಯ ಮಹಾ ಕಾರ್ಯದರ್ಶಿಯ ಸಲಹೆಗಾರನಾಗಿ ಸೇವೆ ಸಲ್ಲಿಸಿದ್ದರಿಂದ ಪ್ರಸ್ತುತ ಪೋಪ್ ಫ್ರಾನ್ಸಿಸ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಡಾಕ್ಟರೆಟ್ ಪದವಿಯ ಮಹಾಪ್ರಬಂಧ ಸಿದ್ಧಪಡಿಸಲು ನಿಕಟಪೂರ್ವ ಪೋಪ್ ಬೆನೆಡಿಕ್ಟ್ ಅವರ ಮಾರ್ಗ ದರ್ಶನ ಪಡೆದಿದ್ದೆ. ಪೋಪ್ ಜಾನ್ ಪಾವ್ಲ್ ದ್ವಿತೀಯ ಅವರನ್ನು ಖಾಸಗಿ ಬಲಿಪೂಜೆ ಸಂದರ್ಭ ಭೇಟಿಯಾಗಿದ್ದೆ.
ಐಕಳದಿಂದ ರೋಮ್‌ನ ಉರ್ಬನ್ ವಿ.ವಿ.ವರೆಗೆ…
ಕಿನ್ನಿಗೋಳಿ ಐಕಳದ ಲಾಜರಸ್-ಎಲಿಝಾ ದಂಪತಿಯ 9 ಮಂದಿ ಮಕ್ಕಳಲ್ಲಿ 4ನೆ ಯವರಾಗಿ 1964 ಎಪ್ರಿಲ್ 27ರಂದು ಜನಿಸಿದ ಸಲ್ಡಾನ್ಹಾ ಅವರು ಪ್ರಾಥಮಿಕ, ಪ್ರೌಢ ಮತ್ತು ಪ.ಪೂ. ಶಿಕ್ಷಣವನ್ನು ಐಕಳ ಪೊಂಪೈ ಶಿಕ್ಷಣ ಸಂಸ್ಥೆಯಲ್ಲಿ ಪೂರ್ತಿಗೊಳಿಸಿದ್ದರು. 1982 ಜೂ. 24ರಂದು ಜಪ್ಪು ಸೈಂಟ್ ಜೋಸೆಫ್ ಸೆಮಿನರಿಗೆ ಸೇರ್ಪಡೆ ಗೊಂಡು ಅಲ್ಲಿ ತಣ್ತೀಶಾಸ್ತ್ರ ಮತ್ತು ದೇವತಾಶಾಸ್ತ್ರ ಸಹಿತ ಧಾರ್ಮಿಕ ಶಿಕ್ಷಣ ಪೂರ್ತಿಗೊಳಿಸಿ 1991 ಮೇ 6ರಂದು ಗುರು ದೀಕ್ಷೆ ಪಡೆದಿದ್ದರು. ಸೆಮಿನರಿಯಲ್ಲಿ ಓದುತ್ತಿರುವಾಗಲೇ ಮೈಸೂರು ವಿ.ವಿ.ಯಿಂದ ಬಿ.ಎ. ಪದವಿ ಪೂರ್ತಿ ಗೊಳಿ ಸಿದ್ದರು. ಸೈಕಾಲಜಿ ಮತ್ತು ಫಾರ್ಮೇಶನ್‌ನಲ್ಲಿ ಡಿಪ್ಲೊಮಾ ಪಡೆದಿದ್ದರು.
ಮೂಡುಬೆಳ್ಳೆ ಚರ್ಚ್‌ನಲ್ಲಿ ಒಂದು ವರ್ಷ (1991-92), ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ನಲ್ಲಿ 2 ವರ್ಷ (1992-94), ವಿಟ್ಲ ಚರ್ಚ್‌ನಲ್ಲಿ 2 ವರ್ಷ (1994-96) ಸಹಾಯಕ ಗುರುಗಳಾಗಿ ಸೇವೆ ಸಲ್ಲಿಸಿದ್ದರು. 1996ರಿಂದ 1999ರ ತನಕ ಜಪ್ಪು ಸೈಂಟ್ ಜೋಸೆಫ್ ಸೆಮಿನರಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಒದಗಿಸಿ ಬಳಿಕ ದೇವತಾ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ರೋಮ್‌ಗೆ ತೆರಳಿದ್ದರು. 1999- 2001ರ ಅವಧಿಯಲ್ಲಿ ದೇವತಾ ಶಾಸ್ತ್ರದಲ್ಲಿ ಲೈಸನ್ಶಿಯೇಟ್ ಪದವಿ ಪಡೆದಿದ್ದರು. 2001ಅಕ್ಟೋಬರ್‌ನಿಂದ 2005 ಎಪ್ರಿಲ್ ತನಕ “ರಿವಿಲೇಶನ್ ಆ್ಯಸ್ ಸೆಲ್ಫ್ ಕಮ್ಯೂನಿಕೇಶನ್ ಆಫ್ ಗಾಡ್: ಎ ಥಿಯೊಲಾಜಿಕಲ್ ಸ್ಟಡಿ ಆನ್ ದ ಸೆಲ್ಫ್ ಇನ್‌ಫುಯೆನ್ಸ್ ಆಫ್ ಕಾರ್ಲ್ ಬಾರ್ತ್ ಆ್ಯಂಡ್ ಕಾರ್ಲ್ ರಾಹ್ನರ್ ಆನ್ ದಿ ಕನ್ಸೆಪ್ಟ್ ಆಫ್ ರಿವಿಲೇಶನ್ ಇನ್ ಡಾಕ್ಯುಮೆಂಟ್ಸ್ ಆಫ್ ದ ಸೆಕೆಂಡ್ ವ್ಯಾಟಿಕನ್ ಕೌನ್ಸಿಲ್’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಡಾಕ್ಟರೆಟ್ ಪದವಿ ಪಡೆದಿದ್ದರು.
ಮಂಗಳೂರು ಧರ್ಮಪ್ರಾಂತದ ಬಗ್ಗೆ ಅಭಿಪ್ರಾಯ?
124 ಚರ್ಚ್‌ಗಳನ್ನು ಹೊಂದಿರುವ ಈ ಧರ್ಮಪ್ರಾಂತಕ್ಕೆ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆ ಇದೆ. ಜನ ಸುಶಿಕ್ಷಿತರು, ಧಾರ್ಮಿಕ ಶ್ರದ್ಧೆಯುಳ್ಳವರು. ಧರ್ಮ ಗುರುಗಳು ಮತ್ತು ಧರ್ಮ ಭಗಿನಿಯರು ಬದ್ಧತೆ ಮತ್ತು ಅರ್ಪಣಾ ಮನೋಭಾವದಿಂದ ಸೇವಾ ಕಾರ್ಯ ಮಾಡುತ್ತಿದ್ದಾರೆ. ಧರ್ಮಪ್ರಾಂತವು ಅನೇಕ ಶಿಕ್ಷಣ ಮತ್ತು ಆರೋಗ್ಯ ಸೇವಾ ಕೇಂದ್ರಗಳನ್ನು ನಡೆಸುತ್ತಿದ್ದು ಸಾವಿರಾರು ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಧರ್ಮಪ್ರಾಂತದ ಸೇವಾ ಪರಂಪರೆ ಮುಂದುವರಿಯಬೇಕು. ಈ ದಿಶೆಯಲ್ಲಿ ನಾನೂ ಪ್ರಯತ್ನಿಸುವೆ.
ಮಂಗಳೂರಿನ ಜನತೆಗೆ ಸಂದೇಶ ?
ಪ್ರತಿಯೊಬ್ಬರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ಮಾನವೀಯ ಸಂಬಂಧಕ್ಕೆ ಆದ್ಯತೆ ನೀಡಬೇಕು. ಪ್ರತಿಯೊಬ್ಬರಿಗೂ ಅವರವರ ಧರ್ಮಾಚರಣೆಯ ಸ್ವಾತಂತ್ರವಿದೆ. ಈ ವಿಚಾರದಲ್ಲಿ ಯಾವುದೇ ಬಲವಂತ ಸಲ್ಲದು. ಮತ-ಧರ್ಮ ಬದಲಾಯಿಸಬೇಕೆಂಬ ಒತ್ತಡವೂ ಸಲ್ಲದು. ಮನುಷ್ಯನ ಘನತೆ, ಗೌರವ ಕಾಯ್ದುಕೊಂಡು ಬದುಕುವುದು ಎಲ್ಲರ ಜವಾಬ್ದಾರಿ.
— ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.