ಮಾತಿನ ಔಷಧವೇ ಕಲಿಕೆಯ ಸಾಮರ್ಥ್ಯ ಬದಲಿಸಿತು
Team Udayavani, Jan 6, 2019, 6:18 AM IST
ಮಂಗಳೂರು: ಆಕೆ ಎಲ್ಲದರಲ್ಲೂ ಚುರುಕುಮತಿ. ಕಲಿಕೆಯಲ್ಲಿ ಮಾತ್ರ ಸೋಲು. ಕಂಗಾಲಾದ ಪೋಷಕರು ವೈದ್ಯರ ಬಳಿ ಕರೆದೊಯ್ದರು. ‘ಪರೀಕ್ಷೆ ಬರೆ; ಫಲಿತಾಂಶದ ವಿಷಯ ಬಿಟ್ಟು ಬಿಡು. ಅದು ನಿನ್ನ ಕೈಯಲ್ಲಿಲ್ಲ’ ಎಂದರು ವೈದ್ಯರು. ವೈದ್ಯರ ಈ ವಾಕ್ಯವೇ ಔಷಧವಾಯಿತೇನೋ. ಆಕೆ ಈಗ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸುವ ವಿದ್ಯಾರ್ಥಿನಿ.
ಈ ಕತೆಯಲ್ಲಿ ವೈದ್ಯರೇ ಹೀರೋ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿನಿಯೋರ್ವಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ವೈದ್ಯರು ಕೊಟ್ಟದ್ದು ಮಾತಿನ ಔಷಧ. ಅದೇ ವಿದ್ಯಾರ್ಥಿನಿಯ ಬದುಕು ಬದಲಿಸಿದ ಸಾಧನ.
ಎಲ್ಲ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲವಾಗಿಯೇ ತೊಡಗಿಸಿಕೊಳ್ಳುತ್ತಿದ್ದ ಆ ಹುಡುಗಿಗೆ ಪರೀಕ್ಷೆ ನುಂಗಲಾರದ ತುತ್ತಾಗಿತ್ತು. ಓದಿದ್ದು ನೆನಪುಳಿಯುವುದಿಲ್ಲ ಎಂಬುದು ಅವಳ ಅಳಲಾದರೆ, ತರಗತಿಯಲ್ಲಿ ಏಕಾಗ್ರತೆಯಿಂದ ಕೇಳುವುದಿಲ್ಲ ಎಂಬುದು ಶಿಕ್ಷಕರ ಆರೋಪ. ಪೋಷಕರು ಮನೋವೈದ್ಯರ ಬಳಿ ಕರೆದೊಯ್ದರು. ಆಪ್ತ ಸಮಾಲೋಚನೆ ನಡೆಸಿದ ವೈದ್ಯರು ಆಕೆಯ ಓದಿನ ನಿಯಮಗಳನ್ನು ತಿಳಿದುಕೊಂಡರು. ಪರೀಕ್ಷೆ ಹತ್ತಿರ ಬಂದಾಗ ಮಾತ್ರ ಪುಸ್ತಕ ಮುಟ್ಟುವ ಹುಡುಗಿಗೆ ಭಯ ಸಹಜವಾಗಿತ್ತು. ಪ್ರತಿದಿನ ಸ್ವಲ್ಪ ಸಮಯವನ್ನು ಓದಿಗೆ ಮೀಸಲಿಡಲು ವೈದ್ಯರು ಹೇಳಿದರು. ನಿನಗೆ ನೀನೇ ಕನಿಷ್ಠ ಮೂರು ಬಾರಿ ಪೂರ್ವಸಿದ್ಧತಾ ಪರೀಕ್ಷೆ ಮಾಡಿಕೋ. ಫಲಿತಾಂಶದ ಬಗ್ಗೆ ಯೋಚಿಸಬೇಡ, ಅದು ನಿನ್ನ ಕೈಯಲ್ಲಿಲ್ಲ ಎಂದರು. ವೈದ್ಯರ ಮಾತನ್ನು ಪಾಲಿಸಿದಾಕೆ ಮುಂದಿನ ಬಾರಿ ವೈದ್ಯರಲ್ಲಿಗೆ ಬಂದಾಗ ಮುಖ ತುಂಬಾ ನಗು ಹೊತ್ತಿದ್ದಳು. ಏಕೆಂದರೆ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸಾಧನೆ ಅವಳದಾಗಿತ್ತು. ಅನಂತರ ಆಕೆ ಎಂದೂ ಹಿಂದಿರುಗಿ ನೋಡಿದ್ದಿಲ್ಲ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಬೆಳೆಯುತ್ತಿದ್ದಾಳೆ.
ಪರೀಕ್ಷಾ ಭಯ
ಈ ವಿದ್ಯಾರ್ಥಿನಿಯ ಕತೆ ಒಂದು ಉದಾಹರಣೆ. ಅವಳಲ್ಲಿದ್ದುದು ಪರೀಕ್ಷಾ ಭಯ. ಜತೆಗೆ ಏಕಾಗ್ರತೆಯ ಕೊರತೆ. ಇದನ್ನು ಹೋಗಲಾಡಿಸಬೇಕಾದರೆ ಪರೀಕ್ಷೆಯ ಸನ್ನಿವೇಶಕ್ಕೆ ಪದೇಪದೇ ಎಕ್ಸ್ ಪೋಸ್ ಆಗಬೇಕು ಎನ್ನುತ್ತಾರೆ ಮನೋವೈದ್ಯ ಡಾ| ರವಿಚಂದ್ರ ಕಾರ್ಕಳ. ಬಹುತೇಕ ವಿದ್ಯಾರ್ಥಿಗಳು ಪೂರ್ವಸಿದ್ಧತಾ ಪರೀಕ್ಷೆ ತಪ್ಪಿಸಿಕೊಳ್ಳುತ್ತಾರೆ. ಇದನ್ನು ತಪ್ಪಿಸಿದರೆ ಪರೀಕ್ಷೆ ಸನ್ನಿವೇಶಕ್ಕೆ ಎಕ್ಸ್ ಪೋಸ್ ಆಗುವುದು ಅಸಾಧ್ಯ. ಪರೀಕ್ಷೆ ಬರೆದ ಮೇಲೆ ವಿಶ್ರಾಂತಿಗೆ ಹೊರಳಬೇಕು. ಪರೀಕ್ಷೆ, ಫಲಿತಾಂಶದ ಬಗ್ಗೆ ಯೋಚಿಸಬಾರದು. ಇದು ಮುಂದಿನ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ದಾರಿ ಮಾಡಿಕೊಡುತ್ತದೆ ಎನ್ನುತ್ತಾರವರು.
ಆಸಕ್ತಿಯನ್ನು ಚಿವುಟಬೇಡಿ
ಕೈಬೆರಳುಗಳು ಒಂದೇ ರೀತಿ ಇರುವುದಿಲ್ಲ; ಮಕ್ಕಳು ಕೂಡ. ಇದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು; ಹೋಲಿಕೆ ಬಿಡಬೇಕು. ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಇದ್ದಂತೆ ಮಕ್ಕಳು ಕಾಲೇಜಿನಲ್ಲಿಯೂ ಇರಬೇಕೆಂದು ನಿರೀಕ್ಷಿಸುವುದು ತಪ್ಪು. ವ್ಯಕ್ತಿತ್ವ ಬೆಳವಣಿಗೆ ಆದಂತೆ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಅವನ್ನು ಗಮನಿಸಿ ನಿಭಾಯಿಸುವುದನ್ನು ಹೆತ್ತವರು ಕಲಿಯಬೇಕು.
ಪಠ್ಯೇತರ ಚಟುವಟಿಕೆಗಳ ಆಸಕ್ತಿಯನ್ನು ಚಿವುಟಬೇಡಿ. ವ್ಯಾಯಾಮ, ಸೋಶಿಯಲೈಸೇಶನ್, ಸಂಗೀತ, ನೃತ್ಯ… ಇವೆಲ್ಲ ಮಕ್ಕಳ ಆಸಕ್ತಿಯ ಕ್ಷೇತ್ರಗಳು ಮತ್ತು ಅಲ್ಲಿ ಅವರು ನೆಮ್ಮದಿ ಕಾಣುತ್ತಾರೆ. ಓದು ಮಾತ್ರ ಜೀವನ ನಿರೂಪಿಸುತ್ತದೆ ಎಂದು ಹೇರಿದರೆ ಕಲಿಕೆಯಲ್ಲಿ ಹಿಂದುಳಿದು ಬಿಡುತ್ತಾರೆ ಎಂಬ ಸ್ಪಷ್ಟ ಅರಿವು ಹೆತ್ತವರದಾಗಿರಬೇಕು.
ಭಾವನಾತ್ಮಕವಾಗಿ ಜತೆಗಿರಿ
ಪೋಷಕರು ಭಾವನಾತ್ಮಕವಾಗಿ ಮಕ್ಕಳ ಜತೆಗಿರಬೇಕು. ಮಕ್ಕಳು ತಮ್ಮ ಕನಸುಗಳನ್ನು ಈಡೇರಿಸಲಿಕ್ಕೆ ಇರುವುದು ಎಂಬುದನ್ನು ಯಾವತ್ತೂ ಅವರ ಮೇಲೆ ಹೇರಬಾರದು. ಬದಲಾಗಿ ಅವರ ಆಸಕ್ತಿಯೊಂದಿಗೆ ಹೊಂದಿಕೊಳ್ಳಬೇಕು. ನಿನ್ನ ಕೈಯಲ್ಲಿ ಆಗುವುದಿಲ್ಲ ಎಂಬ ಸಂದೇಶ ಕೊಟ್ಟುಬಿಟ್ಟರೆ ಭಯ, ಆತಂಕ, ಕಲಿಕೆಯ ದೌರ್ಬಲ್ಯ ಅವರ ಸಂಗಾತಿಯಾಗಿ ಬಿಡುತ್ತದೆ. ಅದರ ಬದಲಾಗಿ ಬೆನ್ನು ತಟ್ಟಿದರೆ, ಹೆತ್ತವರು ಜತೆಗಿದ್ದಾರೆ ಎಂಬ ಭಾವನೆ ಮೊಳಕೆಯೊಡೆದು ಅದುವೇ ಆತ ಸಾಧಕನಾಗಲು ಪ್ರೇರಿಸುತ್ತದೆ.
-ಡಾ| ರವಿಚಂದ್ರ
ಕಾರ್ಕಳಮನೋವೈದ್ಯರು
ಹೋಲಿಕೆ ಬಿಟ್ಟುಬಿಡಿ
ಎಸೆಸ್ಸೆಲ್ಸಿಯವರೆಗೆ ಕಲಿಕೆಯಲ್ಲಿ ಮುಂದಿದ್ದ ಮಗ ಪಿಯುಸಿಗೆ ಬಂದಾಗ ಹಿಂದುಳಿದ ಎಂಬುದು ಹಲವು ಹೆತ್ತವರ ಆತಂಕ. ಪಿಯುಸಿ ಮುಖ್ಯ ಘಟ್ಟ; ಇಲ್ಲಿ ನೀನು ಕಲಿಯ ದಿದ್ದರೆ ಜೀವನ ಹಾಳಾಯಿತು ಎಂಬ ಒತ್ತಡ; ಅವರಿವರ ಜತೆ ಹೋಲಿಕೆ, ಹೀಯಾಳಿಸುವಿಕೆ. ಬಹುತೇಕ ಹೆತ್ತವರು ಮಾಡುವ ಮೊದಲ ತಪ್ಪಿದು. ಆಗಷ್ಟೇ ಪ್ರೌಢಾವಸ್ಥೆಗೆ ಕಾಲಿಡುವ ಮಕ್ಕಳಲ್ಲಿ ಇದು ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ.
•ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.