SSLC “ಪಾಸಿಂಗ್ ಪ್ಯಾಕೇಜ್’, ಒಂದು ತಾಸು ವಿಶೇಷ ತರಬೇತಿ!
ಕರಾವಳಿ ಅಗ್ರ ಸ್ಥಾನಕ್ಕೆ ಶತಪ್ರಯತ್ನ
Team Udayavani, Aug 22, 2023, 7:10 AM IST
ಮಂಗಳೂರು: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸುವುದಕ್ಕಾಗಿ ಸರ್ವ ಪ್ರಯತ್ನ ನಡೆಸಲು ಶಿಕ್ಷಣ ಇಲಾಖೆ ಮುಂದಡಿ ಇರಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ “ಪಾಸಿಂಗ್ ಪ್ಯಾಕೇಜ್’ ಜಾರಿ ಯಾಗಲಿದ್ದು, ಉಡುಪಿಯಲ್ಲಿ ಪ್ರತೀ ದಿನ ತರಗತಿ ಆರಂಭಕ್ಕೆ ಮುನ್ನ ಕಡ್ಡಾಯವಾಗಿ ಒಂದು ತಾಸು ವಿಶೇಷ ತರಗತಿ ನಡೆಯಲಿದೆ. ಎರಡೂ ಜಿಲ್ಲೆಗಳ ಪ್ರತಿಯೊಂದು ಶಾಲೆಯೂ ಅತ್ಯುತ್ತಮ ಫಲಿತಾಂಶ ಪಡೆಯುವಂತೆ ಮಾಡಲು ಇನ್ನೂ ಏನೇನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಆಯಾಯ ಶಾಲೆಯಿಂದಲೇ ಕ್ರಿಯಾ ಯೋಜನೆಯನ್ನೂ ಸಿದ್ಧಪಡಿಸಲಾಗುತ್ತಿದೆ.
2022-23ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎಸೆಸೆಲ್ಸಿಯಲ್ಲಿ “ಎ’ ಗ್ರೇಡ್ ಪಡೆದಿದ್ದರೂ ಶೇಕಡಾವಾರು ಫಲಿತಾಂಶದಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ 19ನೇ ಸ್ಥಾನಕ್ಕೆ ಕುಸಿದಿತ್ತು. ಉಡುಪಿಯೂ “ಎ’ ಗ್ರೇಡ್‌ನೊಂದಿಗೆ 18ನೇ ಸ್ಥಾನದಲ್ಲಿತ್ತು. ಆ. 1ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕರಾವಳಿಗೆ ಭೇಟಿ ನೀಡಿದ್ದ ಸಂದರ್ಭ ಎಸೆಸೆಲ್ಸಿ ಫಲಿತಾಂಶ ಕುಸಿತದ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದ್ದರು. ಇದರ ಬೆನ್ನಿಗೆ ಇಲಾಖೆ ಚುರುಕುಗೊಂಡಿದ್ದು, ಉಭಯ ಜಿಲ್ಲೆಗಳಲ್ಲಿ ಫಲಿತಾಂಶ ಹೆಚ್ಚಿಸಲು ನಾನಾ ಕಾರ್ಯವಿಧಾನಗಳನ್ನು ಅನುಸರಿಸಲು ನಿರ್ಧರಿಸಿದೆ.
ದಕ್ಷಿಣ ಕನ್ನಡ: ಒಂದು ವಾರ ಪ್ರತ್ಯೇಕ ಕೋಚಿಂಗ್!
ಎಸೆಸೆಲ್ಸಿಯಲ್ಲಿ ಉತ್ತೀರ್ಣರಾಗುವುದು ಕಷ್ಟ ಎಂಬ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳನ್ನು ಗಮನಿಸಿ ಅವರಿಗಾಗಿ ಪ್ರತ್ಯೇಕ “ಪಾಸಿಂಗ್ ಪ್ಯಾಕೇಜ್’ ಅನ್ನು ಡಿಸೆಂಬರ್ ವೇಳೆ ಜಾರಿಗೊಳಿಸಲಾಗುತ್ತದೆ. ಅಂತಿಮ ಪರೀಕ್ಷೆಯಲ್ಲಿ 40ರಿಂದ 50 ಅಂಕ ಗಳಿಸಿಕೊಡಬಹುದಾದಷ್ಟು ವಿಷಯಗಳನ್ನು ಆರಿಸಿ ಕೊಂಡು ಅದನ್ನು ಚೆನ್ನಾಗಿ ಅಧ್ಯಯನ ಮಾಡಿ ಉತ್ತೀರ್ಣ ರಾಗುವಂತೆ ಮಾಡುವ ಕ್ರಮ ಇದು.
ಜತೆಗೆ ಇಂತಹ ಮಕ್ಕಳನ್ನು ಪ್ರತೀ ತಾಲೂಕಿನ ನಾಲ್ಕು ಕೇಂದ್ರಗಳಲ್ಲಿ ಜನವರಿ-ಫೆಬ್ರವರಿಯಲ್ಲಿ ಒಟ್ಟುಗೂಡಿಸಿ ಒಂದು ವಾರ ವಿಶೇಷ ಕೋಚಿಂಗ್ ನೀಡಲು ಉದ್ದೇಶಿಸಲಾಗಿದೆ. ಆಯಾ ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಫಲಿತಾಂಶ ಪಡೆದ ಶಾಲೆಯ ಶಿಕ್ಷಕರ ತಂಡದಿಂದಲೇ ಈ ಕೋಚಿಂಗ್ ಕೊಡಿಸಲಾಗುತ್ತದೆ. “ಸಿ’ ಗ್ರೇಡ್ ಫಲಿತಾಂಶ ಪಡೆದಿರುವ ಶಾಲೆಗಳಿಗೆ ಶಿಕ್ಷಣ ಇಲಾಖೆಯ ವಿವಿಧ ಸ್ತರದ ಅಧಿಕಾರಿಗಳ ತಂಡ ನಿಯಮಿತವಾಗಿ ಕಡ್ಡಾಯ ಭೇಟಿ ನೀಡಿ ಸೂಚನೆ ನೀಡಲಿದೆ. ಜತೆಗೆ ಎಲ್ಲ ವಿಷಯವಾರು ಶಿಕ್ಷಕರು ಕಡ್ಡಾಯವಾಗಿ ಹೆಚ್ಚುವರಿ ತರಗತಿ ನಡೆಸಲೇಬೇಕು ಎಂಬ ಸೂಚನೆ ನೀಡಲಾಗಿದೆ.
ಉಡುಪಿ: ತಾಯಂದಿರಿಗೂ ಸಭೆ!
ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ತರಗತಿ ಆರಂಭಕ್ಕೆ ಒಂದು ಗಂಟೆ ಮುಂಚಿತವಾಗಿ ವಿಶೇಷ ತರಗತಿಯನ್ನು ನಡೆಸಲಾಗುತ್ತಿದೆ. ಪಠ್ಯಕ್ಕೆ ಪೂರಕವಾಗಿ ರಸಪ್ರಶ್ನೆ, ಗುಂಪು ಚರ್ಚೆ ಮೊದಲಾದ ಪ್ರಯೋಗಗಳ ಮೂಲಕ ಮಕ್ಕಳ ಕಲಿಕೆಯನ್ನು ಗಟ್ಟಿಗೊಳಿಸುವ ಕಾರ್ಯ ನಡೆಸಲಾಗುತ್ತಿದೆ. ಇದರ ಆಧಾರದಲ್ಲಿಯೇ ಪ್ರತ್ಯೇಕ ಪರೀಕ್ಷೆ ಮಾಡಲಾಗುತ್ತದೆ. ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳನ್ನು ಈಗಾಗಲೇ ಶಿಕ್ಷಣ ಇಲಾಖಾ ಅಧಿಕಾರಿಗಳು ದತ್ತು ಪಡೆದಿದ್ದಾರೆ. ಅಲ್ಲಿಗೆ ನಿರಂತರ ಭೇಟಿ ನೀಡಿ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಕಾರ್ಯತಂತ್ರ ಅಳವಡಿಸಿಕೊಳ್ಳಲಾಗಿದೆ.
ಪೋಷಕರ ಸಭೆಯ ಜತೆಗೆ ಪ್ರತ್ಯೇಕವಾಗಿ “ತಾಯಂದಿರ ಸಭೆ’ ನಡೆಸಲು ಉದ್ದೇಶಿಸಲಾಗಿದೆ. ತರಗತಿ ಯಲ್ಲಿ ವಿದ್ಯಾರ್ಥಿ ಓದು-ಬರಹದ ಪ್ರಯತ್ನ ನಡೆಸುತ್ತಿದ್ದರೂ ಮನೆಯಲ್ಲಿ ಏಕಾಗ್ರತೆಗೆ ಭಂಗ ಬಂದರೆ ಫಲಿತಾಂಶ ಉತ್ತಮವಾಗಲು ಸಾಧ್ಯವಿಲ್ಲ. ಹೀಗಾಗಿ ಮಕ್ಕಳು ಓದುವ ಸಮಯದಲ್ಲಿ ಪೂರಕ ಸನ್ನಿವೇಶ ಒದಗಿಸಿಕೊಡುವ ನಿಟ್ಟಿನಲ್ಲಿ ತಾಯಂದಿರಿಗೆ ಸಲಹೆ-ಸೂಚನೆ ನೀಡಲಾಗುತ್ತದೆ.
ಕರಾವಳಿ ಫಲಿತಾಂಶ ಇಳಿಕೆ ಆಗಿಲ್ಲ!
ಅಧ್ಯಾಪಕರೊಬ್ಬರು “ಉದಯ ವಾಣಿ’ ಜತೆಗೆ ಮಾತನಾಡಿ, “15 ವರ್ಷಗಳಿಂದ ಎಸೆಸೆಲ್ಸಿ ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳು ಶೇ. 84ರಿಂದ 89ರ ಆಸುಪಾಸಿನಲ್ಲೇ ಇದೆ. ಆದರೆ ಶೇ. 70 ಫಲಿತಾಂಶ ಪಡೆಯುತ್ತಿದ್ದ ಕೆಲವು ಜಿಲ್ಲೆಗಳು ಮಾತ್ರ ಒಮ್ಮಿಂದೊಮ್ಮೆಲೆ ಶೇ. 90ರ ಗಡಿ ದಾಟಿವೆ.ಹೀಗಾಗಿ ಕರಾವಳಿ ಜಿಲ್ಲೆಗಳ ಸ್ಥಾನ ಕುಸಿದಿದೆಯಷ್ಟೆ. ಇದು ಯಾವ ಕಾರಣದಿಂದ ಎಂಬುದು ಕರಾವಳಿ ಭಾಗದ ಶಿಕ್ಷಕರಿಗೆ ಗೊತ್ತಾಗುತ್ತಿಲ್ಲ. ಇದರ ಅಧ್ಯಯನ ನಡೆಸಬೇಕು ಎಂದಿದ್ದಾರೆ.
ಡಿಸೆಂಬರ್‌ನೊಳಗೆ ಎಲ್ಲ ಪಠ್ಯ ಬೋಧನೆಯನ್ನು ಪೂರ್ಣಗೊಳಿಸಿ, ಜನವರಿ ಬಳಿಕ ಪುನರಾವರ್ತನೆ ನಡೆಸಬೇಕು ಎಂದು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಸರಣಿ ಪರೀಕ್ಷೆಗಳನ್ನು ನಡೆಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಷ್ಟ ಪಡುವ ಮಕ್ಕಳಿಗೆ ವಿಶೇಷ ಕೋಚಿಂಗ್ ವ್ಯವಸ್ಥೆ ಮಾಡಲಾಗುತ್ತದೆ.
-ದಯಾನಂದ ನಾಯಕ್, ಡಿಡಿಪಿಐ, ದ.ಕ.
ಎಸೆಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ಏರಿಕೆ ದಾಖಲಿಸುವ ನಿಟ್ಟಿನಲ್ಲಿವಿವಿಧ ಪ್ರಯತ್ನಗಳನ್ನು ಜಾರಿಗೊಳಿಸಲಾಗುತ್ತಿದೆ. ಎಸೆಸೆಲ್ಸಿ ಮಕ್ಕಳ ಮನೆ ಭೇಟಿ ಮೂಲಕ ಕಲಿಕೆಗೆ ಒತ್ತು ನೀಡಲು ಪ್ರೋತ್ಸಾಹಿಸಲಾಗುವುದು.
-ಕೆ. ಗಣಪತಿ, ಡಿಡಿಪಿಐ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.