30 ಜಿಲ್ಲೆಗಳ ಕಲಾವೈವಿಧ್ಯದದ ದಸರಾ
Team Udayavani, Sep 26, 2018, 11:40 AM IST
ಮಹಾನಗರ: ಪ್ರತೀ ಜಿಲ್ಲೆಯ ಸಾಂಸ್ಕೃತಿಕ ಕಲಾತಂಡಗಳ ಭವ್ಯ ಮೆರವಣಿಗೆ ಮೂಲಕ ಮೈಸೂರು ದಸರಾ ಸಂಪನ್ನಗೊಳ್ಳುವ ಶೈಲಿಯಲ್ಲಿಯೇ, ಈ ಬಾರಿಯ ಮಂಗಳೂರು ದಸರಾ ಮೆರವಣಿಗೆಯಲ್ಲಿ ರಾಜ್ಯದ ಮೂವತ್ತು ಜಿಲ್ಲೆಗಳ ಕಲಾತಂಡಗಳು ಭಾಗವಹಿಸಲಿವೆ. ಈ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳ ಕಲಾವೈವಿಧ್ಯತೆಗಳು ಮಂಗಳೂರು ದಸರಾ ಮೆರವಣಿಗೆಯಲ್ಲಿ ಸಾಕಾರಗೊಳ್ಳಲಿವೆ.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಮಂಗಳೂರು ದಸರಾ ಮೆರವಣಿಗೆ ಈ ಬಾರಿ ಅ.19ರಂದು ಸಂಜೆ 4 ಗಂಟೆಗೆ ಆರಂಭವಾಗಲಿದೆ. ಅ.10ರಿಂದ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಆರಂಭವಾಗಲಿದೆ.
ಪ್ರತೀ ವರ್ಷ ಮಂಗಳೂರು ದಸರಾ ಮೆರವಣಿಗೆಯಲ್ಲಿ ಸುಮಾರು 60ಕ್ಕೂ ಮಿಕ್ಕಿ ವಿವಿಧ ಕಲಾ ಶೈಲಿಯ ಟ್ಯಾಬ್ಲೋಗಳು ಹಾಗೂ ಬೇರೆ ಬೇರೆ ಜಿಲ್ಲೆಯ ಸುಮಾರು 5ರಿಂದ 6 ಕಲಾ ತಂಡಗಳು ಭಾಗವಹಿಸುವುದು ಸಾಮಾನ್ಯ. ಆದರೆ ಈ ವರ್ಷ ಸುಮಾರು 65ಕ್ಕೂ ಅಧಿಕ ಟ್ಯಾಬ್ಲೋಗಳ ಜತೆಗೆ ರಾಜ್ಯದ ಎಲ್ಲ ಜಿಲ್ಲೆಗಳ ತಲಾ ಒಂದೊಂದು ಕಲಾತಂಡಗಳು ಭಾಗವಹಿಸಲಿರುವುದು ವಿಶೇಷ. ಈ ಮೂಲಕ 30 ಕಲಾ ವೈವಿಧ್ಯಗಳು ಮಂಗಳೂರು ದಸರಾ ಮೆರವಣಿಗೆಗೆ ಇನ್ನಷ್ಟು ಶೋಭೆ ತರಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜತೆಗೆ ಕುದ್ರೋಳಿ ಕ್ಷೇತ್ರದ ಮನವಿ ಆಧಾರದಲ್ಲಿ ಪ್ರತೀ ಜಿಲ್ಲೆಯಿಂದ ಕಲಾತಂಡಗಳನ್ನು ಕರೆಸಿಕೊಳ್ಳುವ ಬಗ್ಗೆ ಮಾತುಕತೆ ಅಂತಿಮಗೊಳ್ಳುತ್ತಿದ್ದು, ಅಂತಿಮ ತೀರ್ಮಾನವಷ್ಟೇ ಬಾಕಿ ಇದೆ. ತೀರ್ಮಾನ ಆದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೇಂದ್ರ ಕಚೇರಿಯಿಂದ ಎಲ್ಲ ಜಿಲ್ಲೆಗಳ ಇಲಾಖೆಗಳ ಮೂಲಕ ಒಂದೊಂದು ಕಲಾತಂಡಗಳು ಮಂಗಳೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗುತ್ತದೆ. ಈ ಮೂಲಕ ಯಕ್ಷಗಾನ, ಭೂತಾರಾಧನೆ, ಕಂಬಳ ಸೇರಿದಂತೆ ಹಲವು ಕಲೆಗಳು ದ.ಕ/ಉಡುಪಿ ಜಿಲ್ಲೆಯಲ್ಲಿ ಪ್ರಖ್ಯಾತಿ ಪಡೆದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಬೇರೆ ಬೇರೆ ಕಲಾ ಪ್ರಕಾರಗಳು ಈ ಬಾರಿ ಮಂಗಳೂರು ದಸರಾದಲ್ಲಿ ಕಂಗೊಳಿಸಲಿವೆ.
ಮೈಸೂರು ದಸರಾದಲ್ಲಿ ಶ್ರೀ ದೇವಿಯನ್ನು ಅಂಬಾರಿ ಮೇಲೆ ಹೊತ್ತು ಮೆರವಣಿಗೆಯಿಂದ ಒಯ್ದರೆ, ಮಂಗಳೂರು ದಸರಾದಲ್ಲಿ ಶಾರದಾಂಬೆಯ ಉತ್ಸವ ಮೂರ್ತಿಯೊಂದಿಗೆ ಶೋಭಾಯಾತ್ರೆ ನಡೆಸಲಾಗುತ್ತದೆ. ವರ್ಣಮಯ ದಸರಾ ಮೆರವಣಿಗೆ ಲಕ್ಷಾಂತರ ಜನಸಾಗರದ ಮಧ್ಯೆ ಕುದ್ರೋಳಿ ಕ್ಷೇತ್ರದಿಂದ ಹೊರಟು, ಮಣ್ಣಗುಡ್ಡ, ಲೇಡಿಹಿಲ್ ಸರ್ಕಲ್, ಲಾಲ್‌ಭಾಗ್, ಬಲ್ಲಾಳ್‌ಭಾಗ್, ಪಿವಿಎಸ್ ಸರ್ಕಲ್, ನವಭಾರತ್ ಸರ್ಕಲ್, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ಸರಕಾರಿ ಕಾಲೇಜು ವೃತ್ತದಿಂದ ಗಣಪತಿ ಹೈಸ್ಕೂಲ್ ರಸ್ತೆಯಾಗಿ ಶ್ರೀ ವೆಂಕಟರಮಣ ದೇಗುಲದ ಮುಂಭಾಗದಿಂದ ಕಾರ್‌ಸ್ಟ್ರೀಟ್, ಚಿತ್ರಾ ಟಾಕೀಸ್, ಬೆಳಗ್ಗಿನ ಹೊತ್ತಿಗೆ ಶ್ರೀಕ್ಷೇತ್ರಕ್ಕೆ ತಲುಪಿ ವಿಸರ್ಜನೆ ನಡೆಸಲಾಗುತ್ತದೆ.
ನವರಾತ್ರಿ ಉತ್ಸವ-ಮಂಗಳೂರು ದಸರಾ
ಕುದ್ರೋಳಿಯಲ್ಲಿ ದೇವಸ್ಥಾನ ನವೀಕರಣಗೊಳ್ಳುವುದಕ್ಕಿಂತ ಮೊದಲು ಇಲ್ಲಿ ಕೇವಲ ಶಾರದೆಯ ಆರಾಧನೆ ಮಾತ್ರ ನಡೆಯುತ್ತಿತ್ತು. 1991ರ ಬಳಿಕ ನವೀಕರಣಗೊಂಡ ಈ ದೇವಸ್ಥಾನ ಕರಾವಳಿಗೆ ಒಂದು ಹೊಸ ಮೆರುಗು ತಂದುಕೊಟ್ಟಿತು. ಅತ್ಯಂತ ಆಕರ್ಷಕ ವಿನ್ಯಾಸದಿಂದ ಕಂಗೊಳಿಸುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ವತಿಯಿಂದ ಆಚರಿಸಲಾಗುತ್ತಿರುವ ನವರಾತ್ರಿ ಉತ್ಸವ ಇಂದು ‘ಮಂಗಳೂರು ದಸರಾ’ ಎಂದೇ ಖ್ಯಾತಿ ಪಡೆದಿದೆ. ನವದಿನಗಳ ಪೂಜೆಯ ಬಳಿಕ ಕುದ್ರೋಳಿ ದೇವಸ್ಥಾನದಿಂದ ಆರಂಭವಾಗುವ ನವದುರ್ಗೆಯರ ಭವ್ಯ ಶೋಭಾಯಾತ್ರೆ ರಾಜ್ಯದಲ್ಲೇ ಅತ್ಯಂತ ಆಕರ್ಷಣೆ ಪಡೆದ ದಸರಾ ಉತ್ಸವ ಎಂಬ ಹೆಗ್ಗಳಿಕೆ ಪಡೆದಿದೆ. ಮೈಸೂರು ದಸರಾ ವಿಶ್ವಖ್ಯಾತಿ ಪಡೆದಂತೆ ಮಂಗಳೂರು ದಸರಾ ಕೂಡಾ ಪ್ರಸಿದ್ಧಿ ಪಡೆದಿದ್ದು, ಶೋಭಾಯಾತ್ರೆ ವೀಕ್ಷಣೆಗೆ ಜನಸಾಗರವೇ ಹರಿದು ಬರಲಿದೆ.
‘ಎಲ್ಲ ಜಿಲ್ಲೆಗಳ ಕಲಾ ತಂಡಗಳು’
ಮಂಗಳೂರು ದಸರಾ ಮೆರವಣಿಗೆ ಪ್ರತೀ ವರ್ಷವೂ ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ, ಲಕ್ಷಾಂತರ ಜನರ ಸಮ್ಮುಖದಲ್ಲಿ ನೆರವೇರುತ್ತಾ ಬಂದಿದೆ. ಈ ವರ್ಷದ ಮೆರವಣಿಗೆಯಲ್ಲಿ ಟ್ಯಾಬ್ಲೋಗಳ ಜತೆಯಲ್ಲಿ ರಾಜ್ಯದ ಮೂವತ್ತು ಜಿಲ್ಲೆಗಳ ವೈವಿಧ್ಯಮಯ ಕಲಾತಂಡಗಳನ್ನು ಕರೆಸಿಕೊಳ್ಳುವ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜತೆಗೆ ಮಾತುಕತೆ ನಡೆಸಲಾಗಿದೆ. ಈ ಮೂಲಕ ಮೂವತ್ತು ಜಿಲ್ಲೆಗಳ ಕಲಾಪ್ರಕಾರಗಳು ಮಂಗಳೂರು ದಸರಾ ಮೆರವಣಿಗೆಗೆ ಶೋಭೆ ತರಲಿದೆ.
-ಆರ್.ಪದ್ಮರಾಜ್,
ಕೋಶಾಧಿಕಾರಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.