ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣ ಅವ್ಯವಸ್ಥೆಗಳ ಆಗರ
Team Udayavani, Apr 5, 2018, 10:05 AM IST
ಮಹಾನಗರ: ನಗರದಲ್ಲಿ ಬಹುತೇಕ ಭಾಗಗಳಿಗೆ ಖಾಸಗಿ ಹಾಗೂ ಸರಕಾರಿ ಬಸ್‌ಗಳು ಸಂಚಾರ ಪ್ರಾರಂಭಿಸುವುದು ಸ್ಟೇಟ್‌ಬ್ಯಾಂಕ್‌ನಿಂದ. ಆದರೆ ಇಲ್ಲಿನ ದುಸ್ಥಿಃತಿ ಹೇಳತೀರದ್ದು. ಗಬ್ಬುನಾತ ದಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಸರ್ವಿಸ್ ಬಸ್ ನಿಲ್ದಾಣಕ್ಕೆ ಕಾಲಿಡುತ್ತಿದ್ದಂತೆ ದುರ್ನಾತ, ರಸ್ತೆಯ ಗುಂಡಿಗಳು, ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್, ಸಾರ್ವಜನಿಕ ಸ್ಥಳದಲ್ಲೇ ಮೂತ್ರ ವಿಸರ್ಜನೆ ಹೀಗೆ ಇಲ್ಲಿನ ನೂರಾರು ಸಮಸ್ಯೆಗಳು ಕಾಣಸಿಗುತ್ತವೆ.
ಆಡಳಿತ ವ್ಯವಸ್ಥೆ ಇದನ್ನು ಕಂಡರೂ ಕಾಣದಂತೆ ಮೌನವಾಗಿದೆ. ಈ ಭಾಗದಲ್ಲಿ ನಿತ್ಯ ಓಡಾಡುವ ಜನರ ಸಮಸ್ಯೆ ಕೇಳುವವರು ಯಾರೂ ಇಲ್ಲದಂತಾಗಿದೆ.
ಪ್ರಯಾಣಿಕರ ಪರದಾಟ
ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಹೊರಜಿಲ್ಲೆಯ ಜನರು ಆಗಮಿಸುತ್ತಿದ್ದು, ಇಲ್ಲಿನ ಸ್ಥಿತಿ ನೋಡಿ ಅಚ್ಚರಿಪಡುವಂತಾಗಿದೆ. ಸಿಕ್ಕ ಸಿಕ್ಕಲ್ಲಿ ಖಾಸಗಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದ್ದು, ತಾವು ಪ್ರಯಾಣಿಸಬೇಕಾದ ಬಸ್ ನ್ನು ಹುಡುಕಲು ಪರದಾಡಬೇಕಾಗಿದೆ . ಸದಾ ಜನನಿಬಿಡ ಪ್ರದೇಶವಾಗಿದ್ದರೂ ಇಲ್ಲಿ ಸ್ವತ್ಛತೆಯನ್ನು ಕಡೆಗಣಿಸಲಾಗಿದೆ. ಎಲ್ಲೆಂದರಲ್ಲಿ ಕಸಕಡ್ಡಿಗಳನ್ನು ಎಸೆಯಲಾಗುತ್ತಿದೆ. ಶೌಚಾಲಯ ಇದ್ದರೂ ಬಸ್ ಸಿಬಂದಿ ಸಹಿತ ಸಾರ್ವಜನಿಕರು ನಿಲ್ದಾಣಕ್ಕೆ ತಾಗಿಕೊಂಡಿರುವ ಕಾರ್ಪೊರೇಷನ್ ಪಾರ್ಕ್ ಗೋಡೆಯ ಬಳಿ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಪರಿಸರವೀಡಿ ದುರ್ನಾತ ಬೀರುತ್ತಿದೆ. ಅಲ್ಲದೆ ಈ ಭಾಗದಲ್ಲಿ ಓಡಾಡುವಹೆಣ್ಣುಮಕ್ಕಳು ಮುಜುಗರಕ್ಕೊಳಗಾಗುವಂತಾಗಿದೆ.
ಬೀಳುವ ಸ್ಥಿತಿಯಲ್ಲಿ ಛಾವಣಿ
ಬಸ್ ನಿಲ್ದಾಣದ ಒಳಭಾಗದಲ್ಲಿರುವ ಛಾವಣಿ ಸಮರ್ಪಕ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದಿದೆ. ಅಲ್ಲದೇ ಬಸ್ ಗಾಗಿ ಕಾಯುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ಇರುವ ಆಸನದಲ್ಲಿ ಕೆಲವರು ಮಲಗಿ ಕೊಂಡಿರುತ್ತಾರೆ. ಇದರಿಂದ ವೃದ್ಧರು, ಮಕ್ಕಳೊಂದಿಗೆ ಬರುವ ಮಹಿಳೆಯರು ಸಂಕಷ್ಟ ಎದುರಿಸುವಂತಾಗಿದೆ.
ಮಹಿಳೆಯರಿಗೆ ಓಡಾಡಲು ಭಯ
ಇನ್ನೂ ರಾತ್ರಿಯಾಗುತ್ತಿದ್ದಂತೆ ಈ ಭಾಗದಲ್ಲಿ ಮಹಿಳೆಯರು ಓಡಾಡಲು ಭಯಪಡುವ ಪರಿಸ್ಥಿತಿ ಇದೆ. ವಿದ್ಯುತ್ ದೀಪವಿದ್ದರೂ ಪೋಲಿ ಹುಡುಗರು ಆ ಭಾಗದಲ್ಲಿ ಗುಂಪುಕಟ್ಟಿಕೊಂಡು ಓಡಾಡುವುದರಿಂದ ಒಬ್ಬೊಬ್ಬರೇ ಈ ಭಾಗದಲ್ಲಿ ತೆರಳಲು ಹಿಂದೇಟು ಹಾಕುವ ಸ್ಥಿತಿಯಿದೆ. ಒಂಟಿಯಾಗಿ ಮಹಿಳೆಯರು ತೆರಳಿದರೆ ಕಮೆಂಟ್ ಮಾಡುತ್ತಾ ಕಿಚಾಯಿಸುತ್ತಾರೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಇಕ್ಕಟ್ಟಿನ ರಸ್ತೆಯಲ್ಲಿ ಸಂಚಾರವೇ ಕಷ್ಟ ಎನ್ನುವ ಪರಿಸ್ಥಿತಿ ಸ್ಟೇಟ್‌ಬ್ಯಾಂಕ್ ವ್ಯಾಪ್ತಿಯಲ್ಲಿದೆ. ಕೇಂದ್ರ ಮಾರುಕಟ್ಟೆ ಹಾಗೂ ಅಲ್ಲಿಂದ ಬಂದರು ಪ್ರದೇಶಕ್ಕೆ ಹೋಗುವ ರಸ್ತೆ ಇಕ್ಕಟ್ಟಿನ ಸ್ಥಿತಿಯಲ್ಲಿದೆ. ಇದರೊಂದಿಗೆ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದ್ದು, ಪಾದಚಾರಿಗಳಿಗೆ ಸಂಕಷ್ಟ ಸ್ಥಿತಿ ನಿರ್ಮಾಣವಾಗಿದೆ.
ಟ್ರಾಫಿಕ್ ಕಿರಿಕಿರಿ
ಬಸ್ ನಿಲ್ದಾಣದಿಂದ ಹೊರಗೆ ತೆರಳುವ ಬಸ್ ಗಳು ಅಲ್ಲಲ್ಲಿ ನಿಂತು ಜನರನ್ನು ಹತ್ತಿಸಿಕೊಳ್ಳುವ ಕಾರಣ ನಿಲ್ದಾಣದ ಹೊರಭಾಗದಲ್ಲಿ ನಿತ್ಯ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಕಮಿಷನರ್ ಕಚೇರಿ ಮುಂಭಾಗದ ರಸ್ತೆ, ಲೇಡಿಗೋಷನ್, ಸ್ಟೇಟ್‌ಬ್ಯಾಂಕ್-ಬೇಬಿ ಅಲಾಬಿ, ಸ್ಟೇಟ್‌ಬ್ಯಾಂಕ್-ಹೊಗೆಬಜಾರ್, ಸ್ಟೇಟ್‌ಬ್ಯಾಂಕ್- ಬಂದರು, ಸ್ಟೇಟ್‌ಬ್ಯಾಂಕ್- ನೆಲ್ಲಿಕಾಯಿ ರಸ್ತೆ ಸಹಿತ ಉಳಿದ ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ.
ಪರಿಶೀಲಿಸಿ, ಕಠಿನ ಕ್ರಮ
ನಗರದ ಖಾಸಗಿ ಬಸ್ ನಿಲ್ದಾಣದ ಸಮಸ್ಯೆಯ ಬಗ್ಗೆ ತಿಳಿದಿರಲಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಇಲ್ಲಿ ಮೂತ್ರ ವಿಸರ್ಜನೆ ಮಾಡುವವರು, ಅನಧಿಕೃತ ವಾಹನಗಳ ಪಾರ್ಕಿಂಗ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
– ಮೊಹಮ್ಮದ್ ನಜೀರ್,
ಆಯುಕ್ತರು, ಮನಾಪ
ಮುಜುಗರವಾಗುತ್ತದೆ
ನಾವು ಬಸ್‌ನಲ್ಲಿ ಬರುವ ಪಾರ್ಸಲ್ ಅಥವಾ ಊರಿಗೆ ತೆರಳು ಸ್ಟೇಟ್‌ಬ್ಯಾಂಕ್ ಬಸ್‌ಸ್ಟಾಂಡ್‌ಗೆ ಬರುತ್ತೇವೆ. ಆದರೆ ಇಲ್ಲಿ ಓಡಾಡಲು ಮುಜುಗರವಾಗುತ್ತದೆ. ಸಾರ್ವಜನಿಕ ಸ್ಥಳದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದು ಸರಿ ಎನಿಸುವುದಿಲ್ಲ.
– ನಳಿನಿ, ಪ್ರಯಾಣಿಕೆ
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.