ಕಡಬ ತಾಲೂಕು ತೆಕ್ಕೆಗೆ ರಾಜ್ಯದ ನಂ. 1 ದೇಗುಲ
Team Udayavani, Jan 1, 2018, 12:55 PM IST
ಸುಬ್ರಹ್ಮಣ್ಯ : ಸುಳ್ಯ ತಾಲೂಕಿನ ಜನತೆಗೆ ಹೊಸ ವರ್ಷ ಕಹಿ ಅನುಭವ ನೀಡಲಿದೆ. ಕಾರಣ, ಸುಳ್ಯ ತಾಲೂಕು ಮತ್ತಷ್ಟು ಕಿರಿದಾಗಲಿದೆ. ಜತೆಗೆ ಇಲ್ಲಿ ತನಕ ತಾಲೂಕಿನಲ್ಲಿ ಮುಕುಟಪ್ರಾಯವಾಗಿದ್ದ ರಾಜ್ಯದ ನಂ. 1 ದೇಗುಲ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಇನ್ನು ಮುಂದೆ ಕಡಬ ತಾಲೂಕು ಜತೆ ಗುರುತಿಸಿಕೊಳ್ಳಲಿದೆ.
2017ರ ವರ್ಷಕ್ಕೆ ಭಾವಪೂರ್ಣ ವಿದಾಯದ ಜತೆ ಧಾರ್ಮಿಕ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಹಲವು ಮಹತ್ವದ ಸ್ಥಳಗಳು ಸುಳ್ಯದ ಕೈತಪ್ಪಲಿವೆ. ಇವೆಲ್ಲ ಕಡಬ ತಾಲೂಕಿಗೆ ಸೇರುವುದರಿಂದ ನೋವಿನ ವಿದಾಯ ಹೇಳುವುದು ಸುಳ್ಯ ಜನತೆಗೆ ಅನಿವಾರ್ಯ ಕೂಡ.
ಜ. 1ರಿಂದ ಕಡಬ ತಾಲೂಕು ಪ್ರತ್ಯೇಕ ಅಸ್ತಿತ್ವ ಪಡೆದುಕೊಳ್ಳಲಿದೆ. ಬಹುಕಾಲದ ಬೇಡಿಕೆ ಈಡೇರಿಕೆಯ ಸಂಭ್ರಮ ಕಡಬ ಭಾಗದಲ್ಲಿ ಮನೆ ಮಾಡಿದೆ. ಈ ವೇಳೆ ಸುಳ್ಯ ತಾಲೂಕಿನ 7 ಗ್ರಾಮಗಳು ಕಡಬಕ್ಕೆ ಸೇರಲಿವೆ. ಮೊದಲೇ ಚಿಕ್ಕ ತಾಲೂಕಾಗಿದ್ದ ಸುಳ್ಯ ಇನ್ನು ಮುಂದೆ ಮತ್ತಷ್ಟು ಚಿಕ್ಕದಾಗಲಿದೆ.
ಕಡಬ ತಾಲೂಕು ರಚನೆಗಾಗಿ ಹತ್ತಾರು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇತ್ತು. ಆಡಳಿತಕ್ಕೆ ಬಂದ ಸರಕಾರಗಳೆಲ್ಲವೂ ಹಲವು ಬಾರಿ ಸಮಿತಿ ರಚಿಸಿದ್ದವು. ಐದು ವರ್ಷಗಳ ಹಿಂದೆ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಕಡಬ ತಾಲೂಕು ಘೋಷಣೆ ಮಾಡಿದ್ದರು. ಬಳಿಕ ಪ್ರಕ್ರಿಯೆಗಳು ನಿಧಾನಗತಿಗೆ ತಲುಪಿದ್ದವು. ಆ ಬಳಿಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರ ಜನವರಿ 2018ರಿಂದ ಹೊಸ ತಾಲೂಕುಗಳ ಅಸ್ತಿತ್ವಕ್ಕೆ ಸಮ್ಮತಿಸಿದೆ.
ನೂತನ ಕಡಬ ತಾಲೂಕು ವ್ಯಾಪ್ತಿಗೆ ಈವರೆಗೆ ಸುಳ್ಯ ತಾಲೂಕಿನಲ್ಲಿದ್ದ ಯೇನೆಕಲ್ಲು, ಸುಬ್ರಹ್ಮಣ್ಯ, ಐನಕಿದು,
ಬಳ್ಪ, ಕೇನ್ಯ, ಎಣ್ಮೂರು, ಮತ್ತು ಎಡಮಂಗಲ ಗ್ರಾಮಗಳು ಸೇರಲಿವೆ. ಇದರ ಜತೆಗೆ ಇನ್ನೂ ಹಲವು ಗ್ರಾಮಗಳು
ಕಡಬದೊಂದಿಗೆ ಗುರುತಿಸಿಕೊಳ್ಳಲಿವೆ. ನಾಡಿನ ಸಿರಿವಂತ ದೇಗುಲವಾಗಿ ಖ್ಯಾತಿ ಪಡೆದ, ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ತಾಲೂಕಿನ ಏಕೈಕ ಮಠ ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದ ಪಂಜ ಸೀಮೆ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಚಾರಿತ್ರಿಕ ವೀರರಾದ ಕೋಟಿ ಚೆನ್ನಯರ ಎಣ್ಮೂರಿನ ಆದಿಬೈದೆರ್‌ಗಳ ಗರಡಿ, ಪಂಜ ಚರ್ಚ್, ಎಣ್ಮೂರು ಮಸೀದಿ ಕೂಡ ಕಡಬ ತಾಲೂಕಿನ ತೆಕ್ಕೆಗೆ ಸೇರುತ್ತಿವೆ. ಸುಬ್ರಹ್ಮಣ್ಯ ಕ್ಷೇತ್ರ ಸುಳ್ಯ ತಾಲೂಕಿನಲ್ಲಿದ್ದ ಕಾರಣ ಈತನಕ ಸುಳ್ಯಕ್ಕೆ ಹೆಚ್ಚು ಮಹತ್ವ ಸಿಗುತ್ತಿತ್ತು. ಅದೀಗ ಕಡಬ ತಾಲೂಕಿನ ಭಾಗವಾಗಲಿದ್ದು, ಅಭಿವೃದ್ಧಿ ದೃಷ್ಟಿಯಿಂದ ಇದು ಸುಳ್ಯ ತಾಲೂಕಿಗೆ ಹಿನ್ನಡೆ ಎಂದು ಬಣ್ಣಿಸಲಾಗಿದೆ.
ಸುಬ್ರಹ್ಮಣ್ಯ ಹೋಬಳಿ ಕೇಂದ್ರ?
ಕಡಬ ತಾಲೂಕು ಅನುಷ್ಠಾನಗೊಂಡ ಬಳಿಕ ಸುಬ್ರಹ್ಮಣ್ಯವನ್ನು ಹೋಬಳಿ ಕೇಂದ್ರವಾಗಿಸಲು ಅಧಿಕಾರಿಗಳು ಚಿಂತಿಸಿದ್ದಾರೆ ಎಂದು ತಿಳಿದು ಬಂದಿದೆ. ಸುಳ್ಯ ತಾಲೂಕು ಪಟ್ಟಿಯಲ್ಲಿ ಉಳಿದಿರುವ ಪಂಜ ಹತ್ತು ಕಂದಾಯ ಗ್ರಾಮಗಳಿಗೆ ಹೋಬಳಿ ಕೇಂದ್ರವಾಗಿದೆ. ಇಲ್ಲಿಂದ ಕಡಬಕ್ಕೆ ಸಮೀಪವಿರುವ ಪಂಜ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಐವತ್ತೂಕ್ಲು ಮತ್ತು ಕೂತ್ಕುಂಜ ಗ್ರಾಮಗಳು ತಾ| ನಲ್ಲೆ ಉಳಿದಿದ್ದು, ಅವುಗಳನ್ನು ಕಡಬಕ್ಕೆ ಸೇರಿಸಬೇಕು. ಪಂಜವನ್ನು ಹೋಬಳಿ ಕೇಂದ್ರವಾಗಿ ಉಳಸಿಕೊಳ್ಳಬೇಕೆಂಬ ಹೋರಾಟಗಳು ನಡೆಯುತ್ತಿವೆ. ಹೀಗಾಗಿ ಹೋಬಳಿ ಕೇಂದ್ರವಾಗಿ ಪಂಜವೇ ಮುಂದುವರೆಯುತ್ತದೋ ಅಥವಾ ಸುಬ್ರಹ್ಮಣ್ಯ ಹೋಬಳಿ ಆಗುತ್ತದೋ ಕಾದುನೋಡಬೇಕಿದೆ.
ಕೈತಪಿತು ಜಿಲ್ಲೆಯ ಏಕೈಕ ರೈಲು ನಿಲ್ದಾಣ
ಕಡಬ ತಾಲೂಕಿಗೆ ಎಡಮಂಗಲ ಗ್ರಾಮ ಸೇರ್ಪಡೆಯಿಂದ ಸುಳ್ಯ ತಾಲೂಕಿನ ಏಕೈಕ ರೈಲ್ವೆ ನಿಲ್ದಾಣವೂ ಕೈತಪ್ಪಿದೆ.
ಸುಳ್ಯ ಭಾಗದವರ ಪ್ರಯಾಣಕ್ಕೆ ಅಷ್ಟು ಉಪಯುಕ್ತ ಆಗಿಲ್ಲವಾದರೂ ತಾಂತ್ರಿಕವಾಗಿ ಇದು ದೊಡ್ಡ ಹೊಡೆತ
ನೀಡಲಿದೆ.
ಉಳಿಯುವುದೇನು? ಕಳೆದುಕೊಳ್ಳುವುದೇನು?
ಸುಳ್ಯ ತಾಲೂಕಿನ ಜನಸಂಖ್ಯೆ 1,45,226 (2011ರ ಜನಗಣತಿ ಪ್ರಕಾರ), ಸುಳ್ಯದ ಒಟ್ಟು ಗ್ರಾಮಗಳು-41, ಕಡಬ ತಾಲೂಕು ಸೇರುವ ಗ್ರಾಮಗಳು-7, ಸುಳ್ಯದಲ್ಲಿ ಉಳಿದುಕೊಳ್ಳುವ ಗ್ರಾಮಗಳು-34, ಸೇರ್ಪಡೆ ಗ್ರಾಮಗಳ ಜನಸಂಖ್ಯೆ: ಯೇನೆಕಲ್ಲು-2684. ಸುಬ್ರಹ್ಮಣ್ಯ-4443. ಐನಕಿದು-949.ಬಳ್ಪ-2973. ಕೇನ್ಯ-1185. ಎಣ್ಮೂರು-1679. ಎಡಮಂಗಲ-3698. ಸುಬ್ರಹ್ಮಣ್ಯ-ಕಡಬ ದೂರ-22.ಕಿ.ಮೀ.
ಗುರುತಿನ ಕಾರ್ಡ್ ಇದ್ದಂತೆ!
ಅತ್ಯಂತ ನೋವಿನ ವಿಚಾರವಿದು. ನಾಡಿನ ಯಾವುದೇ ಮೂಲೆಗೆ ಹೋದರೂ ಗುರುತಿಸಿಕೊಳ್ಳಲು ಬಳಸುತ್ತಿದ್ದ ಹೆಸರು ಕುಕ್ಕೆಯದ್ದಾಗಿತ್ತು. ಅದು ಕಳಚುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಒಂದು ರೀತಿಯಲ್ಲಿ ಗುರುತು ಚೀಟಿ ಇದ್ದಂತೆ ಇತ್ತು.
– ಎ,ಕೆ ಹಿಮಕರ
ಸಾಹಿತಿ, ಅರೆಭಾಷೆ ಅಕಾಡೆಮಿ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.