ಆರು ತಿಂಗಳುಗಳಲ್ಲಿ 812 ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ
Team Udayavani, Jul 13, 2018, 10:22 AM IST
ಮಹಾನಗರ : ನಗರದಲ್ಲಿ ಬೀದಿ ನಾಯಿಗಳ ಉಪಟಳ ಜಾಸ್ತಿಯಾಗುತ್ತಿದ್ದು, ಪಾದಚಾರಿಗಳು ಮತ್ತು ವಾಹನ ಸವಾರರು ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಕೆಲವು ಕಡೆ ಸಾರ್ವಜನಿಕರ ಮೇಲೆ ಅಪಾಯವೊಡ್ಡುವ ಪರಿಸ್ಥಿತಿ ಉದ್ಭವಿಸಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ನಗರ ಪಾಲಿಕೆ ಎಷ್ಟೇ ಕಸರತ್ತು ಮಾಡಿದರೂ ಅದು ಸಾಕಾರವಾಗಲಿಲ್ಲ. ಪಾಲಿಕೆಯು
ಕೆಲವು ವರ್ಷಗಳಿಂದ ಎನಿಮಲ್ ಕೇರ್ ಮೂಲಕ ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನಡೆಸುತ್ತಿದೆ. ಇದಕ್ಕಾಗಿ ಪ್ರತೀ ನಾಯಿಗೆ 495 ರೂ. ಕೂಡ ಖರ್ಚು ಮಾಡುತ್ತಿದೆ. ಪಾಲಿಕೆ ನೀಡಿದ ಅಂಕಿ ಅಂಶದ ಪ್ರಕಾರ 2018ರ ಜನವರಿಯಿಂದ ಜೂನ್‌ತಿಂಗಳ ವರೆಗೆ ಒಟ್ಟು 812 ಬೀದಿ ನಾಯಿಗಳನ್ನು ಸಂತಾನಶಕ್ತಿಹರಣ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಗುಂಪಾಗಿ ಸಾರ್ವಜನಿಕರ ಮೇಲೆ ದಾಳಿ
ನಗರದ ಉರ್ವ, ಇನ್ಫೋಸಿಸ್, ಕೊಟ್ಟಾರ ಕ್ರಾಸ್, ಕೋಡಿಕಲ್, ನಂತೂರು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ. ರಾತ್ರಿ ಆದಂತೆ ಗುಂಪಾಗಿ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತವೆ. ಅಕಸ್ಮಾತ್ ಮನೆಗಳ ಬಾಗಿಲು ತೆರೆದಿಟ್ಟಲ್ಲಿ ಒಳಗಡೆ ಬಂದು ಉಪಟಳ ಕೊಡುತ್ತವೆ. ಇದಕ್ಕೆ ರೋಸಿಹೋದ ಕೋಡಿಕಲ್ ಪರಿಸರದ ಸಾರ್ವಜನಿಕರು ಉರ್ವ ಪೊಲೀಸ್ ಠಾಣೆ, ಪಾಲಿಕೆಗೆ ಮನವಿ ನೀಡಿದ್ದಾರೆ.
ಬೀದಿ ನಾಯಿಗಳ ಸಂತಾನೋತ್ಪತ್ತಿ ನಿಯಂತ್ರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ 2016ರಲ್ಲಿಯೇ ಡಾಗ್ ವೆಲ್ ಫೇರ್ ಸಮಿತಿ ಹಾಗೂ ಡಾಗ್ ಲೈಸನ್ಸ್ ಸಮಿತಿಯನ್ನು ಕೂಡ ರಚನೆ ಮಾಡಿತ್ತು. ನಗರದಲ್ಲಿರುವ ಬೀದಿನಾಯಿಗಳನ್ನು ಬಲೆಯನ್ನು ಬಳಸಿ ಹಿಡಿಯಲಾಗುತ್ತದೆ. ಬಳಿಕ ಪಾಲಿಕೆಯ ಸಹಕಾರದೊಂದಿಗೆ ಶಕ್ತಿನಗರದಲ್ಲಿರುವ ಅನಿಮಲ್ ಕೇರ್ ಸಂಸ್ಥೆಗೆ ತಲುಪಿಸಲಾಗುತ್ತದೆ. ಅನಂತರ ಒಂದು ವಾರದಲ್ಲಿ ಅವುಗಳಿಗೆ ಪರಿಚಾರ ನಡೆಸಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಒಂದು ವಾರದ ಬಳಿಕಯಾವ ಪ್ರದೇಶದಿಂದ ನಾಯಿಗಳನ್ನು ಹಿಡಿದು ತರಲಾಗಿತ್ತೋ, ಅಲ್ಲೇ ಮರಳಿ ಬಿಡಲಾಗುತ್ತದೆ. ಈ ಸಮಯದಲ್ಲಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಲಾಗುತ್ತದೆ. ಅಲ್ಲದೆ ಸಂತಾನಶಕ್ತಿಹರಣ ಮಾಡಿದ ನಾಯಿಯ ಎಡ ಕಿವಿಯಲ್ಲಿ ವಿ ಆಕಾರದಲ್ಲಿ ಮಾರ್ಕ್ ಮಾಡಲಾಗುತ್ತದೆ.
ಮನೆ ಬಾಗಿಲು ತೆರೆಯಲು ಹೆದರಿಕೆ
ಕೋಡಿಕಲ್ ನಿವಾಸಿ ರವಿರಾಜ ಅವರು ಸುದಿನಕ್ಕೆ ಪ್ರತಿಕ್ರಿಯಿಸಿ ‘ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಗುಂಪುಗುಂಪಾಗಿ ಮನೆ ಅಂಗಳಕ್ಕೆ ಆಗಮಿಸುತ್ತವೆ. ಮನೆಯ ಬಾಗಿಲು ತೆರೆದು ಹೊರಬರುವ ವೇಳೆ ಈ ನಾಯಿಗಳು ಏಕಾಏಕಿ ದಾಳಿ ಮಾಡುತ್ತವೆ. ಇದರಿಂದ ಬಾಗಿಲು ತೆರೆಯಲು ಹೆದರಿಕೆಯಾಗುತ್ತದೆ’ ಎನ್ನುತ್ತಾರೆ.
ಪರವಾನಿಗೆ ಪಡೆದಿದ್ದು 20 ಮನೆ ಮಾತ್ರ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆಯಲ್ಲಿ ನಾಯಿಗಳನ್ನು ಸಾಕಲು ಪರವಾನಿಗೆ ಪಡೆಯಬೇಕು ಎಂದು ಎಂಬ ನಿರ್ಣಯವನ್ನು ಕಳೆದ ವರ್ಷ ಮನಪಾ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಆದರೆ ಈ ನಿಯಮ ಪಾಲನೆಯಾಗುತ್ತಿಲ್ಲ. ಪಾಲಿಕೆ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಸದ್ಯ ಕೇವಲ 20 ಮಂದಿ ಮಾತ್ರ ಪರವಾನಿಗೆ ಪಡೆದಿದ್ದಾರೆ.
ಫೋನ್ ಇನ್‌ನಲ್ಲೂ ದೂರು
ನಗರದಲ್ಲಿನ ಅನೇಕ ಕಡೆಗಳಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗುತ್ತಿರುವ ಬಗ್ಗೆ ಪೊಲೀಸ್ ಆಯುಕ್ತರು ಆಯೋಜಿಸುವ ಶುಕ್ರವಾರದ ಫೋನ್‌ಇನ್ ಕಾರ್ಯಕ್ರಮಗಳಲ್ಲಿಯೂ ನಗರವಾಸಿಗಳಿಂದ ದೂರುಗಳು ಬರುತ್ತಿವೆ. ಕೆಲವು ವಾರಗಳಿಂದ ಈ ಫೋನ್ ಇನ್ ಕಾರ್ಯಕ್ರಮದಲ್ಲಿ ಬೀದಿನಾಯಿಗಳ ಕಾಟದ ಬಗ್ಗೆ ಹೆಚ್ಚಿನ ದೂರುಗಳು ಬಂದಿರುವುದನ್ನು ನೋಡಿದರೆ, ಅವುಗಳ ಕಾಟದಿಂದ ಜನರು ಎಷ್ಟೊಂದು ತೊಂದರೆ ಎದುರಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.
ಸಂತತಿ ಹೆಚ್ಚದಿರಲು ಶಸ್ತ್ರಚಿಕಿತ್ಸೆ
ಬೀದಿನಾಯಿಗಳ ಸಂತತಿ ಹೆಚ್ಚಾಗದಿರಲೆಂದು ಸಂತಾನಶಕ್ತಿಹರಣ ಚಿಕಿತ್ಸೆ ಮಾಡಲಾಗುತ್ತದೆ. ಈ ವರ್ಷ ಪಾಲಿಕೆ ವ್ಯಾಪ್ತಿಯ 812 ನಾಯಿಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಎನಿಮಲ್ ಆ್ಯಕ್ಟ್ ಪ್ರಕಾರ ಪ್ರತಿಯೊಂದು ಪ್ರಾಣಿಗೂ ಬದುಕುವ ಹಕ್ಕಿದೆ. ಆದ್ದರಿಂದ ನಾಯಿಗಳನ್ನು ಸಾಯಿಸಲು ಅಥವಾ ಕೂಡಿ ಹಾಕಲಾಗುವುದಿಲ್ಲ.
-ಡಾ| ಮಂಜಯ್ಯ ಶೆಟ್ಟಿ,
ಮನಪಾ ಆರೋಗ್ಯಾಧಿಕಾರಿ
ವಾರಗಳ ಕಾಲ
ಚಿಕಿತ್ಸೆ ಬೀದಿನಾಯಿಗಳಿಗೆ ಎನಿಮಲ್ ಕೇರ್ ನಲ್ಲಿ ಒಂದು ವಾರಗಳ ಕಾಲ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಅನಂತರ ಅವುಗಳನ್ನು ಯಾವ ಪ್ರದೇಶದಿಂದ ಹಿಡಿದು ತರಲಾಗಿದೆಯೋ, ಅಲ್ಲೇ ಬಿಡುತ್ತೇವೆ.
- ತೌಸಿಫ್,ಎನಿಮಲ್ ಕೇರ್
ಟ್ರಸ್ಟ್‌ನ ರಕ್ಷಣಾ ಉಸ್ತುವಾರಿ
ನವೀನ್ ಭಟ್ ಇಳಂತಿಲ