ಶಾಲಾರಂಭವಾಗಿ 15 ದಿನ ಕಳೆದರೂ ಸಿಗದ ಪಠ್ಯಪುಸ್ತಕ, ಸಮವಸ್ತ್ರ !
ಎರಡನೇ ತರಗತಿಗೆ ಪಠ್ಯವಿಲ್ಲದೆ ಪಾಠ!
Team Udayavani, Jun 15, 2019, 11:09 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಶಾಲಾರಂಭ ವಾಗಿ ಹದಿನೈದು ದಿನ ಕಳೆದರೂ ಎರಡು ಮತ್ತು ಆರನೇ ತರಗತಿಗಳಿಗೆ ಇನ್ನೂ ಪಠ್ಯ ಪುಸ್ತಕ ಲಭ್ಯವಾಗಿಲ್ಲ. ಅಲ್ಲದೆ ಸರಕಾರದಿಂದ ನೀಡುವ ಸಮವಸ್ತ್ರಕ್ಕಾಗಿ ವಿದ್ಯಾರ್ಥಿಗಳು ಕಾಯುವಂತಾಗಿದೆ.
ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳಿಗೆ ಮೇ 29ರಂದು ತರಗತಿಗಳು ಆರಂಭವಾಗಿವೆ. ಪ್ರಾಥಮಿಕ ಶಾಲೆಗಳ ಎರಡು ಮತ್ತು ಆರು ಬಿಟ್ಟು ಉಳಿದೆಲ್ಲ ತರಗತಿಗಳ ವಿದ್ಯಾರ್ಥಿಗಳಿಗೆ ಅಂದೇ ಸರಕಾರ ನೀಡಿದ ಪಠ್ಯ ಪುಸ್ತಕಗಳನ್ನು ವಿತರಿಸ ಲಾಗಿದೆ. ಆದರೆ 6ನೇ ತರಗತಿಯ ಕೆಲವು ಪುಸ್ತಕ ಮತ್ತು 2ನೇ ತರಗತಿ ಯಾವುದೇ ಪಠ್ಯಪುಸ್ತಕ ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ.
ಎರಡನೇ ತರಗತಿಗೆ ಪಠ್ಯವೇ ಬಂದಿಲ್ಲ !
6ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಗಣಿತ ಮತ್ತು ಸಮಾಜ ಅಧ್ಯಯನ ಪುಸ್ತಕಗಳು ದೊರಕಿಲ್ಲ. ಉಳಿದವನ್ನು ವಿತರಿಸಲಾಗಿದೆ. ಎರಡನೇ ತರಗತಿಗೆ ಯಾವುದೇ ಪಠ್ಯಪುಸ್ತಕ ಈವರೆಗೂ ಸಿಗದಿರುವುದರಿಂದ ಶಿಕ್ಷಕರು ಹಳೆಯ ಪಠ್ಯದಲ್ಲೇ ಬೋಧನೆ ಮಾಡುತ್ತಿದ್ದಾರೆ. ಪಠ್ಯಪುಸ್ತಕಗಳು ಉಗ್ರಾಣ ತಲುಪಿದ್ದು, ಶೀಘ್ರ ವಿತರಣೆಯಾಗಲಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎರಡನೇ ತರಗತಿಗೆ ಪಠ್ಯ ಪುಸ್ತಕ ವಿತರಣೆಯಾಗಿಲ್ಲ.ಅಲ್ಲದೆ, ಶೇ. 20ರಷ್ಟು ಪುಸ್ತಕ ಇನ್ನಷ್ಟೆ ವಿತರಣೆಯಾಗ ಬೇಕಿದೆ. ಈ ವಾರಾಂತ್ಯದೊಳಗೆ ವಿತರಿ ಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.
ಸಮವಸ್ತ್ರವೂ ಇಲ್ಲ
ಸಮವಸ್ತ್ರವೂ ಶಾಲೆ ತಲುಪಿಲ್ಲ. ಶಿಕ್ಷಕರಲ್ಲಿ ಹೆತ್ತವರು ವಿಚಾರಿಸಿದರೆ, ಉತ್ತರ ವಿಲ್ಲದಾಗಿದೆ. ಪ್ರತಿ ವರ್ಷವೂ ಇದೇ ಗೋಳು ಎನ್ನುತ್ತಾರೆ ಶಿಕ್ಷಕರು. ಕೆಲವೆಡೆ ದಾನಿಗಳ ನೆರವಿನಿಂದ ಸಮವಸ್ತ್ರ ವಿತರಿಸಲಾಗುತ್ತಿದೆ.
ಸೇತುಬಂಧದಿಂದ ಸ್ವಲ್ಪ ನಿರಾಳ
ಹಿಂದಿನ ತರಗತಿಯ ಪಠ್ಯವನ್ನು ಮೆಲುಕು ಹಾಕುವ ಸೇತುಬಂಧ ಕಾರ್ಯಕ್ರಮ ಸದ್ಯ ನಡೆಯುತ್ತಿ ರುವುದರಿಂದ ಪಠ್ಯಪುಸ್ತಕ ವಿತರಣೆ ತಡವಾದರೂ ನಿರ್ವಹಣೆ ಮಾಡಲಾಗಿದೆ. ಆದರೆ ಸೇತುಬಂಧದ ಪೂರ್ವ ಪರೀಕ್ಷೆ ಮುಗಿದಿದ್ದು, ಜೂ. 20ರಂದು ಸಾಫಲ್ಯ ಪರೀಕ್ಷೆ ಇರುತ್ತದೆ. ಬಳಿಕ ಪಠ್ಯ ಬೋಧಿಸಲಾಗುತ್ತದೆ. ಅಷ್ಟರೊಳಗೆ ಪುಸ್ತಕ ಸಿಗದಿದ್ದರೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಶಾಲೆಯೊಂದರ ಮುಖ್ಯ ಶಿಕ್ಷಕಿಯೊಬ್ಬರು.
ಶೇ. 80ರಷ್ಟು ಪಠ್ಯಪುಸ್ತಕ ಈಗಾಗಲೇ ಬಂದಿದ್ದು, ಅವುಗಳನ್ನು ಶಾಲಾರಂಭದ ದಿನದಂದೇ ಶಾಲೆಗಳ ಮುಖಾಂತರ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಉಳಿದ ಪುಸ್ತಕ ಬಂದ ತತ್‌ಕ್ಷಣ ನೀಡಲಾಗುವುದು.
ವೈ. ಶಿವರಾಮಯ್ಯ, ಡಿಡಿಪಿಐ ದ.ಕ.
ಶೇ. 82ರಷ್ಟು ವಿತರಣೆ
ಉಡುಪಿ ಜಿಲ್ಲೆಯಲ್ಲಿ 2 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಗೆ ಶೇ.82ರಷ್ಟು ಪಠ್ಯಪುಸ್ತಕಗಳು ವಿತರಣೆಯಾಗಿವೆ. ಸಮವಸ್ತ್ರ ಕೆಲವೇ ದಿನಗಳಲ್ಲಿ ಒದಗಿಸುವ ಸಾಧ್ಯತೆ ಇದೆ.
– ಶೇಷಶಯನ ಕಾರಿಂಜ, ಡಿಡಿಪಿಐ ಉಡುಪಿ
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.