ಬೆಳ್ಳಾರೆಗೆ ಇನ್ನೂ ಪೂರ್ಣವಾಗಿ ದಕ್ಕಿಲ್ಲ ಚರಂಡಿ ಭಾಗ್ಯ
Team Udayavani, Jul 8, 2018, 10:25 AM IST
ಬೆಳ್ಳಾರೆ : ಬೆಳ್ಳಾರೆಯ ಮುಖ್ಯ ರಸ್ತೆಗೆ ಇನ್ನೂ ಪೂರ್ಣವಾಗಿ ಚರಂಡಿ ಭಾಗ್ಯ ದಕ್ಕಿಲ್ಲ. ಚರಂಡಿಯು ಸಮರ್ಪಕವಾಗಿಲ್ಲದ ಪರಿಣಾಮ ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಮಳೆಯು ಸ್ವಲ್ಪ ಜೋರಾಗಿ ಬಂದರೆ ರಸ್ತೆಯಲ್ಲೇ ನೀರು ಹರಿದು ವಾಹನ ಸವಾರರು, ಪಾದಚಾರಿಗಳು ತೊಂದರೆ ಉಂಟಾಗುವುದು ಸಾಮಾನ್ಯವಾಗಿ ಬಿಟ್ಟಿದೆ.
ಸುಳ್ಯ ತಾಲೂಕು ಕೇಂದ್ರವನ್ನು ಹೊರತುಪಡಿಸಿದರೆ ಬೆಳ್ಳಾರೆ ಪೇಟೆ ಅತೀ ದೊಡ್ಡ ಪೇಟೆ. ಇಲ್ಲಿ ಸರಕಾರಿ ಪದವಿ ಕಾಲೇಜು, ಸ್ನಾತಕೋತ್ತರ ಪದವಿ ಕಾಲೇಜು, ಪ.ಪೂ. ಕಾಲೇಜು, ಪ್ರಾಥಮಿಕ ಪ್ರೌಢಶಾಲೆ, ಖಾಸಗಿ ವಿದ್ಯಾಂಸ್ಥೆಗಳಿದೆ. ಆದರೂ ಹಲವಾರು ಸಮಸ್ಯೆಗಳು ಈಗಲೂ ಜೀವಂತವಾಗಿದೆ. ಬೆಳ್ಳಾರೆ ಸುಳ್ಯ ತಾಲೂಕಿಗೆ ಒಳಪಟ್ಟರೂ, ಇದು ಸುಳ್ಯ ಹಾಗೂ ಪುತ್ತೂರು ತಾಲೂಕಿನ ಗಡಿಭಾಗದಲ್ಲಿದೆ. ಬೆಳ್ಳಾರೆ ಪೇಟೆ ವಾಣಿಜ್ಯ ವ್ಯವಹಾರ ಕೇಂದ್ರವಾಗಿ ಅಭಿವೃದ್ದಿ ಕಾಣುತ್ತಿದೆ. ಈ ಎಲ್ಲ ಕಾರಣದಿಂದ ಬೆಳ್ಳಾರೆ ಪೇಟೆಯಲ್ಲಿ ಜನಸಂಖ್ಯೆ ಹೆಚ್ಚಿದೆ. ಸಮರ್ಕವಾದ ಚರಂಡಿ ಇಲ್ಲದೆ ಮಳೆಗಾಲದಲ್ಲಿ ರಸ್ತೆ ತಡೆಯುಂಟಾಗುವುದು. ಬೇಸಿಗೆ ಕಾಲದಲ್ಲಿ ಅಲ್ಲಲ್ಲಿ ಕೊಳಚೆ ನೀರು ತುಂಬಿಕೊಂಡು ನಾರುತ್ತಿರುವುದು ಬೆಳ್ಳಾರೆಗೆ ಕಪ್ಪು ಚುಕ್ಕೆಯಾಗಿದೆ. ಬೆಳ್ಳಾರೆ ಮೇಲಿನ ಪೇಟೆಯ ಸಮಸ್ಯೆ ನಿವಾರಣೆಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಸ್ಪಂದಿಸಬೇಕಿದೆ.
ಮೇಲಿನ ಪೇಟೆಗೇಕೆ ಗ್ರಹಣ?
ಬೆಳ್ಳಾರೆ ಮುಖ್ಯ ರಸ್ತೆ ಮತ್ತು ಚರಂಡಿಯು ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯೂಡಿ) ವ್ಯಾಪ್ತಿಗೆ ಬರುತ್ತದೆ. ಕಳೆದ ವರ್ಷ ಪಿಡಬ್ಲ್ಯೂಡಿ ಸುಮಾರು 1.10 ಕೋ.ರೂ. ಅನುದಾನದಲ್ಲಿ ಬೆಳ್ಳಾರೆ ಗ್ರಾ.ಪಂ. ಬಳಿಯಿಂದ ಕೆಳಗಿನ ಪೇಟೆಯ ಲಕ್ಷ್ಮೀವೆಂಕಟರಮಣ ದೇವಸ್ಥಾನದ ತನಕ ಚರಂಡಿ ಕಾಮಗಾರಿ ನಡೆಸಿದೆ. ಅನುದಾನದ ಕೊರತೆಯಿಂದ ಬೆಳ್ಳಾರೆ ಪೇಟೆಯ ಅರ್ಧಭಾಗವಾದ ಮೇಲಿನ ಪೇಟೆಯಲ್ಲಿ ಚರಂಡಿ ಕಾಮಗಾರಿ ನಡೆಸಲಾಗಿಲ್ಲ.
ಸೃಷ್ಟಿಯಾಗುತ್ತದೆ ಕೃತಕ ನೆರೆ
ಮಳೆ ಸ್ವಲ್ಪ ಜಾಸ್ತಿ ಬಂದರೆ ಬೆಳ್ಳಾರೆ ಮೇಲಿನ ಪೇಟೆಯ ಸಿಂಡಿಕೇಟ್ ಬ್ಯಾಂಕ್ ಬಳಿ ರಸ್ತೆ ಸಂಪೂರ್ಣ ನೀರಲ್ಲಿ ಮುಳುಗಿ ಹೋಗುತ್ತದೆ. ಇದರಿಂದಾಗಿ ಇಲ್ಲಿ ವಾಹನ ಸವಾರರು, ಪಾದಚಾರಿಗಳಿಗೆ ಹೋಗಲು ಕಷ್ಟವಾಗುತ್ತದೆ. ಅಕ್ಕ-ಪಕ್ಕದ ಅಂಗಡಿಗಳಿಗೂ ಒಮ್ಮೊಮ್ಮೆ ಚರಂಡಿ ನೀರು ನುಗ್ಗುತ್ತದೆ.
ಚರಂಡಿಗೆ ಸ್ಲ್ಯಾಬ್ ಇಲ್ಲ
ಕಳೆದ ವರ್ಷ ನಿರ್ಮಾಣ ಮಾಡಿರುವ ಕೆಳಗಿನ ಪೇಟೆಯ ಚರಂಡಿಗೆ ಕೆಲವೆಡೆ ಸ್ಲ್ಯಾಬ್ ಹಾಕಲಾಗಿಲ್ಲ. ಹೀಗೆ ಯಾಕೆಂದು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳನ್ನು ಕೇಳಿ ದಾಗ, ಅನುದಾನದ ಕೊರತೆಯಿಂದ ಹೀಗೆ ಮಾಡಲಾಗಿದೆ ಎನ್ನುವ ಉತ್ತರ ಸಿಕ್ಕಿದೆ. ಅನುದಾನ ಹೊಂದಿಸಿಕೊಳ್ಳಲಾಗದೆ ಅರೆಬರೆಯಾಗಿ ಕಾಮಗಾರಿ ನಡೆಸಿ ಜನ ಸಾಮಾನ್ಯರ ಜೀವದ ಜತೆ ಇಲಾಖೆ ಚೆಲ್ಲಾಟವಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅನುದಾನ ಕೇಳಿದ್ದೇವೆ
ಬೆಳ್ಳಾರೆ ಕೆಳಗಿನ ಪೇಟೆಯ ಚರಂಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕೆಲವೆಡೆ ಚರಂಡಿಗೆ ಸ್ಲ್ಯಾಬ್ ಅಳವಡಿಸಲು ಬಾಕಿ ಇದೆ. ಅನುದಾನ ಸಾಕಾಗಿಲ್ಲ. ಕೇಳಿದ್ದೇವೆ. ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಚರಂಡಿ ಕಾಮಗಾರಿ ನಡೆಸಲುವ ಸಲುವಾಗಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಕೆಲವು ದಿನಗಳ ಹಿಂದೆ ಮಾಸ್ತಿಕಟ್ಟೆಯಿಂದ ಕೆಳಗಿನ ಪೇಟೆ ತನಕ ಚರಂಡಿ ದುರಸ್ತಿ ಮಾಡಿಕೊಡಲಾಗಿದೆ.
- ಸಂದೇಶ್,
ಪಿಡಬ್ಲ್ಯೂಡಿ ಎಂಜಿನಿಯರ್
ಮುತುವರ್ಜಿ ವಹಿಸಿ ಹೋರಾಟ
ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಸಮರ್ಪಕವಾದ ಚರಂಡಿ ನಿರ್ಮಾಣ ಮಾಡಲು ಅನುದಾನ ಬಿಡುಗಡೆಗೆ ಗ್ರಾ.ಪಂ. ವತಿಯಿಂದ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ. ಅನುದಾನ ಬಿಡುಗಡೆಯಾಗಬಹುದು ಎನ್ನುವ ನಿರೀಕ್ಷೆ ನಮ್ಮದು. ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಚರಂಡಿ ನಿರ್ಮಾಣ ಮಾಡಲು ಮುತುವರ್ಜಿ ವಹಿಸಿ ಹೋರಾಟ ನಡೆಸುತ್ತೇವೆ.
-ಶಕುಂತಲಾ ನಾಗರಾಜ್
ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ
ಶಾಶ್ವತ ಪರಿಹಾರ-ನಿರೀಕ್ಷೆ
ಮಳೆ ಬಂದ ಕೂಡಲೇ ಬೆಳ್ಳಾರೆ ಮೇಲಿನ ಪೇಟೆಯ ಸಿಂಡಿಕೇಟ್ ಬ್ಯಾಂಕ್ ಬಳಿ ಪದೇ ಪದೇ ಚರಂಡಿ ಬ್ಲಾಕ್ ಆಗುತ್ತದೆ. ಇದಕ್ಕೆ ಅಸಮರ್ಪಕ ಚರಂಡಿ ವ್ಯವಸ್ಥೆಯೇ ಮುಖ್ಯ ಕಾರಣವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನಿರೀಕ್ಷಿಸುತ್ತಿದ್ದೇವೆ.
-ಯು.ಪಿ. ಬಶೀರ್
ಬೆಳ್ಳಾರೆ ನಿವಾಸಿ
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.