ಸ್ತ್ರೀ ಶಕ್ತಿ ಗುಂಪುಗಳಿಗೆ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಹೊಣೆ
Team Udayavani, Jul 23, 2021, 6:00 AM IST
ಮಹಾನಗರ: “ಬಯಲು ಶೌಚ ಮುಕ್ತ ಜಿಲ್ಲೆ’ಯಾಗಿ ಘೋಷಿಸಲ್ಪಟ್ಟಿರುವ ಜಿಲ್ಲೆಯಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೂ ವಿಶೇಷ ಒತ್ತು ನೀಡಲು ಉದ್ದೇಶಿಸಲಾಗಿದ್ದು, ನಿರ್ವ ಹಣೆಯ ಹೊಣೆಯನ್ನು ಗ್ರಾ.ಪಂ.ಗಳ ಮೂಲಕ ಸ್ತ್ರೀ ಶಕ್ತಿ ಗುಂಪುಗಳಿಗೆ ವಹಿಸಲು ನಿರ್ಧರಿಸಲಾಗಿದೆ.
“ಸ್ವಚ್ಛಭಾರತ್ ಮಿಷನ್’ನ ಯೋಜನೆ ಯಡಿ ಗ್ರಾ.ಪಂ.ಗಳ ಮೂಲಕ ಸಾರ್ವಜನಿಕ ಶೌಚಾಲಯ ನಿರ್ಮಾಣ ನಡೆಯುತ್ತಿದ್ದು, ಶೌಚಾಲಯ ಘಟಕ ನಿರ್ಮಾಣದ ಒಟ್ಟು ವೆಚ್ಚದ ಶೇ.70ನ್ನು ಸ್ವಚ್ಛ ಭಾರತ್ ಮಿಷನ್ ಭರಿಸುತ್ತಿದೆ. ಗ್ರಾ.ಪಂ.ಗಳು ಅಥವಾ ಸಾರ್ವ ಜನಿಕರಿಂದ ಬೇಡಿಕೆ ಬಂದರೆ ಅದನ್ನು ಕೂಡ ಪರಿಗಣಿಸಲಾಗುತ್ತಿದೆ. ಇದರ ಜತೆಗೆ ನಿರ್ವಹಣೆಯ ಸಮಸ್ಯೆಯೂ ಆಗಬಾರದು ಎಂಬ ಉದ್ದೇಶದಿಂದ ಇದೀಗ ಶೌಚಾಲಯ ನಿರ್ವಹಣೆಯ ಹೊಣೆಯನ್ನು ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಮಾಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಘನತ್ಯಾಜ್ಯ ಘಟಕಗಳ ನಿರ್ವಹಣೆ ಹೊಣೆಯನ್ನು ಸ್ತ್ರೀ ಶಕ್ತಿ ಗುಂಪುಗಳಿಗೆ ವಹಿಸಲು ಜಿ.ಪಂ. ತೀರ್ಮಾನಿಸಿದೆ.
ಶೌಚಾಲಯ ಬಳಕೆಗೆ ಪ್ರೇರೇಪಣೆಗೆ ಸೂಚನೆ :
“ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಿಸಲ್ಪಟ್ಟ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ನೈರ್ಮಲ್ಯದಡಿ ಸುಸ್ಥಿರತೆ ಕಾಯ್ದು ಕೊಳ್ಳಬೇಕಾಗಿದೆ. ಅದಕ್ಕಾಗಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಹಾದು ಹೋಗುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಬಹಿರ್ದೆಸೆಗೆ ಅನುಕೂಲವಾಗುವಂತೆ ಸೂಕ್ತ ಶೌಚಾಲಯ ಸೌಲಭ್ಯ ಒದಗಿಸಬೇಕಿದೆ. ಶೌಚಾಲಯಗಳಿಗೆ ತೆರಳಲು ದಾರಿ ಸೂಚಕ, ಶೌಚಾಲಯ ಇರುವಿಕೆ ಬಗ್ಗೆ ಸೂಚನ ಫಲಕ ಅಳವಡಿಸಿ ಬಳಕೆಗೆ ಪ್ರೇರೇಪಿಸಲು ಕ್ರಮಕೈಗೊಳ್ಳಬೇಕು ಎಂದು ಜಿ.ಪಂ. ಸೂಚನೆ ನೀಡಿದೆ.
ಗ್ರಾ.ಪಂ.ಗಳ ಆಸಕ್ತಿ ಹೆಚ್ಚಾಗಲಿ:
ಅನೇಕ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ರಸ್ತೆ ಬದಿ, ಬಸ್ ನಿಲ್ದಾಣ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯದ ಬೇಡಿಕೆ ಇದೆ. ಆದರೆ ಕೆಲವು ಗ್ರಾ.ಪಂ.ಗಳು ತಮ್ಮ 15ನೇ ಹಣಕಾಸಿನಲ್ಲಿ ಶೌಚಾಲಯ ವೆಚ್ಚದ ಶೇ. 30ರಷ್ಟನ್ನು ಭರಿಸಲು ಆಸಕ್ತಿ ತೋರಿಸುತ್ತಿಲ್ಲ. ಇದರ ಜತೆಗೆ ಪ್ರಸ್ತುತ ಯಾವುದೇ ಗ್ರಾ.ಪಂ.ಗೆ ಸಾರ್ವಜನಿಕ ಶೌಚಾಲಯವನ್ನು ಮಂಜೂರು ಮಾಡಬೇಕಾದರೆ ಆ ಶೌಚಾಲಯಕ್ಕೆ ಬೇಕಾದ ಕನಿಷ್ಠ 2 ಸೆಂಟ್ಸ್ ಜಾಗ ಪಂಚಾಯತ್‌ನ ಸುಪರ್ದಿಯಲ್ಲಿರುವುದು ಕಡ್ಡಾಯ. ಈ ನಿಯಮದಿಂದಾಗಿಯೂ ಕೆಲವು ಪಂ.ಗಳು ನಿರ್ಲಕ್ಷ್ಯ ವಹಿಸುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ಅಲ್ಲದೆ ಜಿಲ್ಲೆಯಲ್ಲಿ ಮಳೆ ಹೆಚ್ಚು ಬೀಳುವುದರಿಂದ ಆರ್‌ಸಿಸಿ ಛಾವಣಿಯ ಕಟ್ಟಡವನ್ನೊಳಗೊಂಡ ಶೌಚಾಲಯ ನಿರ್ಮಿಸುವುದು ಅನಿವಾರ್ಯ. ಇದಕ್ಕೆ ಹೆಚ್ಚುವರಿ ವೆಚ್ಚ ತಗಲುತ್ತದೆ. ಇದನ್ನು ಗ್ರಾ.ಪಂ. ಭರಿಸಬೇಕಾಗಿದೆ. ಈ ಕಾರಣದಿಂದಲೂ ಕೆಲವು ಪಂ.ಗಳು ಹೆಚ್ಚಿನ ಆಸಕ್ತಿ ತೋರಿಸಿಲ್ಲ ಎನ್ನಲಾಗಿದ್ದು, ಈ ತೊಡಕುಗಳ ನಡುವೆಯೂ ಜಿಲ್ಲೆಯಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಸಮರ್ಪಕಗೊಳಿಸಲು ಅಭಿಯಾನ ರೂಪದಲ್ಲಿ ಗ್ರಾ.ಪಂ.ಗಳನ್ನು ಪ್ರೇರೇಪಿಸಲಾಗುತ್ತಿದೆ.
ನೇರವಾಗಿ ಬೇಡಿಕೆ :
ಸಲ್ಲಿಸಲು ಅವಕಾಶ : ಈಗಾಗಲೇ ಗ್ರಾಮಾಂತರದಲ್ಲಿ ರಸ್ತೆ ಬದಿಗಳು ಸಹಿತ ಅಗತ್ಯ ಇರುವಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಗ್ರಾ.ಪಂ.ಗಳಿಂದ ನೇರವಾಗಿ ಬೇಡಿಕೆ ಬರದೇ ಇದ್ದರೂ ಸ್ವತ್ಛ ಭಾರತ್ ಮಿಷನ್‌ನಿಂದ ಪರಿವೀಕ್ಷಿಸಿ ಅಗತ್ಯವಿದ್ದರೆ ಶೌಚಾಲಯ ನಿರ್ಮಾಣಕ್ಕೆ ಪಂಚಾಯತ್ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಸಾರ್ವಜನಿಕರು ಕೂಡ ಸ್ವಚ್ಛ ಭಾರತ್ ಮಿಷನ್‌ಗೆ (9480985555) ಕರೆ ಮಾಡಿ ಯಾವ ಪ್ರದೇಶದಲ್ಲಿ ಶೌಚಾಲಯ ಅಗತ್ಯವಿದೆ ಎಂಬ ಬಗ್ಗೆ ತಿಳಿಸಬಹುದಾಗಿದೆ ಎಂದು ಸ್ವತ್ಛ ಭಾರತ್ ಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮಾತ್ರವಲ್ಲದೆ ನಿರ್ವಹಣೆಗೂ ಆದ್ಯತೆ ನೀಡಲಾಗುತ್ತಿದೆ. ಈ ಉದ್ದೇಶದಿಂದ ಶೌಚಾಲಯಗಳ ನಿರ್ವಹಣೆಯನ್ನು ಸ್ತ್ರೀ ಶಕ್ತಿ ಗುಂಪುಗಳಿಗೆ ವಹಿಸಿಕೊಡಲು ಪಂಚಾಯತ್‌ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. –ಡಾ| ಕುಮಾರ್, ಸಿಇಒ ದ.ಕ. ಜಿ.ಪಂ.
-ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.