ಉರಿಯದ ದಾರಿದೀಪಕ್ಕೆ ‘ಉರಿ’ಯಾದ ಸದಸ್ಯರು!
Team Udayavani, Dec 21, 2018, 3:00 AM IST
ಸುಳ್ಯ: ನಗರದ ಹಲವು ವಾರ್ಡ್‌ಗಳಲ್ಲಿ ದಾರಿದೀಪ ಕೆಟ್ಟು ಹೋಗಿ ಮರು ಜೋಡಿಸದ ಬಗ್ಗೆ ಸದಸ್ಯರು ನಗರಾಡಳಿತವನ್ನು ತರಾಟೆಗೆ ತೆಗೆದುಕೊಂಡ ಘಟನೆ ನ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ. ನ.ಪಂ. ಸಾಮಾನ್ಯ ಸಭೆ ಅಧ್ಯಕ್ಷೆ ಶೀಲಾವತಿ ಮಾಧವ ಅವರ ಅಧ್ಯಕ್ಷತೆಯಲ್ಲಿ ನ.ಪಂ. ಸಭಾಂಗಣದಲ್ಲಿ ಗುರುವಾರ ನಡೆಯಿತು. ಬೀದಿ ದೀಪದ ವಿಚಾರವಾಗಿ ಸದಸ್ಯರಾದ ಎನ್.ಎ. ರಾಮಚಂದ್ರ, ಗೋಪಾಲ ನಡುಬೈಲು, ಗಿರೀಶ್ ಕಲ್ಲಗದ್ದೆ, ಮುಸ್ತಾಫ ಕೆ.ಎಂ., ಉಮ್ಮರ್ ಕೆ.ಎಸ್., ಗೋಕುಲ್‌ದಾಸ್, ಪ್ರೇಮಾ ಟೀಚರ್, ಶ್ರೀಲತಾ ಅವರು ವಿಷಯ ಪ್ರಸ್ತಾವಿಸಿದರು.
ಹೊಸ ಗುತ್ತಿಗೆದಾರರಿಗೆ ನಿರ್ವಹಣೆ ನೀಡುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಹಳೆ ಟೆಂಡರ್ ಅವಧಿ ಮುಗಿಯದೆ ಹೊಸ ಟೆಂಡರ್ ಕರೆದರೆ ಸಮಸ್ಯೆ ಮತ್ತಷ್ಟು ಜಟಿಲವಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಎಂಜಿನಿಯರ್ ಶಿವಕುಮಾರ್ ಉತ್ತರಿಸಿ, ಪ್ರತಿ ಕಂಬಕ್ಕೆ ನಂಬರ್ ನೀಡಬೇಕು. ಗುತ್ತಿಗೆದಾರರು ಹಾಕಿಲ್ಲ. ಹೀಗಾಗಿ ಸಮಸ್ಯೆ ಉಂಟಾಗಿದೆ ಎಂದು ವಿವರಿಸಿದರು. ಎನ್. ಎ.ರಾಮಚಂದ್ರ ಮಾತನಾಡಿ, ನಗರದಲ್ಲಿ ಮುಂದಿನ ತಿಂಗಳು ಜಾತ್ರೆ ನಡೆಯಲಿದೆ. ತುರ್ತಾಗಿ 200 ದಾರಿದೀಪಗಳನ್ನು ಖರೀದಿಸಿ ಅಳವಡಿಸುವಂತೆ ಆಗ್ರಹಿಸಿದರು.
ಆಡಳಿತಕ್ಕೆ ಜವಾಬ್ದಾರಿ ಇಲ್ಲವೇ?
ಆಡಳಿತ ಪಕ್ಷದ ಸದಸ್ಯರೇ ತಮ್ಮ ವಾರ್ಡ್‌ಗಳಲ್ಲಿ ಸಮಸ್ಯೆಗಳಿವೆ ಎನ್ನುತ್ತಾರೆ. ಅಧ್ಯಕ್ಷರು ಕಚೇರಿಯಲ್ಲಿ ಬಗೆಹರಿಸಬೇಕಿತ್ತು. ಸಭೆಗೆ ತರುವುದಲ್ಲ. ಇಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಕಸ, ನೀರು, ದಾರಿದೀಪ ನಿರ್ವಹಣೆ ಬಗ್ಗೆಯೂ ಅಧ್ಯಕ್ಷರು ನಿಗಾ ಇಟ್ಟಿಲ್ಲ ಎಂದು ನ.ಪಂ. ಸದಸ್ಯರಾದ ಗೋಕುಲ್‌ದಾಸ್, ಮುಸ್ತಾಫ ಕೆ.ಎಂ., ಉಮ್ಮರ್ ಕೆ.ಎಸ್. ಟೀಕಿಸಿದರು. ಎಲ್ಲವನ್ನೂ ಎಂಜಿನಿಯರ್, ಮುಖ್ಯಾ ಧಿಕಾರಿ ತಲೆಗೆ ಹಾಕಿದರೆ ಆಡಳಿತಕ್ಕೆ ಜವಾಬ್ದಾರಿ ಇಲ್ಲವೇ ಎಂದು ವಿಪಕ್ಷ ನಾಯಕರು ಪ್ರಶ್ನಿಸಿದರು. ನಮಗೆ ಜವಾಬ್ದಾರಿ ಇದೆ. ಸ್ಪಂದಿಸಿದ್ದೇವೆ ಎಂದು ಸದಸ್ಯ ಗೋಪಾಲ ನಡುಬೈಲು ಸಮರ್ಥಿಸಿಕೊಂಡರು.
ಬೇರೆ ಸದಸ್ಯರು ಏಕೆ ಕೆಲಸ ಮಾಡಬೇಕು?
ಸದಸ್ಯೆ ಪ್ರೇಮಾ ಟೀಚರ್ ಮಾತನಾಡಿ, ನನ್ನ ಕ್ಷೇತ್ರಕ್ಕೆ ಬೇರೆ ಸದಸ್ಯರು ಬಂದು ಕೆಲಸ ಮಾಡಿರುವುದು ಗಮನಕ್ಕೆ ಬಂದಿದೆ. ವಾರ್ಡ್ ಸದಸ್ಯರು ಏನು ಮಾಡಬೇಕು? ಜನರು ತಪ್ಪಾಗಿ ಅರ್ಥ ಮಾಡಿಕೊಳ್ಳುವುದಿಲ್ಲವೇ ಎಂದು ಪ್ರಶ್ನಿಸಿದರು. ಮಧ್ಯ ಪ್ರವೇಶಿಸಿದ ಸದಸ್ಯ ಉಮ್ಮರ್ ಕೆ.ಎಸ್., ಯತೀಂಖಾನದ ಬಳಿ ದಾರಿದೀಪ ಉರಿಯುತ್ತಿಲ್ಲ ಎಂದು ಅಲ್ಲಿನ ನಾಗರಿಕರು ನನ್ನ ಗಮನಕ್ಕೆ ತಂದ ಕಾರಣ ಮೆಸ್ಕಾಂನವರಿಗೆ ಹೇಳಿ ಸರಿಪಡಿಸಿದ್ದೇನೆ. ಇದನ್ನು ಬೇರೆ ಅರ್ಥದಲ್ಲಿ ಗ್ರಹಿಸಿಕೊಂಡರೆ ಹೇಗೆ? ಆರೇಳು ತಿಂಗಳಿನಿಂದ ನೀವೇಕೆ ಆ ಸಮಸ್ಯೆ ಪರಿಹರಿಸಿಲ್ಲ ಎಂದು ಪ್ರಶ್ನಿಸಿದರು.
ಸಮಾಜ ಮಂದಿರ ಎಲ್ಲಿದೆ?
2011-12ರಲ್ಲಿ ಬೂಡು ಕಾಲನಿಯಲ್ಲಿ ಸಮಾಜ ಮಂದಿರಕ್ಕೆಂದು 2 ಲಕ್ಷ ರೂ. ಅನುದಾನ ಖರ್ಚು ಮಾಡಲಾಗಿದೆ. ಆದರೆ ಬೂಡುವಿನಲ್ಲಿ ಸಮಾಜ ಮಂದಿರ ಇಲ್ಲ. ಹಾಗಾದರೆ ಯಾವುದಕ್ಕೆ ಹಣ ಖರ್ಚು ಮಾಡಲಾಗಿದೆ? ಈ ಬಗ್ಗೆ ಹಲವು ಬಾರಿ ಪ್ರಸ್ತಾವಿಸಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಸದಸ್ಯೆ ಶ್ರೀಲತಾ ಹೇಳಿದರು. ಎಂಜಿನಿಯರ್ ಉತ್ತರಿಸಿ, ಆಗಿನ ಎಂಜಿನಿಯರ್ ಅವರ ಬಳಿ ವಿಷಯ ತಿಳಿಸಿದ್ದು, ಅವರು ಸುಳ್ಯಕ್ಕೆ ಬಂದು ಸ್ಥಳ ತೋರಿಸುವುದಾಗಿ ಹೇಳಿದ್ದಾರೆ. ಅವರು ಬಾರದೆ ನಾವೇನೂ ಮಾಡುವಂತಿಲ್ಲ ಎಂದರು. ಅವರನ್ನು ಕರೆಯಿಸಿ ಸಮಾಜ ಮಂದಿರ ತೋರಿಸುವಂತೆ ಉಳಿದ ಸದಸ್ಯರು ಆಗ್ರಹಿಸಿದರು.
ನ.ಪಂ. ವತಿಯಿಂದ ಅಡುಗೆ ಅನಿಲ ಸಂಪರ್ಕ ಪಡೆದುಕೊಂಡ ಹೆಚ್ಚಿನ ಫಲಾನುಭವಿಗಳು ಒಂದು ಬಾರಿ ಮಾತ್ರ ಅದನ್ನು ಬಳಸಿದ್ದಾರೆ. ಅನಿಲ ಧಾರಣೆ 950 ರೂ. ದಾಟಿದ ಕಾರಣ ಅನಿಲ ತುಂಬಿಸಲು ಹೋಗಿಲ್ಲ. ಹಲವು ಕುಟುಂಬಗಳು ಸೌದೆ ಒಲೆ ಬಳಸುತ್ತಿವೆ. ಸರಕಾರದಿಂದ ಅಡುಗೆ ಅನಿಲ ಸಂಪರ್ಕ ನೀಡಿದ ಫಲಾನುಭವಿಗಳಿಗೆ 300 ರೂ. ರಿಯಾಯಿತಿ ದರದಲ್ಲಿ ಅಡುಗೆ ಅನಿಲ ಒದಗಿಸುವ ಕೆಲಸ ಆಗಬೇಕು ಎಂದು ಸದಸ್ಯರಾದ ಗೋಕುಲ್‌ದಾಸ್, ಮುಸ್ತಾಫ ಆಗ್ರಹಿಸಿದರು.
ಟ್ಯಾಕ್ಸ್ ಕಟ್ಟಿದ್ದು ಯಾರು?
ದುಗ್ಗಲಡ್ಕ ಬಾರ್‌ಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನ.ಪಂ. ಟ್ಯಾಕ್ಸ್ ಪಡೆದು ಬಾರ್ ನಡೆಸಲು ಸಕ್ರಮಕ್ಕೆ ಅವಕಾಶ ನೀಡಿದೆ ಎನ್ನುವುದಕ್ಕೆ ರಶೀದಿ ಇದೆ. ಹೀಗಾದರೆ ನ್ಯಾಯಾಲಯದಲ್ಲಿ ನ.ಪಂ. ಪರವಾಗಿ ವಾದ ಮಂಡಿಸುವುದು ಹೇಗೆ ಎಂದು ಸದಸ್ಯರಾದ ಶಿವಕುಮಾರ್, ಉಮ್ಮರ್ ಪ್ರಶ್ನಿಸಿದರು. ಇದಕ್ಕೆ ನ.ಪಂ. ಅಧಿಕಾರಿಗಳು, ಆನ್‌ಲೈನ್ ಮೂಲಕ ಕಟ್ಟಿರಬಹುದು. ನಾವು ರಶೀದಿ ಕೊಟ್ಟಿಲ್ಲ ಎಂದರು. ಹಾಗಾದರೆ ಇದನ್ನು ಪೂರ್ಜರಿ ಎಂದು ನಿರ್ಣಯಿಸಿ ತನಿಖೆಗೆ ಬರೆಯುವಂತೆ ಸದಸ್ಯರು ಆಗ್ರಹಿಸಿದರು. ವೇದಿಕೆಯಲ್ಲಿ ಅಧ್ಯಕ್ಷೆ ಶೀಲಾವತಿ ಮಾಧವ, ಉಪಾಧ್ಯಕ್ಷೆ ಹರಿಣಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಉಪಸ್ಥಿತರಿದ್ದರು.
ಪಂಪ್ ಹೌಸ್ ನಿರ್ಲಕ್ಷ್ಯ
ಈ ಹಿಂದೆ ಪಂಪ್ ಹೌಸ್‌ನಲ್ಲಿ ನೀರು ವಿತರಣೆ, ಪಂಪ್ ಚಾಲನೆ ಬಗ್ಗೆ ಲೆಡ್ಜರ್ ಪಾಲನೆ ಆಗುತಿತ್ತು. ಈಗ ಅದ್ಯಾವುದೂ ಇಲ್ಲ. ದಾರಿಹೋಕರು ಪಂಪ್ ಸ್ವಿಚ್ ಹಾಕುವುದೂ ಇದೆ. ಅಧ್ಯಕ್ಷರು ಅಲ್ಲಿಗೆ ಭೇಟಿ ನೀಡುತ್ತಿಲ್ಲ. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ವಾರಕ್ಕೆ ಎರಡು ಮೂರು ಸಲ ಭೇಟಿ ನೀಡಿ ಪರಿಶೀಲನೆ ಮಾಡಲಾಗುತಿತ್ತು. ಈಗ ಏಕೆ ನಿರ್ಲಕ್ಷ್ಯ ಎಂದು ಗೋಕುಲ್‌ದಾಸ್ ಪ್ರಶ್ನಿಸಿದರು.
ಜಾಗೃತಿ ಸಭೆ ನಡೆಸೋಣ
ನಗರದಲ್ಲಿ ಸ್ವತ್ಛ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನ.ಪಂ. ಸದಸ್ಯರು, ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಜಾಗೃತಿ ಸಭೆ ನಡೆಸೋಣ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮುಖ್ಯಾಧಿಕಾರಿ ಮತ್ತಡಿ ಹೇಳಿದರು.
ಪೌರ ಕಾರ್ಮಿಕರ ನೇಮಕಕ್ಕಿಲ್ಲ ಸಮ್ಮತಿ
ನ.ಪಂ.ಗೆ 15 ಪೌರ ಕಾರ್ಮಿಕರನ್ನು ನೇರ ಪಾವತಿಯಡಿ ನೇಮಿಸಿಕೊಳ್ಳುವ ಪ್ರಸ್ತಾವಕ್ಕೆ ಸಂಬಂಧಿಸಿ ಮಾತನಾಡಿದ ಸದಸ್ಯ ಉಮ್ಮರ್, ಈಗಾಗಲೇ 14 ಪೌರ ಕಾರ್ಮಿಕರು ಇದ್ದಾರೆ. ಅವರ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಇಲ್ಲ, ಇನ್ನೂ ಹೆಚ್ಚುವರಿ 15 ಮಂದಿ ಸೇರ್ಪಡೆಗೊಳಿಸುವುದರಿಂದ ಆಗುವ ಲಾಭ ಏನು ಎಂದು ಪ್ರಶ್ನಿಸಿದರು. ಹೊಸದಾಗಿ 15 ಮಂದಿ ಸೇರ್ಪಡೆಗೊಂಡರೆ ಒಟ್ಟು 29 ಮಂದಿ ಆಗುತ್ತಾರೆ. ಅವರಿಗೆ ಸಂಬಳ ಕೊಡುವುದು ಎಲ್ಲಿಂದ ಎಂಬ ಪ್ರಶ್ನೆ ಮೂಡಿತು. ಈ ಬಗ್ಗೆ ಚರ್ಚೆ ನಡೆದು, ತತ್‌ಕ್ಷಣ ಹೊಸದಾಗಿ ನೇಮಕಾತಿ ಮಾಡುವುದು ಬೇಡ. ಅದರ ಬದಲಿಗೆ ಮುಂದಿನ ಬಜೆಟ್‌ನಲ್ಲಿ ಅನುದಾನ ಕಾದಿರಿಸಿ ನೇಮಕಾತಿ ಮಾಡಿಕೊಳ್ಳೋಣ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.