ಬಂದ್, ಹರತಾಳ ಹಿನ್ನೆಲೆ: ಬಿಗಿ ಭದ್ರತೆ
Team Udayavani, Feb 24, 2017, 11:07 AM IST
ಮಂಗಳೂರು: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳೂರಿಗೆ ಆಗಮಿಸುತ್ತಿರುವುದರಿಂದ ಹಿಂದೂ ಸಂಘಟನೆಗಳು ಹರತಾಳ, ಬಂದ್‌ಗೆ ಕರೆ ಕೊಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಂಡಿದ್ದು, ಹೊರ ಜಿಲ್ಲೆಗಳಿಂದ ಉನ್ನತ ಅಧಿಕಾರಿಗಳು, ಸಿಬಂದಿ ಸೇರಿ ಒಟ್ಟು 3,000ಕ್ಕೂ ಮಿಕ್ಕಿ ಪೊಲೀಸರನ್ನು ನಿಯೋಜಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರÂ ಹಾಗೂ ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಹಕ್ಕು ಇದೆ. ಕೇರಳದ ಮುಖ್ಯಮಂತ್ರಿ ಕರಾವಳಿ ಸೌಹಾರ್ದ ರ್ಯಾಲಿಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಘಟನೆಗಳು ಬಂದ್‌ಗೆಕರೆ ಕೊಟ್ಟಿವೆ. ಬಂದ್ ನಡೆಸುವ ವಿರುದ್ಧ ಸುಪ್ರೀಂ ಕೋರ್ಟ್‌ನ ತೀರ್ಪಿದ್ದು, ಯಾವುದೇ ರೀತಿಯಲ್ಲೂ ಶಾಂತಿ, ಸುವ್ಯವಸ್ಥೆಗೆ ತೊಂದರೆಯಾಗದಂತೆ ತಡೆಗಟ್ಟಲು ಸಕ್ಷಮರಾಗಿರುವುದಲ್ಲದೇ, ಶಾಂತಿ ಕಾಪಾಡಲು ಬದ್ಧರಿದ್ದೇವೆ ಎಂದರು.
ಕಮಿಷನರೆಟ್ ವ್ಯಾಪ್ತಿಯಲ್ಲಿ ಭದ್ರತೆಗಾಗಿ 6 ಎಸ್‌ಪಿಗಳು, 10 ಡಿಎಸ್‌ಪಿಗಳು, 20 ಪೊಲೀಸ್ ಇನ್ಸ್‌ಪೆಕ್ಟರ್, 20 ಕೆಎಸ್‌ಆರ್‌ಪಿ ಪ್ಲಟೂನ್‌ಗಳು ಸೇರಿ 2,000 ಸಿಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ವಿವಿಧ ಭಾಗಗಳಲ್ಲಿ 600 ಸಿಸಿ ಕೆಮರಾಗಳನ್ನು ಅಳವಡಿಸಲಾಗುತ್ತಿದ್ದು, ಇವುಗಳಲ್ಲಿ 50-60 ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. 6 ಡ್ರೋನ್ ಕೆಮರಾಗಳು ಕಾರ್ಯನಿರ್ವಹಿಸಲಿವೆ ಎಂದರು.
120 ಮಂದಿಯಿಂದ ಮುಚ್ಚಳಿಕೆ
ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ಯಾವುದೇ ಕಿಡಿಗೇಡಿತನ ಕಂಡಲ್ಲಿ 100ಕ್ಕೆ ಕರೆ ಮಾಡಬಹುದಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾಕಷ್ಟು ಜನರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಅವರಿಂದ ಬಾಂಡ್‌ಗಳನ್ನು ಬರೆಯಿಸಲಾಗುತ್ತಿದೆ. ಅಲ್ಲದೇ, ಈಗಾಗಲೇ 120 ಮಂದಿಯಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ.
ಹರತಾಳಕ್ಕೆ ಕರೆ ಕೊಟ್ಟವರಿಂದಲೂ ಯಾವುದೇ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಕೊಳ್ಳದಂತೆ ಬಾಂಡ್‌ಗಳನ್ನು ಬರೆಸಿಕೊಳ್ಳಲಾಗಿದೆ. ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಿದಲ್ಲಿ ಅವರಿಗೆ ಗೌರವ ಕೊಡುತ್ತೇವೆ. ಮಿತಿ ಮೀರಿದರೆ ಅವರಿಗೇ ಕಷ್ಟವಾಗಬಹುದು. ಗಣ್ಯರ ಪ್ರಯಾಣದ ಮಾರ್ಗದ ಮಧ್ಯೆ ಕಲ್ಲು ತೂರಾಟ ಮಾಡದಂತೆ ಕೂಡ ರಕ್ಷಣೆ ನೀಡಲಾಗುತ್ತಿದ್ದು, ಅಂತಹ ಉದ್ದೇಶ ಹೊಂದಿರುವವರನ್ನು ತಡೆಯಲು ಇಂಟೆಲಿಜೆನ್ಸ್ ವ್ಯವಸ್ಥೆಯಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೋರಸೆ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಡಿಸಿಪಿಗಳಾದ ಶಾಂತರಾಜು ಹಾಗೂ ಡಾ| ಸಂಜೀವ ಪಾಟೀಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.