ಕಲ್ಮಡ್ಕದ ಮಕ್ಕಳಲ್ಲಿ ವಿಚಿತ್ರ ಜ್ವರ: ಸ್ಥಳೀಯರಲ್ಲಿ ಆತಂಕ
Team Udayavani, Sep 3, 2018, 6:00 AM IST
ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಮಕ್ಕಳಲ್ಲಿ ಕಾಣಿಸಿಕೊಂಡಿರುವ ವಿಚಿತ್ರ ಜ್ವರ ಆತಂಕ ಮೂಡಿಸಿದೆ. ಪರಿಸರದ ಎಳೆಯ ವಯಸ್ಸಿನ ಕೆಲವು ಮಕ್ಕಳು ಜ್ವರಕ್ಕೆ ತುತ್ತಾಗಿದ್ದು, ಇದು ವೇಗವಾಗಿ ಹರಡುತ್ತಿದೆ. ಜ್ವರದ ಲಕ್ಷಣಗಳು ಜಾನುವಾರುಗಳಿಗೆ ತಗಲುವ ಕಾಲುಬಾಯಿ ರೋಗದಂತಿವೆ.
ಗೊರಸು ಕಾಲುಗಳುಳ್ಳ ಹಸು, ಕುರಿ, ಆಡು, ಹಂದಿ ಇತ್ಯಾದಿಗಳಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ಮನುಷ್ಯರಲ್ಲಿ ಉಂಟಾದ ಉದಾಹರಣೆಗಳಿಲ್ಲ. ಈಗ ಅದನ್ನೇ ಹೋಲುವ ಜ್ವರ ಅಚ್ಚರಿಯ ಜತೆಗೆ ಭಯ ಹುಟ್ಟಿಸಿದೆ. ಆದರೆ ಸರಕಾರಿ ವೈದ್ಯಾಧಿಕಾರಿಗಳು ಇದನ್ನು ಅಲ್ಲಗಳೆದಿದ್ದಾರೆ. ಕಲ್ಮಡ್ಕ ಕಾಚಿಲ, ಬೊಮ್ಮೆಟ್ಟಿ, ಮಾಳಪ್ಪಮಕ್ಕಿ ಪರಿಸರದ 11 ವರ್ಷದ ಒಳಗಿನ ಆರು ಮಕ್ಕಳಲ್ಲಿ ಈ ಜ್ವರ ಪತ್ತೆಯಾಗಿದೆ. ಇನ್ನೂ
ಹಲವೆಡೆ ಮಕ್ಕಳು ಈ ಜ್ವರಪೀಡಿತರಾಗಿದ್ದು, ಹೆತ್ತವರು ಸ್ಥಳೀಯ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಕೆಲವರು ಗಿಡಮೂಲಿಕೆ ಚಿಕಿತ್ಸೆಯ ಮೊರೆ ಹೋಗಿದ್ದಾರೆ.
ರೋಗಲಕ್ಷಣ: ಮಕ್ಕಳ ಶರೀರದಲ್ಲಿ ತಾಪ ಹೆಚ್ಚಿ ಜ್ವರ ಕಂಡುಬರುತ್ತದೆ. ಅನಂತರ ಪಾದ, ಕಾಲು ಮತ್ತು ಬಾಯಿಯಲ್ಲಿ ನೀರು ತುಂಬಿದ ಬೊಬ್ಬೆಗಳು ಕಾಣಿಸಿಕೊಳ್ಳುತ್ತವೆ. ಪಾದಗಳ ಬೆರಳುಗಳ ನಡುವಿನ ಗುಳ್ಳೆಗಳು ಒಡೆದು, ಗಾಯಗಳಾಗಿ ಕೀವು ಉಂಟಾಗುತ್ತದೆ. ಬಾಯಿಯ ಗುಳ್ಳೆ ಗಳಿಂದ ಮಕ್ಕಳಿಗೆ ಆಹಾರ ಸೇವನೆ ಕಷ್ಟವಾಗುತ್ತದೆ. ಆದರೆ ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡಿ ರುವುದು ಆರೋಗ್ಯ ಇಲಾಖೆಯ ಗಮನಕ್ಕೆ ಇದುವರೆಗೆ ಬಂದಿಲ್ಲ. ಇಂಥದ್ದೇ ಜ್ವರ ವರ್ಷದ ಹಿಂದೆ ಕಟೀಲು ಸಮೀಪದ ಪರಿಸರದಲ್ಲಿ ಕಂಡು ಬಂದಿತ್ತು ಎನ್ನಲಾಗಿದೆ.
ತಾಲೂಕು ವೈದ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ರಾವ್ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ ಅಂತಹ ಯಾವುದೇ ಪ್ರಕರಣ ಇದುವರೆಗೆ ತಾಲೂಕಿನಲ್ಲಿ ಪತ್ತೆಯಾಗಿಲ್ಲ. ಕಾಲುಬಾಯಿ ರೋಗ ಮನುಷ್ಯರಲ್ಲಿ ಕಂಡು ಬರುವುದಕ್ಕೆ ಸಾಧ್ಯವಿಲ್ಲ. ವಾತಾವರಣದಲ್ಲಿ ಬದಲಾವಣೆ ಯಿಂದ ಇಂತಹ ಜ್ವರ ಮಕ್ಕಳಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದಿದ್ದಾರೆ.
ಎಳೆಯ ವಯಸ್ಸಿನ ಮಕ್ಕಳಲ್ಲಿ ವಿಚಿತ್ರ ಜ್ವರ ಕಾಣಿಸಿಕೊಂಡಿರುವುದು ಗಂಭೀರ ವಿಚಾರ. ತಾಲೂಕು ವೈದ್ಯಾಧಿಕಾರಿಗಳ ಬಳಿ ಮಾಹಿತಿ ಪಡೆದು ಕೂಡಲೇ ವೈದ್ಯಾಧಿಕಾರಿಗಳ ತಂಡ ಕಳುಹಿಸಲಾಗುವುದು. ವಾಸ್ತವ ಸ್ಥಿತಿ ಅರಿತು, ವರದಿ ಪಡೆದು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗಮನಹರಿಸುತ್ತೇನೆ.
● ಡಾ| ರಾಮಕೃಷ್ಣ ರಾವ್,
ಜಿಲ್ಲಾ ಆರೋಗ್ಯಾಧಿಕಾರಿ, ಮಂಗಳೂರು
ಮಗುವಿಗೆ ಆರಂಭದಲ್ಲಿ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಪಾದ, ಬೆರಳುಗಳ ಮಧ್ಯೆ ಬೊಕ್ಕೆಗಳು ಕಾಣಿಸಿಕೊಂಡವು. ಅವು ಮೈಮೇಲೆಲ್ಲ ಹಬ್ಬುತ್ತಿವೆ.
ಸ್ಥಳೀಯ ವೈದ್ಯರು ಸಾಮಾನ್ಯ ಜ್ವರದ ಚಿಕಿತ್ಸೆ ನೀಡಿದ್ದಾರೆ. ಇದೇ ರೀತಿ ಪರಿಸರದ ಅನೇಕ ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಿರುವುದು ಗೊತ್ತಾಗಿದೆ.
● ವಿಘ್ನೇಶ್ ಭಟ್ ಕಲ್ಮಡ್ಕ, ಜ್ವರ ಪೀಡಿತ ಮಗುವಿನ ತಂದೆ
● ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.