ವಿದ್ಯಾರ್ಥಿನಿ ಸಾವು: ಉನ್ನತ ಮಟ್ಟದ ತನಿಖೆಗೆ ಪೋಷಕರ ಆಗ್ರಹ
Team Udayavani, Jul 29, 2017, 11:18 AM IST
ಮಂಗಳೂರು: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದು, ಆಕೆಯ ಪೋಷಕರು ಇದೊಂದು ಕೊಲೆ ಎಂದು ಆರೋಪಿಸುವ ಮೂಲಕ ಉನ್ನತ ಮಟ್ಟದ ಪೊಲೀಸ್ ತನಿಖೆಗೆ ಆಗ್ರಹಿಸಿದ್ದಾರೆ.
ಇನ್ನೊಂದೆಡೆ “ನಮ್ಮ ಶಾಲೆಯಲ್ಲಿ ಓದುತ್ತಿದ್ದ ಕಾವ್ಯಾ ಆತ್ಮಹತ್ಯೆ ಬಗ್ಗೆ ಕೆಲವರು ಇಲ್ಲ-ಸಲ್ಲದ ಅಪ ಪ್ರಚಾರ ಮಾಡುತ್ತಿದ್ದು, ಈ ಪ್ರಕರಣದ ಬಗ್ಗೆ ಯಾವುದೇ ರೀತಿಯ ತನಿಖೆಗೂ ಸಿದ್ಧ’ ಎಂಬುದಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೋಹನ್ ಆಳ್ವ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾ ಪಟುವಾಗಿದ್ದ ಕಾವ್ಯಾ (15) ಮೃತಪಟ್ಟಿರುವ ವಿದ್ಯಾರ್ಥಿನಿ. ಆಕೆ ಮಂಗಳೂರು ತಾಲೂಕಿನ ಕಟೀಲು ದೇವರಗುಡ್ಡೆ ನಿವಾಸಿ ಲೋಕೇಶ್ ಮತ್ತು ಬೇಬಿ ದಂಪತಿ ಪುತ್ರಿ. ಆಳ್ವಾಸ್ ಶಿಕ್ಷಣ ಸಂಸ್ಥೆ ಯಲ್ಲಿ ಕ್ರೀಡಾ ಕೋಟಾದಡಿ ಉಚಿತ ಸೀಟು ಪಡೆದು ಅಲ್ಲಿನ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಕಾವ್ಯಾ ಕಲಿಯುತ್ತಿದ್ದಳು. ಜು.20ರಂದು ಹಾಸ್ಟೆಲ್ ನಲ್ಲಿ ಕಾವ್ಯಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.
ಆದರೆ ಕಾವ್ಯಾ ಸಾವಿನ ಬಗ್ಗೆ ಅನುಮಾನಗೊಂಡಿರುವ ಆಕೆಯ ಪೋಷಕರು, ಹೆಚ್ಚಿನ ತನಿಖೆ ನಡೆಸುವಂತೆ ಆಗ್ರಹಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಕೂಡ ನೀಡಿದ್ದಾರೆ. ಆಯುಕ್ತರಿಗೆ ಕಾವ್ಯಾ ತಂದೆ ಲೋಕೇಶ್ ನೀಡಿರುವ ದೂರಿನಲ್ಲಿ “ನನ್ನ ಮಗಳು ಕಾವ್ಯಾ(15) ಮೂಡಬಿದಿರೆಯ ಆಳ್ವಾಸ್ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದು, ಆಳ್ವಾಸ್ ಹಾಸ್ಟೆಲ್‌ನಲ್ಲಿ ಇದ್ದಳು. ಜುಲೈ 20ರಂದು ಗುರುವಾರ ರಾತ್ರಿ 8 ಗಂಟೆಗೆ ನಮಗೆ ಅವಳ ಸಾವಿನ ಬಗ್ಗೆ ಕರೆ ಬಂತು. ಕೂಡಲೇ ಹಾಸ್ಟೆಲ್‌ಗೆ ಹೊರಟ ನಾವು 9 ಗಂಟೆಗೆ ಅಲ್ಲಿ ತಲುಪಿದೆವು. ಆ ಹೊತ್ತಿಗಾಗಲೇ ಶವವನ್ನು ಶವಾಗಾರ ದಲ್ಲಿ ಇಡಲಾಗಿತ್ತು. ಪೆಟ್ಟಿಗೆಯನ್ನು ತೆರೆದು ನಮಗೆ ತೋರಿಸಲಾಯಿತು. ನನ್ನ ಮಗಳು ಹೇಗೆ ಮೃತಪಟ್ಟಿದ್ದಾಳೆ, ಎಷ್ಟು ಹೊತ್ತಿಗೆ ಸಾವು ಸಂಭವಿಸಿದೆ ಎಂಬುದು ಗೊತ್ತಾಗಲಿಲ್ಲ. ರಾತ್ರಿ ಸುಮಾರು 2 ಗಂಟೆಗೆ ಅಲ್ಲಿಂದ ಮನೆಗೆ ಬಂದೆವು. ಮರುದಿನ ಬೆಳಗ್ಗೆ ಮತ್ತೆ ಮೂಡಬಿದಿರೆಗೆ ಹೋಗಿ ಮರಣೋತ್ತರ ಪರೀಕ್ಷೆ ಮಾಡಿಸಿ ಶವವನ್ನು ಮನೆಗೆ ತಂದೆವು’.
“ಬುಧವಾರ ಸಂಜೆ ಅಂದರೆ ಮೃತಪಟ್ಟ 24 ಗಂಟೆಗಿಂತಲೂ ಕಡಿಮೆ ಅವಧಿ ಮುಂಚೆ ನಾನು ಮತ್ತು ಮನೆಯವರೆಲ್ಲ ಅವಳೊಡನೆ ಫೋನ್‌ನಲ್ಲಿ ಮಾತನಾಡಿದ್ದೇವೆ. ಅವಳು ತುಂಬಾ ಲವಲವಿಕೆಯಿಂದ ಇದ್ದಳು. ಇದೊಂದು ಅಸಹಜ ಸಾವಾಗಿದ್ದು, ಹೇಗೆ ಸಂಭವಿಸಿದೆ ಎಂದು ಗೊತ್ತಾಗುತ್ತಿಲ್ಲ. ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯವರು ಮಗಳು ಮೃತಪಟ್ಟ ಕೂಡಲೇ ನಮಗೆ ವಿಷಯ ತಿಳಿಸದೆ, ಶವ ಸಂಸ್ಕಾರಕ್ಕೂ ಬಾರದೆ ಇದ್ದದ್ದು, ನನ್ನ ಮಗಳ ಸಾವಿನ ಕಾರಣಗಳ ಬಗ್ಗೆ ಅನುಮಾನ ಮೂಡಿಸಲಾರಂಭಿಸಿದೆ. ಹೀಗಾಗಿ ತಾವು ಈ ಪ್ರಕರಣವನ್ನು ಖುದ್ದು ಪರಿಶೀಲಿಸಿ, ಸೂಕ್ತ ತನಿಖೆಗೆ ಆದೇಶಿಸಿ ನಮಗೆ ನ್ಯಾಯ ಕೊಡಿಸಬೇಕೆಂದು’ ಕೋರಿದ್ದಾರೆ. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೋಹನ್ ಆಳ್ವ “ಕಾವ್ಯಾ ಕೊಲೆಯಾಗಲು ಕಾರಣವೇ ಇಲ್ಲ. ನಾವು ಯಾವುದೇ ತನಿಖೆಗೂ ಸಿದ್ಧ. ಮಾಧ್ಯಮವಾಗಲಿ, ಪೊಲೀಸ್ ಇಲಾಖೆಯಾಗಲಿ ಅಥವಾ ಜವಾಬ್ದಾರಿಯುತ ಯಾರೇ ಆಗಲಿ ನನ್ನಲ್ಲಿ ಈ ಬಗ್ಗೆ ಮುಚ್ಚುಮರೆಯಿಲ್ಲದೆ ವಿಚಾರಿಸಬಹುದು. ಪ್ರಕರಣದ ತನಿಖೆ ನಿರ್ಭೀತಿಯಿಂದ ಆದಷ್ಟು ಬೇಗನೆ ಆಗಲಿ. ನನಗೆ 26 ಸಾವಿರ ವಿದ್ಯಾರ್ಥಿ ಗಳ ಜವಾಬ್ದಾರಿಯಿದೆ. ಅವರ ಪೋಷಕರ ಆಶೋತ್ತರಗಳ ಬಗ್ಗೆ ಎಚ್ಚರಿಕೆಯಿದೆ. ನನ್ನೆದುರು ಅಗಾಧ ಕೆಲಸಗಳು ಕಾದಿವೆ. ನನಗೆ ದಯವಿಟ್ಟು ಈ ರೀತಿಯ ಊಹಾಪೋಹಗಳ ಮೂಲಕ ಚಿತ್ರಹಿಂಸೆ ಕೊಡಬೇಡಿ. ಈ ಪ್ರಕರಣದ ಬಗ್ಗೆ ಪೊಲೀಸರ ಮಟ್ಟದಲ್ಲಿ ಯಾವುದೇ ರೀತಿಯ ತನಿಖೆ ಆದರೂ ಅದಕ್ಕೆ ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ಹೀಗಿರುವಾಗ ಊಹಾಪೋಹಗಳಿಗೆ ಅಥವಾ ಸುಳ್ಳು ಆರೋಪಗಳಿಗೆ ಜನತೆ ಕಿವಿಗೊಡಬಾರದು’ ಎಂಬುದಾಗಿ ಅವರು ಮನವಿ ಮಾಡಿದ್ದಾರೆ.
ಎಸಿಪಿಯಿಂದ ವಿಚಾರಣೆ: ಪೊಲೀಸ್ ಆಯುಕ್ತರು
ಕಾವ್ಯಾ ನಿಗೂಢವಾಗಿ ಸಾವನ್ನಪ್ಪಿದ ಬಗ್ಗೆ ಆಕೆಯ ಕುಟುಂಬಸ್ಥರು ಹಲವು ಸಂಶಯಗಳನ್ನು ವ್ಯಕ್ತಪಡಿಸಿರುವುದರಿಂದ ಈ ಬಗ್ಗೆ ವಿಚಾರಣೆ ನಡೆಸುವಂತೆ ಮಂಗಳೂರು ಉತ್ತರ ವಿಭಾಗದ ಎಸಿಪಿ ರಾಜೇಂದ್ರ ಡಿ.ಎಸ್. ಅವರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್ ತಿಳಿಸಿದ್ದಾರೆ. ವಿದ್ಯಾರ್ಥಿನಿ ಕಾವ್ಯಾ ಅವರ ಕುಟುಂಬಸ್ಥರು ತನ್ನ ಕಚೇರಿಗೆ ಆಗಮಿಸಿ ದೂರು ಸಲ್ಲಿಸಿದ್ದರು ಎಂದವರು ವಿವರಿಸಿದ್ದಾರೆ. ಕಾವ್ಯಾ ಅವರ ಸಾವಿನ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ. ಇದೀಗ ಆಕೆಯ ಕುಟುಂಬದವರು ವ್ಯಕ್ತಪಡಿಸಿರುವ ಸಂಶಯ ಹಾಗೂ ಎತ್ತಿರುವ ಪ್ರಶ್ನೆಗಳ ಕುರಿತಂತೆ ವಿಚಾರಣೆ ನಡೆಸುವಂತೆ ಎಸಿಪಿ ರಾಜೇಂದ್ರ ಡಿ. ಎಸ್. ಅವರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.